ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ FIRಗಳ ತನಿಖೆ ಮುಂದುವರಿಸಬಹುದು ಎಂಬ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಜುಲೈ 25ರಂದು ನೀಡಿದ್ದ ಭರವಸೆಗೆ ವಿರುದ್ಧವಾಗಿ ಈ ಬೆಳವಣಿಗೆ ನಡೆದಿದೆ ಎಂದು ಆರೋಪಿಸಿರುವ ಸಿಜೆಪಿ, ನೀಡಿದ್ದ ಎಲ್ಲ ಭರವಸೆಗಳನ್ನು ತಕ್ಷಣ ಈಡೇರಿಸದಿದ್ದರೆ, ಕೇಸು ಹಾಕಿ ಬೇಟೆಯಾಡಿದರೆ ಮತ್ತೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಿಜೆಪಿ, ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶದ ನಾಲ್ಕನೇ ನಿರ್ದೇಶನವು ಈಗಾಗಲೇ ದಾಖಲಾಗಿರುವ ಎಫ್ಐಆರ್ಗಳ ತನಿಖೆಯನ್ನು ಮುಂದುವರಿಸಲು ಸರ್ಕಾರಕ್ಕೆ ಅವಕಾಶ ನೀಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಜುಲೈ 25ರಂದು ಕೇಂದ್ರ ಸರ್ಕಾರ ಯುವಕರಿಗೆ ನೀಡಿದ್ದ ಭರವಸೆಯಂತೆ, ಪ್ರತಿಭಟನಾಕಾರರ ವಿರುದ್ಧದ ಎಫ್ಐಆರ್ಗಳನ್ನು ಹಿಂಪಡೆಯಲಾಗುವುದು ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಇದೇ ಭರವಸೆಯನ್ನು ನಂಬಿ ಸಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಿಂಪಡೆದಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗ ಸುಪ್ರೀಂ ಕೋರ್ಟ್ ಆದೇಶವನ್ನು ನೆಪವನ್ನಾಗಿ ಮಾಡಿಕೊಂಡು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳು ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಮುಂದುವರಿಸಿ ಕಿರುಕುಳ ನೀಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿರುವ ಸಿಜೆಪಿ, ಆರಂಭದಿಂದಲೂ ನ್ಯಾಯಾಂಗ ಪ್ರಕ್ರಿಯೆಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆ ತಮಗೆ ಅನುಮಾನವಿತ್ತು ಎಂದು ಹೇಳಿದೆ.
ಇದೇ ವೇಳೆ, ಜುಲೈ 25ರಂದು ಸಿಜೆಪಿಯೊಂದಿಗೆ ಒಪ್ಪಂದವಾಗಿದ್ದರೂ ಹಾಗೂ ಮಾತುಕತೆಗಳು ಕೊನೆಯ ಕ್ಷಣದವರೆಗೂ ನಡೆದಿದ್ದರೂ, ಈ ವಿಷಯವನ್ನು ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ಗೆ ತಿಳಿಸದಿರುವುದೂ ಕಳವಳಕಾರಿ ಬೆಳವಣಿಗೆ ಎಂದು ಸಿಜೆಪಿ ಆರೋಪಿಸಿದೆ. ಸರ್ಕಾರ ನೀಡಿದ್ದ ಭರವಸೆಯ ಮಾಹಿತಿ ಇಲ್ಲದೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಹೀಗಾಗಿ ಈ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭಟನಾಕಾರರಿಗೆ ಸರ್ಕಾರ ಸಾರ್ವಜನಿಕವಾಗಿ ನೀಡಿದ್ದ ಭರವಸೆಯನ್ನು ನಂತರದ ಕಾನೂನು ಬೆಳವಣಿಗೆಗಳ ಮೂಲಕ ದುರ್ಬಲಗೊಳಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅದು ಸಾರ್ವಜನಿಕ ನಂಬಿಕೆಗೆ ದ್ರೋಹ ಮಾಡಿದಂತಾಗುತ್ತದೆ ಎಂದು ಸಿಜೆಪಿ ಹೇಳಿದೆ.
ಸುಪ್ರೀಂ ಕೋರ್ಟ್ನ ಆದೇಶದಲ್ಲಿಯೂ ಸರ್ಕಾರಗಳು ಎಫ್ಐಆರ್ಗಳನ್ನು ಕಡ್ಡಾಯವಾಗಿ ಮುಂದುವರಿಸಲೇಬೇಕು ಎಂದು ಎಲ್ಲಿಯೂ ಹೇಳಿಲ್ಲ. ಬಿಹಾರ ಮತ್ತು ಅಸ್ಸಾಂ ಸರ್ಕಾರಗಳು ಮಾಡಿದಂತೆ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಅಧಿಕಾರ ಈಗಲೂ ಸರ್ಕಾರದ ಕೈಯಲ್ಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶವನ್ನು ನೆಪವನ್ನಾಗಿ ಮಾಡಿಕೊಂಡು ಸರ್ಕಾರ ತನ್ನ ಮಾತಿನಿಂದ ಹಿಂದೆ ಸರಿಯಬಾರದು ಎಂದು ಸಿಜೆಪಿ ಆಗ್ರಹಿಸಿದೆ.
ಇದನ್ನೂ ಓದಿ: ವರಸೆ ಬದಲಿಸಿದ ಸರ್ಕಾರ; FIR ಹಿಂಪಡೆಯುವ ಭರವಸೆ ಎಲ್ಲರಿಗೂ ಅಲ್ಲ ಎಂದ ಕೇಂದ್ರ
ಈ ಹಿನ್ನೆಲೆಯಲ್ಲಿ, ಜುಲೈ 25ರಂದು ನೀಡಿದ್ದ ಭರವಸೆಯ ವಿವರಗಳನ್ನು ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕು. ಆಗ ಮಾತ್ರ ಯುವಕರಿಗೆ ನೀಡಿದ ಭರವಸೆಗಳ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ ಹಾಗೂ ಮುಂದಿನ ಆದೇಶವನ್ನು ಸಮಗ್ರ ಮಾಹಿತಿಯ ಆಧಾರದ ಮೇಲೆ ನೀಡಲು ಸಾಧ್ಯವಾಗುತ್ತದೆ ಎಂದು ಸಿಜೆಪಿ ಹೇಳಿದೆ.
ಸರ್ಕಾರ ಇಂದು ಕೊನೆಯ ಗಡುವಿನೊಳಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಎಫ್ಐಆರ್ಗಳನ್ನು ಹಿಂಪಡೆಯಬೇಕು, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಮತ್ತು ಜುಲೈ 25ರಂದು ನೀಡಿದ್ದ ಭರವಸೆಯ ಅಕ್ಷರ ಹಾಗೂ ಆತ್ಮ ಎರಡನ್ನೂ ಗೌರವಿಸಬೇಕು ಎಂದು ಸಿಜೆಪಿ ಒತ್ತಾಯಿಸಿದೆ.
ಇದನ್ನು ಪಾಲಿಸಲು ಸರ್ಕಾರ ವಿಫಲವಾದರೆ, ವಿದ್ಯಾರ್ಥಿಗಳು ಹಾಗೂ ಯುವ ಪ್ರತಿಭಟನಾಕಾರರ ಹಿತಾಸಕ್ತಿಯನ್ನು ರಕ್ಷಿಸಲು ಸಿಜೆಪಿ ಮತ್ತೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸಲಿದೆ. “ತನ್ನ ಮಾತನ್ನು ಉಳಿಸಿಕೊಳ್ಳದ ಸರ್ಕಾರದ ಎದುರು ದೇಶದ ಯುವಕರು ಮೌನವಾಗಿರುವುದಿಲ್ಲ. ಸರ್ಕಾರ ಭರವಸೆ ಉಲ್ಲಂಘಿಸಿದರೆ ಭಾರತದ ಬೀದಿಗಳೇ ಮತ್ತೊಮ್ಮೆ ಯುವಜನರ ಧ್ವನಿಯಾಗಲಿವೆ” ಎಂದು ಸಿಜೆಪಿ ಎಚ್ಚರಿಕೆ ನೀಡಿದೆ.




