ಪಶ್ಚಿಮ ಬಂಗಾಳದ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದ ತಟ್ಟೆಯಿಂದ ಇನ್ಮೇಲೆ ಮೊಟ್ಟೆ ಸಂಪೂರ್ಣವಾಗಿ ಮಾಯವಾಗಲಿದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆಗೆ ಸರ್ಕಾರ ವಹಿಸಿದೆ. ಬ್ರಹ್ಮಣ್ಯವನ್ನು ಪ್ರತಿಪಾದಿಸುವ ಇಸ್ಕಾನ್ ಸಂಸ್ಥೆಯು ಬಿಸಿಯೂಟದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಂತೆಯೇ, ಮಕ್ಕಳ ಊಟದ ಮೆನುವಿನಲ್ಲಿ ಎಲ್ಲ ಮಾಂಸಾಹಾರಿ ಪದಾರ್ಥಗಳನ್ನು ತೆಗೆದುಹಾಕಲಾಗಿದೆ. ಪರಿಣಾಮ, ಮೊಟ್ಟೆ ವಿವರಣೆಯನ್ನೂ ರದ್ದು ಮಾಡಲಾಗಿದೆ. ಇನ್ನುಮುಂದೆ, ಮೊಟ್ಟೆಯ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಇಸ್ಕಾನ್ ಸಂಸ್ಥೆಯು ಒದಗಿಸುವ ಸಸ್ಯಾಹಾರಿ ಆಹಾರವು ದೇಶಾದ್ಯಂತ ಜನಪ್ರಿಯವಾಗಿದ್ದರೂ, ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಶಾಲಾ ಮಕ್ಕಳಿಗೆ ತಮಗೆ ಇಷ್ಟಬಂದದ್ದನ್ನು ತಿನ್ನುವ ಆಹಾರದ ಆಯ್ಕೆ ಇಲ್ಲದಂತಾಗಿದೆ.
ಇತ್ತೀಚೆಗೆ ನಡೆದ ಬಜೆಟ್ ಭಾಷಣದಲ್ಲಿ ಪಶ್ಚಿಮ ಬಂಗಾಳದ ಹಣಕಾಸು ಸಚಿವ ಸ್ವಪನ್ ದಾಸ್‌ಗುಪ್ತಾ, “ಕೋಲ್ಕತ್ತಾ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಅತ್ಯಂತ ಸ್ವಚ್ಛವಾಗಿ ಬೇಯಿಸಿದ ಬಿಸಿಯೂಟವನ್ನು ಒದಗಿಸುವ ಏಕೈಕ ಉದ್ದೇಶದಿಂದ ಇಸ್ಕಾನ್ ಸಂಸ್ಥೆಯನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟದ ಸಾಮಗ್ರಿ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ಪ್ರಸ್ತುತ ಇರುವ 6.78 ರೂ.ನಿಂದ 10 ರೂ.ಗೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೊಸ ಬದಲಾವಣೆಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ ಕೋಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಮಣ್ ದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. “ಬಿಸಿಯೂಟದ ಮೆನುವಿನಲ್ಲಿ ಮೊಟ್ಟೆ ಇರದಿದ್ದರೂ ಮಕ್ಕಳ ಪೌಷ್ಟಿಕಾಂಶದಲ್ಲಿ ಯಾವುದೇ ಕೊರತೆಯಾಗದಂತೆ ನಾವು ಜಾಗ್ರತೆ ವಹಿಸುತ್ತೇವೆ” ಎಂದು ಹೇಳಿದ್ದಾರೆ.
“ನಾವು ಕೇವಲ ಸಸ್ಯಾಹಾರಿ ಆಹಾರ ನೀಡುವುದಿಲ್ಲ, ಬದಲಿಗೆ ಕಿಚಡಿಯೊಂದಿಗೆ ಪನೀರ್, ರಾಜ್ಮಾ ಹಾಗೂ ಸೋಯಾಬೀನ್‌ಗಳಂತಹ ಅತಿ ಹೆಚ್ಚು ಪ್ರೋಟೀನ್‌ಯುಕ್ತ ಪದಾರ್ಥಗಳನ್ನು ನೀಡುವ ಮೂಲಕ ಮೊಟ್ಟೆಯ ಪೌಷ್ಟಿಕಾಂಶವನ್ನು ಸರಿದೂಗಿಸುತ್ತೇವೆ. ಪ್ರಾಯೋಗಿಕ ಯೋಜನೆಯಾಗಿ ನಮ್ಮ ‘ಅನ್ನಮಿತ್ರ ಫೌಂಡೇಶನ್’ ಮೂಲಕ ಇದನ್ನು ಜಾರಿಗೊಳಿಸುತ್ತಿದ್ದೇವೆ. ಈಗಾಗಲೇ ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ದೇಶದ ಎಂಟು ರಾಜ್ಯಗಳ 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಾವು ಇದೇ ರೀತಿ ಶುದ್ಧ ಸಸ್ಯಾಹಾರಿ ಬಿಸಿಯೂಟವನ್ನು ಯಶಸ್ವಿಯಾಗಿ ನೀಡುತ್ತಿದ್ದೇವೆ” ಎಂದು ಅವರು ಹೇಳಿಕೊಂಡಿದ್ದಾರೆ.
1995ರ ಆಗಸ್ಟ್ 15 ರಂದು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಆರಂಭವಾದ ಈ ಬಿಸಿಯೂಟ ಯೋಜನೆಗೆ ನಂತರದ ವರ್ಷಗಳಲ್ಲಿ ಅನ್ನ, ಬೇಳೆ ಸಾರು ನೀಡುವ ವ್ಯವಸ್ಥೆಯನ್ನು ತರಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಮೊಟ್ಟೆಯನ್ನು ಕಡ್ಡಾಯವಾಗಿ ನೀಡಲಾಗುತ್ತಿತ್ತು. ಉಳಿದ ಐದು ದಿನಗಳಲ್ಲಿ ಅನ್ನ, ಬೇಳೆ ಸಾರು ಹಾಗೂ ಆಲೂಗಡ್ಡೆ ಪಲ್ಯವನ್ನು ನೀಡಲಾಗುತ್ತಿತ್ತು. ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮೊಟ್ಟೆಯನ್ನು ಪ್ರೋಟೀನ್‌ನ ಪ್ರಮುಖ ಮೂಲವೆಂದು ವಿಜ್ಞಾನ ಲೋಕ ಪರಿಗಣಿಸುತ್ತದೆ.
ಈ ಲೇಖನ ಓದಿದ್ದೀರಾ?: ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ
ಹಲವು ಶಾಲೆಗಳಲ್ಲಿ ಬಡ ಮಕ್ಕಳಿಗಾಗಿ ಶಿಕ್ಷಕರೇ ಸ್ವತಃ ಹಣವನ್ನು ಸಂಗ್ರಹಿಸಿ ಅಪರೂಪಕ್ಕೆ ಚಿಕನ್ ಅಥವಾ ಮೀನಿನ ಊಟವನ್ನು ಸಹ ಕೊಡಿಸುತ್ತಿದ್ದರು. ಮೊಟ್ಟೆ ಇಷ್ಟಪಡದ ಅಥವಾ ಸಸ್ಯಾಹಾರಿಗಳಾಗಿದ್ದ ವಿದ್ಯಾರ್ಥಿಗಳು ಅದನ್ನು ಬಿಟ್ಟು ಇತರ ಪದಾರ್ಥಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದರು. ಆದರೆ ಈಗ ಇಡೀ ಊಟದ ಮೆನುವನ್ನೇ ಬದಲಾಯಿಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯದ ಬಿಜೆಪಿ ಸರ್ಕಾರವು ಸಸ್ಯಾಹಾರವನ್ನು ಬಲವಂತವಾಗಿ ಶಾಲಾ ಮಕ್ಕಳ ಮೇಲೆ ಹೇರುತ್ತಿದೆ ಎಂದು ಗಂಭೀರವಾಗಿ ಆರೋಪಿಸಿವೆ.
ಈ ಕುರಿತು ಮಾತನಾಡಿರುವ ಮಿತ್ರ ಇನ್ಸ್ಟಿಟ್ಯೂಷನ್ ಮುಖ್ಯೋಪಾಧ್ಯಾಯರಾದ ರಾಜಾ ಡೇ, “ಸಾಮಾನ್ಯವಾಗಿ ಶಾಲೆಗಳಲ್ಲಿ ಮೊಟ್ಟೆ ನೀಡುವ ದಿನದಂದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಾರೆ. ಇಸ್ಕಾನ್ ಅತ್ಯಂತ ಸ್ವಚ್ಛವಾದ ಆಹಾರ ನೀಡುತ್ತದೆ ಎಂಬ ಭರವಸೆ ನಮಗಿದ್ದರೂ, ಬಂಗಾಳದ ಮಕ್ಕಳು ಸಂಪೂರ್ಣ ಸಸ್ಯಾಹಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಬಹುದು. ಆದ್ದರಿಂದ ಸರ್ಕಾರ ಈ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿದರೆ ಒಳ್ಳೆಯದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಬ್ಬ ಸರ್ಕಾರಿ ಶಾಲಾ ಶಿಕ್ಷಕರಾದ ಸೌಗತ ಬಸು, “ನಮ್ಮ ಶಾಲೆಗೆ ಬರುವ ಅನೇಕ ಬಡ ಮಕ್ಕಳಿಗೆ ಪನೀರ್ ಅಥವಾ ರಾಜ್ಮಾ ಎಂದರೆ ಏನೆಂದೇ ಗೊತ್ತಿಲ್ಲ. ಹೀಗಿದ್ದಾಗ ಇದು ಮಕ್ಕಳ ಮೇಲೆ ನಿರ್ದಿಷ್ಟ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರಿದಂತಾಗುತ್ತದೆ” ಎಂದಿದ್ದಾರೆ.



