ಜಾರ್ಖಂಡ್ ಅಬಕಾರಿ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ (JECCE) ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪದಡಿ, ಪರೀಕ್ಷೆ ಬರೆಯಲಿದ್ದ 159 ಅಭ್ಯರ್ಥಿಗಳು ಹಾಗೂ ಜಾಲದ ಐವರು ಪ್ರಮುಖ ಸದಸ್ಯರು ಸೇರಿ ಒಟ್ಟು 164 ಜನರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (JSSC) ಅಧ್ಯಕ್ಷ ಪ್ರಶಾಂತ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ರಾಂಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ, ತಮಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾರ್‌ಗಾಂವ್‌ನಲ್ಲಿರುವ ಕಟ್ಟಡವೊಂದರ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಲಾಯಿತು. ಈ ವೇಳೆ ಪರೀಕ್ಷೆಗೆ ಸಂಬಂಧಿಸಿದ ಉತ್ತರಗಳನ್ನು ಕಂಠಪಾಠ ಮಾಡುತ್ತಿದ್ದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.
ಬಂಧಿತ ಐವರು ಪ್ರಮುಖ ಆರೋಪಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ‘ಸಾಲ್ವರ್ ಪೇಪರ್ ಲೀಕ್’ ಎಂಬ ಕುಖ್ಯಾತ ಜಾಲದ ಸದಸ್ಯರಾಗಿದ್ದಾರೆ. ತನಿಖೆಯ ವೇಳೆ, ಈ ಜಾಲದ ಏಜೆಂಟರು ಪ್ರತಿ ಅಭ್ಯರ್ಥಿಯಿಂದ ತಲಾ 10 ರಿಂದ 15 ಲಕ್ಷದವರೆಗೆ ಹಣದ ಬೇಡಿಕೆ ಇಟ್ಟಿದ್ದರು. ಪರೀಕ್ಷೆಯ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಒದಗಿಸುವ ಉದ್ದೇಶದಿಂದಲೇ ಅಭ್ಯರ್ಥಿಗಳನ್ನು ಗುಪ್ತವಾಗಿ ಈ ಸ್ಥಳಕ್ಕೆ ಕರೆತರಲಾಗಿತ್ತು ಎಂಬ ಅಂಶ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಇದನ್ನು ಓದಿದ್ದೀರಾ? ಬಡತನದ ಬೇಗೆಯಲ್ಲಿ ಅರಳಿದ ‘ಮರುಭೂಮಿಯ ಮಾಣಿಕ್ಯ’; ಈಡನ್ ಅಂಗಳದಲ್ಲಿ ಸಿಡಿದ ಮುಕುಲ್ ಚೌಧರಿ
ಪೊಲೀಸರಿಗೆ ಸಿಕ್ಕಿಬೀಳದಂತೆ ಮುನ್ನೆಚ್ಚರಿಕೆ ವಹಿಸಲು ಅಭ್ಯರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳು ಹಾಗೂ ಪ್ರವೇಶ ಪತ್ರಗಳನ್ನು ಜಾಲದ ಸದಸ್ಯರಿಗೆ ಒಪ್ಪಿಸಿದ್ದರು. ಭದ್ರತೆಗಾಗಿ ಕೆಲವು ಅಭ್ಯರ್ಥಿಗಳು ಜಾಲದ ಸದಸ್ಯರ ಹೆಸರಿಗೆ ಖಾಲಿ ಬ್ಯಾಂಕ್ ಚೆಕ್‌ಗಳನ್ನೂ ನೀಡಿದ್ದರು ಎಂದು ಜೆಎಸ್‌ಎಸ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಜಾಲದ ಪ್ರಮುಖ ಆರೋಪಿಯು ಬಿಹಾರದ ಜಹಾನಾಬಾದ್ ಮೂಲದವನಾಗಿದ್ದು, ಈ ಹಿಂದೆ ನೀಟ್, ರಾಜಸ್ಥಾನ ಕ್ಲರ್ಕ್ ಹುದ್ದೆ ಸೇರಿದಂತೆ ಹಲವು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ವಿದ್ಯಾರ್ಥಿಗಳಿಗೆ ನಾಲ್ಕು ಸೆಟ್‌ಗಳ ಪ್ರಶ್ನೆಪತ್ರಿಕೆಗಳನ್ನು ಡಿಜಿಟಲ್ ಹಾಗೂ ಮುದ್ರಿತ ರೂಪದಲ್ಲಿ ಒದಗಿಸಲಾಗಿತ್ತು. ಆದರೆ, ವಶಪಡಿಸಿಕೊಂಡ ಈ ಪ್ರಶ್ನೆಪತ್ರಿಕೆಗಳು ಭಾನುವಾರ ನಡೆದ ಅಸಲಿ ಪರೀಕ್ಷೆಯ ಪ್ರಶ್ನೆಗಳಿಗೆ ಸಂಪೂರ್ಣವಾಗಿ ತಾಳೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿತರಾಗಿರುವ ಎಲ್ಲಾ 159 ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಆಯೋಗದ ಯಾವುದೇ ಪರೀಕ್ಷೆಗಳನ್ನು ಬರೆಯದಂತೆ ನಿರ್ಬಂಧಿಸಲಾಗುವುದು ಎಂದು ಆಯೋಗದ ಅಧ್ಯಕ್ಷರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಜಾಲದಲ್ಲಿರುವ ಇತರ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.




