ಪಂಚಮಸಾಲಿ ಪೀಠಗಳ ಗೊಂದಲ- ಭಾಗ 17 | ಸಂಘಟನೆಯಲ್ಲಿ ರಾಜಕಾರಣಿಗಳು ನೀತಿ ನಿರೂಪಕರಾಗಿರಬಾರದು

Date:

ಯಾವುದೇ ಸಮುದಾಯದ ಸಂಘ, ಸಂಸ್ಥೆಗಳು ಸಮಗ್ರವಾಗಿ ಸಮುದಾಯ ಕೇಂದ್ರಿತ, ಸಮುದಾಯ ನಿಯಂತ್ರಿತ ಹಾಗು ಸಮುದಾಯ ಚಾಲಿತವಾಗಿರಬೇಕು. ಹಾಗಾದಾಗ ಮಾತ್ರ ಆ ಸಂಸ್ಥೆ ಸಮುದಾಯದ ಹಿತ ಕಾಪಾಡಬಲ್ಲುದು. ಸಮುದಾಯದ ಸಂಘ ಸಂಸ್ಥೆಗಳು ಆಯಾ ಸಮುದಾಯದ ಶ್ರೀಮಂತ ಉದ್ಯಮಿಗಳು ಮತ್ತು ರಾಜಕಾರಣಿಗಳ ಕೈಗೊಂಬೆಯಾದರೆ ಅವು ಸಮುದಾಯದ ಹಿತವನ್ನು ಯಾವತ್ತೂ ಕಾಪಾಡಲಾರವು. ಲಿಂಗಾಯತರು ಕಟ್ಟಿರುವ ಬಹುತೇಕ ಸಂಘ-ಸಂಸ್ಥೆಗಳು ಈ ಕಾರಣದಿಂದ ವಿಫಲಗೊಂಡಿವೆ.

- Advertisement -

ಇಂದಿನಿಂದ ಪಂಚಮಸಾಲಿ ಸಂಘಟನೆ ಹಾಗು ಪೀಠಗಳ ವರ್ತಮಾನದ ಗೊಂದಲಗಳ ಕುರಿತು ಸಮಗ್ರವಾಗಿ ಚಿಂತಿಸೋಣ. ಯಾವುದೇ ಒಂದು ಧರ್ಮ, ಸಮಾಜ, ವರ್ಗ, ಉಪ ವರ್ಗ ಇತ್ಯಾದಿ ತಮಗೊಂದು ಸಂಘಟನೆ ಮತ್ತು ಗುರುಪೀಠ ಬೇಕು ಎಂದು ಬಯಸುವುದು ಸ್ವಾಭಾವಿಕ ಸಂಗತಿ. ಆದರೆ ಸಂಘಟನೆ ಏತಕ್ಕೆ ಬೇಕು, ಆ ಸಂಘಟನೆಯ ಸ್ವರೂಪ ಹೇಗಿರಬೇಕು, ಅದರ ಸಂರಚನೆ ಹೇಗಿರಬೇಕು, ಅದನ್ನು ಯಾರು ಮುನ್ನಡೆಸಬೇಕು, ಅದರ ಧ್ಯೇಯೋದ್ದೇಶಗಳು ಹೇಗಿರಬೇಕು, ಸಂಘಟನೆಯ ಅಲ್ಪಾವಧಿ ಹಾಗೂ ದೀರ್ಘಾವಧಿ ಕಾರ್ಯಪ್ರಣಾಳಿ ಹೇಗಿರಬೇಕು ಎನ್ನುವುದರ ಕುರಿತು ಸಂಪೂರ್ಣವಾಗಿ ನಿರ್ಧರಿಸದೆ ಕೇವಲ ಪ್ರತಿಷ್ಠೆ ಮತ್ತು ಸ್ವಾರ್ಥಕ್ಕಾಗಿ ಸಂಘಟನೆ ಕಟ್ಟಿದರೆ ಆ ಸಂಘಟನೆ ಬಹು ಬೇಗ ನಾಶವಾಗುತ್ತದೆ ಅಥವಾ ಅಡ್ಡ ಹಾದಿ ಹಿಡಿಯುತ್ತದೆ. ಮತ್ತೊಂದು ಮಾತು; ಸಂಘಟನೆ ಕಟ್ಟುವಾಗ ಪದಾಧಿಕಾರಿಗಳು ಹಾಗು ಕಾರ್ಯಕರ್ತರಿಗೆ ಕೇಡರ್ ಆಧಾರಿತ ತರಬೇತಿಯ ಅಗತ್ಯವಿರುತ್ತದೆ. ಸಂಘಟನೆಯ ನೇತೃತ್ವ, ಪದಾಧಿಕಾರಿ, ಮತ್ತು ಕಾರ್ಯಕರ್ತರು ತರಬೇತಿ ಹೊಂದದಿದ್ದರೆ ಆ ಸಂಘಟನೆಗಳು ನಿರ್ಧಾರಿತ ಗುರಿ ತಲುಪದೆ ಅಥವಾ ಅಂದುಕೊಂಡಿದ್ದನ್ನು ಸಾಧಿಸಲಾಗದೆ ಬಹು ಬೇಗನೆ ನಾಶವಾಗುತ್ತವೆ. ಈ ಮಾತು ಆಯಾ ಸಮುದಾಯಗಳ ಗುರು ಪೀಠಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ಕುರಿತು ಒಂದು ಪ್ರಮುಖ ಉದಾಹರಣೆಯನ್ನು ನಾವು ನೋಡಬಹುದು;

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ವ್ಯವಸ್ಥಿತ ಕ್ಯಾಡರ್ ಆಧಾರಿತ ಸಂಸ್ಥೆ. ಅದು ಭಾರತದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಮತ್ತಿತರ ಕ್ಷೇತ್ರಗಳ ಮೇಲೆ ಬ್ರಾಹ್ಮಣರ ಯಜಮಾನಿಕೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸ್ಥಾಪನೆಯಾಗಿದೆ. ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಅದು ಸುದೀರ್ಘ ಒಂದು ಶತಮಾನ ಸಂಘಟಿತಗೊಂಡಿದೆ. ಅದು ತನ್ನ ಉದ್ದೇಶ ಈಡೇರಿಕೆಗಾಗಿ ಯಾವ ವಾಮ ಮಾರ್ಗ ಬೇಕಾದರು ತುಳಿಯಬಲ್ಲದು ಮತ್ತು ಯಾರನ್ನು ಬೇಕಾದರು ಬಳಸಿ ಬಿಸಾಡುತ್ತದೆ. ಹಾಗಾಗಿ ಈಗ ಆ ಸಂಘಟನೆಯ ಬ್ರಾಹ್ಮಣ ರಾಜ್ಯದ ಕನಸು ನನಸಾಗಿದೆ. ಒಂದು ಸಂಘಟನೆ ತನ್ನ ಉದ್ದೇಶಗಳ ಈಡೇರಿಕೆಗಾಗಿ ನ್ಯಾಯಯುತ ಮಾರ್ಗ ತುಳಿಯಬೇಕು, ಸಂಘದ ಮಾರ್ಗ ನ್ಯಾಯದ ಮಾರ್ಗವಲ್ಲ, ಆದರೆ ಅದರ ಸಂಘಟನಾ ಕೌಶಲ್ಯ ಮತ್ತು ತಂತ್ರಗಾರಿಕೆ ನಮಗೆ ಆದರ್ಶವಾಗಬೇಕು. ಬಸವಣ್ಣನವರು ಕಟ್ಟಿದ ಶರಣರ ಸಂಘಟನೆ ನ್ಯಾಯ ಮಾರ್ಗದಲ್ಲಿ ನಡೆದ ಕ್ಯಾಡರ್ ಆಧಾರದಲ್ಲಿ ತರಬೇತಿ ಹೊಂದಿದ ಸಂಘಟನೆಯಾಗಿತ್ತು, ಅದು ನಮಗೆ ಎಲ್ಲಾ ರೀತಿಯಲ್ಲೂ ಮಾದರಿಯಾಗಬೇಕು. ನಮ್ಮ ಸಂಘಟನೆಗಳು ಅಧ್ಯಯನ ಮತ್ತು ತರಬೇತಿ ಆಧಾರದಲ್ಲಿ ಕಟ್ಟದಿದ್ದರೆ ನಿರ್ಧಾರಿತ ಗುರಿಯತ್ತ ಸಾಗುವುದು ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ದೇಶದ ಕಾನೂನಿನ ಅಡಿಯಲ್ಲಿ ನೋಂದಣಿ ಆಗದೆ ಭೂಗತ ಹಾಗು ವಿದ್ವಂಸಕ ಚಟುವಟಿಕೆಯಲ್ಲಿ ತೊಡಗಿರುವುದು ಬೇರೆ ವಿಷಯ.

ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಎಲ್ಲಾ ಲೆವೆಲ್ ನ ಸಂಘಟನೆಯಲ್ಲಿ ಕಡ್ಡಾಯವಾಗಿ ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಬೌದ್ಧಿಕ ವಿಭಾಗ, ಶಾರೀರಿಕ ವಿಭಾಗ, ಸಂಪರ್ಕ ವಿಭಾಗ ಮತ್ತು ಪ್ರಚಾರಕ ವಿಭಾಗ. ಬೌದ್ಧಿಕ ವಿಭಾಗ ಕೇವಲ ಬ್ರಾಹ್ಮಣರಿಗೆ ಮಾತ್ರ ಮೀಸಲು, ಆತ ಸಂಘದ ಮೇಲ್ಮಟ್ಟದಲ್ಲಿ ರೂಪಿಸುವ ಹುನ್ನಾರಗಳನ್ನು ಕೆಳಮಟ್ಟದಲ್ಲಿ ಕಾರ್ಯರೂಪಕ್ಕೆ ತರಲು ಬ್ರಾಹ್ಮಣೇತರರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾನೆ, ಅಥವಾ ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದಂತೆ ಆತನೆ ಸ್ವತಃ ಹುನ್ನಾರಗಳನ್ನು ಹೆಣೆಯುತ್ತಾನೆ. ಇನ್ನು ಶಾರೀರಿಕ ವಿಭಾಗವನ್ನು ಯಾರು ಬೇಕಾದರು ಮುನ್ನೆಡೆಸಬಹುದು, ವಿಶೇಷವಾಗಿ ಭೌತಿಕವಾಗಿ ಬಲಶಾಲಿಗಳಾಗಿದ್ದು ದಂಗೆ, ದೊಂಬಿ, ಕೋಮು ಗಲಭೆ, ಗಲಾಟೆ, ಹೊಡೆದಾಟಗಳಲ್ಲಿ ಭಾಗವಹಿಸಿ ಮೊಕದ್ದಮೆ ಎದುರಿಸಲು ಸಿದ್ಧರಾಗಿರುವರನ್ನು ಈ ವಿಭಾಗಕ್ಕೆ ನೇಮಿಸಲಾಗುತ್ತದೆ. ಸಂಪರ್ಕ ವಿಭಾಗ ಸಹ ಯಾರು ಬೇಕಾದರೂ ಮುನ್ನಡೆಸಹುದು, ಆದರೆ ಅದರ ಮುಖ್ಯಸ್ಥ ಎಲ್ಲಾ ಚಟುವಟಿಕೆಗಳಿಗೆ ಸಂಪನ್ಮೂಲ ಕ್ರೂಡೀಕರಣ ಹಾಗು ಸಂಪರ್ಕದ ಮೂಲಕ ಕಾರ್ಯ ನೆರವೇರಿಸುವ ಕೌಶಲ್ಯ ಹೊಂದಿರಬೇಕು. ಕೊನೆಯದಾಗಿ ಪ್ರಚಾರಕ ಹುದ್ದೆ ಯಾರು ಬೇಕಾದರೂ ಹೊಂದಬಹುದು. ಸಂಘದಲ್ಲಿ ಯಾವುದಕ್ಕೂ ಲಿಖಿತ ದಾಖಲೆಗಳಿರುವುದಿಲ್ಲ, ಲಿಖಿತವಲ್ಲದ ಮೌಖಿಕ ಆದೇಶ, ನಿರ್ದೇಶನಗಳ ಆಧಾರದಲ್ಲಿ ಸಂಘ ಕಾರ್ಯ ನಿರ್ವಹಿಸುತ್ತದೆ.

Advertisements

ಸಂಘದಲ್ಲಿ ನಾಗಪುರ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕೆಳಮಟ್ಟದ ಶಾಖೆಗಳು ಪ್ರಶ್ನಿಸದೆ ಅನುಷ್ಠಾನಗೊಳಿಸಬೇಕು. ಸಂಘದ ಆರ್ಥಿಕ, ರಾಜಕೀಯ ಮತ್ತು ಇತರ ಚಟುವಟಿಕೆಗಳು ಸಂಪೂರ್ಣವಾಗಿ ಗುಪ್ತ ಹಾಗು ಬೇನಾಮಿ ಆಗಿರುತ್ತವೆ. ೨೦೨೫ ರಲ್ಲಿ ಮಹಾರಾಷ್ಟ್ರದ ಐದು ಜನ ಚಿತ್ಪಾವನ ಬ್ರಾಹ್ಮಣರು ಸೇರಿ ಕಟ್ಟಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಕಾರ್ಯಕರ್ತರನ್ನು ಬ್ರಾಹ್ಮಣವಾದ, ಮತ್ತು ವೈದಿಕರ ಚಾತುರ್ವಣ ಸಿದ್ಧಾಂತ ಆಧಾರಿತ ವ್ಯವಸ್ಥಿತ ತರಬೇತಿಯ ಮೂಲಕ ಸಿದ್ಧಗೊಳಿಸುತ್ತದೆ. ಮೇಲ್ನೋಟಕ್ಕೆ ಅದು ರಾಷ್ಟ್ರಭಕ್ತಿ ಬೆಳೆಸುವಂತೆ, ಮುಸ್ಲಿಮ್ ವಿರೋಧಿಯಾಗಿ ಕಂಡರೂ ಅದರ ಅಂತರಂಗದ ಉದ್ದೇಶ ಮುಸ್ಲಿಮರ ಭಯ ತೋರಿಸಿ ಈ ನೆಲದ ಬಹುಜನರನ್ನು ಸಾಂವಿಧಾನಿಕ ಸೌಲಭ್ಯಗಳಿಂದ ವಂಚಿಸುವುದು ಮತ್ತು ಅವರನ್ನು ಬ್ರಾಹ್ಮಣ ನಿಯಂತ್ರಿತ ವ್ಯವಸ್ಥೆಯ ಗುಲಾಮರನ್ನಾಗಿ ಇರಿಸಿಕೊಳ್ಳುವುದು. ಅದು ಕ್ಯಾಡರ್ ಆಧಾರಿತ ಸಂಘಟನೆ ಆಗಿರುವುದರಿಂದ ನೂರು ವರ್ಷಗಳಲ್ಲಿ ದೇಶದಲ್ಲಿ “ಬ್ರಾಹ್ಮಣ ರಾಜ್ಯ” ತರುವಲ್ಲಿ ಯಶಸ್ವಿ ಆಗಿದೆ. ೧೯೦೪ ರಲ್ಲಿ, ಅಂದರೆ ಸಂಘಕ್ಕಿಂತ ೨೧ ವರ್ಷ ಮೊದಲು ಸ್ಥಾಪನೆಯಾದ ಮತ್ತು ಯಾವ ಸ್ಪಷ್ಟ ಉದ್ದೇಶಗಳಿಲ್ಲದ, ತನ್ನ ನೇತೃತ್ವ, ಪದಾಧಿಕಾರಿಗಳು ಹಾಗು ಕಾರ್ಯಕರ್ತರಿಗೆ ಯಾವುದೇ ಬಗೆಯಲ್ಲಿ ತರಬೇತಿ ನೀಡದ, ಯಾವುದೇ ದೀರ್ಘಾವಧಿ ಕಾರ್ಯಪ್ರಣಾಳಿ ಹೊಂದದ ಅಖಿಲ ಭಾರತ ವೀರಶೈವ ಮಹಾಸಭಾ ಕರ್ನಾಟಕದಲ್ಲಿ ಈಗಾಗಲೆ ಎಲ್ಲಾ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿದ್ದ ಲಿಂಗಾಯತ ಪ್ರಾಬಲ್ಯವನ್ನು ವ್ಯವಸ್ಥಿತವಾಗಿ ನಾಶ ಮಾಡಲು ಕಾರಣೀಭೂತವಾಗಿದೆ.

ಯಾವುದೆ ಸಮುದಾಯದ ಸಂಘ, ಸಂಸ್ಥೆಗಳು ಸಮಗ್ರವಾಗಿ ಸಮುದಾಯ ಕೇಂದ್ರಿತ, ಸಮುದಾಯ ನಿಯಂತ್ರಿತ ಹಾಗು ಸಮುದಾಯ ಚಾಲಿತವಾಗಿರಬೇಕು. ಹಾಗಾದಾಗ ಮಾತ್ರ ಆ ಸಂಸ್ಥೆ ಸಮುದಾಯದ ಹಿತ ಕಾಪಾಡಬಲ್ಲುದು. ಸಮುದಾಯದ ಸಂಘ ಸಂಸ್ಥೆಗಳು ಆಯಾ ಸಮುದಾಯದ ಶ್ರೀಮಂತ ಉದ್ಯಮಿಗಳು ಮತ್ತು ರಾಜಕಾರಣಿಗಳ ಕೈಗೊಂಬೆಯಾದರೆ ಅವು ಸಮುದಾಯದ ಹಿತವನ್ನು ಯಾವತ್ತೂ ಕಾಪಾಡಲಾರವು. ಲಿಂಗಾಯತರು ಕಟ್ಟಿರುವ ಬಹುತೇಕ ಸಂಘ-ಸಂಸ್ಥೆಗಳು ಈ ಕಾರಣದಿಂದ ವಿಫಲಗೊಂಡಿವೆ. ಅಖಿಲ ಭಾರತ ವೀರಶೈವ ಮಹಾಸಭಾ ವಿಫಲ ಆಗಿದ್ದು ಈ ಕೆಳಗಿನ ಮೂರು ಕಾರಣಗಳಿಂದ; ಒಂದು: ಬಹುಶಃ ಈ ಸಂಘಟನೆಯನ್ನು ಕಟ್ಟಲು ಪ್ರೇರಣೆಯಾದವರ ಅಂತರಂಗದಲ್ಲಿ ಬೇರೆ ಯಾವುದೊ ಹಿಡನ್ ಉದ್ದೇಶ ಇತ್ತು, ಮತ್ತು ಅದನ್ನು ಬಹಿರಂಗದಲ್ಲಿ ಕಾರ್ಯ ಮಾಡುವ ಸಂಸ್ಥಾಪಕ ಸದಸ್ಯರಿಗೆ ಗ್ರಹಿಸಲು ಆಗಲಿಲ್ಲ, ಇಲ್ಲವೆ ಈ ಸಂಸ್ಥೆ ಯಾವುದೊ ತಾತ್ಕಾಲಿಕ ಹಾಗು ಸಿಮಿತ ಉದ್ದೇಶದಿಂದ ಕಟ್ಟಲಾಯಿತು. ಎರಡು: ಕಟ್ಟಿದ ಮೇಲೆ ಈ ಸಂಸ್ಥೆಯು ಬಸವಾದಿ ಶರಣರ ಆಶಯದಂತೆ ಕ್ಯಾಡರ್ ಆಧಾರದಲ್ಲಿ ಸಂಘಟನೆಗೊಳ್ಳದೆ, ಶರಣರ ಆಶಯಗಳಿಗೆ ವಿರುದ್ಧವಾದ ನಡೆಯನ್ನು ತನ್ನದಾಗಿಸಿಕೊಂಡಿತು. ಮೂರು: ಆನಂತರ ಈ ಸಂಸ್ಥೆಯು ಲಿಂಗಾಯತ ಸಮುದಾಯದ ಶ್ರೀಮಂತ ಉದ್ಯಮಿಗಳು ಹಾಗು ರಾಜಕಾರಣಿಗಳ ನಿಯಂತ್ರಣಕ್ಕೆ ಸೇರಿ, ಅದು ರಾಜಕಾರಣಿಗಳ ಹಿತಾಸಕ್ತಿಯ ಕೇಂದ್ರವಾಗಿ ಬದಲಾಯಿತು.

ಯಾವುದೇ ಸಮುದಾಯದ ಸಂಘಟನೆಗಳು ಆ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಚುನಾಯಿತ ರಾಜಕಾರಣಿಗಳಿಗೆ ಸನ್ಮಾನ ಮತ್ತು ವಧು-ವರರ ಮೇಳಗಳಿಗೆ ತನ್ನ ಕಾರ್ಯ ಚಟುವಟಿಕೆಗಳನ್ನು ಸಿಮಿತಗೊಳಿಸಿಕೊಂಡಿದೆ ಎಂದರೆ ಆ ಸಂಘಟನೆಗಳು ತಮ್ಮ ಸಮುದಾಯದ ದೀರ್ಘಾವಧಿ ಸಮಸ್ಯೆಗಳ ಅಥವಾ ಅಭಿವೃದ್ಧಿಯ ಕುರಿತು ಅರಿವು ಹೊಂದಿಲ್ಲ ಎಂದರ್ಥ. ಹಾಗಾಗಿ ಸಮುದಾಯದ ಸಂಘಟನೆಗಳ ಮುಖ್ಯ ಕಾರ್ಯಪ್ರಣಾಳಿಕೆಯು ಸಮುದಾಯದ ಸಾಮಾನ್ಯ ಜನರ ಕಲ್ಯಾಣದ ಉದ್ದೇಶ ಹೊಂದಿರಬೇಕೆ ಹೊರತು ಆ ಸಮುದಾಯದ ಶ್ರೀಮಂತ ಉದ್ಯಮಿಗಳು ಹಾಗು ರಾಜಕಾರಣಿಗಳ ಹಿತಾಸಕ್ತಿಯನ್ನು ಕಾಯುವ ಉದ್ದೇಶವನ್ನಲ್ಲ. ಇದನ್ನು ಗಮನವಿಟ್ಟು ನೋಡಿದಾಗ ವೀರಶೈವ ಮಹಾಸಭಾ ಇಂದು ಯಾರ ನಿಯಂತ್ರಣದಲ್ಲಿದೆ, ಯಾರ ಪರವಾಗಿ ಕಾರ್ಯ ಮಾಡುತ್ತಿದೆ ಮತ್ತು ಸಮುದಾಯದ ಹಿತ ಕಾಯುವಲ್ಲಿ ಏತಕ್ಕೆ ನಿರಂತರವಾಗಿ ವಿಫಲವಾಗುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬರುತ್ತದೆ. ಇನ್ನು ೧೯೯೦ ರ ನಂತರದ ದಿನಗಳಲ್ಲಿ ಪಂಚಮಸಾಲಿ ಸಂಘಟನೆಯ ಪರಿಕಲ್ಪನೆ ಏಕೆ ಮತ್ತು ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ಹಿರಿಯರಾದ ಜಿ. ಬಿ. ಪಾಟೀಲರು ತಮ್ಮ ಈ ದಿನ ಡಿಜಿಟಲ್ ಮಾಧ್ಯಮದ ಸರಣಿ ಲೇಖನಗಳಲ್ಲಿ ಬರೆಯುತ್ತಿದ್ದಾರೆ, ಆದ್ದರಿಂದ ನಾನು ಆಗ ವಿಷಯದ ಕುರಿತು ಹೆಚ್ಚಿಗೆ ಬರೆಯುವುದಿಲ್ಲ. ಪಂಚಮಸಾಲಿ ಸಂಘಟನೆ ಮಾಡಲೇಬಾರದಿತ್ತು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ.

ಆದರೆ ಹೇಗೆ ಮಾಡಬಹುದಿತ್ತು ಅಥವಾ ಹೇಗೆ ಮಾಡಬಾರದಿತ್ತು ಎಂದು ಯಾರು ಬೇಕಾದರೂ ವಿಮರ್ಶಿಸಬಹುದು. ಅಸಲಿಗೆ ಪಂಚಮಸಾಲಿ ಸಂಘಟನೆ ಮಾಡುವ ಮುಂಚೆ ಬಹುಶಃ ಆಗ ಆ ಉಪವರ್ಗದ ಜನರ ಜನಸಂಖ್ಯೆಯನ್ನು ಪರಿಗಣಿಸಿರುವ ಸಾಧ್ಯತೆಗಳಿವೆಯೇ ಹೊರತು ಆ ಉಪವರ್ಗದ ಸಮಗ್ರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿರುವುದು ಅನುಮಾನ. ಒಂದು ಉಪವರ್ಗದ ಸಂಪೂರ್ಣ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ನಂತರ ಅದಕ್ಕೆ ಒಂದು ಸಂಘಟನೆಯ ಅಗತ್ಯವಿದೆಯೆ, ಇಲ್ಲವೆ ಎನ್ನುವುದು ನಿರ್ಧಾರವಾಗಬೇಕು. ಪಂಚಮಸಾಲಿ ಸಂಘಟನೆ ಮಾಡುವ ಸಂದರ್ಭದಲ್ಲಿ ಆ ಉಪವರ್ಗದ ರಾಜಕಾರಣಿಗಳು ಮಾತ್ರ ಮುಂಚೂಣಿಯಲ್ಲಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆ ಇಡೀ ಉಪವರ್ಗದ ಸುಶಿಕ್ಷಿತರು, ಶಿಕ್ಷಣ ತಜ್ಞರು, ಅಧಿಕಾರಿ ವರ್ಗ, ಚಿಂತಕರು, ಸಾಹಿತಿಗಳು, ರೈತ‌ಮುಖಂಡರು ಎಲ್ಲರನ್ನು ಒಳಗೊಂಡ ಒಂದು ಉನ್ನತ ಮಟ್ಟದ ಸಮಿತಿ ರಚನೆ ಆದಂತೆ ಕಂಡುಬರುವುದಿಲ್ಲ. ಹಾಗೆ ಸಮಿತಿ ರಚನೆ ಆಗಿದಾಗ್ಯೂ ಅಲ್ಲಿರುವ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮರೆತು, ಇಡೀ ಉಪವರ್ಗದ ಸರ್ವಾಂಗೀಣ ಕಲ್ಯಾಣದ ಉದ್ದೇಶಕ್ಕೆ ಬದ್ಧರಾಗಿರಬೇಕು. ಆ ಸಂಘಟನೆಯಲ್ಲಿ ರಾಜಕಾರಣಿಗಳು ಮಾರ್ಗದರ್ಶಕರಾಗಿರಬೇಕೆ ವಿನಃ ನೀತಿ ನಿರೂಪಕರಾಗಿರಬಾರದು.

ರಾಜಕಾರಣಿಗಳು ಮತ್ತು ಸಮುದಾಯದ ಮಠಾಧೀಶರು ಸಂಘಟನೆಯ ಶಿಸ್ತು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು. ಕೇವಲ ರಾಜಕಾರಣದಲ್ಲಿ ಪಂಚಮಸಾಲಿ ಉಪವರ್ಗದ ಶಾಸಕರ ಸಂಖ್ಯೆ ಹೆಚ್ಚಿಸಬೇಕು ಎನ್ನುವ ಚರ್ಚೆಯೊಂದಿಗೆ ಅಂದಿನ ರಾಯಚೂರು ಮತ್ತು ಇಂದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಿಂದ ಪಂಚಮಸಾಲಿ ಸಂಘಟನೆ ಕಟ್ಟುವ ಚರ್ಚೆ ಆರಂಭಗೊಂಡಿತು ಎಂದು ಜಿ. ಬಿ. ಪಾಟೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಿದ್ದಲ್ಲಿ ಪಂಚಮಸಾಲಿ ಸಂಘಟನೆ ಆರಂಭದಲ್ಲಿಯೇ ಸರಿಯಾದ ಮಾರ್ಗ ತುಳಿಯಲಿಲ್ಲ ಎಂದು ಅನುಮಾನವಿಲ್ಲದೇ ಹೇಳಬಹುದು. ಸಮುದಾಯದ ರಾಜಕಾರಣಿಗಳು ಬೆಳೆದರೆ ಆಗ ಅವರ ಕುಟುಂಬ ಮತ್ತು ಅವರ ಹತ್ತಿರದ ಒಂದಷ್ಟು ನೆಂಟರು ಬೆಳೆಯಬಹುದೇ ಹೊರತು ಇಡೀ ಸಮುದಾಯದ ಸಾಮಾನ್ಯ ಜನರು ಬೆಳೆಯಲಾರದು. ಪಂಚಮಸಾಲಿ ಉಪವರ್ಗದ ಸಂಘಟನೆಯ ಹುಟ್ಟಿನ ಕಾರಣವು ಇಡೀ ಉಪವರ್ಗದ ಉದ್ಧಾರದ ಅಥವಾ ಕಲ್ಯಾಣದ ಅಥವಾ ಕ್ಷೇಮಾಭಿವೃದ್ಧಿಯ ಉದ್ದೇಶ ಹೊಂದಿರಲಿಲ್ಲ ಎನ್ನುವುದನ್ನು ಮೇಲ್ನೋಟದಲ್ಲಿಯೇ ತಿರ್ಮಾನಿಸಬಹುದು. ಪಂಚಮಸಾಲಿ ಉಪವರ್ಗದ ೧೦ ಶಾಸಕರು ಆಯ್ಕೆಯಾಗಲಿ, ಅಥವಾ ೪೦ ಶಾಸಕರು ಆಯ್ಕೆಯಾಗಲಿ ಸಾಮಾನ್ಯ ಬಡ ಪಂಚಮಸಾಲಿಯ ಸ್ಥಿತಿಗತಿ ಎಂದೂ ಸುಧಾರಿಸಲಾರದು. ಸಂಘಟನೆಯ ರಾಜಕೀಯ ಉದ್ದೇಶವು ಆ ಸಮುದಾಯಕ್ಕೆ ಮಾರಕವೇ ಹೊರತು ಅನುಕೂಲವಂತೂ ಖಂಡಿತ ಅಲ್ಲ.

ಮುಂದುವರೆಯುವುದು…

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...