ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ” ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಟಿಎಂಸಿ ಸರ್ಕಾರ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮಮತಾ ಅವರು ಜನರ ಹಿತಾಸಕ್ತಿಗಾಗಿ ಕೆಲಸ ಮಾಡಿದ್ದರೆ, ಬಿಜೆಪಿ ರಾಜ್ಯದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿಯಿಂದ ದೇಶ ರಕ್ಷಿಸಲು ವಿಪಕ್ಷಗಳೊಂದಿಗೆ ಒಟ್ಟಿಗೆ ಹೋರಾಟ: ರಾಹುಲ್ ಗಾಂಧಿ
ಹಾಗೆಯೇ ಮಹಿಳಾ ಸುರಕ್ಷತೆಯ ಕುರಿತು ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ತೃಣಮೂಲ ಆಡಳಿತದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಹೆಚ್ಚಾಗಿದೆ” ಎಂದು ಹೇಳಿದ ರಾಹುಲ್ ಗಾಂಧಿ, ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿದರು.
“ಟಿಎಂಸಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಚುನಾವಣೆ ಬಂದಾಗ ಮೋದಿ ಜಿ ಮಮತಾ ಜಿ ಅವರನ್ನು ಅಪಹಾಸ್ಯ ಮಾಡುತ್ತಾರೆ. ಆದರೆ ಚುನಾವಣೆ ಮುಗಿದ ನಂತರ ಅವರು ಮೌನವಾಗಿರುತ್ತಾರೆ. ಕಾರಣ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಎದುರಾಗಿ ನಿಲ್ಲಲು ಅವರಿಗೆ ಒಂದೇ ಒಂದು ಶಕ್ತಿ ಇರುವುದು ಅದು ಕಾಂಗ್ರೆಸ್ ಎಂದು ತಿಳಿದಿದೆ. ಕಾಂಗ್ರೆಸ್ ತನಗೆ ಅಪಾಯಕಾರಿ ಎಂದು ಪ್ರಧಾನಿ ಮೋದಿಗೆ ತಿಳಿದಿದೆ” ಎಂದು ಹೇಳಿದ್ದಾರೆ.
“ಮೋದಿ ಜಿ ಮಮತಾ ಜಿ ವಿರುದ್ಧ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ? ಅವರು ಎಷ್ಟು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ? ಆದರೆ ಸತತ ಐದು ದಿನಗಳಲ್ಲಿ 55 ಗಂಟೆಗಳ ಕಾಲ ಇಡಿ ನನ್ನನ್ನು ವಿಚಾರಣೆ ನಡೆಸಿದೆ. ಮಮತಾ ಜಿ ವಿರುದ್ಧ ಏಕೆ ಯಾವುದೇ ದಾಳಿಗಳನ್ನು ನಡೆಸಲಾಗಿಲ್ಲ? ಏಕೆಂದರೆ ಅವರು ಎಂದಿಗೂ ಬಿಜೆಪಿ ವಿರುದ್ಧ ಹೋರಾಡುವುದಿಲ್ಲ” ಎಂದು ದೂರಿದ್ದಾರೆ.





