“ಸಂಸ್ಕೃತಿಯ ರಕ್ಷಣೆಯು ಸಂವಿಧಾನದಿಂದ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ” ಎಂದು ಸುಪ್ರೀಂ ಕೋರ್ಟ್ ಸೋಮವಾರ (ಅಕ್ಟೋಬರ್ 5) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ, ‘ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ’ಯಿಂದ ಅಲ್ಲಿನ ಸೂಕ್ಷ್ಮ ಪರಿಸರ ಹಾಗೂ 2006ರ ಅರಣ್ಯ ಹಕ್ಕುಗಳ ಕಾಯ್ದೆಗೆ ಧಕ್ಕೆಯಾಗಲಿದೆ ಎಂದು ಆಕ್ಷೇಪಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮಾಜಿ ಕೇಂದ್ರ ಪರಿಸರ ಕಾರ್ಯದರ್ಶಿ ಮೀನಾ ಗುಪ್ತಾ ದಾಖಲಿಸಿದ್ದ ಅರ್ಜಿಯ ವಿಚಾರಣೆಗೆ ತಡೆ ನೀಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಈ ಕುರಿತು ವಿಚಾರಣೆ ನಡೆಸಿದ್ದು, ಪ್ರಕರಣದ ಕುರಿತಾದ ಎಲ್ಲಾ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ಇತ್ಯರ್ಥಪಡಿಸುವಂತೆ ಕಲ್ಕತ್ತಾ ಹೈಕೋರ್ಟ್‌ಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ವಾದ ಮಂಡಿಸಿ, “ಕಂಟೈನರ್ ಟರ್ಮಿನಲ್ ಒಳಗೊಂಡಿರುವ 72,000 ಕೋಟಿ ರೂ.ಗೂ ಅಧಿಕ ವೆಚ್ಚದ ಈ ಯೋಜನೆಯು ರಾಷ್ಟ್ರೀಯ ದೃಷ್ಟಿಯಿಂದ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಇದರಿಂದ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ವಾಸಿಸುತ್ತಿರುವ, ಅಳಿವಿನಂಚಿನಲ್ಲಿರುವ ‘ಶೋಂಪೆನ್’ (Shompen) ನಂತಹ ಸ್ಥಳೀಯ ಬುಡಕಟ್ಟು ಜನಾಂಗದವರ ಆವಾಸಸ್ಥಾನಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ವೆಂಕಟರಮಣಿ ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠದಲ್ಲಿದ್ದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರು, ರಾಷ್ಟ್ರದ ಭದ್ರತೆ ಮತ್ತು ವಾಣಿಜ್ಯ ಹಿತಾಸಕ್ತಿಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿರಬೇಕು ಎಂದು ಅಭಿಪ್ರಾಯಪಟ್ಟರು. “ಸಂಸ್ಕೃತಿಯ ರಕ್ಷಣೆಯು ಸಂವಿಧಾನಾತ್ಮಕವಾಗಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ. ನಿಕೋಬಾರ್ ಪರಿಸರದಲ್ಲಿನ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಮಾತನಾಡುವಾಗ, ಆ ಸಂಸ್ಕೃತಿಗೆ ಸಾಂವಿಧಾನಿಕ ರಕ್ಷಣೆ ಅತ್ಯಗತ್ಯವಾಗಿರುತ್ತದೆ” ಎಂದು ನ್ಯಾಯಮೂರ್ತಿ ಬಾಗ್ಚಿ ಮೌಖಿಕವಾಗಿ ಎಚ್ಚರಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಎದ್ದಿರುವ ಪರಿಸರ ಕಾಳಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) ಈಗಾಗಲೇ ಎರಡು ಬಾರಿ ವಿಲೇವಾರಿ ಮಾಡಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ವಾದಿಸಿದರು. ಕೆಲವು ಷರತ್ತುಗಳೊಂದಿಗೆ ಯೋಜನೆಗೆ ನೀಡಲಾದ ಪರಿಸರ ಅನುಮತಿಯನ್ನು ಎನ್‌ಜಿಟಿ ಎತ್ತಿಹಿಡಿದಿದೆ ಮತ್ತು ನಿರ್ದಿಷ್ಟವಾಗಿ ಪರಿಸರದ ಮೇಲಾಗುವ ಪರಿಣಾಮಗಳನ್ನು ಮರುಪರಿಶೀಲಿಸಲು ಉನ್ನತಾಧಿಕಾರ ಸಮಿತಿಯನ್ನು ಸಹ ರಚಿಸಿದೆ. ಏಪ್ರಿಲ್ 2023 ರಲ್ಲಿ ಪರಿಸರ ಅನುಮತಿಯ ವಿರುದ್ಧದ ಮರುಪರಿಶೀಲನಾ ಅರ್ಜಿಯನ್ನೂ ಎನ್‌ಜಿಟಿ ತಿರಸ್ಕರಿಸಿತ್ತು ಎಂದು ವಿವರಿಸಿದರು.
ಆದರೆ, ಯೋಜನೆಯಿಂದ ಎದುರಾಗಬಹುದಾದ ಗಂಭೀರ ಪರಿಸರ ಹಾನಿಯನ್ನು ಎತ್ತಿ ತೋರಿಸಿ ಮೀನಾ ಗುಪ್ತಾ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು. ಮೀನಾ ಗುಪ್ತಾ ಅವರು ಸ್ಥಳೀಯರಲ್ಲದ ಕಾರಣ ಅವರಿಗೆ ಅರ್ಜಿ ಸಲ್ಲಿಸುವ ಹಕ್ಕಿಲ್ಲ (locus standi) ಎಂಬ ಕೇಂದ್ರದ ಪ್ರಾಥಮಿಕ ಆಕ್ಷೇಪವನ್ನು ಹೈಕೋರ್ಟ್ ಮೇ ತಿಂಗಳಿನಲ್ಲಿಯೇ ವಜಾಗೊಳಿಸಿತ್ತು. ಅಲ್ಲದೆ, ಬುಡಕಟ್ಟು ಜನಾಂಗದವರ ಜೀವನಶೈಲಿಯ ಸಂರಕ್ಷಣೆ ಮತ್ತು ಮೂಲಭೂತ ಹಕ್ಕುಗಳ ಕುರಿತ ಸಾಂವಿಧಾನಿಕ ವಿಷಯಗಳ ವಿಚಾರಣೆಗಾಗಿ ನವೆಂಬರ್ 25 ಮತ್ತು 26 ರಂದು ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ.
ಮೀನಾ ಗುಪ್ತಾ ಅವರ ಪರ ವಾದಿಸಿದ ಹಿರಿಯ ವಕೀಲ ಎಸ್. ಮುರಳೀಧರ್, “ಸ್ಥಳೀಯ ಬುಡಕಟ್ಟು ಮಂಡಳಿಗಳನ್ನೇ (Tribal Councils) ಈಗಾಗಲೇ ಪ್ರಕರಣದಲ್ಲಿ ಸೇರ್ಪಡೆಗೊಳಿಸಿರುವುದರಿಂದ ಅರ್ಜಿಯ ಮಾನ್ಯತೆಯ ಕುರಿತಾದ ಕೇಂದ್ರದ ವಾದವು ಈಗ ಅಪ್ರಸ್ತುತವಾಗಿದೆ” ಎಂದರು. ಅಲ್ಲದೆ, ‘ಶೋಂಪೆನ್’ ಜನಾಂಗವು ‘ನಿರ್ದಿಷ್ಟವಾಗಿ ದುರ್ಬಲವಾಗಿರುವ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಲ್ಪಟ್ಟಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಎನ್‌ಜಿಟಿಯ ತೀರ್ಮಾನಗಳನ್ನು ಕೇಂದ್ರ ಸರ್ಕಾರವು ಕಲ್ಕತ್ತಾ ಹೈಕೋರ್ಟ್ ಮುಂದೆಯೇ ಮಂಡಿಸಬಹುದು ಎಂದು ತಿಳಿಸಿದ ಸುಪ್ರೀಂ ಕೋರ್ಟ್ ಪೀಠ, ಹೈಕೋರ್ಟ್ ವಿಚಾರಣೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿತು. 130 ಚದರ ಕಿ.ಮೀ.ಗೂ ಹೆಚ್ಚು ವಿಸ್ತೀರ್ಣದ ಅಸ್ಪೃಶ್ಯ ಉಷ್ಣವಲಯದ ದಟ್ಟ ಕಾಡುಗಳನ್ನು (pristine tropical forest) ಈ ಯೋಜನೆಗಾಗಿ ಪರಿವರ್ತಿಸುವುದರಿಂದ 2006ರ ಅರಣ್ಯ ಹಕ್ಕುಗಳ ಕಾಯ್ದೆಯ ಉಲ್ಲಂಘನೆಯಾಗಲಿದೆ ಮತ್ತು ಶೋಂಪೆನ್ ಹಾಗೂ ನಿಕೋಬಾರಿಗಳ ಸಂಸ್ಕೃತಿ ಮತ್ತು ಜೀವನಶೈಲಿಗೆ ತೀವ್ರ ಧಕ್ಕೆಯಾಗಲಿದೆ ಎಂಬುದು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಮುಖ್ಯ ಕಾಳಜಿಯಾಗಿದೆ.




