ಸಿಪಿಐ(ಎಂ) ಅಭ್ಯರ್ಥಿ ಯು. ಪ್ರತಿಭಾ ವಿರುದ್ಧ ಐಯುಎಂಎಲ್ ನಾಯಕ ಎ ಇರ್ಷಾದ್ ನೀಡಿರುವ ಸ್ತ್ರೀದ್ವೇಷದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಯುಡಿಎಫ್ ಅನ್ನು ಎಲ್‌ಡಿಎಫ್ ತೀವ್ರ ಟೀಕಿಸುತ್ತಿದ್ದಂತೆ ಇರ್ಷಾದ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಪ್ರತಿಭಾ ಹಾಲಿ ಶಾಸಕಿಯಾಗಿರುವ ಕಾಯಂಕುಲಂನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಿಜು ಅವರ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಐಯುಎಂಎಲ್ ನಾಯಕ ಎ. ಇರ್ಷಾದ್ ಶಾಸಕಿ ದೇಹಸೌಂದರ್ಯದ ಬಗ್ಗೆ ಹೇಳಿಕೆ ನೀಡಿದ್ದರು.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ | ನಾರಿಯರು ‘ಆಡಳಿತಗಾರ್ತಿ’ಯರಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ
“ಶಾಸಕಿಯಾಗಿ ಅವರು ಏನೂ ಮಾಡಲು ಸಾಧ್ಯವಾಗಿಲ್ಲ. ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಅವರು ಬರೀ ತಮ್ಮ ವಾಕ್ಚಾತುರ್ಯದಿಂದ ಮತ್ತು ದೇಹಸೌಂದರ್ಯ ಪ್ರದರ್ಶಿಸಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ” ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದರು.
ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಲ್‌ಡಿಎಫ್ ಪ್ರಚಾರಕ್ಕೆ ಯುಡಿಎಫ್ ನಾಯಕರ ಈ ಹೇಳಿಕೆಯನ್ನೇ ಬಳಸುತ್ತಿದ್ದಂತೆ ಇರ್ಷಾದ್ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಬೆಳವಣಿಗೆ ನಡುವೆ ಐಯುಎಂಎಲ್ ಇರ್ಷಾದ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ ಲಿಜು ಕೂಡ ತಮ್ಮ ಪ್ರಚಾರ ಸಂಚಾಲಕರ ಅವಹೇಳನಕಾರಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪ್ರತಿಭಾ, “ಅವಮಾನಕಾರಿ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಚುನಾವಣಾ ಕಣದಲ್ಲಿರುವ ಮಹಿಳೆಯರನ್ನು ಕುಗ್ಗಿಸುವುದೇ ಇದರ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.
ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಆ ಕ್ಷೇತ್ರದಲ್ಲಿ ಪ್ರತಿಭಾ ಅವರ ಅಭಿವೃದ್ಧಿ, ಜನಪರ ಕಾರ್ಯಗಳನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಕಾರಣ ಅವರು (ಯುಡಿಎಫ್) ಇಂತಹ ಚಾರಿತ್ರ್ಯ ಹತ್ಯೆಗೆ ಮುಂದಾಗಿದೆ. ಇದು ವಿರೋಧ ಪಕ್ಷ ಮತ್ತು ಯುಡಿಎಫ್ ನಾಯಕರ ಬೂಟಾಟಿಕೆಯನ್ನು ಸಹ ಬಹಿರಂಗಪಡಿಸಿದೆ” ಎಂದು ಟೀಕಿಸಿದ್ದಾರೆ.
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಜಕಾರಣಿಗಳು
ಈ ಹಿಂದೆಯೂ ಹಲವು ಬಾರಿ ರಾಜಕಾರಣಿಗಳು ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು 2024ರಲ್ಲಿ ಹರಿಯಾಣ ಚುನಾವಣೆ ಪ್ರಚಾರದ ವೇಳೆ ಸಂಸದೆ ಹೇಮಾ ಮಾಲಿನಿ ಅವರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ಚುನಾವಣಾ ಆಯೋಗವು ರಣದೀಪ್ ಅವರಿಗೆ ಪ್ರಚಾರ ಮಾಡದಂತೆ 48 ಗಂಟೆಗಳ ಕಾಲ ನಿಷೇಧ ಹೇರಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಶಿವಸೇನೆ (ಯುಬಿಟಿ) ನಾಯಕ ಅರವಿಂದ್ ಸಾವಂತ್ ಎದುರಾಳಿ ಅಭ್ಯರ್ಥಿ ಶೈನಾ ಎನ್.ಸಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಶೈನಾ ಅವರನ್ನು ‘ಇಂಪೋರ್ಟೆಡ್ ಮಾಲ್’ ಅಂದರೆ ಆಮದು ಮಾಡಿಕೊಂಡ ವಸ್ತು ಎಂದು ಕರೆದಿದ್ದರು. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.




