ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಷಾ ಸಿಂಗ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಐಎಎನ್‌ಎಸ್ ವರದಿ ಪ್ರಕಾರ, ಡೊಮುಹಾನಿ ಬಳಿಯ ಮರೈನ್ ಡ್ರೈವ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ತ್ರಿಷಾ ಸಿಂಗ್ ಹಾಗೂ ಇತರರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಅಪಘಾತದ ಸಂದರ್ಭ ಹಾಗೂ ವಾಹನದ ವೇಗ ಸೇರಿದಂತೆ ಹಲವು ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ದೀಪಿಕಾ ಪಾಂಡೆ ಸಿಂಗ್ ಹಾಗೂ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. “ಮಗುವನ್ನು ಕಳೆದುಕೊಳ್ಳುವ ನೋವು ಯಾವುದೇ ಪೋಷಕರು ಹಾಗೂ ಕುಟುಂಬಕ್ಕೆ ಅತೀವ ದುಃಖದ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ” ಎಂದು ಅವರು ಪ್ರಾರ್ಥಿಸಿದ್ದಾರೆ.
This video cannot be played in your browser. Open the video directly
ಇದನ್ನೂ ಓದಿ: ಬಂಗಾಳ ಗೆಲ್ಲಲು ಬಿಜೆಪಿ ಸುರಿದಿದ್ದು ₹286 ಕೋಟಿ; 4 ಚುನಾವಣೆಗಳ ಒಟ್ಟು ವೆಚ್ಚಕ್ಕಿಂತಲೂ ಹೆಚ್ಚು!
ಜಾರ್ಖಂಡ್ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಾಬುಲಾಲ್ ಮರಾಂಡಿ ಕೂಡ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ತಿಳಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.





