ದೆಹಲಿಯ ಜಂತರ್ ಮಂತರ್‌ನಲ್ಲಿ NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯರು ಮತ್ತು ಮಹಿಳಾ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಬಹಿರಂಗಪಡಿಸುವ (ಡಾಕ್ಸಿಂಗ್), ಅವಮಾನಿಸುವ ಹಾಗೂ ಅತ್ಯಾಚಾರ–ಕೊಲೆ ಬೆದರಿಕೆ ಹಾಕುವ ಸಂಘಟಿತ ಅಭಿಯಾನ ನಡೆಯುತ್ತಿದೆ ಎಂದು ಡಿಜಿಟಲ್ ಹಕ್ಕುಗಳ ಸಂಘಟನೆ ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (IFF) ಆರೋಪಿಸಿದೆ.
ಆಗಸ್ಟ್ 1ರಂದು ಪ್ರಕಟಿಸಿದ ಹೇಳಿಕೆಯಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಕಳೆದ ಒಂದು ವಾರದಿಂದ ಸಂಘಟಿತ ಆನ್‌ಲೈನ್ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ IFF ಆಗ್ರಹಿಸಿದೆ.
IFF ಉಲ್ಲೇಖಿಸಿರುವ Scroll ವರದಿಯ ಪ್ರಕಾರ, 23 ವರ್ಷದ ಯೋಗ ತರಬೇತುದಾರ್ತಿ ಶ್ರದ್ಧಾ ಸಿಂಗ್ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಸಿಬ್ಬಂದಿಯ ಉಡುಪಿನ ಬಣ್ಣದ ಬಗ್ಗೆ ಹಾಸ್ಯಮಯವಾಗಿ ಏಳು ಸೆಕೆಂಡ್‌ಗಳ ಇನ್‌ಸ್ಟಾಗ್ರಾಂ ರೀಲ್ ಹಂಚಿಕೊಂಡಿದ್ದರು. ಆದರೆ ಕೆಲವು ಮೀಮ್ ಪೇಜ್‌ಗಳು ಅದನ್ನು “ಸಶಸ್ತ್ರ ಪಡೆಗಳನ್ನು ಅವಮಾನಿಸಿದ್ದಾರೆ” ಎಂಬ ರೀತಿಯಲ್ಲಿ ತಪ್ಪಾಗಿ ಬಿಂಬಿಸಿದ್ದವು ಎಂದು IFF ಹೇಳಿದೆ.
ಇದರ ಬಳಿಕ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಹಳೆಯ ಛಾಯಾಚಿತ್ರವೊಂದರ ಮೂಲಕ ಶ್ರದ್ಧಾ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿ, ಅದರಿಂದ ಅವರ ಮೊಬೈಲ್ ಸಂಖ್ಯೆ ಹಾಗೂ ಮನೆಯ ವಿಳಾಸವನ್ನು ಬಹಿರಂಗಪಡಿಸಿದ್ದಾರೆ ಎಂದು IFF ಆರೋಪಿಸಿದೆ. ಬಳಿಕ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಅವರ ತಾಯಿ ಹಾಗೂ ಸ್ನೇಹಿತರ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಪತ್ತೆಹಚ್ಚಿ ಅವರಿರುವ ಸ್ಥಳದ ಮಾಹಿತಿ ಕೇಳಲಾಗಿದೆ. ಈ ಬೆಳವಣಿಗೆಯ ನಂತರ ಶ್ರದ್ಧಾ ಮನೆ ಬಿಟ್ಟು ಹೊರಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ ಎಂದು ತಿಳಿಸಿದೆ.
ಪ್ರತಿಭಟನೆ ಕುರಿತಾಗಿ ಅವರು ಹಂಚಿಕೊಂಡಿದ್ದ 33 ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ಯಾವುದೇ ಮೇಲ್ಮನವಿ ಅವಕಾಶ ನೀಡದೆ ತೆಗೆದುಹಾಕಲಾಗಿದೆ ಎಂದು IFF ಆರೋಪಿಸಿದೆ.
ಹೇಳಿಕೆಯಲ್ಲಿ ಮತ್ತೊಂದು ಪ್ರಕರಣವನ್ನೂ ಉಲ್ಲೇಖಿಸಿರುವ IFF, ಪ್ರತಿಭಟನೆಯ ವೇಳೆ ಪ್ರಧಾನಮಂತ್ರಿಯವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕಿಯ ಕುರಿತು ಮಾಹಿತಿ ನೀಡಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO), 2012ರ ಸೆಕ್ಷನ್ 23ರ ಅನ್ವಯ ಆಕೆಯ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಆ ಬಾಲಕಿಯ ಛಾಯಾಚಿತ್ರಗಳು ಹಾಗೂ ವೈಯಕ್ತಿಕ ಮಾಹಿತಿಯನ್ನೂ ಸಂಘಟಿತ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದ್ದು, ಆಕೆಯನ್ನು ಗುರುತಿಸಲು ಡಾಕ್ಸಿಂಗ್ ಅಭಿಯಾನ ನಡೆಸಲಾಗಿದೆ ಎಂದು IFF ಆರೋಪಿಸಿದೆ. ಬಾಲಕಿಯ ವಿರುದ್ಧ ದಾಖಲಿಸಿರುವ ಹಲವು ಅಪರಾಧ ಪ್ರಕರಣಗಳು ಘಟನೆಯ ವಾಸ್ತವಾಂಶಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿರುವ IFF, “ಇಂತಹ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಮಾನನಷ್ಟ ಮೊಕದ್ದಮೆಯೇ ಸೂಕ್ತ ಮಾರ್ಗವಾಗಬಹುದು” ಎಂದು ಅಭಿಪ್ರಾಯಪಟ್ಟಿದೆ.
ಪ್ರತಿಭಟನೆಯಲ್ಲಿ ಬಳಸಲಾದ ಕಠಿಣ ಘೋಷಣೆಗಳು ಅಥವಾ ಸರ್ಕಾರದ ವಿರುದ್ಧದ ಟೀಕೆಗಳು ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದ್ದು, “ಒಂದು ಮೀಮ್, ರೀಲ್ ಅಥವಾ ಸರ್ಕಾರದ ಟೀಕೆಗೆ ಎಫ್‌ಐಆರ್ ಅಥವಾ ಜೈಲು ಶಿಕ್ಷೆ ಇರಬಾರದು. ಜನರಿಂದ ಆಯ್ಕೆಯಾದ ಸರ್ಕಾರ ಟೀಕೆಗೆ ಪೊಲೀಸ್ ಕ್ರಮದಿಂದಲ್ಲ, ವಾದದ ಮೂಲಕ ಅಥವಾ ಮೌನದಿಂದ ಪ್ರತಿಕ್ರಿಯಿಸಬೇಕು” ಎಂದು IFF ಹೇಳಿದೆ.
ಆದರೆ ಮಹಿಳೆಯರ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಕುಟುಂಬದ ವಿವರಗಳನ್ನು ಸಂಗ್ರಹಿಸಿ ಸಾರ್ವಜನಿಕವಾಗಿ ಹರಡುವುದು ಕೇವಲ ಅಭಿಪ್ರಾಯ ವ್ಯಕ್ತಪಡಿಸುವುದಲ್ಲ, ಅವರನ್ನು ಅಪಾಯದ ಗುರಿಯನ್ನಾಗಿಸುವ ಉದ್ದೇಶಪೂರ್ವಕ ಕೃತ್ಯವಾಗಿದೆ ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ: ಜಂತರ್ ಮಂತರ್‌ನತ್ತ ಮತ್ತೆ ಯುವಜನ; ಈ ಬಾರಿ ಅಮಿತ್ ಶಾ ರಾಜೀನಾಮೆಗೆ ಆಗ್ರಹ ಸಾಧ್ಯತೆ, ಆ.5ರಂದು ಸಿಜೆಪಿ ಸಭೆ
ಇಂತಹ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78ರಡಿ ‘ಹಿಂಬಾಲಿಸುವಿಕೆ’ (Stalking) ಅಪರಾಧಕ್ಕೆ ಒಳಪಡುತ್ತವೆ ಎಂದು IFF ತಿಳಿಸಿದೆ. ಅಲ್ಲದೆ, 2024ರ ಫೆಬ್ರುವರಿ 28ರಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ಡಾಕ್ಸಿಂಗ್‌ಗೆ ಒಳಗಾದ ಮಹಿಳೆಯರಿಗೆ ಗೌಪ್ಯತೆ ಹಾಗೂ ನಾಗರಿಕ ಕಾನೂನುಗಳಡಿ ಪರಿಹಾರ ದೊರೆಯಬೇಕು ಎಂದು ನ್ಯಾಯಾಲಯ ಹೇಳಿತ್ತು ಎಂದು ನೆನಪಿಸಿದೆ. ಡಾಕ್ಸಿಂಗ್ ಇತರ ಆನ್‌ಲೈನ್ ಕಿರುಕುಳಗಳಿಗಿಂತ ಭಿನ್ನವಾಗಿದ್ದು, ಸಂತ್ರಸ್ತೆಯ ದೈಹಿಕ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು ಎಂದು ತಿಳಿಸಿದೆ.
ಇದೇ ರೀತಿಯ ‘ಸುಲ್ಲಿ ಡೀಲ್ಸ್’ ಹಾಗೂ ‘ಬುಲ್ಲಿ ಬೈ’ ಪ್ರಕರಣಗಳನ್ನೂ IFF ಉಲ್ಲೇಖಿಸಿದ್ದು, ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ ಧ್ವನಿ ಎತ್ತುವ ಮಹಿಳೆಯರನ್ನು ಗುರಿಯಾಗಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
“ಒಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿ, ಭಯಭೀತಗೊಳಿಸುವ ಮೂಲಕ ಉಳಿದ ಮಹಿಳೆಯರು ಧ್ವನಿ ಎತ್ತದಂತೆ ಮಾಡುವುದೇ ಇಂತಹ ಅಭಿಯಾನಗಳ ಉದ್ದೇಶ” ಎಂದು IFF ಹೇಳಿದೆ.
ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ (NCW) ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (NCPCR) ಪತ್ರ ಬರೆದು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ IFF ತಿಳಿಸಿದೆ.




