ರಾಜ್ಯದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಹಾಗೂ ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ವಾಣಿಜ್ಯ ಬಳಕೆಯ LPG ಪೂರೈಕೆಯ ಮೇಲೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಿದೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾದಲ್ಲಿ, ಹೋಟೆಲ್ ಮಾಲೀಕರು ಸಹಾಯವಾಣಿ ಅಥವಾ ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು ಎಂದು ರಾಜ್ಯ ಮಟ್ಟದ ಸಂಯೋಜಕ ಸಿದ್ಧಾರ್ಥ್ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ವಾಣಿಜ್ಯ LPG ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು. ಇದರಿಂದಾಗಿ ಹೋಟೆಲ್‌ಗಳು ಮೆನು ಕಾರ್ಡ್‌ನಲ್ಲಿ ಬದಲಾವಣೆ, ಬೆಲೆ ಏರಿಕೆ ಮತ್ತು ಸಮಯದ ಮಿತಿಯನ್ನು ಹೇರಬೇಕಾದ ಅನಿವಾರ್ಯತೆ ಇತ್ತು. ಈಗ ಈ ಸಮಸ್ಯೆ ದೂರವಾಗಿದ್ದು, ಇಲ್ಲಿವರೆಗೆ ಮೆನುಗಳಲ್ಲಿ ಲಭ್ಯವಿಲ್ಲದ ಖಾದ್ಯಗಳು ಇನ್ನು ಮುಂದೆ ಗ್ರಾಹಕರಿಗೆ ಸಿಗಲಿವೆ. ಮೇ ತಿಂಗಳಲ್ಲಿಯೇ ಶೇ. 70ರಷ್ಟು ನಿರ್ಬಂಧ ಸಡಿಲಿಕೆಯಾಗಿತ್ತು, ಈಗ ಬಾಕಿ ಇದ್ದ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದೆ.
ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಅವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ಒಂದೆಡೆ ನಿರ್ಬಂಧ ತೆಗೆದಿದ್ದರೂ, ಮತ್ತೊಂದೆಡೆ ಸಿಲಿಂಡರ್ ದರವನ್ನು ಸುಮಾರು 900 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. “ಪೂರೈಕೆ ಸುಗಮಗೊಳಿಸುವುದು ಎಷ್ಟು ಮುಖ್ಯವೋ, ದರ ಏರಿಕೆಯನ್ನು ಹಿಂಪಡೆದು ಹೊರೆ ಕಡಿಮೆ ಮಾಡುವುದು ಅಷ್ಟೇ ಮುಖ್ಯ” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಗತ್ಯ ವಸ್ತುಗಳ ಕಾಯ್ದೆಯಡಿ ವಿಧಿಸಲಾಗಿದ್ದ ಕಠಿಣ ನಿಯಮಗಳನ್ನು, ದೇಶೀಯ ಉತ್ಪಾದನೆ ಹೆಚ್ಚಳ ಮತ್ತು ಸುಧಾರಿತ ಆಮದು ವ್ಯವಸ್ಥೆಯ ಕಾರಣದಿಂದಾಗಿ ಸರ್ಕಾರ ಸರಳೀಕರಿಸುತ್ತಿದೆ. ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 40 ಟಿಎಂಟಿ (TMT) ಮಟ್ಟದಲ್ಲಿ ಕಾಯ್ದುಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ.
ಇದನ್ನೂ ಓದಿ: ʼಗಾಡ್ಜಿಲ್ಲಾ ಎಲ್ ನಿನೋʼ ಪ್ರಭಾವ: ರಾಜ್ಯದ ನೂರಾರು ತಾಲೂಕುಗಳಿಗೆ ʼಬರʼಸಿಡಿಲು!
ಬಲ್ಕ್ ಟ್ಯಾಂಕರ್‌ಗಳ ವಿಷಯದಲ್ಲಿ ಕೆಲವು ತಾಂತ್ರಿಕ ನಿಯಮಗಳು ಮುಂದುವರಿದರೂ, ಒಟ್ಟಾರೆಯಾಗಿ ಎಲ್‌ಪಿಜಿ ಲಭ್ಯತೆ ಹೆಚ್ಚಾಗಿರುವುದರಿಂದ ಹೋಟೆಲ್ ಉದ್ಯಮದಲ್ಲಿನ ಅನಿಶ್ಚಿತತೆ ದೂರವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೋಟೆಲ್ ದರಗಳ ಮೇಲೆ ಉಂಟಾಗಿದ್ದ ಒತ್ತಡ ಕಡಿಮೆಯಾಗುವ ಆಶಾಭಾವನೆ ಮೂಡಿದೆ.




