ಖ್ಯಾತ ಟೆಲಿವಿಷನ್ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಯಲ್ಲಿ 50 ಲಕ್ಷ ರೂ. ಗೆದ್ದು ಮನೆಮಾತಾಗಿದ್ದ ಮಹಿಳಾ ತಹಶೀಲ್ದಾರ್ ಅವರನ್ನು 2.5 ಕೋಟಿ ರೂ. ಪ್ರವಾಹ ಪರಿಹಾರ ಹಗರಣದಲ್ಲಿ ಭಾಗಿಯಾದ ಆರೋಪದಡಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ದೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಶಿಯೋಪುರ ಜಿಲ್ಲೆಯ ಬರೋಡಾ ತಹಸೀಲ್‌ನಲ್ಲಿ 2021ರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು ಗುರುವಾರ ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಅವರನ್ನು ನೆರೆಯ ಶಿವಪುರಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
”ಬರೋಡಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDOP) ಅವನೀತ್ ಶರ್ಮಾ ನೇತೃತ್ವದ ತಂಡವು ಗ್ವಾಲಿಯರ್‌ನ ಚಂದ್ರವದನಿ ನಾಕಾದಲ್ಲಿರುವ ತೋಮರ್ ಅವರ ನಿವಾಸದಲ್ಲಿ ಅವರನ್ನು ಬಂಧಿಸಿದೆ. ವಿಜಯಪುರದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತೋಮರ್ ಅವರನ್ನು ಬುಧವಾರವಷ್ಟೇ ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ಹುದ್ದೆಯಿಂದ ವಜಾಗೊಳಿಸಿದ್ದರು,” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಓದಿದ್ದೀರಾ? ಅಮೆರಿಕದ ಸೇನಾ ದರ್ಪದ ರೆಕ್ಕೆ ಕತ್ತರಿಸಿದ ಇರಾನ್; ಬೂದಿಯಾದ ‘ಬಾಂದಳದ ಭೂತ’
ಎಸ್‌ಪಿ ಸುಧೀರ್ ಕುಮಾರ್ ಅಗರ್‌ವಾಲ್ ಮಾಹಿತಿ ನೀಡಿ “ತೋಮರ್ ಅವರು ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಅವರ ಜಾಡು ಹಿಡಿದ ಪೊಲೀಸ್ ತಂಡವು ಅಂತಿಮವಾಗಿ ಗ್ವಾಲಿಯರ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ. ಬಂಧನ ಭೀತಿಯಿಂದ ತೋಮರ್ ಅವರು ಈ ಹಿಂದೆ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಉನ್ನತ ನ್ಯಾಯಾಲಯಗಳು ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ್ದವು.
2021ರ ಪ್ರವಾಹ ಪರಿಹಾರ ನಿಧಿಯ ಅಕ್ರಮ ಇದಾಗಿದೆ. ಹಣವನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಬರೋಬ್ಬರಿ 2.5 ಕೋಟಿ ರೂ. ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 22 ಕಂದಾಯ ಅಧಿಕಾರಿಗಳು ಮತ್ತು ಒಬ್ಬ ತಹಶೀಲ್ದಾರ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 110 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ನಟ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಜನಪ್ರಿಯ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಅಮಿತಾ ಸಿಂಗ್ ತೋಮರ್ ಅವರು 50 ಲಕ್ಷ ರೂ. ಗೆಲ್ಲುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಸದ್ಯ ಶಿಯೋಪುರ ಜಿಲ್ಲೆಯ ಬರೋಡಾದ ಎಸ್‌ಡಿಒಪಿ ಈ ಹಗರಣದ ತನಿಖೆ ನಡೆಸುತ್ತಿದ್ದಾರೆ.





