ಶನಿವಾರ ಬೆಳಿಗ್ಗೆ ಅಸ್ಸಾಂನ ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ (IAF) AN-32 ಸಾರಿಗೆ ವಿಮಾನ ಪತನಗೊಂಡಿದ್ದು, ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
AN-32 ವಿಮಾನವು ಲ್ಯಾಂಡ್ ಆಗುವಾಗ ವಾಯುಪಡೆ ನಿಲ್ದಾಣದ ಆವರಣದಲ್ಲಿ ಪತನಗೊಂಡಿದೆ. ಅಪಘಾತದ ನಂತರ ಬೆಂಕಿ ಕಾಣಿಸಿಕೊಂಡಿದೆ.
ಇದನ್ನು ಓದಿದ್ದೀರಾ? ಅಹಮದಾಬಾದ್ ವಿಮಾನ ಪತನ: ಮಂಗಳೂರು ಮೂಲದ ಕೋ ಪೈಲಟ್ ಸಾವು
ಅಪಘಾತದ ಕಾರಣ ಇನ್ನೂ ಖಚಿತವಾಗಿಲ್ಲ. ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದರೂ, ಸಾವುನೋವುಗಳ ಬಗ್ಗೆ ಖಚಿತವಾದ ಮಾಹಿತಿ ಲಭಿಸಿಲ್ಲ. ಭಾರತೀಯ ವಾಯುಪಡೆಯು ಘಟನೆಯನ್ನು ದೃಢಪಡಿಸಿದೆ. ವಾಯುಪಡೆಯು AN-32 ಅಪಘಾತದ ಬಗ್ಗೆ ತನಿಖೆ ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಮಾರ್ಚ್‌ನಲ್ಲಿ ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಾಯುಪಡೆಯ ಸುಖೋಯ್ Su-30MKI ಫೈಟರ್ ಜೆಟ್ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಈ ಯುದ್ಧ ವಿಮಾನವು ಅಸ್ಸಾಂನ ಜೋರ್ಹತ್ ವಾಯುನೆಲೆಯಿಂದ ತನ್ನ ನಿಯಮಿತ ತರಬೇತಿ ಹಾರಾಟಕ್ಕಾಗಿ ಟೇಕ್-ಆಫ್ ಆಗಿತ್ತು. ಹಾರಾಟ ನಡೆಸುತ್ತಿದ್ದಾಗ ರಾತ್ರಿ ಸುಮಾರು 7:42 ಕ್ಕೆ ವಿಮಾನವು ರೇಡಾರ್ ಸಂಪರ್ಕವನ್ನು ಕಳೆದುಕೊಂಡಿತ್ತು. ಸಂಪರ್ಕ ಕಳೆದುಕೊಂಡ ಬಳಿಕ ಜೆಟ್ ಜೋರ್ಹತ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಾಜನ್ ಸಬ್-ಡಿವಿಷನ್ ವ್ಯಾಪ್ತಿಯ ಇಂಗ್ಲಾಂಗ್ ಎಕೋಪಿ ಬೆಟ್ಟದ ಹಳ್ಳಿಗಾಡಿನ ಪ್ರದೇಶದಲ್ಲಿ ಪತನಗೊಂಡಿತ್ತು.
ಅವಳಿ-ಎಂಜಿನ್ ಹೊಂದಿರುವ ವಿಮಾನ AN-32
ಆಂಟೊನೊವ್ ಆನ್-32 (Antonov An-32) ಎಂಬುದು ಸೋವಿಯತ್ ಮೂಲದ, ಅವಳಿ-ಎಂಜಿನ್ ಹೊಂದಿರುವ ಟರ್ಬೊಪ್ರಾಪ್ ಮಿಲಿಟರಿ ಸಾರಿಗೆ ವಿಮಾನವಾಗಿದೆ. ಇದನ್ನು ಮುಖ್ಯವಾಗಿ ಭಾರತೀಯ ವಾಯುಪಡೆಯ (IAF) ಅಗತ್ಯತೆಗಳಿಗೆ ಅನುಗುಣವಾಗಿ ಉಕ್ರೇನ್‌ನ ‘ಆಂಟೊನೊವ್ ಡಿಸೈನ್ ಬ್ಯೂರೋ’ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. 1984 ರಲ್ಲಿ ಭಾರತವು ಇದನ್ನು ತನ್ನ ಸೇನೆಗೆ ಸೇರ್ಪಡೆಗೊಳಿಸಿದೆ. ಇಂತಹ ನೂರು ವಿಮಾನಗಳು ವಾಯುಪಡೆಯಲ್ಲಿವೆ.
ಇದು ಎರಡು ಶಕ್ತಿಶಾಲಿ Ivchenko AI-20 ಟರ್ಬೊಪ್ರಾಪ್ ಎಂಜಿನ್‌ಗಳನ್ನು ಹೊಂದಿದೆ. ಇದು ಒಂದೇ ಬಾರಿಗೆ ಸುಮಾರು 2,500 ಕಿ.ಮೀ ದೂರದವರೆಗೆ ಹಾರಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ 530 ಕಿ.ಮೀ ಮತ್ತು ಸಾಮಾನ್ಯ ಕ್ರೂಸಿಂಗ್ ವೇಗ ಗಂಟೆಗೆ 470 ಕಿ.ಮೀ. ಆಗಿದೆ. ಇದು 7.5 ಟನ್ ಸರಕು (Cargo), 50 ಪ್ರಯಾಣಿಕರು, 42 ಪ್ಯಾರಾಟ್ರೂಪರ್‌ಗಳು ಅಥವಾ ಸ್ಟ್ರೆಚರ್‌ಗಳ ಮೇಲಿರುವ 24 ರೋಗಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.





