ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲಾಗಿದ್ದು, ದಾಸನೂರು ಗ್ರಾಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು ₹183.78 ಕೋಟಿ ವೆಚ್ಚದ 161 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ₹143.38 ಕೋಟಿ ವೆಚ್ಚದ 134 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ₹40.40 ಕೋಟಿ ವೆಚ್ಚದ 27 ಕಾಮಗಾರಿಗಳ ಉದ್ಘಾಟನೆ ಮಾಡಲಾಯಿತು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಂಚ ಗ್ಯಾರಂಟಿ ಯೋಜನೆಗಳು, ‘ಸೇವಾ ಒನ್’ ಪೋರ್ಟಲ್, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಭಾರತ್ ಜೋಡೋ ಸಂಘ’, ರೈತರಿಗಾಗಿ ‘ನೇಗಿಲ ಯೋಗಿ’ ಹಾಗೂ ‘ರೈತ ಚೈತನ್ಯ’ ಕಾರ್ಯಕ್ರಮಗಳು ಜನಪರ ಆಡಳಿತದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿವೆ ಎಂದರು. ‘ನೇಗಿಲ ಯೋಗಿ’ ಯೋಜನೆಯಡಿ ರೈತರಿಗೆ ವರ್ಷಕ್ಕೆ ಮೂರು ಬಾರಿ ಉಚಿತ ಉಳುಮೆ ಸೌಲಭ್ಯ ಕಲ್ಪಿಸುವುದು, ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ವಸತಿ ಶಾಲೆಗಳನ್ನು ಸ್ಥಾಪಿಸುವುದು, ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಹೇಳಿದರು.
ಚುನಾವಣೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಬೆಲೆ ಏರಿಕೆಯಂತಹ ಹಲವು ಸವಾಲುಗಳ ನಡುವೆಯೂ ಜನಪರ ಯೋಜನೆಗಳನ್ನು ಮುಂದುವರಿಸಿಕೊಂಡು ಸಾಗುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹಾಗೂ ಜನಕಲ್ಯಾಣವನ್ನು ಸಮಾನವಾಗಿ ಮುನ್ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಜನರ ಕಲ್ಯಾಣವೇ ನಮ್ಮ ಸಂಕಲ್ಪ. ಅಭಿವೃದ್ಧಿಯ ಪಯಣ ನಿರಂತರವಾಗಿರಲಿದ್ದು, ವರುಣಾ ಕ್ಷೇತ್ರದ ಜನರ ಪ್ರೀತಿಗೆ ನಾವೆಂದೂ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.

ಈ ವಿಶೇಷ ವರದಿ ಓದಿದ್ದೀರಾ?SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ
ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಶಿವಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ವಿವಿಧ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಇದ್ದರು.




