ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗಾಗಿ ‘ಸ್ಕೂಲ್ ಠೀಕ್ ಕರೋ’ (ಸರ್ಕಾರಿ ಶಾಲೆಗಳನ್ನು ಸರಿಪಡಿಸಿ) ಅಭಿಯಾನ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಹಾಗೂ ಅವರ ಬೆಂಬಲಿಗರ ವಿರುದ್ಧ ಮಹಾರಾಷ್ಟ್ರದ ಲಾತೂರು ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನುಮತಿಯಿಲ್ಲದೆ ಸರ್ಕಾರಿ ಶಾಲೆಗೆ ನುಗ್ಗಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾತೂರಿನ ಔಸಾ ಸಮೀಪದ ಜವಳಿಯಲ್ಲಿರುವ ಜಿಲ್ಲಾ ಪಂಚಾಯಿತಿ ಉರ್ದು ಶಾಲೆಯ 53 ವರ್ಷದ ಶಿಕ್ಷಕಿ ಸೈಯದ್ ಶಂಶಾದ್ ಬಾನು ಖೈರತ್ ಅಲಿ ಅವರು ನೀಡಿದ ದೂರಿನ ಆಧಾರದ ಮೇಲೆ ಔಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ದೂರಿನ ಪ್ರಕಾರ, ದೀಪ್ಕೆ ಮತ್ತು ಅವರ ಸಹಚರರು ಯಾವುದೇ ಪೂರ್ವಾನುಮತಿ ಇಲ್ಲದೆ ಏಕಾಏಕಿ ಶಾಲೆಗೆ ಪ್ರವೇಶಿಸಿದ್ದಾರೆ. ತರಗತಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಕುಳಿತು ಅವರನ್ನು ಪ್ರಶ್ನಿಸುವ ಮೂಲಕ ಶಾಲೆಯ ದೈನಂದಿನ ಶೈಕ್ಷಣಿಕ ಹಾಗೂ ಅಧಿಕೃತ ಕಾರ್ಯಗಳಿಗೆ ತೀವ್ರ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದಷ್ಟೇ ಅಲ್ಲದೆ, ಶಾಲೆಯಲ್ಲಿ ನಡೆದ ಈ ಸಂಪೂರ್ಣ ಘಟನೆಯನ್ನು ದೀಪ್ಕೆ ಅಕ್ರಮವಾಗಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಶಾಲೆಯ ಬಗ್ಗೆ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿರುವ ಅವರು, ತಮ್ಮ ಭೇಟಿಯ ಸಮಯದಲ್ಲಿ ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಕರೆತಂದು ತರಗತಿಗಳಲ್ಲಿ ಕೂರಿಸಲಾಗಿತ್ತು ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಜೊತೆಗೆ, ಶಾಲೆಯ ಶಿಕ್ಷಕರನ್ನು ಕೆಲಸದಿಂದ ಅಮಾನತು ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಲು ಕ್ರಿಮಿನಲ್ ಬಲ ಪ್ರಯೋಗ (ಸೆಕ್ಷನ್ 132), ಅಕ್ರಮ ಗೃಹ ಪ್ರವೇಶ (ಸೆಕ್ಷನ್ 329(3)), ಕ್ರಿಮಿನಲ್ ಬೆದರಿಕೆ (ಸೆಕ್ಷನ್ 351(2)) ಹಾಗೂ ಕ್ರಿಮಿನಲ್ ಮಾನನಷ್ಟ (ಸೆಕ್ಷನ್ 356(2)) ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅನ್ವಯ ಪೊಲೀಸರು ದೀಪ್ಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.




