ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಶುದ್ಧೀಕರಿಸುವುದು ಅತ್ಯಂತ ಅಗತ್ಯವಾದ ಮತ್ತು ಕಾನೂನಾತ್ಮಕ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಚುನಾವಣೆಯ ಪಾರದರ್ಶಕತೆ, ನೈಜ ಮತದಾರರ ಗುರುತಿನ ಸಂರಕ್ಷಣೆ ಹಾಗೂ ನಕಲಿ ಅಥವಾ ಅನರ್ಹ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಆದರೆ ಈ ಪ್ರಕ್ರಿಯೆಯು ಕೇವಲ ಆಡಳಿತಾತ್ಮಕ ವ್ಯಾಯಾಮವಾಗಿರದೆ, ಭಾರತದ ಸಂವಿಧಾನವು ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ನೀಡಿರುವ ಮತದಾನದ ಹಕ್ಕನ್ನು ರಕ್ಷಿಸುವ ಜವಾಬ್ದಾರಿಯನ್ನೂ ಹೊತ್ತಿರುತ್ತದೆ. ಹೀಗಾಗಿ ಮತದಾರರ ಪಟ್ಟಿ ಶುದ್ಧೀಕರಣದ ಯಾವುದೇ ಕ್ರಮ ಪಾರದರ್ಶಕ, ಜನಸ್ನೇಹಿ, ನ್ಯಾಯಸಮ್ಮತ ಹಾಗೂ ಯಾವುದೇ ಅರ್ಹ ಮತದಾರರ ಹಕ್ಕಿಗೆ ಧಕ್ಕೆ ಉಂಟುಮಾಡದ ರೀತಿಯಲ್ಲಿ ನಡೆಯುವುದು ಅತ್ಯಗತ್ಯ.
ಈ ಹಿನ್ನೆಲೆಯಲ್ಲಿಯೇ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ರಾಜ್ಯದ ಹಲವೆಡೆ ಅನೇಕ ಪ್ರಶ್ನೆಗಳು, ಗೊಂದಲಗಳು ಮತ್ತು ಆತಂಕಗಳಿಗೆ ಕಾರಣವಾಗಿದೆ. ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಆರಂಭವಾದ ಈ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ. ವಿಶೇಷವಾಗಿ ದಾಖಲೆಗಳ ಸಲ್ಲಿಕೆ, ಕುಟುಂಬ ಸಂಬಂಧಗಳ ದಾಖಲಾತಿ, ಹೆಸರು ಹಾಗೂ ಮನೆತನದ ವ್ಯತ್ಯಾಸ, ವಿವಾಹದ ನಂತರದ ಗುರುತು ಬದಲಾವಣೆ, ಮರುಮದುವೆ, ವಲಸೆ ಮತ್ತು ಕುಟುಂಬದಿಂದ ದೂರವಾಗಿರುವ ನಾಗರಿಕರಂತಹ ವಿಶೇಷ ಸಂದರ್ಭಗಳಿಗೆ ಸಂಬಂಧಿಸಿದ ಸ್ಪಷ್ಟ ಮಾರ್ಗಸೂಚಿಗಳ ಕೊರತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಹಿಂದಿನ ವರ್ಷಗಳಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳಿಗೆ ಹೋಲಿಸಿದರೆ ಈ ಬಾರಿಯ SIR ಪ್ರಕ್ರಿಯೆ ಹೆಚ್ಚು ದಾಖಲೆ-ಕೇಂದ್ರಿತವಾಗಿದೆ ಎಂಬ ಅಭಿಪ್ರಾಯ ಸಾಮಾನ್ಯವಾಗಿ ಕೇಳಿಬರುತ್ತಿದೆ. ಚುನಾವಣಾ ಆಯೋಗವು ಈ ಪ್ರಕ್ರಿಯೆಯ ಉದ್ದೇಶ, ಅಗತ್ಯ ದಾಖಲೆಗಳು, ಪರ್ಯಾಯ ದಾಖಲೆಗಳ ಸ್ವೀಕಾರ ಮತ್ತು ಪರಿಶೀಲನೆಯ ವಿಧಾನಗಳ ಬಗ್ಗೆ ಸಮರ್ಪಕ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಇದರ ಪರಿಣಾಮವಾಗಿ ಅನೇಕ ಸಾಮಾನ್ಯ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುತ್ತದೆಯೇ ಎಂಬ ಆತಂಕದಲ್ಲಿದ್ದಾರೆ.
ಹಿಂದಿನ ಪ್ರಕ್ರಿಯೆಗೂ ಈ ಬಾರಿಯ SIR ಪ್ರಕ್ರಿಯೆಗೂ ಇರುವ ವ್ಯತ್ಯಾಸ
ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಅಥವಾ ಇತರ ಮಾಹಿತಿಗಳ ಪರಿಷ್ಕರಣೆಗಾಗಿ ಸಾಮಾನ್ಯ ದಾಖಲೆಗಳು ಸಾಕಾಗುತ್ತಿದ್ದವು. ಹಲವಾರು ಸಂದರ್ಭಗಳಲ್ಲಿ ಸ್ಥಳೀಯ ಪರಿಶೀಲನೆಯ ಆಧಾರದ ಮೇಲೆಯೇ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಆದರೆ ಈ ಬಾರಿ ಕುಟುಂಬ ಸಂಬಂಧಗಳ ವಿವರ, ಹಿಂದಿನ ಮತದಾರರ ಪಟ್ಟಿಯ ಸಂಪರ್ಕ, ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವು ಮಾಹಿತಿಗಳನ್ನು ಒದಗಿಸುವ ಅಗತ್ಯ ಎದುರಾಗಿದೆ.
ಇದರ ಪರಿಣಾಮವಾಗಿ ದಾಖಲೆಗಳ ಕೊರತೆ ಇರುವವರು, ಗ್ರಾಮೀಣ ಪ್ರದೇಶದ ನಾಗರಿಕರು, ವಲಸೆ ಕಾರ್ಮಿಕರು, ಹಿರಿಯ ನಾಗರಿಕರು, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರು, ಅಂತರ್ಜಾತಿ ಹಾಗೂ ಅಂತರ್ಧರ್ಮ ವಿವಾಹ ಮಾಡಿಕೊಂಡವರು, ಕುಟುಂಬದಿಂದ ದೂರವಾಗಿರುವವರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಮತದಾರರ ಹೆಸರು ಕೈಬಿಡುವ ಆತಂಕ
ಚುನಾವಣಾ ಆಯೋಗವು ಹಂತ ಹಂತವಾಗಿ ಪ್ರಕಟಿಸುತ್ತಿರುವ ಅಂಕಿ-ಅಂಶಗಳಲ್ಲಿಯೂ ಲಕ್ಷಾಂತರ ಮತದಾರರ ವಿವರಗಳು ಇನ್ನೂ ಅಂತಿಮಗೊಂಡಿಲ್ಲ ಅಥವಾ ಪರಿಶೀಲನೆ ಹಂತದಲ್ಲಿವೆ ಎಂಬುದು ಗೋಚರಿಸುತ್ತಿದೆ. ಈ ಅಂಕಿಅಂಶಗಳ ಹಿನ್ನೆಲೆಯಲ್ಲಿ ಅರ್ಹ ಮತದಾರರ ಹೆಸರುಗಳು ಅಂತಿಮ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು, ಕಾನೂನು ತಜ್ಞರು ಹಾಗೂ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗುತ್ತಿದೆ.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇವಲ ಆಡಳಿತಾತ್ಮಕ ಸೌಲಭ್ಯವಲ್ಲ; ಅದು ನಾಗರಿಕನ ಮೂಲ ಪ್ರಜಾಸತ್ತಾತ್ಮಕ ಹಕ್ಕು. ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅರ್ಹ ನಾಗರಿಕರಿಗೆ ಮತದಾನದ ಅವಕಾಶ ದೊರಕಬೇಕು. ಹೀಗಾಗಿ ದಾಖಲೆಗಳ ಕೊರತೆಯೊಂದೇ ಕಾರಣವಾಗಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ಅನೇಕ ಕಾನೂನು ತಜ್ಞರು ಹಾಗೂ ಚುನಾವಣಾ ಪ್ರಕ್ರಿಯೆ ಅಧ್ಯಯನ ಮಾಡಿದ ಪರಿಣಿತರ ಅಭಿಪ್ರಾಯವಾಗಿದೆ.
ಸಂಬಂಧಗಳ ಗೊಂದಲ-SIRನಲ್ಲಿ ಹೊಸ ಸವಾಲು
SIR ಪ್ರಕ್ರಿಯೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಕುಟುಂಬದ ‘ಸಂಬಂಧ’ ದಾಖಲಿಸುವ ವಿಧಾನ.
ಕುಟುಂಬದ ಸದಸ್ಯರನ್ನು ಪರಸ್ಪರ ಸಂಬಂಧದ ಮೂಲಕ ಗುರುತಿಸುವ ವ್ಯವಸ್ಥೆ ಸಾಮಾನ್ಯ ಕುಟುಂಬಗಳಿಗೆ ಸುಲಭವಾಗಬಹುದು. ಆದರೆ ಅಂತರ್ಜಾತಿ ಅಥವಾ ಅಂತರ್ಧರ್ಮ ವಿವಾಹ ಮಾಡಿಕೊಂಡ ಕುಟುಂಬಗಳು, ಕುಟುಂಬದಿಂದ ದೂರವಾಗಿ ಬದುಕುತ್ತಿರುವವರು, ಮರುಮದುವೆಯಾದವರು ಅಥವಾ ಕುಟುಂಬದ ಸಂಬಂಧಗಳು ಕಡಿದುಹೋಗಿರುವವರು ಈ ಹಂತದಲ್ಲಿ ಗಂಭೀರ ಗೊಂದಲವನ್ನು ಎದುರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಉದಾಹರಣೆ
ಮೈಸೂರಿನ ಹೂಟಗಳ್ಳಿಯಲ್ಲಿ ವಾಸಿಸುತ್ತಿರುವ ಮೂಲತಃ ಅರಕಲಗೂಡು ತಾಲ್ಲೂಕಿನ ಒಬ್ಬ ಹಿಂದೂ (ಒಕ್ಕಲಿಗ/ಗೌಡ ಸಮುದಾಯ) ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬಗಳ ಬೆಂಬಲವಿಲ್ಲದೆ ಸ್ವಂತ ಬದುಕು ಕಟ್ಟಿಕೊಂಡಿರುವ ಈ ದಂಪತಿ ಈಗ SIR ಪ್ರಕ್ರಿಯೆಯಲ್ಲಿ ಹೊಸ ರೀತಿಯ ಗೊಂದಲವನ್ನು ಎದುರಿಸುತ್ತಿದ್ದಾರೆ.
ಯುವಕ ತನ್ನ ತಂದೆ-ತಾಯಿಯ ವಿವರಗಳ ಮೂಲಕ ಹಿಂದಿನ ಮತದಾರರ ಪಟ್ಟಿಯ ಸಂಪರ್ಕವನ್ನು ನೀಡಬಹುದು. ಯುವತಿ ತನ್ನ ತಂದೆ-ತಾಯಿಯ ವಿವರಗಳನ್ನು ನೀಡಬಹುದು. ಆದರೆ ಗಂಡ-ಹೆಂಡತಿ ಪರಸ್ಪರ ಸಂಬಂಧವನ್ನು ದಾಖಲಿಸುವ ಸಂದರ್ಭದಲ್ಲಿ ಹೆಸರು, ಧರ್ಮ ಮತ್ತು ಕುಟುಂಬದ ಹಿನ್ನೆಲೆಯ ವ್ಯತ್ಯಾಸದಿಂದ ಅನುಮಾನ ಮೂಡುವ ಭಯ ಅವರಲ್ಲಿದೆ.
ಇವರ ಬಳಿ ವಿವಾಹ ನೋಂದಣಿ ಪ್ರಮಾಣಪತ್ರವಿದೆ. ಅದು ಗಂಡ-ಹೆಂಡತಿಯ ಸಂಬಂಧಕ್ಕೆ ಕಾನೂನುಬದ್ಧ ಪುರಾವೆಯಾಗಿದೆ. ಆದರೆ ಆ ದಾಖಲೆ SIR ಪರಿಶೀಲನೆಯಲ್ಲಿ ಯಾವ ಮಟ್ಟಿಗೆ ಪರಿಗಣನೆ ಪಡೆಯುತ್ತದೆ? ಸಂಬಂಧ ದೃಢೀಕರಣಕ್ಕೆ ಅದು ಸಾಕ್ಷಿಯಾಗುತ್ತದೆಯೇ? ಅಥವಾ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗುತ್ತದೆಯೇ? ಎಂಬ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂಬುದು ಅವರ ಆತಂಕವಾಗಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ವ್ಯಾಪ್ತಿಯ ಒಂದು ಉದಾಹರಣೆ, SIR ಪ್ರಕ್ರಿಯೆಯಲ್ಲಿನ ಮತ್ತೊಂದು ಗಂಭೀರ ಗೊಂದಲವನ್ನು ಬೆಳಕಿಗೆ ತರುತ್ತದೆ. ಒಬ್ಬ ಮುಸ್ಲಿಮ್ ವ್ಯಕ್ತಿಯನ್ನು ವಿವಾಹವಾದ ಹಿಂದೂ ಯುವತಿ, ಮದುವೆಯ ನಂತರ ತನ್ನ ಹೆಸರನ್ನು ಮುಸ್ಲಿಮ್ ಹೆಸರಿಗೆ ಬದಲಾಯಿಸಿಕೊಂಡು ಹಲವು ವರ್ಷಗಳಿಂದ ಅದೇ ಹೆಸರಿನಲ್ಲಿ ಬದುಕುತ್ತಿದ್ದಾರೆ. ಅವರಿಗೆ ಮಕ್ಕಳು, ಮೊಮ್ಮಕ್ಕಳು ಇದ್ದು, ಇಡೀ ಕುಟುಂಬವೂ ಮುಸ್ಲಿಮ್ ಸಮುದಾಯದ ಸದಸ್ಯರಾಗಿ ಇದೇ ಹೆಸರಿನಲ್ಲಿ ಗುರುತಿಸಿಕೊಂಡಿದೆ.
ಆದರೆ SIR ಎಣಿಕೆ ಪ್ರಕ್ರಿಯೆಯಲ್ಲಿ ಎನ್ಯುಮರೇಷನ್ ಫಾರಂ ಭರ್ತಿ ಮಾಡುವಾಗ ಹೊಸ ಸಮಸ್ಯೆ ಎದುರಾಗಿದೆ. ಫಾರಂನಲ್ಲಿ ತಂದೆ, ತಾಯಿ, ಅಜ್ಜ-ಅಜ್ಜಿ ಮೊದಲಾದ ಸಂಬಂಧಗಳ ಮಾಹಿತಿಯನ್ನು ದಾಖಲಿಸಬೇಕಾದಾಗ, ಅವರ ಮೂಲ ಕುಟುಂಬದ ದಾಖಲೆಗಳು ಹಿಂದೂ ಹೆಸರಿನಲ್ಲಿವೆ. ಆದರೆ ಈಗ ಅವರು ಬಳಸುತ್ತಿರುವ ಹೆಸರು ಸಂಪೂರ್ಣವಾಗಿ ಬೇರೆ ಆಗಿರುವುದರಿಂದ ಎರಡೂ ದಾಖಲೆಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ.
ಇದರ ಪರಿಣಾಮವಾಗಿ ತಂದೆ-ತಾಯಿಯೊಂದಿಗೆ ಸಂಬಂಧವನ್ನು ದಾಖಲಿಸುವುದಕ್ಕೂ ತೊಂದರೆಯಾಗುತ್ತಿದೆ. ಮತ್ತೊಂದೆಡೆ, ಹಲವು ವರ್ಷಗಳಿಂದ ಗಂಡನೊಂದಿಗೆ ಪತ್ನಿಯಾಗಿ ಬದುಕುತ್ತಿದ್ದರೂ, ಆ ಸಂಬಂಧವನ್ನು ಹಿಂದಿನ ದಾಖಲೆಗಳೊಂದಿಗೆ ಸುಲಭವಾಗಿ ಜೋಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾಖಲೆಗಳಲ್ಲಿ ಗುರುತು, ಹೆಸರು ಮತ್ತು ಕುಟುಂಬ ಸಂಬಂಧಗಳ ನಡುವೆ ಅಸಂಗತತೆ ಉಂಟಾಗುತ್ತಿದೆ.
ಇದು ಕೇವಲ ಒಬ್ಬ ಮಹಿಳೆಯ ಸಮಸ್ಯೆಯಲ್ಲ. ಧರ್ಮಾಂತರ, ವಿವಾಹ ಅಥವಾ ಕಾನೂನುಬದ್ಧವಾಗಿ ಹೆಸರು ಬದಲಾಯಿಸಿಕೊಂಡಿರುವ ಅನೇಕ ಮಹಿಳೆಯರು ಇದೇ ರೀತಿಯ ಸಂಕಷ್ಟವನ್ನು ಎದುರಿಸುವ ಸಾಧ್ಯತೆಯಿದೆ. ಹೆಸರು ಬದಲಾಗಿದ್ದರೂ ವ್ಯಕ್ತಿ ಅದೇ ಆಗಿರುತ್ತಾರೆ. ಆದರೆ ದಾಖಲೆಗಳಲ್ಲಿನ ವ್ಯತ್ಯಾಸದಿಂದ ಅವರ ಗುರುತಿನ ಮೇಲೆಯೇ ಪ್ರಶ್ನೆ ಮೂಡುವ ಪರಿಸ್ಥಿತಿ ನಿರ್ಮಾಣವಾಗಬಾರದು.
ಕೊಡಗಿನ ಮನೆತನ ಪದ್ಧತಿ, ಅಂತರ್ಜಾತಿ ವಿವಾಹ ಮತ್ತು ದಾಖಲೆಗಳ ಗೋಜಲು
ಕೊಡಗು ಸಮಾಜದಲ್ಲಿ ಮನೆತನ (ಒಕ್ಕ, ಮೂಲ ಕುಟುಂಬ, ವಂಶ) ಎಂಬುದು ಕೇವಲ ಉಪನಾಮವಲ್ಲ; ಅದು ವ್ಯಕ್ತಿಯ ಗುರುತು, ವಂಶಪಾರಂಪರ್ಯ ಮತ್ತು ಕುಟುಂಬದ ಐತಿಹಾಸಿಕ ಗುರುತಿನ ಸಂಕೇತವಾಗಿದೆ. ಮದುವೆಯಾದ ನಂತರ ಮಹಿಳೆ ತನ್ನ ಹುಟ್ಟಿದ ಮನೆಯ ಮನೆತನವನ್ನು ಬಿಟ್ಟು ಗಂಡನ ಮನೆತನಕ್ಕೆ ಸೇರುತ್ತಾಳೆ. ಜೊತೆಗೆ ಗಂಡನ ಹೆಸರನ್ನೂ ಬಳಸಲು ಆರಂಭಿಸುತ್ತಾಳೆ. ಹೀಗಾಗಿ ಮದುವೆಯ ಮೊದಲು ಇದ್ದ ದಾಖಲೆಗಳು ಮತ್ತು ಮದುವೆಯ ನಂತರದ ದಾಖಲೆಗಳ ನಡುವೆ ಸಹಜವಾಗಿಯೇ ವ್ಯತ್ಯಾಸ ಉಂಟಾಗುತ್ತದೆ.
ಈ ಬದಲಾವಣೆ ಸಾಮಾಜಿಕವಾಗಿ ಸಹಜವಾದರೂ, SIR ಪ್ರಕ್ರಿಯೆಯಲ್ಲಿ ಅದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ. ಏಕೆಂದರೆ ಎಣಿಕೆ ಫಾರ್ಮ್ನಲ್ಲಿ ಪತಿಯ ವಿವರ ನೀಡುವ ಅವಕಾಶ ಇದ್ದರೂ, ಕುಟುಂಬ ಸಂಬಂಧಗಳ ವಿವರದಲ್ಲಿ ತಂದೆ, ತಾಯಿ, ಅಜ್ಜ ಸೇರಿದಂತೆ ಮೂಲ ಕುಟುಂಬದ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ಇದೇ ಹಂತದಲ್ಲಿ ಸಮಸ್ಯೆ ಆರಂಭವಾಗುತ್ತದೆ.
ಉದಾಹರಣೆಗೆ, ಪೊನ್ನಂಪೇಟೆ ತಾಲ್ಲೂಕಿನ ಯುವತಿಯೊಬ್ಬರು ಮೈಸೂರಿನ ಯುವಕನನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಾರೆ. ಮದುವೆಯಾದ ಬಳಿಕ ಅವರು ಗಂಡನೊಂದಿಗೆ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಂದ ಇಬ್ಬರ ಕುಟುಂಬಗಳ ನಡುವಿನ ಸಂಬಂಧವೇ ಸಂಪೂರ್ಣ ಕಡಿದು ಹೋಗಿದೆ. ತವರು ಮನೆಯವರೊಂದಿಗೆ ಯಾವುದೇ ಸಂಪರ್ಕವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯುವತಿಯ ಪ್ರಸ್ತುತ ದಾಖಲೆಗಳಲ್ಲಿ ಗಂಡನ ಹೆಸರು ಮತ್ತು ಮನೆತನವಿದ್ದರೆ, ಜನನ ಅಥವಾ ಹಳೆಯ ದಾಖಲೆಗಳಲ್ಲಿ ತಂದೆಯ ಹೆಸರು ಮತ್ತು ತವರು ಮನೆಯ ಮನೆತನವೇ ಇರುತ್ತದೆ.
ಈ ಎರಡೂ ಮಾಹಿತಿಗಳು ಪರಸ್ಪರ ಹೊಂದಿಕೆಯಾಗದ ಕಾರಣ ಫಾರ್ಮ್ ಭರ್ತಿ ಮಾಡುವಾಗ ಗೊಂದಲ ಉಂಟಾಗುವ ಸಾಧ್ಯತೆ ಇದೆ. ದಾಖಲೆಗಳಲ್ಲಿನ ವ್ಯತ್ಯಾಸವನ್ನು ಅನುಮಾನಾಸ್ಪದ ಎಂದು ಪರಿಗಣಿಸಿ ನೋಟಿಸ್ ನೀಡುವ ಸಾಧ್ಯತೆಯೂ ಇದೆ ಅಥವಾ ಮತದಾರರ ಹೆಸರಿನ ಕುರಿತು ಪ್ರಶ್ನೆಗಳು ಉದ್ಭವಿಸಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ.
ನೋಟಿಸ್ ಬಂದರೆ ಅದಕ್ಕೆ ಉತ್ತರಿಸುವುದು ಇನ್ನಷ್ಟು ಸಂಕೀರ್ಣ. ಅಂತರ್ಜಾತಿ ವಿವಾಹದ ಬಳಿಕ ತವರು ಮನೆಯೊಂದಿಗೆ ಸಂಬಂಧವೇ ಇಲ್ಲದಿದ್ದರೆ, ಹಳೆಯ ದಾಖಲೆಗಳನ್ನು ಸಂಗ್ರಹಿಸುವುದೇ ಕಷ್ಟ. ಕೆಲವೊಮ್ಮೆ ಕುಟುಂಬವೇ ಮಗಳನ್ನು ಒಪ್ಪಿಕೊಳ್ಳದ ಪರಿಸ್ಥಿತಿಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಮದುವೆಗೆ ಮೊದಲು ಇದ್ದ ದಾಖಲೆಗಳು, ಈಗಿನ ಹೆಸರು, ಮನೆತನ ಮತ್ತು ಕುಟುಂಬದ ವಿವರಗಳನ್ನು ಪರಸ್ಪರ ಹೊಂದಿಸಿ ಸಾಬೀತುಪಡಿಸುವುದು ಸುಲಭದ ಕೆಲಸವಲ್ಲ.
ದಾಖಲೆಗಳ ಬಗ್ಗೆ ಸ್ಪಷ್ಟತೆ ಅಗತ್ಯ
ಯಾವ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ? ವಿವಾಹ ಪ್ರಮಾಣಪತ್ರಕ್ಕೆ ಯಾವ ಸ್ಥಾನಮಾನ? ಕುಟುಂಬ ಸಂಬಂಧವನ್ನು ಹೇಗೆ ದೃಢೀಕರಿಸಬೇಕು? ದಾಖಲೆ ಇಲ್ಲದಿದ್ದರೆ ಪರ್ಯಾಯ ಮಾರ್ಗವೇನು? ಹೆಸರು ಅಥವಾ ಮನೆತನ ಬದಲಾಗಿದ್ದರೆ ಯಾವ ದಾಖಲೆ ಮಾನ್ಯ? ಇಂತಹ ಪ್ರಶ್ನೆಗಳಿಗೆ ಚುನಾವಣಾ ಆಯೋಗದಿಂದ ಇನ್ನಷ್ಟು ಸ್ಪಷ್ಟ ಮಾರ್ಗಸೂಚಿ ಹಾಗೂ ಸಾರ್ವಜನಿಕ ಜಾಗೃತಿ ಅಗತ್ಯವಾಗಿದೆ.
BLOಗಳಿಗೂ ಸ್ಪಷ್ಟ ಮಾರ್ಗಸೂಚಿ ಅಗತ್ಯ
ಈ ರೀತಿಯ ವಿಶೇಷ ಸಂದರ್ಭಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಸ್ಪಷ್ಟ ಮಾರ್ಗಸೂಚಿ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಲ್ಲ ಎಂಬುದು ಹಲವರ ಅಭಿಪ್ರಾಯ. ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಬೂತ್ ಮಟ್ಟದ ಅಧಿಕಾರಿಗಳಿಗೂ (BLO) ಇಂತಹ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಸಮರ್ಪಕ ತರಬೇತಿ ಅಥವಾ ಸ್ಪಷ್ಟನೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಒಂದೇ ರೀತಿಯ ನಿಯಮವನ್ನು ಎಲ್ಲ ಸಂದರ್ಭಗಳಿಗೂ ಅನ್ವಯಿಸುವ ಬದಲು, ವಿಶೇಷ ಪರಿಸ್ಥಿತಿಗಳಿಗೆ ಪ್ರತ್ಯೇಕ ಕಾರ್ಯವಿಧಾನ ಮತ್ತು ದಾಖಲೆಗಳ ಪರಿಶೀಲನಾ ವಿಧಾನವನ್ನು ರೂಪಿಸಿದರೆ ಅನಗತ್ಯ ಗೊಂದಲಗಳನ್ನು ತಪ್ಪಿಸಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಚುನಾವಣಾ ಆಯೋಗದ ಹೊಣೆಗಾರಿಕೆ
ಚುನಾವಣಾ ಆಯೋಗದ ಮುಖ್ಯ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವುದು ಅಲ್ಲ; ಅರ್ಹರ ಹೆಸರು ಉಳಿಯುವಂತೆ ನೋಡಿಕೊಳ್ಳುವುದು ಹಾಗೂ ಅನರ್ಹ ದಾಖಲೆಗಳನ್ನು ಮಾತ್ರ ಪರಿಶೀಲಿಸುವುದಾಗಿದೆ.
ಆದ್ದರಿಂದ, ಸಂಬಂಧದ ಅಂಕಣ ಕುರಿತು ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಬೇಕು.
ಅಂತರ್ಧರ್ಮ ಹಾಗೂ ಅಂತರ್ಜಾತಿ ವಿವಾಹಿತರಿಗೆ ಪ್ರತ್ಯೇಕ ವಿವರಣೆ ನೀಡಬೇಕು
- ಕುಟುಂಬದಿಂದ ದೂರವಾಗಿರುವವರಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಬೇಕು.
- ವಿವಾಹ ನೋಂದಣಿ ಪ್ರಮಾಣಪತ್ರ ಸೇರಿದಂತೆ ಕಾನೂನುಬದ್ಧ ದಾಖಲೆಗಳಿಗೆ ಯಾವ ಸ್ಥಾನಮಾನ ನೀಡಲಾಗುತ್ತದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು.
- ಹೆಸರು ಅಥವಾ ಮನೆತನ ಬದಲಾದ ಮಹಿಳೆಯರಿಗೆ ಪರ್ಯಾಯ ದಾಖಲೆಗಳ ವ್ಯವಸ್ಥೆಯನ್ನು ತಿಳಿಸಬೇಕು.
- ದಾಖಲೆಗಳ ಹೊಂದಾಣಿಕೆಯಲ್ಲಿ ಸಮಸ್ಯೆ ಇರುವವರಿಗೆ ಸರಳ ದೃಢೀಕರಣ ವಿಧಾನಗಳನ್ನು ಒದಗಿಸಬೇಕು.
- BLOಗಳಿಗೆ ವಿಶೇಷ ತರಬೇತಿ ನೀಡಿ ಅನಗತ್ಯ ನೋಟಿಸ್ ಹಾಗೂ ಗೊಂದಲಗಳನ್ನು ತಪ್ಪಿಸಬೇಕು.
- ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸಬೇಕು.
ಪ್ರಜಾಪ್ರಭುತ್ವದ ಮೂಲ ಪ್ರಶ್ನೆ
ಇದು ಕೇವಲ ಮೈಸೂರು, ಕೊಡಗಿನ ಸಮಸ್ಯೆಯಲ್ಲ. ರಾಜ್ಯದ ಅನೇಕ ಭಾಗಗಳಲ್ಲಿ ಅಂತರ್ಜಾತಿ ವಿವಾಹ, ಅಂತರ್ಧರ್ಮ ವಿವಾಹ, ಹೆಸರು ಬದಲಾವಣೆ, ಕುಟುಂಬ ಸಂಬಂಧ ಕಡಿತ, ದತ್ತು ಸ್ವೀಕಾರ, ವಲಸೆ, ಹಿರಿಯ ನಾಗರಿಕರು, ದಾಖಲೆಗಳ ಕೊರತೆ ಮುಂತಾದ ಅನೇಕ ಕಾರಣಗಳಿಂದ ವ್ಯಕ್ತಿಗಳ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ. ಇಂತಹ ಪ್ರತಿಯೊಂದು ಪ್ರಕರಣಕ್ಕೂ ಒಂದೇ ಮಾದರಿಯ ನಿಯಮ ಅನ್ವಯಿಸಿದರೆ, ನೈಜ ಮತದಾರರೇ ದಾಖಲೆಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಯಾವುದೇ ಅರ್ಹ ನಾಗರಿಕನು ತನ್ನ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಚುನಾವಣಾ ವ್ಯವಸ್ಥೆಯ ಮೂಲ ಜವಾಬ್ದಾರಿಯಾಗಿದೆ. SIR ಪ್ರಕ್ರಿಯೆಯ ಯಶಸ್ಸು ದಾಖಲೆಗಳ ಸಂಖ್ಯೆಯಲ್ಲಿ ಅಲ್ಲ, ಪ್ರತಿಯೊಬ್ಬ ಅರ್ಹ ಮತದಾರನ ವಿಶ್ವಾಸವನ್ನು ಉಳಿಸುವಲ್ಲಿ ಅಡಗಿದೆ. ಇದೇ ಪ್ರಜಾಪ್ರಭುತ್ವದ ನಿಜವಾದ ಅರ್ಥವೂ ಆಗಿದೆ.
ಸಂಚಿಕೆ ಮುಂದುವರೆಯುತ್ತದೆ…




