ನಿಲೇಕಣಿ ನೇತೃತ್ವದ ಈ ಸಮಿತಿಯು ರೋಗ ಒಂದಕ್ಕೆ ಮದ್ದಿನ್ನೊಂದು ನೀಡಿದಂತಿದೆ. ಶಿಕ್ಷಣ ತಜ್ಞರಿರಬೇಕಾದ ಜಾಗದಲ್ಲಿ ಕಾರ್ಪೊರೇಟ್ ಧಣಿಗಳು, ಕೇಸರಿ ಚಿಂತನೆಯ ಬೆಂಬಲಿಗರು, ಪೊಲೀಸರು ಮತ್ತು ಗುಜರಾತ್ ಲಾಬಿಯ ಅಧಿಕಾರಿಗಳನ್ನು ತುಂಬಿರುವುದು ಭಾರತದ ಶಿಕ್ಷಣ ವ್ಯವಸ್ಥೆಯ ಅಣಕವಾಗಿದೆ. ನೈಜ ಶಿಕ್ಷಣ ತಜ್ಞರನ್ನು ದೂರವಿಟ್ಟು ರಚಿಸಲಾಗಿರುವ ಈ ಸಮಿತಿಯಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ನ್ಯಾಯ ಸಿಗುವುದಿಲ್ಲ; ಬದಲಾಗಿ ಇದು ಉಳ್ಳವರ ಪರವಾದ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ಮತ್ತು ಶಿಕ್ಷಣವನ್ನು ಮತ್ತಷ್ಟು ವ್ಯಾಪಾರೀಕರಣಗೊಳಿಸುವ ವಿನಾಶಕಾರಿ ಹೆಜ್ಜೆಯಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ನೀಟ್ (NEET-UG) ಅಕ್ರಮಗಳ ಬೃಹತ್ ಹಗರಣವನ್ನು ಮುಚ್ಚಿಹಾಕಲು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುಸಿದಿರುವ ವರ್ಚಸ್ಸನ್ನು ಸರಿಪಡಿಸಲು ಕೇಂದ್ರ ಸರ್ಕಾರ ಇನ್ಫೋಸಿಸ್‌ನ ಮಾಜಿ ಅಧಿಕಾರಿ ನಂದನ್ ನಿಲೇಕಣಿ ನೇತೃತ್ವದಲ್ಲಿ ‘ಉನ್ನತ ಮಟ್ಟದ ಕಾರ್ಯಪಡೆ’ಯೊಂದನ್ನು ರಚಿಸಿದೆ. ಸತತ 36 ದಿನಗಳ ಕಾಲ ಬೀದಿಗಿಳಿದು ಹೋರಾಡಿದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದು ಶಿಕ್ಷಣ ಸಚಿವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಜನರ ಕಣ್ಣಿಗೆ ಮಣ್ಣೆರಚಲು ಸರ್ಕಾರ ಈ ಹೊಸ ನಾಟಕ ಶುರುಮಾಡಿದೆ. ಆದರೆ, ಈ ಸಮಿತಿಯ ಸ್ವರೂಪ ನೋಡಿದರೆ ಇದೊಂದು ಶಿಕ್ಷಣ ಸುಧಾರಣಾ ಸಮಿತಿಯಂತಿಲ್ಲ, ಬದಲಾಗಿ ‘ಬಿಜೆಪಿ ನಿಷ್ಠರ ಮತ್ತು ಆಡಳಿತಶಾಹಿಗಳ ರಕ್ಷಣಾ ಕೋಟೆ’ಯಂತೆ ಭಾಸವಾಗುತ್ತಿದೆ.
“ಶಿಕ್ಷಣ ತಜ್ಞರೆಲ್ಲಿದ್ದಾರೆ ಮೋದೀಜಿ?” ಎಂಬುದು ದೇಶಾದ್ಯಂತ ಈಗ ಕೇಳಿಬರುತ್ತಿರುವ ಅತ್ಯಂತ ಕಟುವಾದ ಪ್ರಶ್ನೆ. ದೇಶದ ಲಕ್ಷಾಂತರ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಇಂತಹ ಸೂಕ್ಷ್ಮ ಸಮಿತಿಯಲ್ಲಿ ಶೈಕ್ಷಣಿಕ ಮನೋವಿಜ್ಞಾನ, ಬೋಧನಾ ವಿಧಾನ ಮತ್ತು ತಳಮಟ್ಟದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅರಿವಿರುವ ಒಬ್ಬನೇ ಒಬ್ಬ ನೈಜ ಶಿಕ್ಷಣ ತಜ್ಞನಿಲ್ಲ. ಬದಲಾಗಿ, ಒಬ್ಬ ಕಾರ್ಪೊರೇಟ್ ಕುಳ, ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳು, ಒಬ್ಬ ನಿವೃತ್ತ ಐಪಿಎಸ್ (ಗೂಢಚಾರಿ), ಹಾಗೂ ಬಲಪಂಥೀಯ ಸೈದ್ಧಾಂತಿಕ ಒಲವುಳ್ಳವರನ್ನು ತುಂಬಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕೇಸರೀಕರಣ ಮತ್ತು ಖಾಸಗೀಕರಣ ಮಾಡುವ ಆಡಳಿತರೂಢರ ಹುನ್ನಾರ ಇಲ್ಲಿ ಎದ್ದು ಕಾಣುತ್ತಿದೆ.
ಸಮಿತಿಯ ಅಧ್ಯಕ್ಷ ನಂದನ್ ನಿಲೇಕಣಿ ಅವರೇನು ಶಿಕ್ಷಣ ತಜ್ಞರಲ್ಲ; ಅವರು ಸಂಪೂರ್ಣವಾಗಿ ಕಾರ್ಪೊರೇಟ್ ಜಗತ್ತಿನ ಪ್ರತಿನಿಧಿ. ಆಧಾರ್ (UIDAI) ಜಾರಿಗೆ ತಂದವರು. ಪರೀಕ್ಷಾ ವ್ಯವಸ್ಥೆಯೆಂದರೆ ಕೇವಲ ಸಾಫ್ಟ್‌ವೇರ್ ಮತ್ತು ಡೇಟಾಬೇಸ್ ಅಲ್ಲ, ಅದರಲ್ಲಿ ವಿದ್ಯಾರ್ಥಿಗಳ ಸಂವೇದನೆಗಳಿರುತ್ತವೆ. ಕಾರ್ಪೊರೇಟ್ ದೃಷ್ಟಿಕೋನದಿಂದಲೇ ಶಿಕ್ಷಣವನ್ನು ನೋಡುವ ನಿಲೇಕಣಿ ಅವರಿಂದ, ಡಿಜಿಟಲ್ ಕಂದಕದಿಂದ ಬಳಲುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಯಾವ ನ್ಯಾಯ ಸಿಗಲು ಸಾಧ್ಯ? ಇದು ಕೇವಲ ತಂತ್ರಜ್ಞಾನದ ಮುಖವಾಡ ತೊಡಿಸಿ ಶಿಕ್ಷಣವನ್ನು ಮಾರುಕಟ್ಟೆ ಸರಕಾಗಿಸುವ ತಂತ್ರವಷ್ಟೇ.

ಇನ್ನು ಸಮಿತಿಯಲ್ಲಿರುವ ಶೈಕ್ಷಣಿಕ ವಲಯದ ಪ್ರತಿನಿಧಿಗಳಾದ ಐಐಟಿ-ಮದ್ರಾಸ್ ನಿರ್ದೇಶಕ ಡಾ. ವಿ. ಕಾಮಕೋಟಿ ಅವರನ್ನು ವಿಮರ್ಶಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ‘ಗೋಮೂತ್ರ ಪ್ರಚಾರಕ’ ಸೈದ್ಧಾಂತಿಕ ಗುಂಪಿಗೆ ಸೇರಿದವರು ಎಂದು ಕಟುವಾಗಿ ಟೀಕಿಸುತ್ತಿವೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಾಂಸ್ಕೃತಿಕ ಅಜೆಂಡಾಗಳನ್ನು ಬೆಂಬಲಿಸುವ, ಪ್ರಾಚೀನ ಭಾರತದ ಹುಸಿ ವಿಜ್ಞಾನವನ್ನು ಮುನ್ನೆಲೆಗೆ ತರುವ ಇವರ ಹಲವು ಹೇಳಿಕೆಗಳು ಸಾಕಷ್ಟು ವಿವಾದಕ್ಕೀಡಾಗಿವೆ. ಆಧುನಿಕ ಮತ್ತು ವೈಜ್ಞಾನಿಕ ಶಿಕ್ಷಣದ ಅಗತ್ಯವಿರುವ ಈ ಕಾಲಘಟ್ಟದಲ್ಲಿ, ಇಂತಹ ನಿರ್ದಿಷ್ಟ ಸೈದ್ಧಾಂತಿಕ ಒಲವು ಹೊಂದಿರುವವರನ್ನು ಉನ್ನತ ಸಮಿತಿಗೆ ತಂದಿರುವುದು ಶಿಕ್ಷಣದ ಜಾತ್ಯತೀತ ಅಡಿಪಾಯವನ್ನೇ ಅಲುಗಾಡಿಸುವ ಸಂಚಾಗಿದೆ.

ಪರೀಕ್ಷಾ ಸುಧಾರಣಾ ಸಮಿತಿಗೆ ನಿವೃತ್ತ ಐಪಿಎಸ್ ಅಧಿಕಾರಿ, ಗುಪ್ತಚರ ಇಲಾಖೆಯ (IB) ಮಾಜಿ ಮುಖ್ಯಸ್ಥ ತಪನ್ ದೇಕಾ ಅವರ ಅಗತ್ಯವಾದರೂ ಏನಿತ್ತು? 1988ರ ಹಿಮಾಚಲ ಕೇಡರ್‌ನ ಈ ಪೊಲೀಸ್ ಅಧಿಕಾರಿಯ ನೇಮಕವು, ಶಿಕ್ಷಣ ಕ್ಷೇತ್ರವನ್ನು ಒಂದು ಪೊಲೀಸ್ ಠಾಣೆಯಂತೆ ಅಥವಾ ಕಣ್ಗಾವಲು ವ್ಯವಸ್ಥೆಯಂತೆ ನೋಡುವ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಸ್ಪಷ್ಟ ನಿದರ್ಶನ. ಪೇಪರ್ ಸೋರಿಕೆ ಮಾಡಿದ ಬೃಹತ್ ಮಾಫಿಯಾಗಳನ್ನು, ಅದರ ಹಿಂದಿರುವ ಪ್ರಭಾವಿ ರಾಜಕೀಯ ನಾಯಕರನ್ನು ರಕ್ಷಿಸಿ, ಕೇವಲ ವಿದ್ಯಾರ್ಥಿಗಳನ್ನು ಮತ್ತು ವ್ಯವಸ್ಥೆಯನ್ನು ಬೆದರಿಸಲು ಒಬ್ಬ ಗುಪ್ತಚರ ಅಧಿಕಾರಿಯನ್ನು ತಂದು ಕೂರಿಸಲಾಗಿದೆ ಎಂಬುದು ಹೋರಾಟಗಾರರ ನೇರ ಆರೋಪ.

ಸಮಿತಿಯ ಇಬ್ಬರು ಐಎಎಸ್ ಅಧಿಕಾರಿಗಳ ಪೈಕಿ ಮೊದಲನೆಯವರು 1988ರ ಗುಜರಾತ್ ಕೇಡರ್‌ನ ಅನಿತಾ ಕರವಾಲ್. ಇವರು ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸಿಬಿಎಸ್‌ಇ ಅಧ್ಯಕ್ಷರಾಗಿ ಮತ್ತು ಶಿಕ್ಷಣ ಕಾರ್ಯದರ್ಶಿಯಾಗಿ ಇವರ ಕಾರ್ಯವೈಖರಿಯು ಸದಾ ಸರ್ಕಾರದ ಪರವಾದ ‘ರಬ್ಬರ್ ಸ್ಟ್ಯಾಂಪ್’ ನಂತಿತ್ತು ಎಂಬ ವಿಮರ್ಶೆಯಿದೆ. ತೀವ್ರ ವಿರೋಧದ ನಡುವೆಯೂ ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP-2020) ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಸರ್ಕಾರದ ಖಾಸಗೀಕರಣದ ಅಜೆಂಡಾವನ್ನು ಅಕ್ಷರಶಃ ಪಾಲಿಸುವ ನಿಷ್ಠಾವಂತ ಅಧಿಕಾರಿಯಾಗಿದ್ದಾರೆ.

ಮತ್ತೊಬ್ಬ ಐಎಎಸ್ ಅಧಿಕಾರಿ ಬಿಹಾರ ಕೇಡರ್‌ನ ಅಮೃತ್ ಲಾಲ್ ಮೀನಾ. ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಇವರನ್ನು ಪರೀಕ್ಷಾ ಸುಧಾರಣಾ ಸಮಿತಿಯಲ್ಲಿ ‘ಲಾಜಿಸ್ಟಿಕ್ಸ್ ತಜ್ಞ’ ಎಂದು ತಂದು ಕೂರಿಸಲಾಗಿದೆ. ಕಲ್ಲಿದ್ದಲು ಸಾಗಾಟಕ್ಕೂ ಮತ್ತು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಗಳ ಸೂಕ್ಷ್ಮ ನಿರ್ವಹಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಣದ ಗಂಧಗಾಳಿಯೇ ಗೊತ್ತಿಲ್ಲದ, ಬದುಕಿನುದ್ದಕ್ಕೂ ಕಡತಗಳನ್ನು ವಿಲೇವಾರಿ ಮಾಡಿಕೊಂಡು ಬಂದ ಇಂತಹ ಕಚೇರಿ ಅಧಿಕಾರಶಾಹಿಗಳಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸುವುದು ಮೂರ್ಖತನದ ಪರಮಾವಧಿ.

ಇಸ್ರೋದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಅವರು ವಿಜ್ಞಾನಿಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಕ್ಕಿಂತ ಹೆಚ್ಚಾಗಿ ವೇದ, ಪುರಾಣ ಮತ್ತು ಸಂಸ್ಕೃತದಲ್ಲಿಯೇ ಎಲ್ಲ ವಿಜ್ಞಾನ ಅಡಗಿದೆ ಎಂಬಂತಹ ಅತಿರೇಕದ ಹೇಳಿಕೆಗಳನ್ನು ನೀಡಿ ಆಡಳಿತಾರೂಢ ಬಿಜೆಪಿಯ ‘ಸಾಂಸ್ಕೃತಿಕ ರಾಯಭಾರಿ’ಯಂತೆ ಬದಲಾಗಿದ್ದಾರೆ. ವಿಜ್ಞಾನ ಮತ್ತು ನಂಬಿಕೆಯನ್ನು ಬೆರೆಸುವ ಇವರ ನಿಲುವುಗಳು ವೈಜ್ಞಾನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ. ಉಪಗ್ರಹ ಉಡಾವಣೆಗೂ, 24 ಲಕ್ಷ ವಿದ್ಯಾರ್ಥಿಗಳು ಏಕಕಾಲದಲ್ಲಿ ಬರೆಯುವ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯುವುದಕ್ಕೂ ಸಂಬಂಧವೇ ಇಲ್ಲ. ಇವರ ನೇಮಕವು ಕೇವಲ ಸರ್ಕಾರದ ಸೈದ್ಧಾಂತಿಕ ತುಷ್ಟೀಕರಣದ ಭಾಗವಾಗಿದೆ.

ಮೋದಿ ಸರ್ಕಾರದ ಈ ಹೊಸ ಕಾರ್ಯಪಡೆಯ ರಚನೆಯೇ ಒಂದು ದೊಡ್ಡ ಬೂಟಾಟಿಕೆ. 2024ರಲ್ಲಿ ಇದೇ ರೀತಿ ಪೇಪರ್ ಲೀಕ್ ಆದಾಗ ರಚಿಸಲಾಗಿದ್ದ ಡಾ. ಕೆ. ರಾಧಾಕೃಷ್ಣನ್ ಸಮಿತಿಯ 101 ಶಿಫಾರಸ್ಸುಗಳನ್ನು ಇದುವರೆಗೂ ಜಾರಿಗೆ ತರದ ಸರ್ಕಾರ, ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಹಾಳುಗೆಡವಿದೆ. ಸತತ ಎರಡು ವರ್ಷಗಳಿಂದ ಎನ್‌ಟಿಎಗೆ ಪೂರ್ಣಾವಧಿ ನಿರ್ದೇಶಕರನ್ನೇ ನೇಮಿಸದ ಸರ್ಕಾರ, ಈಗ ಮತ್ತೆ ಹೊಸದೊಂದು ಸಮಿತಿ ರಚಿಸಿರುವುದು, ವಿರೋಧ ಪಕ್ಷಗಳು ಮತ್ತು ಬೀದಿಗಿಳಿದ ವಿದ್ಯಾರ್ಥಿಗಳ ಕಣ್ಣಿಗೆ ಮಣ್ಣೆರಚಿ, ತಮಗಿರುವ ‘ಕಳಂಕಿತ’ ಇಮೇಜ್ ಅನ್ನು ಮಾಧ್ಯಮಗಳ ಮೂಲಕ ತೊಳೆಯಿಕೊಳ್ಳುವ ಅಗ್ಗದ ಪಿಆರ್ (PR) ತಂತ್ರಗಾರಿಕೆಯಷ್ಟೇ.
ನಿಲೇಕಣಿ ನೇತೃತ್ವದ ಈ ಸಮಿತಿಯು ರೋಗ ಒಂದಕ್ಕೆ ಮದ್ದಿನ್ನೊಂದು ನೀಡಿದಂತಿದೆ. ಶಿಕ್ಷಣ ತಜ್ಞರಿರಬೇಕಾದ ಜಾಗದಲ್ಲಿ ಕಾರ್ಪೊರೇಟ್ ಧಣಿಗಳು, ಕೇಸರಿ ಚಿಂತನೆಯ ಬೆಂಬಲಿಗರು, ಪೊಲೀಸರು ಮತ್ತು ಗುಜರಾತ್ ಲಾಬಿಯ ಅಧಿಕಾರಿಗಳನ್ನು ತುಂಬಿರುವುದು ಭಾರತದ ಶಿಕ್ಷಣ ವ್ಯವಸ್ಥೆಯ ಅಣಕವಾಗಿದೆ. ನೈಜ ಶಿಕ್ಷಣ ತಜ್ಞರನ್ನು ದೂರವಿಟ್ಟು ರಚಿಸಲಾಗಿರುವ ಈ ಸಮಿತಿಯಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ನ್ಯಾಯ ಸಿಗುವುದಿಲ್ಲ; ಬದಲಾಗಿ ಇದು ಉಳ್ಳವರ ಪರವಾದ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ಮತ್ತು ಶಿಕ್ಷಣವನ್ನು ಮತ್ತಷ್ಟು ವ್ಯಾಪಾರೀಕರಣಗೊಳಿಸುವ ವಿನಾಶಕಾರಿ ಹೆಜ್ಜೆಯಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.





