ಹೈದ್ರಾಬಾದ್ ವಿಮೋಚನಾ ಚಳವಳಿಗೆ ನೇತೃತ್ವ ವಹಿಸಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಮೋಘ ಕೊಡುಗೆ ನೀಡಿದ ಸ್ವಾಮಿ ರಾಮಾನಂದ ತೀರ್ಥರ 123ನೇ ಜಯಂತಿಯನ್ನು ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ವತಿಯಿಂದ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾ 371(ಜೆ) ಹೋರಾಟಗಾರ ಚಚಚಚ, “ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಹೈದ್ರಾಬಾದ್ ವಿಮೋಚನಾ ಚಳವಳಿಗೆ ಮಹತ್ವದ ಸ್ಥಾನವಿದೆ. ಈ ಚಳುವಳಿಗೆ ನೇತೃತ್ವ ವಹಿಸಿ ಹೈದ್ರಾಬಾದ್ ಕರ್ನಾಟಕ ಭಾಗದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸ್ವಾಮಿ ರಾಮಾನಂದ ತೀರ್ಥರನ್ನು ಸ್ಮರಿಸುವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯವಾಗಿದೆ” ಎಂದರು.
“ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವನ್ನು ರಾಜ್ಯ ಸರ್ಕಾರದಿಂದ ಪ್ರತಿವರ್ಷ ಸರ್ಕಾರಿ ಜಯಂತಿಯಾಗಿ ಆಚರಿಸಬೇಕು ಎಂದು ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ ಈ ವರ್ಷವೂ ಸರ್ಕಾರದಿಂದ ಜಯಂತಿ ಆಚರಣೆ ಮಾಡದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ವರ್ಷದಿಂದ ರಾಜ್ಯಾದ್ಯಂತ ಸ್ವಾಮಿ ರಾಮಾನಂದ ತೀರ್ಥರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವ ಮೂಲಕ ರಾಷ್ಟ್ರವೀರನಿಗೆ ಸೂಕ್ತ ಗೌರವ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
This video cannot be played in your browser. Open the video directly
ಇದೇ ವೇಳೆ ಮಾತನಾಡಿದ 371(ಜೆ) ಹೋರಾಟಗಾರ ಲಾಯಪ್ಪ ಇಂಗಳೆ, “ಹೈದ್ರಾಬಾದ್ ವಿಮೋಚನಾ ಹೋರಾಟ ದೇಶದ ಐತಿಹಾಸಿಕ ಚಳುವಳಿಗಳಲ್ಲಿ ಒಂದಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಮೂಲದವರಾಗಿ, ಸಿಂದಗಿಯಲ್ಲಿ ಜನಿಸಿ ಹೈದ್ರಾಬಾದ್ ವಿಮೋಚನಾ ಹೋರಾಟಕ್ಕೆ ನೇತೃತ್ವ ನೀಡಿದ ಸ್ವಾಮಿ ರಾಮಾನಂದ ತೀರ್ಥರು ಈ ಭಾಗದ ಹೆಮ್ಮೆಯ ಐತಿಹಾಸಿಕ ನಾಯಕರು” ಎಂದು ಹೇಳಿದರು.
“ದೇಶದ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವ ಸಲ್ಲಿಸುವ ಕಾರ್ಯ ಮಾಡಬೇಕು. ಮಹಾರಾಷ್ಟ್ರ ಸರ್ಕಾರ ನಾಂದೇಡ್ ವಿಶ್ವವಿದ್ಯಾಲಯಕ್ಕೆ ಸ್ವಾಮಿ ರಾಮಾನಂದ ತೀರ್ಥರ ಹೆಸರಿಟ್ಟು ಗೌರವಿಸಿರುವ ಮಾದರಿಯಲ್ಲಿ, ರಾಜ್ಯ ಸರ್ಕಾರವೂ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಸ್ವಾಮಿ ರಾಮಾನಂದ ತೀರ್ಥರ ಹೆಸರಿಡುವ ಮೂಲಕ ರಾಷ್ಟ್ರವೀರನಿಗೆ ಗೌರವ ಸಲ್ಲಿಸಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಅನಿಲ ಇಕ್ಕಡೆ, ಎನ್. ಸುರೇಶಕುಮಾರ, ವಸಂತ ಭೈರಾಮಡಿ, ಜಗದೇವ ಸೂರ್ಯವಂಶಿ ಹಾಗೂ ಮಲ್ಲಿಕಾರ್ಜುನ ಬಟಗಿ ಮಾತನಾಡಿದರು.
ಮುಖಂಡರಾದ ಮಲ್ಲನಗೌಡ ಪಾಟೀಲ (ಬರಟಗಿ), ಸಂಜೀವಗೌಡ ಪಾಟೀಲ (ಕನ್ನೂರ), ಕಲ್ಲಪ್ಪ ಶಿವಶರಣ, ಅಶೋಕ ವಾಲಿಕಾರ, ಸಾಗರ ಸಾವಳಗಿ, ಅಂಬಣ್ಣ ಗುನ್ನಾಪುರ, ಅನಿಲ ಪವಾರ, ಮಲ್ಲಿಕಾರ್ಜುನ ಲಂಗೋಟಿ, ಸಂತೋಷ ಕಲಗುಡಿ, ರಾಜು ತಡಲಗಿ, ರಾಜು ಕುಮಟಗಿ, ಗುರು ಹಿರೇಮಠ, ಅರುಣ ವಾಗ್ದಂಡೆ, ರಮೇಶ ಬಿರಾದಾರ ಸೇರಿದಂತೆ ಹಲವರು ಇದ್ದರು.





