ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಗೈರುಹಾಜರಾದ ವಿದ್ಯಾರ್ಥಿಗಳು “ಪಾಕಿಸ್ತಾನಕ್ಕೆ ಹೋಗಬೇಕು” ಎಂದು ಸಂದೇಶ ಕಳುಹಿಸುವ ಮೂಲಕ ಕೇರಳದ ತ್ರಿಶೂರ್ ಜಿಲ್ಲೆಯ ಮಾಳ ಪ್ರದೇಶದಲ್ಲಿರುವ ‘ಡಾ. ರಾಜು ಡೇವಿಸ್ ಇಂಟರ್‌ನ್ಯಾಷನಲ್ ಅಂಡ್ ಸೈನಿಕ್ ಸ್ಕೂಲ್’ ಮಾಲೀಕ ರಾಜು ಡೇವಿಸ್ ಪೆರೇಪಾಡನ್ ಸದ್ಯ ತೀವ್ರ ವಿವಾದಕ್ಕೆ ಕಾರಣರಾಗಿದ್ದಾರೆ. ಶಾಲೆಯ ಪೋಷಕರ ವಾಟ್ಸಾಪ್ ಗ್ರೂಪ್‌ನಲ್ಲಿ ರಾಜು ಡೇವಿಸ್ ಅವರು ಹಂಚಿಕೊಂಡ ಧ್ವನಿ ಸಂದೇಶ (ವಾಯ್ಸ್ ನೋಟ್) ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲಾ ಆಡಳಿತ ಮಂಡಳಿಯು ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು ಮತ್ತು ವಿದ್ಯಾರ್ಥಿಗಳನ್ನು ಕರೆತರಲು ಶಾಲಾ ಬಸ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಆದರೆ, ಅರ್ಧಕ್ಕಿಂದ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.
ಇದನ್ನೂ ಓದಿ: ಜಾತ್ಯತೀತ ನೇಪಾಳದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಹಿಂದೆ ಆರೆಸ್ಸೆಸ್ ಕೈವಾಡದ ಶಂಕೆ?
ಇದರಿಂದ ಕೋಪಗೊಂಡ ರಾಜು ಡೇವಿಸ್, “ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಾಗ ಮನೆಯಲ್ಲೇ ಕುಳಿತುಕೊಳ್ಳುವುದು ತಪ್ಪು. ಇಂತಹ ನಡೆ ಅನುಮತಿಸಲು ಸಾಧ್ಯವಿಲ್ಲ. ಇಂತಹವರು ಭಾರತದಲ್ಲಿ ಇರಲು ಅರ್ಹರಲ್ಲ, ಅವರು ಪಾಕಿಸ್ತಾನದಂತಹ ದೇಶಗಳಿಗೆ ಹೋಗಿ ವಾಸಿಸಲಿ” ಎಂದು ಸಂದೇಶದಲ್ಲಿ ಹೇಳಿದ್ದರು.
ಅಲ್ಲದೆ, ಗೈರಾದ ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿಕೊಳ್ಳುವುದಿಲ್ಲ ಮತ್ತು ಅವರ ಪೋಷಕರು ನೇರವಾಗಿ ಬಂದು ವಿವರಣೆ ನೀಡಬೇಕು ಎಂದೂ ಎಚ್ಚರಿಸಿದ್ದರು.
ಈ ಹೇಳಿಕೆಗೆ ಪೋಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ (SFI) ತೀವ್ರ ಆಕ್ಷೇಪ ವ್ಯಕ್ತವಾಗಿದೆ. “ವೈಯಕ್ತಿಕ ಅಥವಾ ಅನಿವಾರ್ಯ ಕಾರಣಗಳಿಂದ ಶಾಲೆಗೆ ಬರಲಾಗದ ಮಕ್ಕಳನ್ನು ದೇಶದ್ರೋಹಿಗಳಂತೆ ಬಿಂಬಿಸುವುದು ಎಷ್ಟು ಸರಿ” ಎಂದು ಪೋಷಕರು ಪ್ರಶ್ನಿಸಿದ್ದಾರೆ. ಇದಾದ ಬೆನ್ನಲ್ಲೇ ಶಾಲೆಯ ವಿರುದ್ಧ ಪ್ರತಿಭಟನೆಗಳು ನಡಿದೆವೆ. ಪೊಲೀಸರಿಗೂ ದೂರು ನೀಡಲಾಗಿದೆ.
ಆರಂಭದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ರಾಜು ಡೇವಿಸ್, ಪಾಕಿಸ್ತಾನ ಶತ್ರು ದೇಶವಾಗಿರುವುದರಿಂದ ದೇಶಪ್ರೇಮದ ಹಿನ್ನೆಲೆಯಲ್ಲಿ ಆ ಹೆಸರು ಪ್ರಸ್ತಾಪಿಸಿದ್ದಾಗಿ ಹೇಳಿದರು.
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮತ್ತು ಸಾರ್ವಜನಿಕ ಒತ್ತಡ ಹೆಚ್ಚಾಗುತ್ತಿದ್ದಂತೆ, ರಾಜು ಡೇವಿಸ್ ತಮ್ಮ ಹೇಳಿಕೆಗೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯಿಂದ ಯಾವುದೇ ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮಿಸಿ, ತಮ್ಮ ಮಾತುಗಳನ್ನು ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ತಮಗಿರಲಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.




