ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ. 28 ರಂದು ನಡೆಯಲಿರುವ ಆರ್‌ಸಿಬಿ – ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯುವ ಐಪಿಎಲ್ ಉದ್ಘಾಟನಾ ಪಂದ್ಯ ಕೇವಲ ಕ್ರೀಡಾಭಿಮಾನಿಗಳಿಗಷ್ಟೇ ಅಲ್ಲ, ಆಡಳಿತ ಯಂತ್ರಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಜನಪ್ರತಿನಿಧಿಗಳ ವಿಐಪಿ ಟಿಕೆಟ್ ಬೇಡಿಕೆ ಮತ್ತೊಂದೆಡೆ ಕ್ರೀಡಾಭಿಮಾನಿಗಳ ಸುರಕ್ಷತೆ – ಈ ಎರಡೂ ಅಂಶಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಮತ್ತು ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಗಳನ್ನು ಇಟ್ಟಿವೆ.
4ರ ಬದಲು 2 ಟಿಕೆಟ್‌ಗೆ ಸಮ್ಮತಿಸಿದ ಕೆಎಸ್‌ಸಿಎ
ರಾಜ್ಯದ 224 ವಿಧಾನಸಭೆ ಶಾಸಕರು ಹಾಗೂ 75 ವಿಧಾನ ಪರಿಷತ್ ಸದಸ್ಯರು (ಒಟ್ಟು 299 ಜನಪ್ರತಿನಿಧಿಗಳು) ’ಕ್ರೀಡಾಂಗಣ ಸರ್ಕಾರದ್ದು, ಅತೀ ಕಡಿಮೆ ಬಾಡಿಗೆ ನೀಡುತ್ತಿದ್ದೀರಿ ಆದ್ದರಿಂದ ತಮಗೆ ತಲಾ 5 ವಿಐಪಿ ಟಿಕೆಟ್‌ಗಳನ್ನು ನೀಡಲೇಬೇಕು’ ಎಂದು ಪಟ್ಟು ಹಿಡಿದಿದ್ದರು. ಇದರ ಜೊತೆಗೆ ಉನ್ನತ ಅಧಿಕಾರಿಗಳಿಗೂ ಟಿಕೆಟ್ ನೀಡಬೇಕಾದ ಅನಿವಾರ್ಯತೆ ಇತ್ತು. ಕ್ರೀಡಾಂಗಣದಲ್ಲಿ ವಿಐಪಿ ಆಸನಗಳ ಸಂಖ್ಯೆ ಸೀಮಿತವಾಗಿರುತ್ತದೆ. ಎಲ್ಲರಿಗೂ ತಲಾ 4 ಟಿಕೆಟ್ ನೀಡಿದರೆ, ಅರ್ಹ ಕ್ರೀಡಾಭಿಮಾನಿಗಳಿಗೆ ಅನ್ಯಾಯವಾಗುವ ಜೊತೆಗೆ ವಿಐಪಿ ಗ್ಯಾಲರಿಯಲ್ಲಿಯೇ ನೂಕುನುಗ್ಗಲು ಉಂಟಾಗುವ ಆಪಾಯವಿತ್ತು. ಪರಿಸ್ಥಿತಿಯ ವಾಸ್ತವವನ್ನು ಅರಿತ ಕೆಎಸ್‌ಸಿಎ ಡಿಸಿಎಂ ಡಿ ಕೆ ಶಿವಕುಮಾರ್ ಅವರೊಂದಿಗಿನ ಸಭೆಯ ಬಳಿಕ ಒಂದು ‘ರಾಜಿ ಸೂತ್ರಕ್ಕೆ ಬಂದಿದ್ದು, ಪ್ರತಿ ಶಾಸಕರಿಗೆ ತಲಾ 2 ಟಿಕೆಟ್‌ಗಳನ್ನು ನೀಡಲು ಸಂಸ್ಥೆ ಸಮ್ಮತಿಸಿದೆ. ಇದು ವಿಐಪಿಗಳ ಬೇಡಿಕೆ ಮತ್ತು ಕ್ರೀಡಾಂಗಣದ ಸಾಮರ್ಥ್ಯದ ನಡುವೆ ಸಮತೋಲನ ಕಾಯ್ದುಕೊಳ್ಳಲು ತೆಗೆದುಕೊಂಡ ಸೂಕ್ತ ನಿರ್ಧಾರವಾಗಿದೆ.
ಭದ್ರತೆ ಮೇಲೆ ಹೆಚ್ಚು ನಿಗಾ
ಈ ಬಾರಿಯ ಐಪಿಎಲ್ ಪಂದ್ಯಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆ ಒದಗಿಸಲು ಪ್ರಮುಖ ಕಾರಣ, ಕಳೆದ ಬಾರಿ ಸಂಭವಿಸಿದ ಆಘಾತಕಾರಿ ಘಟನೆ. ಕಳೆದ ಬಾರಿ ಆರ್‌ಸಿಬಿ ಚಾಂಪಿಯನ್ ಆದ ನಂತರ ವಿಜಯೋತ್ಸವ ಸಮಾರಂಭದಲ್ಲಿ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದ ದುರಂತದಲ್ಲಿ ಆಟಗಾರರನ್ನು ನೋಡಲು ಬಂದಿದ್ದ 11 ಮಂದಿ ಅಭೀಮಾನಿಗಳು ಮೃತಪಟ್ಟಿದ್ದರು. ಈ ಘಟನೆಯು ಆಡಳಿತ ಯಂತ್ರದ ಕಣ್ಣು ತೆರೆಸಿದ್ದು, ಯಾವುದೇ ಕಾರಣಕ್ಕೂ ಇಂತಹ ಭದ್ರತಾ ಲೋಪ ಮರುಕಳಿಸಬಾರದು ಎಂಬುದು ಈ ಬಾರಿಯ ಏಕೈಕ ಗುರಿಯಾಗಿದೆ.
ಇದನ್ನು ಓದಿದ್ದೀರಾ? ಐಪಿಎಲ್ 2026 | ಕ್ಯಾಚ್ ನಿಯಮದ ಬಗ್ಗೆ ನಾಯಕರಿಗೆ ಬಿಸಿಸಿಐ ಕಟ್ಟುನಿಟ್ಟಿನ ಎಚ್ಚರಿಕೆ; ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ ಮುಂದುವರಿಕೆ
ಭದ್ರತೆಯನ್ನು ಅತ್ಯಂತ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಪೊಲೀಸ್ ಇಲಾಖೆ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಒಟ್ಟು 2000 ಪೊಲೀಸರನ್ನು ನಿಯೋಜಿಸಲಾಗಿದೆ. ಇವರು ಪ್ರತಿಯೊಂದು ಗೇಟ್, ರಸ್ತೆ ಹಾಗೂ ಗ್ಯಾಲರಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ತುರ್ತು ಪರಿಸ್ಥಿತಿಗಳನ್ನು ಮತ್ತು ಅತಿಯಾದ ಜನಸಂದಣಿಯನ್ನು ಸಮರ್ಥವಾಗಿ ನಿಭಾಯಿಸಲು ಎರಡು ವಿಶೇಷ ಪೊಲೀಸ್ ದಳಗಳನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ನೂಕುನುಗ್ಗಲು ತಪ್ಪಿಸಲು, ಪಂದ್ಯ ಶುರುವಾಗುವ ಮುಂಚೆಯೇ ಗೇಟ್‌ಗಳನ್ನು ತೆರೆಯುವುದು ಮತ್ತು ಸರತಿ ಸಾಲುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಲಾಗಿದೆ.
ಶಾಸಕರಿಗೆ 4ರ ಬದಲು 2 ಟಿಕೆಟ್ ನೀಡುವ ಮೂಲಕ ಕೆಎಸ್‌ಸಿಎ ಒಂದು ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದೆ. ವಿಐಪಿಗಳಿಗೆ ಸೌಲಭ್ಯ ಒದಗಿಸುವುದು ಎಷ್ಟು ಮುಖ್ಯವೋ, ಹಣ ಕೊಟ್ಟು ಪಂದ್ಯ ನೋಡಲು ಬರುವ ಸಾಮಾನ್ಯ ಪ್ರೇಕ್ಷಕನ ಜೀವಕ್ಕೆ ರಕ್ಷಣೆ ಒದಗಿಸುವುದು ಅದಕ್ಕಿಂತಲೂ ಹೆಚ್ಚು ಮುಖ್ಯ. 2000 ಪೊಲೀಸರು ಹಾಗೂ ವಿಶೇಷ ದಳಗಳ ನಿಯೋಜನೆಯು ಜನಸಾಮಾನ್ಯರಲ್ಲಿ ಒಂದಿಷ್ಟು ಸುರಕ್ಷತೆಯ ಭಾವನೆಯನ್ನು ಮೂಡಿಸಿದೆ. ಕ್ರೀಡೆಯು ಕೇವಲ ಸಂಭ್ರಮವಾಗಿ ಉಳಿಯಬೇಕೆಂದರೆ ಭದ್ರತೆಯ ವಿಚಾರದಲ್ಲಿ ಆಟವನ್ನು ವೀಕ್ಷಿಸಲು ಬರುವ ಸಾವಿರಾರು ಅಭಿಮಾನಿಗಳಿಗೆ ಸುರಕ್ಷತೆ ಒದಗಿಸುವುದು ಕೆಎಸ್‌ಸಿಎ, ಆರ್‌ಸಿಬಿ ಹಾಗೂ ಸರ್ಕಾರದ ಅನಿವಾರ್ಯವಾಗಿದೆ.




