ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು (ವಿಧಿ 370 ಮತ್ತು 35A) ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ, ಆಗಸ್ಟ್ 5ರಂದು ಕೇಂದ್ರಾಡಳಿತ ಪ್ರದೇಶದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಘೋಷಿಸಿದ್ದಾರೆ.
ಪಿಡಿಪಿ ಪಕ್ಷದ 27ನೇ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಶ್ರೀನಗರದ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ ಚುನಾವಣೆ | ಬಿಜೆಪಿ ಜೊತೆ ಪಿಡಿಪಿ ಮೈತ್ರಿ?; ಮೆಹಬೂಬಾ ಮುಫ್ತಿ ಹೇಳಿದ್ದೇನು?
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಈ ದಿನವನ್ನು ಪಿಡಿಪಿ ಪ್ರಜಾಪ್ರಭುತ್ವದ ಕಪ್ಪು ದಿನ ಎಂದು ಪರಿಗಣಿಸಿ ಪ್ರತಿಭಟನೆಗೆ ಕರೆ ನೀಡಿದೆ.
ಮುಖ್ಯ ಬೇಡಿಕೆಗಳೇನು?
- * ಜಮ್ಮು ಮತ್ತು ಕಾಶ್ಮೀರದ ಸಂವಿಧಾನಾತ್ಮಕ ಗುರುತು, ಹಕ್ಕುಗಳು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆ.
- * ಗಡಿಯಾಚೆಗಿನ ವ್ಯಾಪಾರ ಮಾರ್ಗಗಳ (Cross-LoC trade) ಮರುಚಾಲನೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕಿನ ರಕ್ಷಣೆ.
- * ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಮಾತುಕತೆಯ ಮೂಲಕ ಪರಿಹಾರ.
ಹೇಳಿಕೆ ಕುರಿತು ಮೆಹಬೂಬಾ ಮುಫ್ತಿ ಕ್ಷಮೆಯಾಚನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, ಇತ್ತೀಚೆಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ತಾವು ನೀಡಿದ್ದ ಹೇಳಿಕೆಯ ಕುರಿತಾಗಿಯೂ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ. ಜಂತರ್‌ಮಂತರ್‌ನಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತಾ, ದೆಹಲಿಯಲ್ಲಿ ಪೆಲೆಟ್ ಗನ್ ಬಳಕೆಗೆ ಯಾವುದೇ ಸಮರ್ಥನೆ ಇಲ್ಲ. ಆದರೆ ಕಾಶ್ಮೀರದಲ್ಲಿ ಉಗ್ರರ ಉಪಸ್ಥಿತಿಯಿಂದಾಗಿ ಅದು ಅನಿವಾರ್ಯ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದರು.
“ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕ್ರಮಕ್ಕೆ ಸಂಬಂಧಿಸಿದಂತೆ ‘ನೆಪ’ ಎಂಬ ಪದವನ್ನು ಬಳಸಲು ಬಯಸಿದ್ದೆ, ಆದರೆ ಆತುರದಲ್ಲಿ ಮಾತು ಅಪೂರ್ಣವಾಗಿ ಬೇರೆ ಅರ್ಥ ತಂದಿತ್ತು. ಇದನ್ನು ರಾಜಕೀಯ ವಿರೋಧಿಗಳು ತಿರುಚಿ ಬಳಸುತ್ತಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದರು.




