ಕರ್ನಾಟಕದಲ್ಲಿ ಏಪ್ರಿಲ್‌ನಿಂದ ಆರಂಭವಾಗಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ವಭಾವಿಯಾಗಿ ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ. ಒಟ್ಟು 5.57 ಕೋಟಿ ಮತದಾರರ ಪೈಕಿ 4.46 ಕೋಟಿ ಮತದಾರರ ಮ್ಯಾಪಿಂಗ್ ಈಗಾಗಲೇ ಮುಗಿದಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತ (CEO) ವಿ. ಅನ್ಬುಕುಮಾರ್ ಹೇಳಿದ್ದಾರೆ. ಈ ಹಂತದಲ್ಲಿ ಮ್ಯಾಪಿಂಗ್ ಸಂಪೂರ್ಣ ನಿಖರವಾಗಿರುತ್ತದೆ ಎಂದೂ ಹೇಳಲಾಗುವುದಿಲ್ಲ ಎಂದಿರುವ ಅನ್ಬುಕುಮಾರ್ ಅವರನ್ನು ‘ನನ್ನ ಮತ, ನನ್ನ ಹಕ್ಕು’ ಒಕ್ಕೂಟದ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಎಸ್‌ಐಆರ್ ಅಗತ್ಯವನ್ನು ಪ್ರಶ್ನಿಸಿ ಒಕ್ಕೂಟದ ಸದಸ್ಯರು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದಾರೆ. ಬಳಿಕ, ಅನ್ಬುಕುಮಾರ್ ಅವರು ಪ್ರತಿಭಟನಾಕಾರರೊಂದಿಗೆ ಸಭೆ ನಡೆಸಿದ್ದಾರೆ. “ಈಗಾಗಲೇ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿವೆ. ತೀರ್ಪು ನೀಡುವವರೆಗೆ ರಾಜ್ಯದಲ್ಲಿ ಎಸ್‌ಐಆರ್‌ಅನ್ನು ತಡೆಹಿಡಿಯಬೇಕು” ಎಂದು ಒಕ್ಕೂಟ ಒತ್ತಾಯಿಸಿದೆ.
“ಮ್ಯಾಪಿಂಗ್ ವಿಧಾನವು ಅನೇಕ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡಬಹುದು. ಕರ್ನಾಟಕದಲ್ಲಿ ಎಸ್‌ಐಆರ್ ಮುಂದುವರಿಸುವ ಮೊದಲು ಆತಂಕಗಳನ್ನು ನಿವಾರಿಸಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಒತ್ತಾಯ ಆಗ್ರಹಿಸಿದೆ.
ಮ್ಯಾಪಿಂಗ್ ಪ್ರಕ್ರಿಯೆ ಮತ್ತು ಎಸ್‌ಐಆರ್ ಸಮಯದಲ್ಲಿ ಮತದಾರರನ್ನು ಹೊರಗಿಡುವ ಬಗ್ಗೆ ಒಕ್ಕೂಟದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ತಪ್ಪಿಬ್ಬಾದ ಅನ್ಬುಕುಮಾರ್, ‘ಯಾವುದೇ ಸ್ಪಷ್ಟನೆ ನೀಡಿಲ್ಲ’. ಬದಲಾಗಿ, ಅಧಿಕೃತ ಅಧಿಸೂಚನೆ ಹೊರಬಿದ್ದ ನಂತರವಷ್ಟೇ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದು ಜಾರಿಕೊಂಡಿದ್ದಾರೆ.
“ಮ್ಯಾಪಿಂಗ್‌ನಲ್ಲಿರುವ ವ್ಯತ್ಯಾಸಗಳು ಎಣಿಕೆ ಹಂತ ಆರಂಭವಾದ ನಂತರವಷ್ಟೇ ಸ್ಪಷ್ಟವಾಗಲಿವೆ. ಮ್ಯಾಪಿಂಗ್ ಆಗದೆ ಉಳಿದಿರುವ ಮತದಾರರಿಗೆ ನೋಟಿಸ್ ಬರಬಹುದು” ಎಂದಿದ್ದಾರೆ.
ಸಿಇಒ ಅನ್ಬುಕುಮಾರ್ ಅವರ ಪ್ರತಿಕ್ರಿಯೆ ಅತೃಪ್ತಿಕರವಾಗಿದೆ ಎಂದು ಒಕ್ಕೂಟ ಸದಸ್ಯರು ಬಣ್ಣಿಸಿದ್ದಾರೆ. “ಎಸ್‌ಐಆರ್ ಪಾರದರ್ಶಕತೆ ಮತ್ತು ಮತದಾರರನ್ನು ಪಟ್ಟಿಯಿಂದ ಕೈಬಿಡುವ ಆತಂಕಗಳ ಬಗ್ಗೆ ಅವರು ಉತ್ತರಿಸಿಲ್ಲ. ಮಿತಿಗಳ ಒಳಗಡೆ ಕೆಲಸ ಮಾಡುವ ಕುರಿತು ಸಿಇಒ ನೀಡಿದ ಹೇಳಿಕೆಯು ಅವರ ಹೊಣೆಗಾರಿಕೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ. ಎಸ್‌ಐಆರ್ ಪ್ರಕ್ರಿಯೆಯು ಬಡ ಕಾರ್ಮಿಕರು, ಮಹಿಳೆಯರು, ದಲಿತರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಅಸಮಾನವಾದ ಪರಿಣಾಮ ಬೀರಬಹುದು. ಈ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು” ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ʼಸಿದ್ದರಾಮಯ್ಯ ಸಾಲರಾಮಯ್ಯʼ ಆರೋಪ ನಿಜವೇ! ಯಾರ ಸರ್ಕಾರ ಎಷ್ಟು ಸಾಲ ಮಾಡಿದೆ ಗೊತ್ತೇ?
“ಎಸ್‌ಐಆರ್ ಮಾರ್ಗಸೂಚಿಗಳಲ್ಲಿನ ‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಎಂಬ ಪದಗಳ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ. ಇಂತಹ ನಿಬಂಧನೆಗಳು ದೊಡ್ಡ ಮಟ್ಟದ ಮತದಾರರ ಹೆಸರನ್ನು ಕೈಬಿಡಲು ದಾರಿ ಮಾಡಿಕೊಡುಬಹುದು. ಮುಸ್ಲಿಂ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ದೂರುಗಳು ಸೇರಿದಂತೆ, ಫಾರ್ಮ್ 7 ಅನ್ನು ದುರುಪಯೋಗಪಡಿಸಿಕೊಂಡು ಹೆಸರುಗಳನ್ನು ತೆಗೆದುಹಾಕಿರುವ ಆರೋಪಗಳ ಬಗ್ಗೆ ಕೈಗೊಂಡ ಕ್ರಮಗಳನ್ನು ಆಯೋಗವು ವಿವರಿಸಬೇಕು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ 2028ರಲ್ಲಿ ನಡೆಯಲಿದ್ದು, ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಎಸ್‌ಐಆರ್ ಅನ್ನು ಏಕೆ ಕೈಗೆತ್ತಿಕೊಳ್ಳಲಾಗುತ್ತಿದೆ” ಎಂದು ಒಕ್ಕೂಟ ಪ್ರಶ್ನಿಸಿದೆ.
ಒಕ್ಕೂಟವು ಸಿಇಒ ಅನ್ಬುಕುಮಾರ್ ಅವರ ಮುಂದೆ 16 ಪ್ರಶ್ನೆಗಳನ್ನು ಇಟ್ಟಿದೆ;
- ಮತದಾರರ ಪಟ್ಟಿಗಳ ಮ್ಯಾಪಿಂಗ್ ಅನ್ನು ಹೇಗೆ ಮಾಡಲಾಗುತ್ತಿದೆ?
- 2002ರ ಮತದಾರರ ಪಟ್ಟಿಯೊಂದಿಗೆ ಮತದಾರರನ್ನು ಮ್ಯಾಪಿಂಗ್ ಮಾಡಬೇಕೆಂದು ಯಾವ ಕಾನೂನು ಆದೇಶಿಸುತ್ತದೆ?
- ಮ್ಯಾಪಿಂಗ್ ಪ್ರಕ್ರಿಯೆಯ ಸಮಯದಲ್ಲಿ ಯಾವ ಸಮುದಾಯಗಳನ್ನು ಹೊರಗಿಡಲಾಗುತ್ತಿದೆ?
- ಮ್ಯಾಪಿಂಗ್ ಮಾಡಲು ಸಾಧ್ಯವಾಗದಿದ್ದರೆ, ನಮ್ಮ ಮತದಾನದ ಹಕ್ಕು ಏನಾಗುತ್ತದೆ?
- ಮ್ಯಾಪಿಂಗ್ ಪ್ರಕ್ರಿಯೆ 2025ರ ನವೆಂಬರ್‌ನಲ್ಲಿ ಪ್ರಾರಂಭವಾಯಿತು. ಆದರೆ, ಎಸ್‌ಐಆರ್‌ನ ವೇಳಾಪಟ್ಟಿ, ಮಾರ್ಗಸೂಚಿ ಕುರಿತಾದ ಯಾವುದೇ ಸುತ್ತೋಲೆಯನ್ನು ಸಾರ್ವಜನಿಕಗೊಳಿಸದೆ, ಅಪಾರದರ್ಶಕವಾಗಿ ಏಕೆ ನಡೆಸಲಾಗುತ್ತಿದೆ?
- ಜನರು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸದಂತೆ ಮಾಡಲು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು ರಾಜ್ಯ ಚುನಾವಣಾಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ?
- ಇಸಿಐ ಹೊರಡಿಸಿದ ಎಸ್‌ಐಆರ್‌ಗಾಗಿ ಮಾರ್ಗಸೂಚಿಗಳಲ್ಲಿಯೂ ‘ತಾರ್ಕಿಕ ವ್ಯತ್ಯಾಸಗಳು’ ಎಂಬ ವರ್ಗವನ್ನು ವ್ಯಾಖ್ಯಾನಿಸಲಾಗಿಲ್ಲ. ಮತದಾರರ ಪಟ್ಟಿಯಿಂದ ಲಕ್ಷಾಂತರ ಅರ್ಹ ಮತದಾರರನ್ನು ಕೈ ಬಿಡಲು ಎಸ್‌ಐಆರ್ ಅನ್ನು ಪರಿಚಯಿಸಲಾಗಿದೆಯೇ?
- ಸಾವಿರಾರು ಮುಸ್ಲಿಂ ಮತದಾರರನ್ನು ತೆಗೆದುಹಾಕಲು ಫಾರ್ಮ್ 7ರಲ್ಲಿ ತಪ್ಪು ಮಾಹಿತಿಯನ್ನು ಸಲ್ಲಿಸಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ?
- ಇಲ್ಲಿಯವರೆಗೆ ಎಷ್ಟು ಬಿಎಲ್‌ಒಗಳು ಎಸ್‌ಐಆರ್ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ? ಇತರ ರಾಜ್ಯಗಳಲ್ಲಿ ಅವರ ಕುಟುಂಬಗಳಿಗೆ ನೀಡಲಾಗಿರುವ ಪರಿಹಾರಗಳೇನು, ಅಂಥ ಸಾವುಗಳನ್ನು ತಡೆಯಲು ಇಸಿಐ ಕೈಗೊಂಡಿರುವ ಕ್ರಮಗಳೇನು?
- ಇತರ ರಾಜ್ಯಗಳಲ್ಲಿ ಎಸ್‌ಐಆರ್ ಜಾರಿಗೆ ಬಂದ ನಂತರ, ಮತದಾರರ ಪಟ್ಟಿಯಲ್ಲಿ ಲಿಂಗ ಅನುಪಾತವು ಗಮನಾರ್ಹವಾಗಿ ಕಡಿಮೆಯಾಗಿದೆ. ಮಹಿಳೆಯರ ಮತದಾನದ ಹಕ್ಕನ್ನು ಎತ್ತಿಹಿಡಿಯಲಾಗಿದೆಯೇ ಎಂಬುದನ್ನು ಯಾರು ಖಾತ್ರಿಪಡಿಸುತ್ತಾರೆ?
- ನಾವು ಎಸ್‌ಐಆರ್‌ನಿಂದ ಹೊರಗಿಡಲ್ಪಟ್ಟರೆ, ನಾವು ನಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತೇವೆಯೇ?
- ಇಲ್ಲಿಯವರೆಗೆ, 10 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದಕ್ಕೆ ಲಿಖಿತ ಕಾರಣಗಳನ್ನು ನೀಡಲು ECI ವಿಫಲವಾಗಿದೆ. ಕರ್ನಾಟಕದಲ್ಲಿ ಈ ರೀತಿ ಆಗುವುದಿಲ್ಲ ಎಂದು ನೀವು ನಮಗೆ ಭರವಸೆ ನೀಡುತ್ತೀರಾ?
- ಸುಪ್ರೀಂ ಕೋರ್ಟ್ ಇನ್ನೂ SIR ನ ಕಾನೂನುಬದ್ಧತೆಯ ಬಗ್ಗೆ ತೀರ್ಪು ನೀಡಿಲ್ಲದಿದ್ದಾಗ, ಕರ್ನಾಟಕದಲ್ಲಿ ನಮಗೆ SIR ಏಕೆ ಬೇಕು?
- ಅಕ್ಟೋಬರ್ 2025ರಿಂದಲೂ ಸಭೆ ನಡೆಸುವಂತೆ ನಾವು ವಿನಂತಿಸುತ್ತಲೇ ಇದ್ದೇವೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ನಮ್ಮನ್ನು ಅಥವಾ ಸಾಮಾನ್ಯ ಜನರನ್ನು ಒಮ್ಮೆಯೂ ಭೇಟಿ ಮಾಡಿಲ್ಲ. ಇದಕ್ಕೆ ಕಾರಣಗಳೇನು?
- ಮುಂದಿನ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು 2028ರಲ್ಲಿ ನಡೆಯಲಿದೆ. ಇಂಥ ಹೊತ್ತಲ್ಲಿ ಇಷ್ಟು ಆತುರವಾಗಿ ಎಸ್‌ಐಆರ್ ಜಾರಿಗೆ ತರಲು ಕಾರಣಗಳೇನು?
- ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ದಕ್ಷಿಣ ರಾಜ್ಯಗಳಿಗೆ ಪ್ರಯಾಣಿಸುತ್ತಾರೆ. SIR ಅನ್ನು ಜಾರಿಗೆ ತಂದ ನಂತರ ಅವರ ರಾಜ್ಯಗಳ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಲಾಗಿದೆಯೇ, ಒಂದು ವೇಳೆ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದ್ದರೆ, ಅವರನ್ನು ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳಲ್ಲಿ ಮತದಾರರಾಗಿ ನೋಂದಾಯಿಸಲಾಗುತ್ತದೆಯೇ?



