ಮಳೆನೀರಿನ ಸಂರಕ್ಷಣೆ, ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಹಾಗೂ ನೀರಾವರಿ ಸೌಕರ್ಯ ಹೆಚ್ಚಿಸುವ ಉದ್ದೇಶದಿಂದ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (ಆರ್‌ಕೆವಿವೈ) ರೈತರಿಗೆ ನೀಡಲಾಗುತ್ತಿದ್ದ ಕೃಷಿ ಹೊಂಡ ನಿರ್ಮಾಣದ ಸಹಾಯಧನವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ್ದು, ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಸಬ್ಸಿಡಿ ನಿರೀಕ್ಷೆಯಲ್ಲಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಸ್ವಂತ ಹಣದಲ್ಲಿ ಕೃಷಿ ಹೊಂಡ ನಿರ್ಮಿಸಿರುವ ಕೃಷಿಕರು ಬಿಲ್ ಪಾವತಿಗಾಗಿ ತೋಟಗಾರಿಕಾ ಇಲಾಖೆ ಕಚೇರಿಗೆ ಅಲೆದಾಡುವಂತಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 10ರಿಂದ 15 ರೈತರು ಕೃಷಿ ಹೊಂಡ ನಿರ್ಮಾಣದ ಸೌಲಭ್ಯ ಪಡೆಯುತ್ತಿದ್ದರು. ಕಳೆದ ವರ್ಷವೂ ಐದಕ್ಕೂ ಹೆಚ್ಚು ಕೃಷಿ ಹೊಂಡಗಳು ಇದೇ ಯೋಜನೆಯಡಿ ನಿರ್ಮಾಣಗೊಂಡಿದ್ದವು. ಒಂದು ಕೃಷಿ ಹೊಂಡ ನಿರ್ಮಾಣಕ್ಕೆ ಸುಮಾರು ₹4 ಲಕ್ಷದವರೆಗೆ ವೆಚ್ಚವಾಗುತ್ತಿದ್ದು, ಸರ್ಕಾರದ ಸಹಾಯಧನ ರೈತರಿಗೆ ನೆರವಾಗಿತ್ತು.
ತಾಲೂಕು ಮಟ್ಟದಲ್ಲಿ ವರ್ಷಕ್ಕೆ ಸುಮಾರು ₹1 ಕೋಟಿ ಅನುದಾನ ಕೃಷಿ ಹೊಂಡ ನಿರ್ಮಾಣಕ್ಕೆ ಮೀಸಲಾಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಯೋಜನೆಯ ಅನುಷ್ಠಾನವೇ ಸ್ಥಗಿತಗೊಂಡಿದೆ.
ಸಬ್ಸಿಡಿ ಭರವಸೆಗೆ ಹೊಂಡ ನಿರ್ಮಿಸಿ ಸಂಕಷ್ಟಕ್ಕೆ ಸಿಲುಕಿದ ರೈತರು
ಸಹಾಯಧನ ದೊರೆಯುತ್ತದೆ ಎಂಬ ನಿರೀಕ್ಷೆಯಿಂದ ಅನೇಕ ರೈತರು ಸಾಲ ಮಾಡಿ ಅಥವಾ ಸ್ವಂತ ಹಣದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ. ಆದರೆ ಇದೀಗ ಯೋಜನೆಯ ಮಾರ್ಗಸೂಚಿಗಳಲ್ಲೇ ಕೃಷಿ ಹೊಂಡ ನಿರ್ಮಾಣದ ಅಂಶವನ್ನು ಕೈಬಿಡಲಾಗಿರುವುದರಿಂದ, ಅಧಿಕಾರಿಗಳೂ ಸಹ ಅನುದಾನ ನೀಡಲು ಸಾಧ್ಯವಾಗದೆ ಅಡಚಣೆಯಲ್ಲಿ ಸಿಲುಕಿದ್ದಾರೆ.
ರೈತರು ಬಿಲ್ ಸಲ್ಲಿಸಿ ತಿಂಗಳುಗಳಾದರೂ ಹಣ ಬಿಡುಗಡೆಯಾಗದ ಕಾರಣ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ನಿರಂತರವಾಗಿ ಅಲೆದಾಡುತ್ತಿದ್ದಾರೆ. ಅನುದಾನ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆಯದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜ್ಯದಿಂದ ಪ್ರಸ್ತಾವನೆ, ಕೇಂದ್ರದ ಅನುಮೋದನೆ ಇನ್ನೂ ಬಾಕಿ ಇದೆ. ಕೃಷಿ ಹೊಂಡ ನಿರ್ಮಾಣದ ಸಹಾಯಧನವನ್ನು ಮುಂದುವರಿಸುವಂತೆ ರಾಜ್ಯ ತೋಟಗಾರಿಕೆ ಇಲಾಖೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈವರೆಗೆ ಯಾವುದೇ ಅನುಮೋದನೆ ದೊರೆತಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಹೀಗಾಗಿ ಹೊಸ ಫಲಾನುಭವಿಗಳ ಆಯ್ಕೆಯೂ ಸ್ಥಗಿತಗೊಂಡಿದೆ.
ಹಿಂದೆ ಎಷ್ಟು ಸಬ್ಸಿಡಿ ದೊರೆಯುತ್ತಿತ್ತು?
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿ ಹೊಂಡದ ಸಾಮರ್ಥ್ಯವನ್ನು ಆಧರಿಸಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಯೋಜನೆಯಡಿ ₹2 ಲಕ್ಷದಿಂದ ₹6 ಲಕ್ಷದವರೆಗೆ ಸಬ್ಸಿಡಿ ದೊರೆಯುತ್ತಿತ್ತು. ಈ ನೆರವಿನಿಂದ ಮಳೆನೀರನ್ನು ಸಂಗ್ರಹಿಸಿ ತೋಟಗಾರಿಕೆ ಬೆಳೆಗಳಿಗೆ ವರ್ಷಪೂರ್ತಿ ನೀರು ಒದಗಿಸುವ ಅವಕಾಶ ರೈತರಿಗೆ ಸಿಗುತ್ತಿತ್ತು. ಆದರೆ ಪ್ರಸಕ್ತ ಸಾಲಿನ ಮಾರ್ಗಸೂಚಿಯಲ್ಲಿ ಕೃಷಿ ಹೊಂಡ ನಿರ್ಮಾಣದ ಅಂಶವನ್ನೇ ಕೈಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಾಗಿ ಈದಿನ.ಕಾಮ್ ಜೊತೆ ಮಾತನಾಡಿದ ರೈತ ವಿಠ್ಠಲ್ ಬಿರಾದಾರ, “ಸಬ್ಸಿಡಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಸುಮಾರು ₹4 ಲಕ್ಷ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿದ್ದೇನೆ. ಈಗ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಬಿಲ್‌ಗಾಗಿ ಇಲಾಖೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರನ್ನು ಈ ರೀತಿ ಮಧ್ಯದಲ್ಲೇ ಕೈಬಿಡುವುದು ಸರಿಯಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಇಂಡಿ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸತೀಶ್ ಬಡಿಗೇರ ಮಾತನಾಡಿ, “ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಈವರೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಂದ ತಕ್ಷಣ ಅರ್ಹ ರೈತರಿಗೆ ನಿಯಮಾನುಸಾರ ಸಹಾಯಧನ ನೀಡಲಾಗುವುದು,” ಎಂದು ತಿಳಿಸಿದ್ದಾರೆ.
ರೈತರ ಆಗ್ರಹ
“ಮಳೆ ಆಧಾರಿತ ಕೃಷಿ ಪ್ರದೇಶಗಳಲ್ಲಿ ಕೃಷಿ ಹೊಂಡಗಳು ನೀರಿನ ಸಂರಕ್ಷಣೆ ಹಾಗೂ ತೋಟಗಾರಿಕೆ ಬೆಳೆಗಳ ಉಳಿವಿಗೆ ಅತ್ಯಂತ ಅಗತ್ಯವಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಬಾಕಿ ಅನುದಾನ ಬಿಡುಗಡೆ ಮಾಡಿ, ಕೃಷಿ ಹೊಂಡ ನಿರ್ಮಾಣ ಸಹಾಯಧನ ಯೋಜನೆಯನ್ನು ಪುನಃ ಕ್ರಿಯಾರೂಪಕ್ಕೆ ತರಬೇಕು,” ಎಂದು ರೈತರು ಆಗ್ರಹಿಸಿದ್ದಾರೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



