ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮಾನಸಿಂಗ್ ಅವರ ನೇತೃತ್ವದ ಅಧಿಕಾರಿಗಳ ತಂಡದಿಂದ ಭಾನುವಾರ ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ಆಗಿರುವ ಮಳೆಯ ಪ್ರಮಾಣ, ಬರದಿಂದ ಆಗಿರುವ ಬೆಳೆ ಹಾನಿ, ಕ್ರಾಫ್ ಕಟಿಂಗ್ ಕುರಿತು ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಪಶು ಇಲಾಖೆ ಸೇರಿದಂತೆ ಇತರೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಂದ ದೇವದುರ್ಗ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲೆಯ ಬರದಿಂದಾದ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಸಭೆಯ ನಂತರ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಹೊಲದಲ್ಲಿ ಅನಾವೃಷ್ಟಿಯಿಂದ ಹಾನಿಯಾದ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡರು. ನಂತರ ಎನ್. ಗಣೇಕಲ್ ಗ್ರಾಮದ ಹೊಲದಲ್ಲಿ ಹತ್ತಿ ಬೆಳೆಹಾನಿ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡಾಗ ಜಮೀನಿನ ರೈತರು, ‘ನಮಗೆ ಈ ವರ್ಷ ಮಳೆ ಬರದೆ ಇರುವುದರಿಂದ ಹೊಲಕ್ಕೆ ಹಾಕಿದ ಬೀಜ ಗೊಬ್ಬರದ ದುಡ್ಡು ಬರದಂತೆ ಆಗಿದೆ. ಪ್ರತಿ ವರ್ಷ ಹತ್ತಿ ಎಕರೆಗೆ 12 ರಿಂದ 15 ಕ್ವಿಂಟಲ್ ಬರುತ್ತಿತ್ತು ಈ ವರ್ಷ ಎಕರೆಗೆ 2 ರಿಂದ ಮೂರು ಕ್ವಿಂಟಲ್ ಬಂದಿದೆ. ಇದರಿಂದ ನಾವು ಬಹಳ ನಷ್ಟದಲ್ಲಿದ್ದೇವೆ. ಬರಗಾಲದಿಂದ ಜನರು ಬೇರೆ ಕಡೆಗೆ ಗುಳೆ ಹೋಗುತ್ತಿದ್ದಾರೆ. ಎಕರೆಗೆ ₹ 50 ಸಾವಿರ ನಮಗೆ ಬರ ಪರಿಹಾರ ನೀಡಬೇಕು’ ಎಂದು ಕೇಂದ್ರ ತಂಡಕ್ಕೆ ಮನವಿ ಮಾಡಿದರು.
ಗಣೇಕಲ್ ಜಲಾಶಯಕ್ಕೆ ಬೇಟಿ ನೀಡಿದ ತಂಡ ವಿಬಿ ಜಿ ರಾಮ್ ಜಿ ಕಾಮಗಾರಿಯ ವೀಕ್ಷಣೆ ಮಾಡಿ ಅಲ್ಲಿ ಕೆಲಸ ಮಾಡುತ್ತಿರುವ ಜನರಿಂದ ಮಾಹಿತಿ ಪಡೆದರು. ‘ದಿನಕ್ಕೆ ₹ 375 ಕೂಲಿ ಕೊಡುತ್ತಾರೆ. ಹೊರಗಡೆ ಕೆಲಸಕ್ಕೆ ಹೋದರೆ * 700 ರಿಂದ ₹ 800 ಕೂಲಿ ಕೊಡುತ್ತಾರೆ. ಹಾಗಾಗಿ ನಮಗೆ ಕೂಲಿ ಹೆಚ್ಚಿಸಬೇಕು’ ಎಂದು ಕೆಲಸಗಾರರು ಹೇಳಿದರು.
ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಸರಕಲ್, ಎನ್. ಗಣೇಕಲ್, ಮಂದಕಲ್, ಯರಡೋಣ ಸೇರಿದಂತೆ ಇತರೆ ಕಡೆ ಬರ ಸಮೀಕ್ಷೆ ವೀಕ್ಷಣೆ ಮಾಡಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ತಂಡ ರೈತರಿಗೆ ಭರವಸೆ ನೀಡಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇವಸ್ಥಾನ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಹಲ್ಲೆ ಅರೋಪ: ಐವರ ವಿರುದ್ಧ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಗಿರಿಶ್ ಆರ್, ಜಿಲ್ಲಾಧಿಕಾರಿ ಪೂವಿತಾ ಎಸ್. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ, ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್, ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




