ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಹಾಗೂ ವಿಫಲವಾದ ಶಾಂತಿ ಮಾತುಕತೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್, “ಅಮೆರಿಕದ ಯಾವುದೇ ಬೆದರಿಕೆಗಳಿಗೆ ನಮ್ಮ ದೇಶ ಬಗ್ಗುವುದಿಲ್ಲ,” ಎಂದು ತಿಳಿಸಿದೆ. ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯ ನೇತೃತ್ವ ವಹಿಸಿದ್ದ ಇರಾನ್ ಸಂಸತ್ತಿನ ಸ್ಪೀಕರ್ ಭಾನುವಾರ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, “ಅಮೆರಿಕ ನಮ್ಮ ನಂಬಿಕೆ ಗಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮಾತುಕತೆಯ ವೇಳೆ ಪದೇಪದೇ ಷರತ್ತುಗಳನ್ನು ಬದಲಿಸುತ್ತಾ, ಅತಿರೇಕದ ಬೇಡಿಕೆಗಳನ್ನು ಮುಂದಿಡುತ್ತಿದೆ,” ಎಂದು ಇರಾನ್ ಅಮೆರಿಕದ ವಿರುದ್ಧ ನೇರ ಪ್ರತ್ಯಾರೋಪ ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸತತ 21 ಗಂಟೆಗಳ ಕಾಲ ನಡೆದ ಶಾಂತಿ ಮಾತುಕತೆಯು ಯಾವುದೇ ಒಪ್ಪಂದವಿಲ್ಲದೆ ಮುರಿದುಬಿದ್ದಿದೆ. ಅಮೆರಿಕ ನಿಯೋಗವನ್ನು ಮುನ್ನಡೆಸಿದ್ದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, “ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡಲು ಇರಾನ್ ನಿರಾಕರಿಸಿದ್ದೇ ಮಾತುಕತೆ ವಿಫಲವಾಗಲು ಮುಖ್ಯ ಕಾರಣ,” ಎಂದು ದೂರಿದ್ದಾರೆ.
ಈ ನಡುವೆ ಇರಾನ್‌ನ ಒಳಬರುವ ಮತ್ತು ಹೊರಹೋಗುವ ಎಲ್ಲಾ ಸಮುದ್ರ ಮಾರ್ಗಗಳು, ಕರಾವಳಿ ಪ್ರದೇಶಗಳಿಗೆ ನೌಕಾ ದಿಗ್ಬಂಧನ ಹೇರುವುದಾಗಿ ಅಮೆರಿಕದ ಸೇನೆ ಘೋಷಿಸಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ವ್ಯಾಪಾರದ ಕೊಂಡಿಯಾದ ‘ಹಾರ್ಮುಜ್ ಜಲಸಂಧಿ’ಗೆ ದಿಗ್ಬಂಧನ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಶಾಂತಿ ಮಾತುಕತೆ ವಿಫಲಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅವರು (ಇರಾನ್) ಮಾತುಕತೆಗೆ ಹಿಂದಿರುಗಿ ಬರುತ್ತಾರೋ ಇಲ್ಲವೋ ಎಂಬುದರ ಬಗ್ಗೆ ನನಗೆ ಯೋಚನೆ ಇಲ್ಲ. ಅವರು ಬರದಿದ್ದರೂ ನನಗೆ ಯಾವುದೇ ಸಮಸ್ಯೆಯಿಲ್ಲ, ನಾನಂತೂ ಆರಾಮಾಗಿದ್ದೇನೆ ” ಎಂದು ನಿರ್ಲಕ್ಷ್ಯದ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಹದಗೆಟ್ಟ ಸಂಬಂಧ ಹಾಗೂ ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಘೋಷಣೆಯಾದ ಕಾರಣ ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಮಧ್ಯಪ್ರಾಚ್ಯದಿಂದ ಜಗತ್ತಿಗೆ ಆಗಬೇಕಿರುವ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದ ಸೋಮವಾರ ಕಚ್ಚಾ ತೈಲದ ಬೆಲೆಗಳು ಭಾರಿ ಏರಿಕೆ ಕಂಡಿವೆ. ಇದರ ನೇರ ಪರಿಣಾಮವಾಗಿ ಜಾಗತಿಕ ಷೇರು ಮಾರುಕಟ್ಟೆಗಳು ಗಣನೀಯವಾಗಿ ಕುಸಿತ ಕಂಡಿವೆ.




