ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಗುರುತು ದೃಢೀಕರಣಕ್ಕೂ, ಪಿಂಚಣಿದಾರರ ಜೀವಂತಿಕೆ ಪರಿಶೀಲನೆಗೂ ಆಧಾರ್ ತಂತ್ರಜ್ಞಾನವನ್ನು ಸರ್ಕಾರ ಬಳಸುತ್ತಿದೆ. ಆಧಾರ್ನ್ನು ಇಷ್ಟು ನಂಬುವ ಹಾಗಿದ್ದರೆ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲೂ ಅದೇ ತಂತ್ರಜ್ಞಾನವನ್ನು ಬಳಸಲು ಸರ್ಕಾರ ಹಿಂದೇಟು ಹಾಕಬಾರದು ಎಂದು ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಹಾಗೂ UIDAIಯ ಸ್ಥಾಪಕ ಮಹಾನಿರ್ದೇಶಕ ಆರ್ ಎಸ್ ಶರ್ಮಾ ಹೇಳಿದ್ದಾರೆ.
ದೇಶಾದ್ಯಂತ ಹಂತ ಹಂತವಾಗಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ 2025ರ ಜೂನ್ನಿಂದ ಜಾರಿಯಲ್ಲಿದ್ದು, ಬಹುತೇಕ ದೇಶವನ್ನು ವ್ಯಾಪಿಸಿದೆ. ಈವರೆಗೆ 13 ಕೋಟಿಗೂ ಅಧಿಕ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. 2026ರ ಮೇ 27ರಂದು ಸುಪ್ರೀಂ ಕೋರ್ಟ್ SIR ಪ್ರಕ್ರಿಯೆಯನ್ನು ಎತ್ತಿಹಿಡಿದಿದ್ದರೂ, ಪೌರತ್ವದ ಅಂತಿಮ ನಿರ್ಧಾರವನ್ನು ಪೌರತ್ವ ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯವೇ ಕೈಗೊಳ್ಳಬೇಕು, ಚುನಾವಣಾ ಆಯೋಗವಲ್ಲ. ಹೀಗಾಗಿ SIRನ ಉದ್ದೇಶ ಪ್ರಶ್ನಾತೀತವಾದರೂ, ಅದಕ್ಕಾಗಿ ಅನುಸರಿಸುತ್ತಿರುವ ವಿಧಾನವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿರುವ ತಮ್ಮ ಲೇಖನದಲ್ಲಿ ಶರ್ಮಾ ಉಲ್ಲೇಖಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಬಳಕೆಯಿಂದ ದೂರವಿದ್ದ ಮನೆಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುವ ಪದ್ಧತಿಯನ್ನು ಈಗ ಸ್ಮಾರ್ಟ್ಫೋನ್ ಯುಗದಲ್ಲಿ ಬಹುತೇಕ ದೇಶದಾದ್ಯಂತ ಜಾರಿಗೊಳಿಸಲಾಗುತ್ತಿದೆ. ಲಕ್ಷಾಂತರ ಅಧಿಕಾರಿಗಳು ಮನೆಮನೆಗೆ ತೆರಳಬೇಕಾಗಿದ್ದು, ಕೋಟ್ಯಂತರ ನಾಗರಿಕರು ಕಡಿಮೆ ಅವಧಿಯಲ್ಲಿ ದಾಖಲೆಗಳ ಮೂಲಕ ತಮ್ಮ ಅರ್ಹತೆಯನ್ನು ಸಾಬೀತುಪಡಿಸಬೇಕಾಗಿದೆ. ಈ ಪ್ರಕ್ರಿಯೆಯ ಹೊರೆ ಬಡವರು, ವೃದ್ಧರು, ವಲಸಿಗರು ಮತ್ತು ಮಹಿಳೆಯರ ಮೇಲೆ ಹೆಚ್ಚು ಬೀಳುತ್ತದೆ ಎಂದು ಶರ್ಮಾ ಹೇಳಿದ್ದಾರೆ.
ಕೆಲವು ರಾಜ್ಯಗಳಲ್ಲಿ SIRನಲ್ಲಿ ಹೆಸರು ಅಳಿಸುವಿಕೆಯನ್ನು ಕಲ್ಯಾಣ ಯೋಜನೆಗಳ ದಾಖಲೆಗಳೊಂದಿಗೆ ಜೋಡಿಸುವ ಆದೇಶಗಳೂ ಬಂದಿರುವುದರಿಂದ, ತಪ್ಪಾಗಿ ಹೆಸರು ಅಳಿಸಲ್ಪಟ್ಟರೆ ಕುಟುಂಬಗಳು ಪಡಿತರ ಮತ್ತು ಪಿಂಚಣಿಯಂತಹ ಸೌಲಭ್ಯಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಪಶ್ಚಿಮ ಬಂಗಾಳದಲ್ಲಿ SIR ಅಡಿಯಲ್ಲಿ ಹೆಸರು ಕಳೆದುಕೊಂಡ ಮತದಾರರ ಮೇಲ್ಮನವಿಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
SIR ಪ್ರಕ್ರಿಯೆಗೆ ಸುಮಾರು 10 ಲಕ್ಷ ಸರ್ಕಾರಿ ನೌಕರರು, ಮುಖ್ಯವಾಗಿ ಶಾಲಾ ಶಿಕ್ಷಕರು, ನಿಯೋಜನೆಗೊಳ್ಳುತ್ತಾರೆ. ಪ್ರತಿ ಹಂತದಲ್ಲೂ ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣ ಖರ್ಚಾಗುತ್ತದೆ. ಇದಕ್ಕೆ ಹೋಲಿಸಿದರೆ, ಈಗಾಗಲೇ ನಿರ್ಮಿಸಲಾಗಿರುವ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಂಡು ಆಧಾರ್ ಆಧಾರಿತ ವ್ಯವಸ್ಥೆ ರೂಪಿಸುವ ವೆಚ್ಚ ಬಹಳ ಕಡಿಮೆ ಇರಲಿದೆ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ.
ಪೌರತ್ವವನ್ನು ಕ್ಷೇತ್ರಮಟ್ಟದಲ್ಲಿ ದಾಖಲೆಗಳ ಆಧಾರದ ಮೇಲೆ ನಿರ್ಧರಿಸುವುದೇ ಮೂಲ ಸಮಸ್ಯೆಯಾಗಿದೆ. ಪಾಸ್ಪೋರ್ಟ್ ಪ್ರಯಾಣದ ದಾಖಲೆಯೇ ಹೊರತು ಪೌರತ್ವದ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಸ್ಪಷ್ಟಪಡಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಆಧಾರ್ ಗುರುತು ಮತ್ತು ನಿವಾಸವನ್ನು ದೃಢೀಕರಿಸುತ್ತದೆ; ಪೌರತ್ವವನ್ನಲ್ಲ. ಮತದಾರರ ಗುರುತಿನ ಚೀಟಿ ಮತ್ತು PAN ಕಾರ್ಡ್ ಕೂಡ ಪೌರತ್ವದ ಪುರಾವೆಗಳಲ್ಲ. ಜನನ ನೋಂದಣಿಯೂ ದಶಕಗಳ ಕಾಲ ಬಡವರು, ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಬಹುಉದ್ದೇಶಿತ ರಾಷ್ಟ್ರೀಯ ಗುರುತಿನ ಚೀಟಿ (MNIC) ಯೋಜನೆಯ ಪ್ರಾಯೋಗಿಕ ಹಂತವು ಕಾರ್ಯಸಾಧ್ಯವಾಗದೆ ಕೈಬಿಡಲಾಯಿತು. ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಪ್ರಕ್ರಿಯೆಯಲ್ಲಿ 19 ಲಕ್ಷ ಜನರನ್ನು ಹೊರಗಿಡಲಾಗಿದ್ದು, ಅಪಾರ ಸಂಕಷ್ಟ ಉಂಟಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿಲ್ಲ. ನಂತರದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR)ಯಲ್ಲಿ ನಾಗರಿಕರು ಮತ್ತು ನಾಗರಿಕರಲ್ಲದವರನ್ನೂ ʼಸಾಮಾನ್ಯ ನಿವಾಸಿಗಳುʼ ಎಂದು ದಾಖಲಿಸಲಾಯಿತು. ಈ ಹಿಂದಿನ ಅನುಭವಗಳು ಕ್ಷೇತ್ರಮಟ್ಟದಲ್ಲಿ ಪೌರತ್ವ ಪರಿಶೀಲನೆಯ ಮಿತಿಗಳನ್ನು ತೋರಿಸುತ್ತವೆ ಎಂದು ಶರ್ಮಾ ಹೇಳಿದ್ದಾರೆ.
ಆಧಾರ್ ಪೌರತ್ವದ ಪುರಾವೆಯಲ್ಲ ಎಂಬುದನ್ನು ಒಪ್ಪಿಕೊಂಡರೂ, ಮತದಾರರ ಪಟ್ಟಿಯ ಪರಿಷ್ಕರಣೆಗೆ ಅಗತ್ಯವಿರುವ ಕೆಲವು ಮೂಲಭೂತ ಅಂಶಗಳನ್ನು ಅದು ದೃಢೀಕರಿಸಬಲ್ಲದು ಎಂದು ಅವರು ಹೇಳಿದ್ದಾರೆ. ಮತದಾರರ ಪಟ್ಟಿಗೆ ಮುಖ್ಯವಾಗಿ ವ್ಯಕ್ತಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೇ ಎಂಬುದು ಅಗತ್ಯ. ಆಧಾರ್ ನೋಂದಣಿಯ ಸಂದರ್ಭದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ 2013 ಅಥವಾ ಅದಕ್ಕೂ ಮೊದಲು ಸ್ವಂತ ಬೆರಳಚ್ಚು ಮತ್ತು ಕಣ್ಣಿನ ಐರಿಸ್ ಮಾಹಿತಿ ದಾಖಲಿಸಿಕೊಂಡಿರುವ ವ್ಯಕ್ತಿ ಆಗ ಕನಿಷ್ಠ ಐದು ವರ್ಷ ವಯಸ್ಸಿನವರಾಗಿರಬೇಕು. ಈಗ ಅವರು ಕನಿಷ್ಠ 18 ವರ್ಷ ವಯಸ್ಸಿನವರಾಗಿರುತ್ತಾರೆ ಎಂಬುದು ಅವರ ವಾದ.
ಆಧಾರ್ ವ್ಯವಸ್ಥೆಯು ದೇಶದ 1.36 ಶತಕೋಟಿ ನಿವಾಸಿಗಳನ್ನು ಒಳಗೊಂಡಿದ್ದು, PAN ಕಾರ್ಡ್ಗಳ ನಕಲುಗಳನ್ನು ಪತ್ತೆಹಚ್ಚುವುದು, ಬೇನಾಮಿ ಖಾತೆಗಳನ್ನು ನಿಯಂತ್ರಿಸುವುದು ಮತ್ತು ಕಲ್ಯಾಣ ಯೋಜನೆಗಳಲ್ಲಿನ ನಕಲಿ ಫಲಾನುಭವಿಗಳನ್ನು ತೆಗೆದುಹಾಕುವಂತಹ ಕಾರ್ಯಗಳಲ್ಲಿ ಬಳಸಲಾಗಿದೆ. ಇದರಿಂದ ₹2.7 ಲಕ್ಷ ಕೋಟಿಗೂ ಅಧಿಕ ಉಳಿತಾಯವಾಗಿದೆ ಎಂದು ಶರ್ಮಾ ಉಲ್ಲೇಖಿಸಿದ್ದಾರೆ.
Digi Yatra ಮೂಲಕ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ 10 ಕೋಟಿಗೂ ಅಧಿಕ ಆಧಾರ್ ಮುಖ ದೃಢೀಕರಣ ವಹಿವಾಟುಗಳು ನಡೆದಿವೆ. Jeevan Pramaan ವ್ಯವಸ್ಥೆಯ ಮೂಲಕ 1.47 ಕೋಟಿ ಪಿಂಚಣಿದಾರರು ಮೊಬೈಲ್ನಿಂದಲೇ ಮುಖ ದೃಢೀಕರಣದ ಮೂಲಕ ತಾವು ಜೀವಂತವಾಗಿರುವುದನ್ನು ಸಾಬೀತುಪಡಿಸಿದ್ದಾರೆ. ಸರ್ಕಾರ ಈ ತಂತ್ರಜ್ಞಾನವನ್ನು ಇಂತಹ ಸೇವೆಗಳಿಗೆ ಬಳಸುತ್ತಿದ್ದರೆ, ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲೂ ಬಳಸಬಹುದು ಎಂದು ಅವರು ಹೇಳಿದ್ದಾರೆ.
ಮತದಾರರು ಮೊಬೈಲ್ ಅಥವಾ ವೆಬ್ ಮೂಲಕ ಸ್ವಯಂಪ್ರೇರಿತವಾಗಿ ತಮ್ಮ ಆಧಾರ್ನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಸಂಪರ್ಕಿಸಿ, ಮುಖ ದೃಢೀಕರಣ ಪೂರ್ಣಗೊಳಿಸುವ ವ್ಯವಸ್ಥೆಯನ್ನು ರೂಪಿಸಬಹುದು ಎಂದು ಶರ್ಮಾ ಸಲಹೆ ನೀಡಿದ್ದಾರೆ. ಇದರಿಂದ ಮತದಾರ ಜೀವಂತವಾಗಿರುವುದನ್ನು ದೃಢೀಕರಿಸುವುದು, ಒಂದೇ ವ್ಯಕ್ತಿಯ ಹೆಸರಿನಲ್ಲಿ ಇರುವ ಪುನರಾವರ್ತಿತ ನೋಂದಣಿಗಳನ್ನು ಪತ್ತೆಹಚ್ಚುವುದು, ಅಸ್ತಿತ್ವದಲ್ಲಿಲ್ಲದ ವ್ಯಕ್ತಿಗಳ ಹೆಸರನ್ನು ಗುರುತಿಸುವುದು, ವಯಸ್ಸಿನ ಅರ್ಹತೆಯನ್ನು ಪರಿಶೀಲಿಸುವುದು ಹಾಗೂ ಆಧಾರ್ ನೋಂದಣಿಯಲ್ಲಿನ ವಿಳಾಸವನ್ನು ಅಡ್ಡಪರಿಶೀಲಿಸುವುದು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆನಾ, ದಾಖಲೆಗಳ ಪರೀಕ್ಷೆಯಾ? -SIR ಮೇಲೇಳಿಸಿರುವ ಪ್ರಶ್ನೆಗಳು
ಆಧಾರ್ ಸಂಪರ್ಕವನ್ನು ಕಡ್ಡಾಯಗೊಳಿಸದೆ, ಅದನ್ನು ಸ್ವಯಂಪ್ರೇರಿತವಾಗಿರಿಸಬೇಕು. ಆಧಾರ್ ಬಳಸಲು ಇಚ್ಛಿಸದವರಿಗೆ ಸಾಮಾನ್ಯ ಕೈಯಾರೆ ಪರಿಶೀಲನೆಯ ಅವಕಾಶ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ. ಪೌರತ್ವದ ವಿಚಾರವನ್ನು ಚುನಾವಣಾ ಆಯೋಗವೇ ನಿರ್ಧರಿಸುವ ಬದಲು, ಮೊದಲು ಎಲ್ಲರ ಗುರುತನ್ನು ಪರಿಶೀಲಿಸಿ, ವಿಶ್ಲೇಷಣೆಯ ಮೂಲಕ ಕಂಡುಬರುವ ನಿಜವಾದ ಅನುಮಾನಾಸ್ಪದ ಪ್ರಕರಣಗಳನ್ನು ಮಾತ್ರ ಗೃಹ ಸಚಿವಾಲಯಕ್ಕೆ ಕಳುಹಿಸಬೇಕು ಎಂಬುದು ಅವರ ಸಲಹೆಯಾಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಗೆ ಆಧಾರ್-EPIC ಮುಖ ದೃಢೀಕರಣ ಆಧಾರಿತ ಅರ್ಜಿಯನ್ನು UIDAI ಸಹಯೋಗದಲ್ಲಿ ಚುನಾವಣಾ ಆಯೋಗ ರೂಪಿಸಬೇಕು. ಪ್ರತಿ ಬಾರಿ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುವ, ಜನರಿಗೆ ತೊಂದರೆ ಉಂಟುಮಾಡುವ ಮತ್ತು ಗುರಿಯಾಗಿಸಿರುವ ಕೆಲವೇ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಸಾಧ್ಯವಾಗದ ಹಳೆಯ ವಿಧಾನವನ್ನು ಬದಲಿಸಬೇಕು ಎಂದು ಶರ್ಮಾ ಒತ್ತಾಯಿಸಿದ್ದಾರೆ.




