ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು.
ಎನಗೆ ಲಿಂಗವಾಗಿ ಬಂದು, ಎನ್ನಂಗದಲ್ಲಿ ನಿಂದನಯ್ಯಾ ಬಸವಣ್ಣನು.
ಎನಗೆ ಜಂಗಮವಾಗಿ ಬಂದು, ಎನ್ನ ಸಂಸಾರ ಪ್ರಕೃತಿಯ ಹರಿದ.
ಭಕ್ತಿ ಜ್ಞಾನ ವೈರಾಗ್ಯವ ತುಂಬಿ, ಪಾದೋದಕ ಪ್ರಸಾದವನಿತ್ತು ಸಲಹಿದನಯ್ಯಾ ಬಸವಣ್ಣನು.
ಆ ಬಸವಣ್ಣನ ಶ್ರೀಪಾದವರ್ಚಿಸಿ, ಪೂಜಿಸಿ, ನಮೋ ನಮೋ ಎಂದು ಸುಖಿಯಾದೆನಯ್ಯಾ,
ನಿಃಕಳಂಕ ಮಲ್ಲಿಕಾರ್ಜುನಾ.
12ನೇ ಶತಮಾನದ ಶರಣ ಚಳವಳಿಯ ಮಹತ್ವವನ್ನು ಅರಿಯಲು ಬಸವಣ್ಣನವರ ಸಮಕಾಲೀನ ಶರಣರ ವಚನಗಳು ಅತ್ಯಂತ ಪ್ರಮುಖವಾಗಿವೆ. ಅಂತಹ ಶರಣರಲ್ಲಿ ಮೋಳಿಗೆ ಮಾರಯ್ಯ ಪ್ರಮುಖರು. ಬಸವಣ್ಣನವರ ವ್ಯಕ್ತಿತ್ವ, ವೈಚಾರಿಕತೆ ಮತ್ತು ಸಮಾನತೆಯ ಆಶಯದಿಂದ ಪ್ರಭಾವಿತರಾದ ಮೋಳಿಗೆ ಮಾರಯ್ಯ ತಮ್ಮ ಅನೇಕ ವಚನಗಳಲ್ಲಿ ಬಸವಣ್ಣನವರನ್ನು ಗುರು, ಲಿಂಗ ಮತ್ತು ಜಂಗಮದ ರೂಪದಲ್ಲಿ ಕಂಡು ಕೊಂಡಾಡಿದ್ದಾರೆ.
ಮೋಳಿಗೆ ಮಾರಯ್ಯ ಮೂಲತಃ ಕಾಶ್ಮೀರದ ಅರಸ. ಆತನ ಮೂಲ ಹೆಸರು ಮಹಾದೇವ ಭೂಪಾಲ. ಪತ್ನಿ ಗಂಗಾದೇವಿ. ಕಲ್ಯಾಣದಲ್ಲಿ ಬಸವಣ್ಣನವರ ಹಿರಿಮೆ ಹಾಗೂ ಅವರ ನೇತ್ರತ್ವದಲ್ಲಿ ನಡೆಯುತ್ತಿರುವ ಸಾಮಾಜಿಕ ಬದಲಾವಣೆಯ ಸುದ್ದಿ ಕೇಳಿ ತನ್ನ ರಾಜ್ಯ ತ್ಯಾಗಮಾಡಿ ಇಬ್ಬರೂ ಕಲ್ಯಾಣಕ್ಕೆ ಬರುತ್ತಾರೆ. ಶರಣ ಸಂಕುಲ ಸೇರಿದ ಬಳಿಕ ಮೋಳಿಗೆ ಮಾರಯ್ಯ-ಮಹಾದೇವಿ ಹೆಸರಿನಿಂದ ಪ್ರಸಿದ್ಧರಾದರು. ಮೋಳಿಗೆ ಎಂದರೆ ಕಟ್ಟಿಗೆ ಮಾರುವುದು ಎಂದರ್ಥ. ಮೋಳಿಗೆ ಮಾರಯ್ಯ ನಿಷ್ಠೆಯ ಕಾಯಕದೊಂದಿಗೆ ತಮ್ಮನ್ನು ಗುರುತಿಸಿಕೊಂಡು ಸರಳ ಜೀವನ ನಡೆಸಿದರು.
ಬಸವಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಶರಣ ಚಳುವಳಿಯಲ್ಲಿ ವಿವಿಧ ಜಾತಿ, ವರ್ಗ, ವೃತ್ತಿಯ ಜನರು ಒಂದೆಡೆ ಸೇರಿದರು. ಅನುಭವ ಮಂಟಪವು ಅವರ ಚಿಂತನೆ, ಅನುಭವ ಮತ್ತು ವಿಚಾರ ವಿನಿಮಯದ ವೇದಿಕೆಯಾಯಿತು. ಅಲ್ಲಿ ಯಾರೊಬ್ಬರ ಜಾತಿ ಅಥವಾ ಸಾಮಾಜಿಕ ಸ್ಥಾನಮಾನಕ್ಕೆ ಪ್ರಾಧಾನ್ಯವಿರಲಿಲ್ಲ. ಪ್ರತಿಯೊಬ್ಬರ ಅನುಭವ, ಕಾಯಕಕ್ಕೆ ವಿಶೇಷ ಮೌಲ್ಯವಿತ್ತು. ʼಸಕಲರಿಗೂ ಲೇಸನ್ನೇ ಬಯಸುʼ ಎಂಬ ಸಮಾನತೆಯ ಮನೋಭಾವ ಶರಣರ ಬದುಕಿನ ಪ್ರಮುಖ ಆಶಯವಾಗಿತ್ತು. ಹೀಗಾಗಿಯೇ ದೇಶ-ವಿದೇಶದ ಕಾಯಕಜೀವಿಗಳು ಕಲ್ಯಾಣದತ್ತ ಬಂದು ಸೇರಿದರು.
ಮೋಳಿಗೆ ಮಾರಯ್ಯ ರಚಿಸಿದ ವಚನಗಳಲ್ಲಿ 820 ಲಭ್ಯವಾಗಿವೆ. ಅವರ ಹೆಂಡತಿ ಮಹಾದೇವಿ ಅವರ 70 ವಚನಗಳು ದೊರೆತಿವೆ. ಇಬ್ಬರು ಕಲ್ಯಾಣದಲ್ಲಿ ಕಟ್ಟಿಗೆ ಕಡಿದು ತಂದು ಮಾರಾಟ ಮಾಡುವ ವೃತ್ತಿ ನಡೆಸುತ್ತಿದ್ದರು. ಮಾರಯ್ಯನವರ ವಚನಗಳಲ್ಲಿ ಭಕ್ತಿ, ಗುರು, ಲಿಂಗ, ಜಂಗಮ ಸೇರಿದಂತೆ ಬಹುತೇಕ ವಚನಕಾರರ ಹೆಸರು ಉಲ್ಲೇಖವಿದೆ. ಅಷ್ಟೇ ಅಲ್ಲದೆ ಅವರು ಕಲ್ಯಾಣದ ಅಂತಿಮ ದಿನಗಳ ಬಗ್ಗೆಯೂ ಅವರ ವಚನಗಳಲ್ಲಿ ದೊರೆಯುತ್ತದೆ. ಈ ಎಲ್ಲ ಆಧಾರದಿಂದ ಮೋಳಿಗೆ ಮಾರಯ್ಯ ದಂಪತಿ ಬಸವಣ್ಣನವರ ಸಮಕಾಲೀನವರು ಎಂದು ಹೇಳಬಹುದು.
ಈ ಮೇಲಿನ ವಚನದಲ್ಲಿ ಮಾರಯ್ಯನವರು ಬಸವಣ್ಣನವರ ವ್ಯಕ್ತಿತ್ವದ ಕುರಿತಾಗಿ ಹೇಳಿದ್ದಾರೆ. ಬಸವಣ್ಣ ಕೇವಲ ಒಬ್ಬ ಗುರುವಾಗಿ ಮಾತ್ರ ಕಾಣುವುದಿಲ್ಲ. ತಮ್ಮ ಅಂತರಂಗವನ್ನು ಬೆಳಗಿಸಿದ ಗುರು, ಆತ್ಮಜ್ಞಾನಕ್ಕೆ ದಾರಿ ತೋರಿದ ಲಿಂಗ ಮತ್ತು ಬದುಕಿನ ಅಜ್ಞಾನ ದೂರ ಮಾಡಿದ ಜಂಗಮ ಸ್ವರೂಪಿಯಾಗಿ ಕಾಯದಲ್ಲಿ ಉಳಿದರು. ಬಸವಣ್ಣನವರ ಸಾನ್ನಿಧ್ಯದಿಂದ ತಮ್ಮ ಬದುಕಿನಲ್ಲಿ ಭಕ್ತಿ, ಜ್ಞಾನ ಮತ್ತು ವೈರಾಗ್ಯ ತುಂಬಿತು. ಪ್ರಸಾದ ಕೊಟ್ಟು ಸಲಹಿದರು ಎಂದು ಮಾರಯ್ಯ ಮನದುಂಬಿ ಅನುಭಾವ ಹಂಚಿಕೊಳ್ಳುತ್ತಾರೆ.
ಆ ಕಾಲಘಟ್ಟದ ಸಮಾಜವು ಜಾತಿ, ವರ್ಣ, ಲಿಂಗ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ವಿಭಜಿತವಾಗಿತ್ತು. ಅನೇಕ ಸಮುದಾಯಗಳು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗೆ ಒಳಗಾಗಿದ್ದವು. ಇಂತಹ ವ್ಯವಸ್ಥೆ ದಿಕ್ಕರಿಸಿ ಮಾನವೀಯತೆ, ಸಮಾನತೆ ಮತ್ತು ಕಾಯಕದ ಮೌಲ್ಯಗಳನ್ನು ಪ್ರತಿಪಾದಿಸಿದ ಶರಣ ಚಳುವಳಿ ಹೊಸ ಸಾಮಾಜಿಕ ಚಿಂತನೆಗೆ ನಾಂದಿ ಹಾಡಿತು. ಹಾಗೇ ಬಸವಣ್ಣನವರ ಜೊತೆಯಲ್ಲಿ ನಾನು ಸುಖಿಯಾಗಿ ಬದುಕಿದೆನು ಎಂದು ವರ್ಣಿಸುತ್ತಾನೆ ಮಾರಯ್ಯ.
ಬಸವಣ್ಣನವರ ವೈಚಾರಿಕತೆ, ವೈಜ್ಞಾನಿಕ ಚಿಂತನೆಯ ಶರಣ ಚಳುವಳಿಯ ಪ್ರಭಾವ ಎಷ್ಟರ ಮಟ್ಟಿಗೆ ವ್ಯಾಪಕವಾಗಿತ್ತು ಎಂಬುದಕ್ಕೆ ಮೋಳಿಗೆ ಮಾರಯ್ಯನವರಂತಹ ಶರಣರ ಜೀವನವೇ ಸಾಕ್ಷಿಯಾಗಿದೆ. ದೂರದ ಕಾಶ್ಮೀರದಿಂದ ರಾಜ್ಯ ಮತ್ತು ಸಂಪತ್ತನ್ನು ತ್ಯಜಿಸಿ ಕಲ್ಯಾಣದತ್ತ ಬಂದ ಮಾರಯ್ಯನವರು ಅಧಿಕಾರಕ್ಕಿಂತ ಅನುಭಾವಕ್ಕೆ, ಸಂಪತ್ತಿಗಿಂತ ಕಾಯಕಕ್ಕೆ ಮತ್ತು ವೈಯಕ್ತಿಕ ಸುಖಕ್ಕಿಂತ ಸಾಮಾಜಿಕ ಒಳಿತಿಗೆ ಹೆಚ್ಚಿನ ಮಹತ್ವ ನೀಡಿದರು. 770 ಅಮರಗಣಂಗಳ ಜೊತೆಗೆ ʼಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಮಿಕ್ಕು ಅವರಿಗೆ ಲೆಕ್ಕಕ್ಕೆ ಕಡೆಯಿಲ್ಲದೆ ಮಾಡಿ, ಹೊಕ್ಕು ಭಕ್ತಿಯಲ್ಲಿʼ ಎಂದು ಹೇಳುವ ಮಾರಯ್ಯನವರ ವಚನವು ಕಲ್ಯಾಣದ ಚಳವಳಿಯ ಮಹತ್ವ ಸಾರುತ್ತದೆ.
ಮೋಳಿಗೆ ಮಾರಯ್ಯನವರ ವಚನದಲ್ಲಿ ಬಸವಣ್ಣನವರು ಅವರ ಬದುಕಿನ ಸಂಪೂರ್ಣ ಪರಿವರ್ತನೆಯ ಕೇಂದ್ರಬಿಂದುವಾಗಿ ಕಾಣಿಸುತ್ತಾರೆ. “ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು” ಎಂಬ ಮಾತು ಕೇವಲ ಭಕ್ತಿಯ ಅಭಿವ್ಯಕ್ತಿಯಲ್ಲ; ಅದು ಬದುಕನ್ನು ಬದಲಿಸಿದ ವೈಚಾರಿಕ ಗುರುವಿನ ಮೇಲಿನ ಕೃತಜ್ಞತೆಯ ನುಡಿಯಾಗಿದೆ. ಬಸವಣ್ಣನವರು ತಮ್ಮ ಅಂತರಂಗವನ್ನು ಶುದ್ಧಗೊಳಿಸಿ, ಭಕ್ತಿ, ಜ್ಞಾನ, ವೈರಾಗ್ಯದ ಬೆಳಕನ್ನು ತುಂಬಿ, ಬದುಕಿಗೆ ಹೊಸ ಬೆಳಕು ನೀಡಿದರು ಎಂಬ ಅನುಭಾವವನ್ನು ಮಾರಯ್ಯನವರು ಇಲ್ಲಿ ವ್ಯಕ್ತಪಡಿಸುತ್ತಾರೆ.
ರಾಜ್ಯ, ಅಧಿಕಾರ, ಆಸ್ತಿ ಮತ್ತು ಸಂಪತ್ತಿನ ಜಂಜಾಟದಲ್ಲಿದ್ದ ವ್ಯಕ್ತಿಯೊಬ್ಬರು ಕಾಯಕ, ದಾಸೋಹ, ಸಮಾನತೆ ಮತ್ತು ಅನುಭಾವದ ಬದುಕನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ಪರಿವರ್ತನೆಯಲ್ಲ. ಅದು ಆ ಕಾಲದ ಸಾಮಾಜಿಕ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ವೈಚಾರಿಕ ಹೆಜ್ಜೆಯಾಗಿತ್ತು. ಮೋಳಿಗೆ ಮಾರಯ್ಯನವರ ಬದುಕು ಈ ಪರಿವರ್ತನೆಯ ಜೀವಂತ ಉದಾಹರಣೆಯಾಗಿದೆ. ಶರಣರಿಗೆ ಕಾಯಕವೆಂದರೆ ಕೇವಲ ಜೀವನೋಪಾಯದ ಮಾರ್ಗವಾಗಿರಲಿಲ್ಲ. ಅದು ಆತ್ಮಗೌರವ, ಸ್ವಾವಲಂಬನೆ ಮತ್ತು ಸಮಾಜಸೇವೆಯ ಮಾರ್ಗವಾಗಿತ್ತು. ತಾವು ಮಾಡುವ ಕಾಯಕದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದು ಮತ್ತು ಗಳಿಸಿದ ಆದಾಯದಿಂದಲೇ ದಾಸೋಹದ ಮೂಲಕ ಹಂಚಿಕೊಳ್ಳುವುದು ಶರಣರ ಜೀವನದ ಪ್ರಮುಖ ಮೌಲ್ಯವಾಗಿತ್ತು. ಮಾರಯ್ಯನವರ ಕಟ್ಟಿಗೆ ಮಾರುವ ಕಾಯಕ ಇದೇ ತತ್ವದ ಪ್ರತೀಕವಾಗಿದೆ.
ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
ಮೋಳಿಗೆ ಮಾರಯ್ಯನ ಈ ಮೇಲಿನ ವಚನದಲ್ಲಿ ಬದುಕಿನ ಮಹತ್ತರ ಪರಿವರ್ತನೆಯ ಅನುಭವವಿದೆ. ತನ್ನೊಬ್ಬನಿಗಾಗಿ ಬದುಕದೆ, ಸಮಾಜಕ್ಕಾಗಿ ಬದುಕುವುದು. ಕಾಯಕದಲ್ಲಿ ನಿಷ್ಠೆ, ನಡೆ-ನುಡಿ ಸಿದ್ಧಾಂತದಲ್ಲಿ ಪ್ರಾಮಾಣಿಕತೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಮತ್ತು ಸಮಾಜದ ಒಳಿತಿಗಾಗಿ ದುಡಿಯುವ ಸಂಕಲ್ಪ ಅವರ ಬದುಕಿನ ಮೂಲತತ್ವಗಳಾಗಿದ್ದವು. ಅಷ್ಟೇ ಅಲ್ಲದೆ ಬದುಕು ಎಂದರೆ ಹೇಗೆ ಎಂಬ ತತ್ವ ಬಹಳ ಸರಳವಾಗಿ ನಿರೂಪಿಸಿದ್ದಾರೆ.
ಒಬ್ಬ ರಾಜನ ಬಳಿ ಅಧಿಕಾರ, ರಾಜಾಶ್ರಯ, ಚಿನ್ನಾಭರಣ, ವಜ್ರ ಭಂಡಾರ ಇದೆ. ಆನೆ, ಕುದುರೆಗಳಿಂದ ಕೂಡಿದ ಸೈನ್ಯ, ಆಸ್ತಿ, ಸಂಪತ್ತು, ಐಶ್ವರ್ಯ ಏನೆಲ್ಲ ಇದೆ. ಆದರೆ, ಆತನ ಜೀವಕ್ಕೆ ಅಗತ್ಯವಾಗಿರುವುದು ಊಟಕ್ಕೆ ಒಂದಿಷ್ಟು ಅಕ್ಕಿ, ಹಾಲು, ಮಲಗೋಕೆ ಅರ್ಧ ಮಂಚ ಅಷ್ಟೇ. ಉಳಿದ ಆಸ್ತಿ, ಅಧಿಕಾರ, ಸಿರಿ ಸಂಪತ್ತು ಇದ್ದರೂ ಅದು ಅರ್ಥಹೀನ. ಸಂಪತ್ತಿನ ಆಸೆಗೆ ನಂಬಿ ಹಾಳಾಗಬೇಡಿ ಎಂದು ಮಾರಯ್ಯ ಮಾನವ ಜನಾಂಗಕ್ಕೆ ಜೀವನ ಮಾರ್ಗದ ಸಂದೇಶದ ಮುಖಾಂತರ ಎಚ್ಚರಿಸುತ್ತಾರೆ.
ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಕೊನೆಗೆ ಸಾಯಲೇಬೇಕು. ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಂತಿಮವಾಗಿ ಈ ದೇಹ ಮಣ್ಣು ಸೇರುತ್ತದೆ. ತಾನೇ ಹೋದ ಮೇಲೆ ಈ ಐಶ್ವರ್ಯ, ಸಂಪತ್ತು, ವಜ್ರ ಭಂಡಾರ ಯಾರ ಪಾಲಾಗುವುದು ಎಂಬುದು ಯಾರಿಗಾದರೂ ಗೊತ್ತೆ? ಕೊನೆಗೆ ಹೆಂಡತಿ, ಮಕ್ಕಳು, ಬಂಧು-ಬಳಗ ಮತ್ತೊಬ್ಬರ ಸಂಗ ಸೇರುತ್ತಾರೆ. ಸತ್ತ ಜೀವ ಗಾಳಿಯಲಿ ಲೀನವಾಗುತ್ತದೆ ಎಂದು ಹೇಳುವ ಮಾರಯ್ಯ ಸಾವಿನ ಜೊತೆಗೆ ಬರುವವರು ಯಾರೂ ಇಲ್ಲ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ.
ಇದನ್ನೂ ಓದಿ : ವಚನ ಕಲ್ಯಾಣ | ಪರಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ!
ಜಗತ್ತಿನಲ್ಲಿ ಅದೆಷ್ಟೇ ಅಧಿಕಾರ, ಶ್ರೀಮಂತಿಕೆ ಇರುವವನೇ ಆಗಲಿ, ಜೀವಕ್ಕೆ ಜೀವ ಕೊಡುವ ತಾಯಿ, ಹೆಂಡತಿ, ಮಕ್ಕಳು, ಸ್ನೇಹಿತರು, ಬಂಧು-ಬಳಗ ಎನ್ನುವವರು ಸತ್ತ ವ್ಯಕ್ತಿಯೊಂದಿಗೆ ಯಾರೊಬ್ಬರೂ ಜೊತೆಯಾಗಿ ಸಾವನ್ನಪ್ಪಿದ ಉದಾಹರಣೆ ಸಿಗುವುದಿಲ್ಲ. ಯಾರೇ ಆಗಲಿ ಅವರು ಬದುಕಿನುದ್ದಕ್ಕೂ ಜೊತೆಯಾಗುವರೇ ವಿನಹಃ ಸಾವಿಗೆ ಜೊತೆಯಾಗುವvರು ಅಲ್ಲ ಎಂಬ ವಾಸ್ತವ ಸತ್ಯ ತೆರೆದಿಡುತ್ತಾರೆ.
ಬಸವಾದಿ ಶರಣರು ವೈಯಕ್ತಿಕ ಬದುಕಿಗಿಂತ ಸಾಮಾಜಿಕ ಪರಿವರ್ತನೆಗೆ ಹೆಚ್ಚು ಒತ್ತು ನೀಡಿದರು. ಅವರು ತಮ್ಮ ಅನುಭವಗಳನ್ನು ವಚನ ಮಾಧ್ಯಮ ಮೂಲಕ ಸಮಾಜದ ಮುಂದಿಟ್ಟರು. ಅಂಧಶ್ರದ್ಧೆ, ಅಜ್ಞಾನ, ಅಸಮಾನತೆ ಮತ್ತು ಅನ್ಯಾಯಗಳನ್ನು ಪ್ರಶ್ನಿಸಿ, ಅರಿವು, ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದರು. ಹೀಗಾಗಿ ಅವರ ವಚನಗಳು ಕೇವಲ ಧಾರ್ಮಿಕ ನುಡಿಗಳಲ್ಲ; ಅವು ಬದುಕಿನ ಮಾರ್ಗದರ್ಶಕ ಚಿಂತನೆಗಳಾಗಿವೆ.
ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
ಕಲ್ಯಾಣದಿಂದ ಶರಣರು ಚದುರಿಹೋದ ದಿನಗಳನ್ನು ತಮ್ಮ ವಚನ ಮುಖಾಂತರ ಸ್ಮರಿಸುವ ಮೋಳಿಗೆ ಮಾರಯ್ಯ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳನ್ನು ಕಣ್ಮುಂದೆ ಕಟ್ಟುವಂತೆ ಹೇಳುತ್ತಾರೆ. ಜಾತಿಸಂಕರವಾಯಿತು ಎಂಬ ಕಾರಣಕ್ಕೆ ಪಟ್ಟಭದ್ರ ಹಿತಾಶಕ್ತಿಗಳು ಶರಣರಿಗೆ ಹಿಂಸೆ ನೀಡಿದರು. ಅಷ್ಟೇ ಅಲ್ಲದೆ ಆನೆಯ ಕಾಲಿಗೆ ಕಟ್ಟಿ ಎಳೆಯೂಟ ಶಿಕ್ಷೆಗೆ ಒಳಪಡಿಸಿದರು. ಅದಾದ ಬಳಿಕ ಶರಣರು ಕಲ್ಯಾಣದಿಂದ ಚದುರಿ ಹೋದರು. ಮೋಳಿಗೆ ಮಾರಯ್ಯ ಆ ಕ್ಷಣವನ್ನು ಸ್ಮರಿಸಿ ಬರೆದಿರುವ ಈ ವಚನ ಇದು.

ಕೂಡಲಸಂಗಮದೆಡೆಗೆ ಬಸವಣ್ಣ, ಉಳುವಿಗೆ ಚನ್ನಬಸವಣ್ಣ, ಅಲ್ಲಮಪ್ರಭುದೇವ ಕದಳಿ ಕಡೆಗೆ ತೆರಳಿದರು. ಉಳಿದ ಶಿವಶರಣರು ತಮ್ಮ ಭಾವಕ್ಕೆ ತಕ್ಕಂತೆ ನಾನಾ ಕಡೆಗೆ ತೆರಳಿದರು. ಹಾಗೇ ನನಗೊಂದು ದಾರಿ ಹೇಳು ಎಂದು ಆರಾಧ್ಯದೇವರಲ್ಲಿ ಪ್ರಾರ್ಥಿಸುತ್ತಾನೆ ಮಾರಯ್ಯ.
ಇದನ್ನೂ ಓದಿ : ವಚನ ಕಲ್ಯಾಣ | ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರಒಡವೆ ಎಂದು ಅರಿಯಬೇಕು!
ಮೋಳಿಗೆ ಮಾರಯ್ಯನವರ ವಚನ ಸಂದೇಶ ಪ್ರಸ್ತುತವಾಗಿದೆ. ಅಧಿಕಾರ, ಸಂಪತ್ತು, ಐಶ್ವರ್ಯ ದುರಾಸೆಗಾಗಿ ಅದೆಷ್ಟೋ ದುರ್ಘಟನೆಗಳು ಸಂಭವಿಸುತ್ತಿವೆ. ಅಷ್ಟೇ ಏಕೆ ಧಾರ್ಮಿಕ ಕೇಂದ್ರಗಳೂ ಇದಕ್ಕೆ ಹೊರತ್ತಾಗಿಲ್ಲ. ʼಆಸೆಯೆಂಬುದು ಭವದ ಬೀಜ; ನಿರಾಸೆಯೆಂಬುದು ನಿತ್ಯಮುಕ್ತಿʼ ಎಂಬ ವಚನದ ಮುಖಾಂತರ ಆಸೆಯ ಕುರಿತು ಹೇಳುವ ಶರಣೆ ಕಾಳವ್ವೆ ಅರಿವಿನ ಪ್ರಜ್ಞೆ ವಿಸ್ತರಿಸುತ್ತಾಳೆ. ಅರಿವು, ಮಾನವೀಯತೆ, ಸಮಾನತೆ ಮತ್ತು ಕಾಯಕಕ್ಕೆ ಮೌಲ್ಯ ನೀಡುವ ಸಮಾಜ ನಿರ್ಮಾಣವಾಗಬೇಕು. ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು. ವಚನಕಾರರಂತೆ ಸಮಾಜದ ಒಳಿತನ್ನು ಬಯಸುವ ಮನಸ್ಸುಗಳ ಸಂಖ್ಯೆ ಅಧಿಕವಾಗಬೇಕಿದೆ.
ಮೋಳಿಗೆ ಮಾರಯ್ಯನವರು ಬಸವಣ್ಣನವರನ್ನು ಗುರು, ಲಿಂಗ, ಜಂಗಮವಾಗಿ ಕಂಡ ಅನುಭಾವದ ನುಡಿಗಳು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತವೆ. ನಿಜವಾದ ಗುರುವು ನಮ್ಮ ಬದುಕನ್ನು ಬದಲಿಸಬೇಕು; ನಿಜವಾದ ಜ್ಞಾನವು ನಮ್ಮ ಅಂತರಂಗವನ್ನು ಬೆಳಗಿಸಬೇಕು; ನಿಜವಾದ ಭಕ್ತಿಯು ಸಮಾಜದ ಒಳಿತಿನತ್ತ ನಮ್ಮನ್ನು ಕರೆದೊಯ್ಯಬೇಕು. ಇದೇ ಶರಣರ ಚಿಂತನೆಯ ಜೀವಾಳ. ಶರಣ ಮಾರ್ಗದತ್ತ ನಾವೆಲ್ಲರೂ ಸಾಗೋಣ.
ಮೋಳಿಗೆ ಮಾರಯ್ಯ ದಂಪತಿಯ ಗವಿ ಹುಮನಾಬಾದ್ ತಾಲೂಕಿನ ಮೋಳಕೆರಾ ಗ್ರಾಮದ ಹೊರವಲಯದಲ್ಲಿದೆ. ಮೋಳಿಗೆ ಮಾರಯ್ಯ ಶರಣ ಅಲ್ಲಿ ಕಾಯಕ ಕೈಗೊಂಡ ಹಿನ್ನೆಲೆ ಆ ಊರಿಗೆ ಮೋಳಕೆರಾ ಎಂದು ಹೆಸರು ಬಳಕೆಯಲ್ಲಿ ಬಂದಿರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



