ಗೋವಾದ ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಮಗ 20 ವರ್ಷದ ಸೋಹಂ ಸುಶಾಂತ್ ನಾಯಕ್ 25-30ಕ್ಕೂ ಅಧಿಕ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಗೋವಾ ಲೈಂಗಿಕ ಹಗರಣ ಇತ್ತೀಚೆಗೆ ಬಹಿರಂಗವಾಗಿದೆ. ಆದರೆ ಇದು ಬರೀ 30 ಪ್ರಕರಣಗಳಲ್ಲ. ಸೋಹಂ 100ಕ್ಕೂ ಹೆಚ್ಚು ಅಪ್ರಾಪ್ತರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಲು ಹಿಂಜರಿಯುತ್ತಿದ್ದರು ಎಂದು ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್ ಶನಿವಾರ ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಪಾರ್ಟಿಯೊಂದರಲ್ಲಿ ಸೋಹಂ ತನ್ನ ಮೊಬೈಲ್‌ನಲ್ಲಿದ್ದ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಸ್ನೇಹಿತರಿಗೆ ತೋರಿಸಿದ್ದ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ನಾಗರಿಕರು ಕುಡ್ಚಡೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ಸೋಹಂ ಬಂಧನ ಮಾಡಲಾಗಿದೆ. ಪ್ರಜ್ವಲ್ ರೇವಣ್ಣನಂತಹ ಈ ಘಟನೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಬಂಧನದ ಬಳಿಕ ದೂರು ದಾಖಲಿಸಲು 50ಕ್ಕೂ ಅಧಿಕ ಕರೆ!
ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಟ್ಕರ್, “ಸಂತ್ರಸ್ತರ ಸಂಖ್ಯೆ 100 ಮೀರಿದೆ. ಆರೋಪಿ ಕಳೆದ ಮೂರು ವರ್ಷಗಳಿಂದ ಅಪರಾಧವನ್ನು ಮಾಡುತ್ತಿದ್ದಾನೆ. ಈ ಲೈಂಗಿಕ ಹಗರಣವು ನಾವು ಭಾವಿಸಿರುವುದಕ್ಕಿಂತ ದೊಡ್ಡದಾಗಿದೆ” ಎಂದು ಹೇಳಿದ್ದಾರೆ.
ಕರ್ಚೋರೆಮ್, ಮಾರ್ಗೋವಾ, ವಾಸ್ಕೋ ಡ ಗಾಮಾ ಮತ್ತು ಪೋಂಡಾದಂತಹ ಸ್ಥಳಗಳ ಎಣಿಕೆಗೆ ಮೀರಿದಷ್ಟು ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಒತ್ತಡದಲ್ಲಿ ಯಾವುದೇ ತೀವ್ರವಾದ ಹೆಜ್ಜೆ ಇಡದಂತೆ ಸಂತ್ರಸ್ತರಿಗೆ ಸಮಾಲೋಚನೆ ನೀಡುವ ತುರ್ತು ಅವಶ್ಯಕತೆಯಿದೆ ಎಂದು ತಿಳಿಸಿದರು.
“ಆರೋಪಿಗೆ ಈ ವಾರವಷ್ಟೇ 21 ವರ್ಷ ತುಂಬಿದೆ. ಅಂದರೆ ಅವನು 17-18 ವರ್ಷ ವಯಸ್ಸಿನವನಾಗಿದ್ದಾಗಿನಿಂದ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದರ್ಥ. ಕರ್ಚೋರೆಮ್ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿಯುತ್ತಿದ್ದರು. ಸ್ಥಳೀಯ ನಿವಾಸಿಗಳ ಒತ್ತಡದ ನಂತರವೇ ಎಫ್‌ಐಆರ್ ದಾಖಲಿಸಿದ್ದಾರೆ” ಎಂದರು.
ಹಾಗೆಯೇ, “ಗೋವಾ ರಾಜ್ಯ ಮಹಿಳಾ ಆಯೋಗ, ಗೋವಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ರಾಜ್ಯ ಶಿಕ್ಷಣ ಇಲಾಖೆ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಗೋವಾ | 25ಕ್ಕೂ ಹೆಚ್ಚು ಅಪ್ರಾಪ್ತೆಯರ ಲೈಂಗಿಕ ಶೋಷಣೆ; ಬಿಜೆಪಿ ಕೌನ್ಸಿಲರ್ ಪುತ್ರನ ಬಂಧನ
ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಅಧಿಕಾರಿಗಳು, “ಇಲ್ಲಿಯವರೆಗೆ ಮೂವರು ಹುಡುಗಿಯರು ದೂರು ನೀಡಿದ್ದಾರೆ. ಇನ್ನೂ ಅಧಿಕ ಮಂದಿ ದೂರು ದಾಖಲಿಸಲು ಮುಂದೆ ಬರುವಂತೆ ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಸಂತ್ರಸ್ತರ ನಿಖರ ಸಂಖ್ಯೆಯನ್ನು ಹೇಳಬಹುದು” ಎಂದು ಮಾಹಿತಿ ನೀಡಿದ್ದಾರೆ.
ಈ ನಡುವೆ ಬಿಜೆಪಿ ನಾಯಕ ಸಿದ್ಧಾರ್ಥ್ ಗೌನ್ಸ್ ದೇಸಾಯಿ ಅವರು ಆರೋಪಿಯ ತಂದೆ ಸುಶಾಂತ್ ನಾಯಕ್ ಬಿಜೆಪಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ. “ಕೆಲವು ಮಾಧ್ಯಮ ವರದಿಗಳಲ್ಲಿ ಬಿಂಬಿಸಿರುವಂತೆ ಸುಶಾಂತ್ ನಾಯಕ್ ಮತ್ತು ಭಾರತೀಯ ಜನತಾ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲ. ಅವರು ಸ್ವತಂತ್ರ ರಾಜಕಾರಣಿ. ಪುರಸಭೆ ಚುನಾವಣೆಗಳನ್ನು ಪಕ್ಷದ ಆಧಾರದಲ್ಲಿ ನಡೆಸಲಾಗುವುದಿಲ್ಲ” ಎಂದು ಹೇಳಿಕೊಂಡಿದ್ದಾರೆ.




