28 ಜುಲೈ 1928: ಅಂಬೇಡ್ಕರ್ ಅವರು ಲಕ್ಷಾಂತರ ಮಹಿಳಾ ಕಾರ್ಮಿಕರ ಬದುಕನ್ನು ಬದಲಿಸಿದ ದಿನ! ಏನೆಂದು ಇಲ್ಲಿದೆ ಓದಿ

Date:

ʼಮಹಿಳೆಯ ಶ್ರಮದಿಂದ ಸಮಾಜ ಮತ್ತು ಬಂಡವಾಳಶಾಹಿಗಳು ಲಾಭ ಪಡೆಯುತ್ತಿದ್ದರೆ, ಆಕೆಯ ಮಾತೃತ್ವದ ಅವಧಿಯಲ್ಲಿ ಆಕೆಯ ಆರೋಗ್ಯ, ಜೀವನೋಪಾಯ, ಆದಾಯ ಮತ್ತು ಉದ್ಯೋಗವನ್ನು ರಕ್ಷಿಸುವುದು ಸಮಾಜದ ಕಡ್ಡಾಯ ಜವಾಬ್ದಾರಿʼ ಎಂಬುದು 1928ರ ಪ್ರಸೂತಿ ಸೌಲಭ್ಯ ಚರ್ಚೆಯಿಂದ ಹೊರಹೊಮ್ಮಿದ ಅಂಬೇಡ್ಕರ್ ಅವರ ಶಾಶ್ವತ ಸಂದೇಶ. ಇದೇ ಸಂದೇಶವು ಇಂದಿನ ಮಹಿಳಾ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೂ ದಾರಿದೀಪವಾಗಿದೆ.

ಭಾರತದಲ್ಲಿ ಮಹಿಳಾ ಕಾರ್ಮಿಕರ ಹಕ್ಕುಗಳು, ಪ್ರಸೂತಿ ರಜೆ, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆ ಹಾಗೂ ಉದ್ಯೋಗದ ಭದ್ರತೆ ಕುರಿತು ಇಂದು ನಡೆಯುತ್ತಿರುವ ಚರ್ಚೆಗಳಿಗೆ ಸುಮಾರು ಒಂದು ಶತಮಾನದ ಹಿಂದೆಯೇ ಡಾ. ಬಿ ಆರ್ ಅಂಬೇಡ್ಕರ್ ಅವರು ಸ್ಪಷ್ಟವಾದ ಸಾಮಾಜಿಕ ನ್ಯಾಯದ ದೃಷ್ಟಿಕೋನವನ್ನು ನೀಡಿದ್ದರು. 1928ರ ಜುಲೈ 28ರಂದು ಅಂದಿನ ಬಾಂಬೆ ವಿಧಾನ ಪರಿಷತ್ತಿನಲ್ಲಿ ಪ್ರಸೂತಿ ಸೌಲಭ್ಯ ಮಸೂದೆಯ ಕುರಿತು ಕಾರ್ಖಾನೆಗಳಲ್ಲಿ(ವಿಶೇಷವಾಗಿ ಜವಳಿ ಗಿರಣಿಗಳಲ್ಲಿ) ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಹೆರಿಗೆಯ ಮುನ್ನ ಮತ್ತು ನಂತರ ವೇತನಸಹಿತ ರಜೆ ನೀಡುವ ಮಾತೃತ್ವ ಪ್ರಯೋಜನ ಮಸೂದೆ(Maternity Benefit Bill)ಯನ್ನು ಮಂಡಿಸಲಾಗಿತ್ತು. ಈ ಮಸೂದೆಯ ಮೊದಲ ಓದಿನ ವೇಳೆ ಅಂಬೇಡ್ಕರ್ ಅವರು ಪ್ರಬಲವಾಗಿ ಬೆಂಬಲಿಸಿ ಭಾಷಣ ಮಾಡಿದರು.

- Advertisement -

ಆ ಸಭೆಯಲ್ಲಿ ಎದ್ದು ನಿಂತು ಮಾತನಾಡಿದ ಡಾ. ಬಿ ಆರ್ ಅಂಬೇಡ್ಕರ್, ʼಗರ್ಭಿಣಿಯರಿಗೆ ಹೆರಿಗೆಗೆ ಮುನ್ನ ಮತ್ತು ನಂತರ ವಿಶ್ರಾಂತಿ ನೀಡುವುದು ದಾನವಲ್ಲ, ಅನುಕಂಪದ ಕ್ರಮವೂ ಅಲ್ಲ; ಅದು ಆಕೆಗೆ ಸಲ್ಲಬೇಕಾದ ನ್ಯಾಯಸಮ್ಮತ ಕಾರ್ಮಿಕ ಹಕ್ಕುʼ ಎಂದು ಬಲವಾಗಿ ಪ್ರತಿಪಾದಿಸಿದ್ದರು. ಆ ಕಾಲದಲ್ಲಿ ಬಾಂಬೆ ಪ್ರೆಸಿಡೆನ್ಸಿ ಭಾರತದ ಪ್ರಮುಖ ಕೈಗಾರಿಕಾ ಪ್ರದೇಶವಾಗಿತ್ತು. ಮುಂಬೈನ ಹತ್ತಿ ಗಿರಣಿಗಳು, ಕಾರ್ಖಾನೆಗಳು ಮತ್ತು ಇತರ ಕೈಗಾರಿಕೆಗಳಲ್ಲಿ ಸಾವಿರಾರು ಮಹಿಳೆಯರು ದುಡಿಯುತ್ತಿದ್ದರು. ಮಹಿಳೆಯರ ಶ್ರಮವನ್ನು ಕೈಗಾರಿಕಾ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದ್ದರೂ, ಅವರ ಆರೋಗ್ಯ, ಗರ್ಭಾವಸ್ಥೆ, ಹೆರಿಗೆ, ಮಗುವಿನ ಆರೈಕೆ ಮತ್ತು ಉದ್ಯೋಗದ ಸುರಕ್ಷತೆ ಕುರಿತು ಉದ್ಯೋಗದಾತರು ಹಾಗೂ ಸರ್ಕಾರದಿಂದ ಸಮರ್ಪಕವಾದ ರಕ್ಷಣೆಯಿರಲಿಲ್ಲ. ಗರ್ಭಿಣಿಯಾದ ಮಹಿಳೆ ತನ್ನ ದೈಹಿಕ ಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ ಕೆಲಸಕ್ಕೆ ಹಾಜರಾಗಬೇಕಾದ ಪರಿಸ್ಥಿತಿಯಿತ್ತು. ಕೆಲಸಕ್ಕೆ ಬರಲು ಸಾಧ್ಯವಾಗದಿದ್ದರೆ ಆಕೆಯ ವೇತನ ಕಡಿತಗೊಳ್ಳುತ್ತಿತ್ತು ಅಥವಾ ಉದ್ಯೋಗವೇ ಕಳೆದುಹೋಗುವ ಅಪಾಯ ಎದುರಾಗುತ್ತಿತ್ತು. ಹೆರಿಗೆ ನಂತರವೂ ಆದಾಯವಿಲ್ಲದೆ ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ ಅನೇಕ ಮಹಿಳೆಯರು ದೈಹಿಕವಾಗಿ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಕೆಲಸಕ್ಕೆ ಹಿಂದಿರುಗಬೇಕಾಗುತ್ತಿತ್ತು. ಇಂತಹ ಅಮಾನವೀಯ ಪರಿಸ್ಥಿತಿಯಲ್ಲಿಯೇ ಪ್ರಸೂತಿ ಸೌಲಭ್ಯವನ್ನು ಕಾನೂನುಬದ್ಧ ಹಕ್ಕಾಗಿ ರೂಪಿಸುವ ಅಗತ್ಯ ಎದುರಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಸೂತಿ ಸೌಲಭ್ಯ ಮಸೂದೆಯ ಮೂಲ ಉದ್ದೇಶ ಗರ್ಭಿಣಿ ಕಾರ್ಮಿಕೆಗೆ ಹೆರಿಗೆಗೆ ಮುನ್ನ ಮತ್ತು ನಂತರ ನಿರ್ದಿಷ್ಟ ಅವಧಿಯ ರಜೆ ನೀಡುವುದು, ಆ ರಜೆಯ ಅವಧಿಯಲ್ಲಿ ಆಕೆಗೆ ಆದಾಯದ ರಕ್ಷಣೆ ಒದಗಿಸುವುದು, ಗರ್ಭಧಾರಣೆ ಅಥವಾ ಹೆರಿಗೆ ಕಾರಣಕ್ಕೆ ಉದ್ಯೋಗದಿಂದ ವಜಾಗೊಳಿಸದಂತೆ ತಡೆಯುವುದು ಮತ್ತು ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯವನ್ನು ಕಾಪಾಡುವುದಾಗಿತ್ತು. ಆದರೆ ಈ ಪ್ರಸ್ತಾವವನ್ನು ಎಲ್ಲರೂ ಸುಲಭವಾಗಿ ಒಪ್ಪಿಕೊಂಡಿರಲಿಲ್ಲ. ಬದಲಿಗೆ, ʼಮಹಿಳೆಯರು ಕೆಲಸಕ್ಕೆ ಬಾರದ ಅವಧಿಯಲ್ಲೂ ಉದ್ಯೋಗದಾತರು ಏಕೆ ಹಣ ನೀಡಬೇಕು, ಈ ವೆಚ್ಚವನ್ನು ಸರ್ಕಾರವೇ ಭರಿಸಬೇಕೇ, ಪ್ರಸೂತಿ ಸೌಲಭ್ಯ ನೀಡುವುದರಿಂದ ಕೈಗಾರಿಕೆಗಳ ಮೇಲೆ ಹೆಚ್ಚಿನ ಆರ್ಥಿಕ ಭಾರ ಬೀಳುವುದಿಲ್ಲವೇ?ʼ ಎಂಬ ಪ್ರಶ್ನೆಗಳು ಚರ್ಚೆಯಲ್ಲಿ ಎದ್ದವು. ಮಹಿಳಾ ಕಾರ್ಮಿಕರ ಪ್ರಸೂತಿಯನ್ನು ಮಾನವೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ನೋಡುವ ಬದಲು, ಅದನ್ನು ಕೈಗಾರಿಕೆಗಳಿಗೆ ಉಂಟಾಗುವ ಹೆಚ್ಚುವರಿ ವೆಚ್ಚವಾಗಿ ಪರಿಗಣಿಸುವ ಮನೋಭಾವ ಪ್ರಬಲವಾಗಿತ್ತು. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರ ನಿಲುವು ಅತ್ಯಂತ ಪ್ರಗತಿಪರವಾಗಿತ್ತು. ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುವುದು ಕೇವಲ ಆಕೆಯ ಖಾಸಗಿ ಅಥವಾ ಕೌಟುಂಬಿಕ ವಿಚಾರವಲ್ಲ; ಅದು ಸಮಾಜದ ಮುಂದಿನ ಪೀಳಿಗೆಯನ್ನು ರೂಪಿಸುವ ಪ್ರಕ್ರಿಯೆಯಾಗಿರುವುದರಿಂದ ತಾಯಿಯ ಆರೋಗ್ಯವನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಸಮಾಜ, ಸರ್ಕಾರ ಮತ್ತು ಉದ್ಯೋಗದಾತರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ವಾದದ ಕೇಂದ್ರಬಿಂದುವಾಗಿತ್ತು.

ಅಂಬೇಡ್ಕರ್ ಅವರ ಪ್ರಕಾರ, “ಗರ್ಭಾವಸ್ಥೆ ರೋಗವಲ್ಲದಿದ್ದರೂ ಅದು ಮಹಿಳೆಯ ದೇಹದಲ್ಲಿ ಮಹತ್ವದ ಬದಲಾವಣೆಗಳನ್ನು ಉಂಟುಮಾಡುವ ವಿಶೇಷ ಜೈವಿಕ ಮತ್ತು ಸಾಮಾಜಿಕ ಸ್ಥಿತಿ. ಗರ್ಭಿಣಿಯೊಬ್ಬಳು ನಿರಂತರವಾಗಿ ಕಠಿಣ ಕೆಲಸ ಮಾಡಿದರೆ ಅದು ಆಕೆಯ ಆರೋಗ್ಯದ ಮೇಲಷ್ಟೇ ಅಲ್ಲ, ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಹೆರಿಗೆಗೆ ಮುನ್ನ ಮಹಿಳೆಗೆ ಅಗತ್ಯವಾದ ವಿಶ್ರಾಂತಿ ಸಿಗಬೇಕು; ಹೆರಿಗೆ ನಂತರ ಆಕೆ ದೈಹಿಕವಾಗಿ ಚೇತರಿಸಿಕೊಳ್ಳಲು ಮತ್ತು ಮಗುವಿನ ಆರೈಕೆ ಮಾಡಲು ಸಮರ್ಪಕ ಸಮಯ ದೊರೆಯಬೇಕು” ಎಂದು ಪ್ರತಿಪಾದಿಸಿದ್ದರು.

ಮಹಿಳೆಗೆ ಕೇವಲ ರಜೆ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದನ್ನೂ ಅವರು ಅರಿತಿದ್ದರು. ರಜೆ ಸಂಬಳರಹಿತವಾಗಿದ್ದರೆ ಬಡ ಮಹಿಳಾ ಕಾರ್ಮಿಕರಿಗೆ ಅದನ್ನು ಬಳಸಿಕೊಳ್ಳುವ ಸ್ವಾತಂತ್ರ್ಯವೇ ಇರುವುದಿಲ್ಲ. ಆದಾಯವಿಲ್ಲದೆ ಕುಟುಂಬವನ್ನು ನಡೆಸಲಾಗದ ಕಾರಣ ಆಕೆ ಗರ್ಭಾವಸ್ಥೆಯ ಕೊನೆಯ ಹಂತದವರೆಗೂ ದುಡಿಯಬೇಕಾಗುತ್ತದೆ ಅಥವಾ ಹೆರಿಗೆ ನಂತರ ತಕ್ಷಣವೇ ಕೆಲಸಕ್ಕೆ ಮರಳಬೇಕಾಗುತ್ತದೆ. ಹೀಗಾಗಿ ಪ್ರಸೂತಿ ರಜೆಯು ಕಡ್ಡಾಯವಾಗಿ ವೇತನ ಅಥವಾ ಆರ್ಥಿಕ ಸೌಲಭ್ಯದೊಂದಿಗೆ ಇರಬೇಕು ಎಂಬುದು ಅಂಬೇಡ್ಕರ್ ಅವರ ವಾದದ ಅತ್ಯಂತ ಮಹತ್ವದ ಅಂಶವಾಗಿತ್ತು. ಅವರ ದೃಷ್ಟಿಯಲ್ಲಿ ಸಂಬಳವಿಲ್ಲದ ಪ್ರಸೂತಿ ರಜೆ ಕಾಗದದ ಮೇಲಿನ ಹಕ್ಕಾಗಬಹುದು; ಆದರೆ ಬಡ ಮಹಿಳೆಯ ಬದುಕಿನಲ್ಲಿ ಅದು ಪರಿಣಾಮಕಾರಿ ಹಕ್ಕಾಗಿ ಪರಿಣಮಿಸುವುದಿಲ್ಲ.

ಪ್ರಸೂತಿ ಸೌಲಭ್ಯದ ವೆಚ್ಚವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆಯಲ್ಲಿಯೂ ಅಂಬೇಡ್ಕರ್ ವಾಸ್ತವಿಕ ಮತ್ತು ನ್ಯಾಯಾಧಾರಿತ ನಿಲುವು ತಳೆದಿದ್ದು, “ಮಹಿಳಾ ಕಾರ್ಮಿಕರ ಶ್ರಮದಿಂದ ಕೈಗಾರಿಕೆಗಳು ಉತ್ಪಾದನೆ ಮತ್ತು ಲಾಭ ಪಡೆಯುತ್ತಿರುವಾಗ, ಆಕೆಯ ಮಾತೃತ್ವದ ಅವಧಿಯಲ್ಲಿ ಉಂಟಾಗುವ ಕನಿಷ್ಠ ಆರ್ಥಿಕ ಹೊಣೆಗಾರಿಕೆಯನ್ನು ಉದ್ಯೋಗದಾತರು ಹೊರುವುದು ಅನ್ಯಾಯವಲ್ಲ” ಎಂದು ಅವರು ವಾದಿಸಿದರು. ಮಹಿಳೆಯ ದುಡಿಮೆಯಿಂದ ಲಾಭ ಪಡೆಯುವ ಉದ್ಯಮವು ಆಕೆಯ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ಜವಾಬ್ದಾರಿಯನ್ನೂ ಹಂಚಿಕೊಳ್ಳಬೇಕು ಎಂಬುದು ಅವರ ಮೂಲ ಉದ್ದೇಶ. ಈ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಮಹಿಳೆ ಮತ್ತು ಆಕೆಯ ಕುಟುಂಬದ ಮೇಲೆ ಹಾಕುವುದು ಶೋಷಣೆಯ ಮುಂದುವರಿಕೆಯೇ ಆಗುತ್ತದೆ. ಸರ್ಕಾರವೂ ಪ್ರಸೂತಿ ರಕ್ಷಣೆಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು ಎಂಬ ವಿಶಾಲ ದೃಷ್ಟಿಕೋನ ಅವರಿಗೆ ಇದ್ದರೂ, ವೆಚ್ಚದ ಮೂಲದ ಕುರಿತು ಅಂತಿಮ ನಿರ್ಧಾರವಾಗುವವರೆಗೂ ಮಹಿಳೆಯರಿಗೆ ಸೌಲಭ್ಯವನ್ನು ಮುಂದೂಡಬಾರದು ಎಂಬುದು ಅವರ ತುರ್ತು ಕಾಳಜಿಯಾಗಿತ್ತು. ಕಾನೂನಿನ ಪರಿಪೂರ್ಣ ಮಾದರಿಗಾಗಿ ಕಾಯುತ್ತ ಮಹಿಳಾ ಕಾರ್ಮಿಕರ ತಕ್ಷಣದ ಅಗತ್ಯವನ್ನು ನಿರ್ಲಕ್ಷಿಸುವುದು ಅವರಿಗೆ ಒಪ್ಪಿಗೆಯಾಗಿರಲಿಲ್ಲ.

ಅಂಬೇಡ್ಕರ್ ಅವರ ಮಹಿಳಾ ಪರ ದೃಷ್ಟಿಕೋನವನ್ನು ಕೇವಲ ಮಾತೃತ್ವಕ್ಕೆ ಸೀಮಿತಗೊಳಿಸಿ ಅರ್ಥೈಸಬಾರದು. ಅವರು ಮಹಿಳೆಯನ್ನು ಕೇವಲ ತಾಯಿ, ಪತ್ನಿ ಅಥವಾ ಕುಟುಂಬದ ಆರೈಕೆಗಾರ್ತಿಯಾಗಿ ನೋಡಲಿಲ್ಲ. ಮಹಿಳೆಯು ಸ್ವತಂತ್ರ ವ್ಯಕ್ತಿ, ಕಾರ್ಮಿಕಳು, ಆರ್ಥಿಕ ಉತ್ಪಾದಕ ಶಕ್ತಿ ಮತ್ತು ಸಮಾನ ಹಕ್ಕುಗಳನ್ನು ಹೊಂದಿರುವ ನಾಗರಿಕಳಾಗಿದ್ದಾಳೆ ಎಂಬುದು ಅವರ ಚಿಂತನೆಯ ಮೂಲವಾಗಿತ್ತು.

ಮಹಿಳೆಯ ಶ್ರಮಕ್ಕೆ ಸಮರ್ಪಕ ಮೌಲ್ಯ ದೊರೆಯಬೇಕು, ಕೆಲಸದ ಸ್ಥಳದಲ್ಲಿ ಆಕೆಯ ಗೌರವ ಮತ್ತು ಸುರಕ್ಷತೆ ಕಾಪಾಡಬೇಕು, ಆಕೆಗೆ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ಸಿಗಬೇಕು, ಕುಟುಂಬದ ಹೊಣೆಗಾರಿಕೆಗಳ ಕಾರಣಕ್ಕೆ ಆಕೆಯ ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯ ನಾಶವಾಗಬಾರದದೆಂದು ಅವರು ನಂಬಿದ್ದರು. ಮಹಿಳೆಯರನ್ನು ಆರ್ಥಿಕವಾಗಿ ಅವಲಂಬಿತರನ್ನಾಗಿ ಉಳಿಸುವ ಸಾಮಾಜಿಕ ವ್ಯವಸ್ಥೆಯೇ ಅವರ ಅಧೀನತೆಯನ್ನು ಶಾಶ್ವತಗೊಳಿಸುತ್ತದೆ ಎಂಬ ಅರಿವು ಅಂಬೇಡ್ಕರ್ ಅವರಿಗೆ ಬಹಳ ಸ್ಪಷ್ಟವಾಗಿತ್ತು. ಆದ್ದರಿಂದ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆಸ್ತಿ, ವಿವಾಹ, ವಿಚ್ಛೇದನ, ವಾರಸತ್ವ ಮತ್ತು ಸಾಮಾಜಿಕ ಭದ್ರತೆಯ ಹಕ್ಕುಗಳನ್ನು ಒದಗಿಸುವುದನ್ನು ಅವರು ಸಮಗ್ರ ಸಾಮಾಜಿಕ ಪ್ರಜಾಪ್ರಭುತ್ವದ ಭಾಗವಾಗಿ ನೋಡಿದರು.

ಮಹಿಳಾ ಕಾರ್ಮಿಕರ ಪ್ರಸೂತಿ ಸೌಲಭ್ಯವನ್ನು ಬೆಂಬಲಿಸಿದ ಅಂಬೇಡ್ಕರ್ ಅವರ ನಿಲುವು ಅವರ ಕೇವಲ ಸೀಮಿತ ಕಾರ್ಮಿಕರಿಗಷ್ಟೇ ಅಲ್ಲದೆ, ಅಸಂಘಟಿತ ವಲಯ, ಗುತ್ತಿಗೆ ನೌಕರರು, ಕೃಷಿ ಕಾರ್ಮಿಕರು ಹಾಗೂ ದಿನಗೂಲಿ ಮಾಡುವ ಎಲ್ಲ ದುಡಿಯುವ ವರ್ಗದ ಹಿತಾಸಕ್ತಿ, ಕಲ್ಯಾಣ ಮತ್ತು ಹಕ್ಕುಗಳನ್ನು ಸಮಗ್ರವಾಗಿ ರಕ್ಷಿಸುವ ವಿಶಾಲವಾದ ನೀತಿಯು ರಾಜಕೀಯದೊಂದಿಗೆ ಆಳವಾಗಿ ಸಂಪರ್ಕ ಹೊಂದಿತ್ತು. ಕಾರ್ಮಿಕರ ಜೀವನವನ್ನು ಮಾರುಕಟ್ಟೆಯ ದಯೆಗೆ ಬಿಟ್ಟುಬಿಡಬಾರದು, ಕೆಲಸದ ಅವಧಿ, ವೇತನ, ಆರೋಗ್ಯ, ವಸತಿ, ವಿಮೆ, ವಿಶ್ರಾಂತಿ ಮತ್ತು ಉದ್ಯೋಗದ ಸುರಕ್ಷತೆಗಳನ್ನು ಕಾನೂನಿನ ಮೂಲಕ ಖಚಿತಪಡಿಸಬೇಕು ಎಂಬುದು ಅವರ ನಂಬಿಕೆಯಾಗಿತ್ತು. ನಂತರ ಕಾರ್ಮಿಕ ಕ್ಷೇತ್ರದ ಜವಾಬ್ದಾರಿಗಳನ್ನು ನಿರ್ವಹಿಸಿದ ಸಂದರ್ಭದಲ್ಲಿ ಕೆಲಸದ ಅವಧಿಯ ನಿಯಂತ್ರಣ, ಕಾರ್ಮಿಕರ ಕಲ್ಯಾಣ, ಸಾಮಾಜಿಕ ವಿಮೆ, ಮಹಿಳಾ ಮತ್ತು ಗಣಿ ಕಾರ್ಮಿಕರ ಸುರಕ್ಷತೆ, ಉದ್ಯೋಗ ವಿನಿಮಯ ಕೇಂದ್ರಗಳು ಹಾಗೂ ಕೈಗಾರಿಕಾ ಸಂಬಂಧಗಳಿಗೆ ಸಂಬಂಧಿಸಿದ ಹಲವು ನೀತಿಗಳ ರೂಪುಗೊಳಿಸುವಿಕೆಯಲ್ಲಿ ಅವರು ಮಹತ್ವದ ಪಾತ್ರವಹಿಸಿದರು.

ಕಾರ್ಮಿಕರನ್ನು ಕೇವಲ ಉತ್ಪಾದನೆಯ ಸಾಧನಗಳಂತೆ ನೋಡುವ ಆರ್ಥಿಕ ವ್ಯವಸ್ಥೆಯನ್ನು ಅವರು ಪ್ರಶ್ನಿಸಿದ್ದು, “ಕಾರ್ಮಿಕರು ಮಾನವರು; ಅವರಿಗೂ ಕುಟುಂಬ, ಆರೋಗ್ಯ, ಗೌರವ ಮತ್ತು ಸುರಕ್ಷಿತ ಬದುಕಿನ ಹಕ್ಕುಗಳಿವೆ” ಎಂಬ ಮಾನವಕೇಂದ್ರಿತ ದೃಷ್ಟಿಕೋನವನ್ನು ಅವರು ಮುಂದಿಟ್ಟರು. ಮಹಿಳಾ ಕಾರ್ಮಿಕರ ವಿಷಯದಲ್ಲಿ ವರ್ಗ ಶೋಷಣೆಯ ಜತೆಗೆ ಲಿಂಗ ಆಧಾರಿತ ಅನ್ಯಾಯವೂ ಸೇರಿಕೊಳ್ಳುತ್ತದೆ ಎಂಬುದನ್ನು ಅವರು ಗುರುತಿಸಿದ್ದರು. ಹೀಗಾಗಿ ಮಹಿಳಾ ಕಾರ್ಮಿಕರ ಹಕ್ಕುಗಳ ಪ್ರಶ್ನೆ ಅವರಲ್ಲಿ ಕೇವಲ ಕಾರ್ಮಿಕ ನೀತಿಯ ವಿಚಾರವಲ್ಲ; ಅದು ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯೂ ಆಗಿತ್ತು.

1928ರ ಈ ಚರ್ಚೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅಂದಿನ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಬೇಕು. ಮಹಿಳೆಯರ ಸಾರ್ವಜನಿಕ ಮತ್ತು ರಾಜಕೀಯ ಭಾಗವಹಿಸುವಿಕೆ ಅತ್ಯಂತ ಸೀಮಿತವಾಗಿದ್ದ ಕಾಲವದು. ಮಹಿಳೆಯರ ಉದ್ಯೋಗವನ್ನು ತಾತ್ಕಾಲಿಕ ಅಥವಾ ಪೂರಕ ಆದಾಯದ ಮೂಲವೆಂದು ಪರಿಗಣಿಸಲಾಗುತ್ತಿತ್ತು. ಮಹಿಳೆಯ ದೇಹ, ಗರ್ಭಧಾರಣೆ ಮತ್ತು ಮಗುವಿನ ಆರೈಕೆಯನ್ನು ಸಂಪೂರ್ಣವಾಗಿ ಆಕೆಯ ವೈಯಕ್ತಿಕ ಹೊಣೆಗಾರಿಕೆಯಾಗಿ ನೋಡಲಾಗುತ್ತಿತ್ತು. ಕೈಗಾರಿಕಾ ವ್ಯವಸ್ಥೆ ಮಹಿಳೆಯ ಶ್ರಮವನ್ನು ಬಳಸಿಕೊಂಡರೂ, ಆಕೆಯ ಪುನರುತ್ಪಾದನಾ ಶ್ರಮಕ್ಕೆ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಮಾನ್ಯತೆ ನೀಡುತ್ತಿರಲಿಲ್ಲ. ಇಂತಹ ಕಾಲಘಟ್ಟದಲ್ಲಿ ಮಾತೃತ್ವವನ್ನು ಸಾರ್ವಜನಿಕ ನೀತಿ ಮತ್ತು ಕಾರ್ಮಿಕ ಹಕ್ಕಿನ ಪ್ರಶ್ನೆಯಾಗಿ ರೂಪಿಸಿದ ಅಂಬೇಡ್ಕರ್ ಅವರ ಚಿಂತನೆ ತನ್ನ ಕಾಲಕ್ಕಿಂತ ಬಹಳ ಮುಂದಿತ್ತು. ಮಹಿಳೆಯೊಬ್ಬಳು ಹೆರಿಗೆಗಾಗಿ ಕೆಲಸದಿಂದ ದೂರವಿರುವುದು ಉತ್ಪಾದನೆಯಿಂದ ಆಕೆಯು ವೈಯಕ್ತಿಕವಾಗಿ ಹಿಂದೆ ಸರಿಯುವುದಲ್ಲ; ಸಮಾಜದ ನಿರಂತರತೆಗೆ ಅಗತ್ಯವಾದ ಆರೈಕೆಯ ಕೆಲಸವನ್ನು ಆಕೆ ನಿರ್ವಹಿಸುವ ಅವಧಿಯಾಗಿದೆ ಎಂಬರ್ಥ ಅವರ ನಿಲುವಿನಲ್ಲಿ ಅಡಕವಾಗಿತ್ತು.

ಬಾಂಬೆ ಪ್ರದೇಶದಲ್ಲಿ ರೂಪುಗೊಂಡ ಪ್ರಸೂತಿ ಸೌಲಭ್ಯ ಕಾನೂನುಗಳು ನಂತರ ಭಾರತದ ವಿವಿಧ ಪ್ರಾಂತಗಳಲ್ಲಿ ಇಂತಹ ಕಾನೂನುಗಳನ್ನು ರೂಪಿಸಲು ಪ್ರೇರಣೆಯಾದವು. ಸ್ವಾತಂತ್ರ್ಯಾನಂತರ ಭಾರತವು ಕಲ್ಯಾಣ ರಾಜ್ಯದ ಆಶಯವನ್ನು ಸ್ವೀಕರಿಸಿದಾಗ ಮಹಿಳಾ ಕಾರ್ಮಿಕರ ಪ್ರಸೂತಿ ರಕ್ಷಣೆಗೆ ರಾಷ್ಟ್ರಮಟ್ಟದ ಕಾನೂನಿನ ಅಗತ್ಯತೆ ಸ್ಪಷ್ಟವಾಯಿತು. ಇದರ ಪರಿಣಾಮವಾಗಿ 1961ರ ಪ್ರಸೂತಿ ಸೌಲಭ್ಯ ಕಾಯ್ದೆ ಜಾರಿಗೆ ಬಂತು. ಈ ಕಾಯ್ದೆಯು ಅರ್ಹ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ ಮತ್ತು ಆ ಅವಧಿಯ ವೇತನ, ಗರ್ಭಧಾರಣೆಯ ಕಾರಣದಿಂದ ಉದ್ಯೋಗದಲ್ಲಿ ಅನ್ಯಾಯ ಮಾಡದಿರುವ ರಕ್ಷಣೆ ಹಾಗೂ ಕೆಲವು ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸಿತು.

ಕಾಲಕ್ರಮೇಣ ಕಾಯ್ದೆಗೆ ತಿದ್ದುಪಡಿಗಳು ನಡೆದವು. 2017ರ ತಿದ್ದುಪಡಿಯ ಮೂಲಕ ನಿರ್ದಿಷ್ಟ ವಲಯಗಳ ಅರ್ಹ ಮಹಿಳೆಯರಿಗೆ ಪ್ರಸೂತಿ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಯಿತು. ದತ್ತು ಪಡೆದ ತಾಯಂದಿರು ಮತ್ತು ಮಗುವನ್ನು ಪಡೆಯಲು ಸರೋಗಸಿ(ಬಾಡಿಗೆ ತಾಯ್ತನ) ವಿಧಾನ ಬಳಸಿದ ಕೆಲವು ತಾಯಂದಿರಿಗೂ ನಿರ್ದಿಷ್ಟ ಸೌಲಭ್ಯಗಳನ್ನು ಒದಗಿಸಲಾಯಿತು. ನಿಗದಿತ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಶಿಶುಪಾಲನಾ ಕೇಂದ್ರದ ವ್ಯವಸ್ಥೆ ಮತ್ತು ಕೆಲವು ಸಂದರ್ಭಗಳಲ್ಲಿ ಮನೆಯಿಂದ ಕೆಲಸ ಮಾಡುವ ಅವಕಾಶದ ಬಗ್ಗೆ ನಿಯಮಗಳನ್ನು ಸೇರಿಸಲಾಯಿತು. ಇವು ಮಹತ್ವದ ಪ್ರಗತಿಗಳಾದರೂ, ಅಂಬೇಡ್ಕರ್ ಎತ್ತಿದ ಮೂಲ ಪ್ರಶ್ನೆಗಳು ಇನ್ನೂ ಸಂಪೂರ್ಣವಾಗಿ ಪರಿಹಾರಗೊಂಡಿಲ್ಲ.

ಇಂದಿನ ಭಾರತದಲ್ಲಿ ಪ್ರಸೂತಿ ಸೌಲಭ್ಯ ಕಾನೂನು ಮುಖ್ಯವಾಗಿ ಸಂಘಟಿತ ವಲಯದ ನಿರ್ದಿಷ್ಟ ಉದ್ಯೋಗಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತದೆ. ಆದರೆ ದೇಶದ ಬಹುಪಾಲು ಮಹಿಳೆಯರು ಕೃಷಿ, ಕಟ್ಟಡ ನಿರ್ಮಾಣ, ಮನೆಗೆಲಸ, ಬೀದಿ ವ್ಯಾಪಾರ, ಸಣ್ಣ ಕೈಗಾರಿಕೆಗಳು, ಗಾರ್ಮೆಂಟ್ ಕ್ಷೇತ್ರ, ಗುತ್ತಿಗೆ ಕೆಲಸ, ದಿನಗೂಲಿ, ಗಿಗ್ ಆರ್ಥಿಕತೆ ಮತ್ತು ಇತರ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಾರೆ. ಇವರಲ್ಲಿ ಅನೇಕರಿಗೆ ಲಿಖಿತ ಉದ್ಯೋಗ ಒಪ್ಪಂದವಿಲ್ಲ, ಸ್ಥಿರ ವೇತನವಿಲ್ಲ, ಉದ್ಯೋಗದ ದಾಖಲೆಗಳಿಲ್ಲ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯೂ ಇಲ್ಲ. ಇಂತಹ ಮಹಿಳೆಯರಿಗೆ ಕಾನೂನಿನಲ್ಲಿ ಉಲ್ಲೇಖಿಸಲಾದ ಪ್ರಸೂತಿ ಸೌಲಭ್ಯಗಳನ್ನು ಪಡೆಯುವುದು ಕಷ್ಟಕರವಾಗುತ್ತದೆ. ಗರ್ಭಿಣಿಯಾದ ಕಾರಣ ಕೆಲಸದಿಂದ ತೆಗೆದುಹಾಕುವುದು, ಕೆಲಸದ ದಿನಗಳನ್ನು ಕಡಿಮೆ ಮಾಡುವುದು, ಹೊಸ ನೇಮಕಾತಿಯಲ್ಲಿ ಮಹಿಳೆಯರನ್ನು ನಿರಾಕರಿಸುವುದು, ಪ್ರಸೂತಿ ರಜೆ ವೆಚ್ಚದ ಕಾರಣ ಮಹಿಳಾ ಉದ್ಯೋಗಿಗಳನ್ನು ನೇಮಿಸದಿರುವುದು ಮುಂತಾದ ಪರೋಕ್ಷ ತಾರತಮ್ಯಗಳು ಇನ್ನೂ ಕಂಡುಬರುತ್ತವೆ. ಹೀಗಾಗಿ ಮಾತೃತ್ವದ ವೆಚ್ಚವನ್ನು ಕೇವಲ ಒಬ್ಬ ಉದ್ಯೋಗದಾತನ ಮೇಲೆ ಹಾಕಬೇಕೇ ಅಥವಾ ಸರ್ಕಾರ, ಉದ್ಯೋಗದಾತರು ಮತ್ತು ಸಾಮಾಜಿಕ ವಿಮಾ ವ್ಯವಸ್ಥೆ ಒಟ್ಟಾಗಿ ಹಂಚಿಕೊಳ್ಳಬೇಕೇ ಎಂಬ ಚರ್ಚೆ ಈಗಲೂ ಪ್ರಸ್ತುತವಾಗಿದೆ.

ಪ್ರಸೂತಿ ಸೌಲಭ್ಯವನ್ನು ಕೇವಲ ಮಹಿಳೆಯರಿಗೆ ನೀಡುವ ವಿಶೇಷ ಅನುಕೂಲವೆಂದು ಚಿತ್ರಿಸುವುದೂ ಸಮಸ್ಯಾತ್ಮಕವಾಗಿದೆ. ವಾಸ್ತವದಲ್ಲಿ ಇದು ಸಾರ್ವಜನಿಕ ಆರೋಗ್ಯ, ಮಕ್ಕಳ ಪೌಷ್ಠಿಕತೆ, ತಾಯಿಯ ಜೀವ ರಕ್ಷಣೆ, ಕುಟುಂಬದ ಆರ್ಥಿಕ ಸ್ಥಿರತೆ ಮತ್ತು ದೇಶದ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಸಂಬಂಧಿಸಿದ ಸಾಮಾಜಿಕ ಹೂಡಿಕೆಯಾಗಿದೆ. ತಾಯಿಗೆ ಹೆರಿಗೆಗೂ ಮೊದಲು ಸಮರ್ಪಕ ವಿಶ್ರಾಂತಿ, ವೈದ್ಯಕೀಯ ಆರೈಕೆ, ಪೌಷ್ಠಿಕ ಆಹಾರ ಮತ್ತು ಆದಾಯದ ಭದ್ರತೆ ದೊರೆತರೆ ಗರ್ಭಾವಸ್ಥೆಯ ಅಪಾಯಗಳು ಕಡಿಮೆಯಾಗುತ್ತವೆ. ಹೆರಿಗೆ ನಂತರ ವಿಶ್ರಾಂತಿ, ಮಗುವಿನ ಆರೈಕೆಗೆ ಸಮಯ ದೊರೆತರೆ ತಾಯಿ ಹಾಗೂ ಮಗುವಿನ ಆರೋಗ್ಯ ಸುಧಾರಿಸುತ್ತದೆ. ಸ್ತನ್ಯಪಾನ, ಲಸಿಕೆ, ಪೌಷ್ಠಿಕತೆ ಮತ್ತು ಶಿಶುವಿನ ಆರಂಭಿಕ ಬೆಳವಣಿಗೆಗೂ ಅದು ಸಹಕಾರಿಯಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಪ್ರಸೂತಿ ರಜೆಗೆ ನೀಡುವ ಹಣ ಕೈಗಾರಿಕೆ ಅಥವಾ ಸರ್ಕಾರಕ್ಕೆ ನಷ್ಟವಲ್ಲ; ಅದು ಆರೋಗ್ಯಕರ ಸಮಾಜ ನಿರ್ಮಾಣದ ಹೂಡಿಕೆ ಎಂಬುದು ಅಂಬೇಡ್ಕರ್ ಅವರ ವಾದದ ಆಳವಾದ ಅರ್ಥವೂ ಆಗಿದೆ.

ಇಂದಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಮಾತೃತ್ವದ ಸಂಪೂರ್ಣ ಹೊಣೆಗಾರಿಕೆಯನ್ನು ಮಹಿಳೆಯೊಬ್ಬಳ ಮೇಲೆಯೇ ಹಾಕುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಲಿಂಗ ಅಸಮಾನತೆ ಮುಂದುವರಿಯುತ್ತದೆ. ಮಗುವಿನ ಆರೈಕೆಯಲ್ಲಿ ತಂದೆಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಪಿತೃತ್ವ ರಜೆ, ಪೋಷಕರ ರಜೆ, ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಶಿಶುಪಾಲನಾ ಕೇಂದ್ರಗಳು, ಕೆಲಸದ ಸ್ಥಳದಲ್ಲಿ ಸ್ತನ್ಯಪಾನಕ್ಕೆ ಅನುಕೂಲ, ಹೊಂದಿಕೊಳ್ಳುವ ಕೆಲಸದ ಸಮಯ ಮತ್ತು ಮಹಿಳೆಯರ ಉದ್ಯೋಗದ ನಿರಂತರತೆಯನ್ನು ಖಚಿತಪಡಿಸುವ ವ್ಯವಸ್ಥೆಗಳು ಅಗತ್ಯವಾಗಿವೆ. ಮಾತೃತ್ವವನ್ನು ಮಹಿಳೆಯ ಉದ್ಯೋಗ ಜೀವನದ ಅಡ್ಡಿಯನ್ನಾಗಿ ಮಾಡುವ ಬದಲು, ಕುಟುಂಬ ಮತ್ತು ಸಮಾಜ ಒಟ್ಟಾಗಿ ಹಂಚಿಕೊಳ್ಳಬೇಕಾದ ಜವಾಬ್ದಾರಿಯನ್ನಾಗಿ ರೂಪಿಸಬೇಕಾಗಿದೆ. ಮಹಿಳೆಯನ್ನು ನೇಮಿಸುವುದು ಉದ್ಯೋಗದಾತರಿಗೆ ಹೆಚ್ಚುವರಿ ವೆಚ್ಚ ಎಂಬ ತಪ್ಪು ಕಲ್ಪನೆಯನ್ನು ನಿವಾರಿಸಲು ಪ್ರಸೂತಿ ಸೌಲಭ್ಯಕ್ಕೆ ಸಾಮಾಜಿಕ ವಿಮೆಯ ಮಾದರಿ, ಸರ್ಕಾರದ ಹಣಕಾಸು ನೆರವು ಮತ್ತು ಉದ್ಯೋಗದಾತರ ಕೊಡುಗೆಗಳನ್ನು ಸಂಯೋಜಿಸುವ ವ್ಯವಸ್ಥೆಯ ಕುರಿತು ಗಂಭೀರ ಚಿಂತನೆ ಅಗತ್ಯವಾಗಿದೆ.

ಅಂಬೇಡ್ಕರ್ ಅವರ ಮಹಿಳಾ ಹಕ್ಕುಗಳ ಚಿಂತನೆಯು ಪ್ರಸೂತಿ ರಜೆಯಲ್ಲೇ ಕೊನೆಗೊಳ್ಳುವುದಿಲ್ಲ. ಮಹಿಳೆಯ ಸ್ವಾತಂತ್ರ್ಯವಿಲ್ಲದೆ ಸಮಾಜದ ಪ್ರಗತಿಯನ್ನು ಅಳೆಯಲಾಗುವುದಿಲ್ಲ ಎಂಬುದು ಅವರ ಮೂಲ ಸಂದೇಶವಾಗಿತ್ತು. ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೇ ಆ ಸಮಾಜದ ಅಭಿವೃದ್ಧಿಯ ಪ್ರಮಾಣ ಎಂಬುದನ್ನು ಅವರು ನಿರಂತರವಾಗಿ ಒತ್ತಿ ಹೇಳುತ್ತಿದ್ದರು. “ಶಿಕ್ಷಣದಿಂದ ವಂಚಿತಳಾದ, ಆರ್ಥಿಕವಾಗಿ ಅವಲಂಬಿತಳಾದ, ಆರೋಗ್ಯ ರಕ್ಷಣೆಯಿಲ್ಲದ ಮತ್ತು ಕುಟುಂಬ ಹಾಗೂ ಕೆಲಸದ ಸ್ಥಳದಲ್ಲಿ ಸಮಾನತೆ ಕಾಣದ ಮಹಿಳೆಯನ್ನು ಹೊಂದಿರುವ ಸಮಾಜವನ್ನು ನಿಜವಾದ ಪ್ರಜಾಪ್ರಭುತ್ವವೆಂದು ಕರೆಯಲು ಸಾಧ್ಯವಿಲ್ಲ. ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದೊಂದಿಗೆ ಒಂದಾಗಬೇಕು” ಎಂಬ ಅವರ ತತ್ವವು ಮಹಿಳಾ ಕಾರ್ಮಿಕರ ಹಕ್ಕುಗಳಿಗೂ ಅನ್ವಯಿಸುತ್ತದೆ. ಮತದಾನದ ಹಕ್ಕು ಇದ್ದರೂ ಜೀವನೋಪಾಯ ಕಳೆದುಕೊಳ್ಳುವ ಭಯದಿಂದ ಗರ್ಭಿಣಿಯೊಬ್ಬಳು ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾದರೆ ಆಕೆಯ ಸ್ವಾತಂತ್ರ್ಯ ಅಪೂರ್ಣವಾಗಿರುತ್ತದೆ. ಕಾನೂನಿನಲ್ಲಿ ಸಮಾನತೆ ಇದ್ದರೂ ಮಾತೃತ್ವದ ಕಾರಣಕ್ಕೆ ಉದ್ಯೋಗಾವಕಾಶ ಕಳೆದುಹೋದರೆ ಆ ಸಮಾನತೆ ಕೇವಲ ಔಪಚಾರಿಕವಾಗಿರುತ್ತದೆ. ಆದ್ದರಿಂದ 1928ರ ಪ್ರಸೂತಿ ಸೌಲಭ್ಯ ಮಸೂದೆಗೆ ಅಂಬೇಡ್ಕರ್ ನೀಡಿದ ಬೆಂಬಲ ಕೇವಲ ಪ್ರತ್ಯೇಕ ಐತಿಹಾಸಿಕ ಘಟನೆಯಾಗಿರಲಿಲ್ಲ; ಬದಲಿಗೆ ಅದು ಭಾರತದ ಸಾಮಾಜಿಕ ನ್ಯಾಯ, ಕಾರ್ಮಿಕ ಕಲ್ಯಾಣ ಮತ್ತು ಲಿಂಗ ಸಮಾನತೆಯ ಇತಿಹಾಸದಲ್ಲಿ ಮಹತ್ವದ ತಾತ್ವಿಕ ಘೋಷಣೆಯಾಗಿತ್ತು.

ಮಹಿಳೆಯ ದೇಹವನ್ನು ಶ್ರಮಕ್ಕಾಗಿ ಬಳಸಿಕೊಂಡು, ಮಾತೃತ್ವದ ಸಮಯದಲ್ಲಿ ಆಕೆಯನ್ನು ತನ್ನ ಪಾಡಿಗೆ ಬಿಟ್ಟುಬಿಡುವ ವ್ಯವಸ್ಥೆಯನ್ನು ಅವರು ಪ್ರಶ್ನಿಸಿದರು. “ಮಹಿಳೆಯ ಶ್ರಮದಿಂದ ಲಾಭ ಪಡೆಯುವ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಆಕೆಯ ಆರೋಗ್ಯ, ಆದಾಯ ಮತ್ತು ಉದ್ಯೋಗವನ್ನು ರಕ್ಷಿಸಲೇಬೇಕು ಎಂಬ ನೈತಿಕ ತತ್ವವನ್ನು ಅವರು ಪ್ರತಿಪಾದಿಸಿದರು. ಮಾತೃತ್ವವು ಮಹಿಳೆಯ ವೈಯಕ್ತಿಕ ಭಾರವಲ್ಲ; ಅದು ಸಮಾಜದ ಭವಿಷ್ಯವನ್ನು ನಿರ್ಮಿಸುವ ಪ್ರಕ್ರಿಯೆ” ಎಂಬುದನ್ನು ನೆನಪಿಸಿದರು.

ಇಂದು ಪ್ರಸೂತಿ ಸೌಲಭ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅಭಿವೃದ್ಧಿಯಾಗಿದ್ದರೂ, ಅವುಗಳ ಸಮಗ್ರ ಅನುಷ್ಠಾನ, ಅಸಂಘಟಿತ ವಲಯದ ಮಹಿಳೆಯರ ಒಳಗೊಳ್ಳುವಿಕೆ, ಉದ್ಯೋಗದಲ್ಲಿನ ತಾರತಮ್ಯ ನಿವಾರಣೆ ಮತ್ತು ಆರೈಕೆಯ ಹೊಣೆಗಾರಿಕೆಯ ಸಮಾನ ಹಂಚಿಕೆ ಇನ್ನೂ ದೊಡ್ಡ ಸವಾಲುಗಳಾಗಿವೆ. ಅಂಬೇಡ್ಕರ್ ಅವರ ಚಿಂತನೆಯ ನಿಜವಾದ ಅನುಷ್ಠಾನವೆಂದರೆ ಕೇವಲ 26 ವಾರಗಳ ರಜೆಯನ್ನು ಘೋಷಿಸುವುದಲ್ಲ; ಪ್ರತಿಯೊಬ್ಬ ಮಹಿಳೆಯೂ ಗರ್ಭಾವಸ್ಥೆ ಮತ್ತು ಹೆರಿಗೆಯ ಸಂದರ್ಭದಲ್ಲಿ ಆದಾಯ ಕಳೆದುಕೊಳ್ಳದೆ, ಉದ್ಯೋಗ ಕಳೆದುಕೊಳ್ಳದೆ, ಗೌರವ ಕಳೆದುಕೊಳ್ಳದೆ ಮತ್ತು ಆರೋಗ್ಯದ ಅಪಾಯಕ್ಕೆ ಸಿಲುಕದೆ ಬದುಕಲು ಸಾಧ್ಯವಾಗುವಂತಹ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ. ಸಂಘಟಿತ ಅಥವಾ ಅಸಂಘಟಿತ ವಲಯ ಎಂಬ ಬೇಧವಿಲ್ಲದೆ ಎಲ್ಲ ಮಹಿಳಾ ಕಾರ್ಮಿಕರಿಗೂ ಪ್ರಸೂತಿ ರಕ್ಷಣೆ ಸಿಗಬೇಕು. ಕೆಲಸದ ಸ್ಥಳಗಳು ಮಹಿಳಾ ಸ್ನೇಹಿಯಾಗಬೇಕು. ಶಿಶುಪಾಲನೆಯ ಸೌಲಭ್ಯ ಸಾರ್ವಜನಿಕ ಮೂಲಸೌಕರ್ಯದ ಭಾಗವಾಗಬೇಕು. ಉದ್ಯೋಗದಾತರು, ಸರ್ಕಾರ ಮತ್ತು ಸಮಾಜ ಈ ಹೊಣೆಗಾರಿಕೆಯನ್ನು ಒಟ್ಟಾಗಿ ಹೊತ್ತುಕೊಳ್ಳಬೇಕು.

ಇದನ್ನೂ ಓದಿದ್ದೀರಾ? ಕನ್ನಡಿಗರ ಉದ್ಯಮಶೀಲತೆ: ಆತ್ಮಾವಲೋಕನದ ಹೊತ್ತು

ಸುಮಾರು ನೂರು ವರ್ಷಗಳ ಹಿಂದೆ ಅಂಬೇಡ್ಕರ್ ಎತ್ತಿದ ಪ್ರಶ್ನೆ ಇಂದಿಗೂ ನಮ್ಮ ಮುಂದಿದೆ: ಮಹಿಳೆಯ ಶ್ರಮ ಬೇಕು, ಆದರೆ ಆಕೆಯ ಮಾತೃತ್ವದ ಜವಾಬ್ದಾರಿ ಬೇಡ ಎನ್ನುವ ಸಮಾಜವನ್ನು ನ್ಯಾಯಯುತ ಸಮಾಜವೆಂದು ಕರೆಯಬಹುದೇ? ಇದರ ಉತ್ತರ ಸ್ಪಷ್ಟವಾಗಿದೆ. ʼಮಹಿಳೆಯ ಶ್ರಮದಿಂದ ಸಮಾಜ ಮತ್ತು ಬಂಡವಾಳಶಾಹಿಗಳು ಲಾಭ ಪಡೆಯುತ್ತಿದ್ದರೆ, ಆಕೆಯ ಮಾತೃತ್ವದ ಅವಧಿಯಲ್ಲಿ ಆಕೆಯ ಆರೋಗ್ಯ, ಜೀವನೋಪಾಯ, ಆದಾಯ ಮತ್ತು ಉದ್ಯೋಗವನ್ನು ರಕ್ಷಿಸುವುದು ಸಮಾಜದ ಕಡ್ಡಾಯ ಜವಾಬ್ದಾರಿʼ ಎಂಬುದು 1928ರ ಪ್ರಸೂತಿ ಸೌಲಭ್ಯ ಚರ್ಚೆಯಿಂದ ಹೊರಹೊಮ್ಮಿದ ಅಂಬೇಡ್ಕರ್ ಅವರ ಶಾಶ್ವತ ಸಂದೇಶ. ಇದೇ ಸಂದೇಶವು ಇಂದಿನ ಮಹಿಳಾ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೂ ದಾರಿದೀಪವಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಬ್ಬಿಗೆ ಬೆಂಬಲ ಬೆಲೆ: ಬೆಂಗಳೂರಿನಲ್ಲಿ ಕೇಂದ್ರ ತಜ್ಞರ ಸಮಿತಿಗೆ ಕಬ್ಬು ಬೆಳೆಗಾರರ ಅಹವಾಲು

ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ...

ಬಸವಕಲ್ಯಾಣ | ಎನ್‌ಎಸ್‌ಯುಐ ಕಾರ್ಯಕರ್ತರಿಂದ ಸ್ವಚ್ಛತಾ ಅಭಿಯಾನ

ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ...

ಯುಪಿ ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಸವಾಲಿಗೆ ‘ಎಸ್‌ಪಿ’ ದಿಟ್ಟ ಉತ್ತರ

ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ 11 ವಿಧಾನ...

‌ʼಸೂಪರ್ ಎಲ್ ನಿನೊʼ ಅಬ್ಬರಕ್ಕೆ ಮಾರ್ಚ್‌ ವೇಳೆಗೆ ಭಾರತದಲ್ಲಿ 55 ಸಾವಿರ ಸಾವು? ಹೊಸ ಟ್ರ್ಯಾಕರ್ ವರದಿ!

ಎಲ್ ನಿನೊ ಹವಾಮಾನ ವಿದ್ಯಮಾನವು ಈ ವರ್ಷ ಜಗತ್ತಿನಾದ್ಯಂತ ತೀವ್ರ ಉಷ್ಣಾಂಶ...