ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಮಲೆನಾಡು, ಕರಾವಳಿ ಜನಪರ ಒಕ್ಕೂಟ ವತಿಯಿಂದ ಮೇ 3ರಂದು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸರ್ವ ಸಮಾಜೋತ್ಸವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ, ಬೇರೆ ಬೇರೆ ಜಿಲ್ಲೆಗಳಿಂದ ಜನರು ಭಾಗವಹಿಸುವ ನಿರೀಕ್ಷೆ ಹೆಚ್ಚಿನದಾಗಿದೆ. ಕಾರ್ಯಕ್ರಮ ಉದ್ದೇಶ ಹೊಡೆದಾಟ, ದ್ವೇಷ ಮತ್ತು ಹಿಂಸೆಯಿಂದ ಎಂದಿಗೂ ಶಾಶ್ವತವಾದ ಬೆಳವಣಿಗೆ ಸಾಧ್ಯವಿಲ್ಲ. ದ್ವೇಷವು ಸಮಾಜವನ್ನು ವಿಭಜಿಸಿದರೆ, ಪ್ರೀತಿ ಮತ್ತು ಸಹಬಾಳ್ವೆ ಮಾತ್ರ ಅಭಿವೃದ್ಧಿಗೆ ಬುನಾದಿ ಹಾಕಬಲ್ಲವು. ಭಾರತದ ನಿಜವಾದ ಸೌಂದರ್ಯವಿರುವುದು ವೈವಿಧ್ಯತೆಯಲ್ಲಿ. ವಿವಿಧ ಧರ್ಮ, ಸಂಸ್ಕೃತಿಗಳ ಕೂಡಿ ಬಾಳುವಿಕೆಯೇ ಈ ನೆಲದ ಸಂಸ್ಕೃತಿ, ರಾಜಕೀಯ ಹಿತಾಸಕ್ತಿಗಾಗಿ ಧರ್ಮಗಳ ನಡುವೆ ಯುದ್ಧ ಹೂಡುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಮಾರ್ಗದರ್ಶಕ ಶಕ್ತಿಗಳು: ಬುದ್ಧನ ತ್ಯಾಗ, ಬಸವಣ್ಣನವರ ಸಮಾನತೆ, ಗಾಂಧೀಜಿಯವರ ಅಹಿಂಸೆ ಮತ್ತು ಅಂಬೇಡ್ಕರ್ ಅವರ ಸಮತೆಯ ಸಂದೇಶಗಳು ನಮಗೆ ದಾರಿ ದೀಪಗಳಾಗಿವೆ. ಇವು ಶಾಶ್ವತ ಸ್ಫೂರ್ತಿಯ ಮೂಲಗಳಾಗಿವೆ. ಇತಿಹಾಸದ ತಪ್ಪುಗಳನ್ನು ನೆಪವಾಗಿಟ್ಟುಕೊಂಡು ವರ್ತಮಾನವನ್ನು ಬಲಿಗೊಡುವುದು ಭವಿಷ್ಯದ ಪೀಳಿಗೆಗೆ ಮಾಡುವ ಅನ್ಯಾಯವಾಗಿದೆ. ದ್ವೇಷದ ಕಿಚ್ಚಿನಲ್ಲಿ ಬೆಳೆಯುವ ಮಕ್ಕಳು ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯವಿಲ್ಲ. ಹಿಂಸೆ, ಸಾಯುವುದು ಮತ್ತು ಸಾಯಿಸುವುದು ದೇವರ ಆರಾಧನೆಯಲ್ಲ. ಪ್ರೀತಿ, ಶಾಂತಿ, ಸಹಿಷ್ಣುತೆ ಮತ್ತು ಆತ್ಮಶೋಧನೆಯೇ ಎಲ್ಲಾ ಧರ್ಮಗಳ ಸಾರವಾಗಿದೆ. ಸಹಬಾಳ್ವೆ, ಸಹಿಷ್ಣುತೆ, ಶಾಂತಿಯನ್ನು ನೀಡುತ್ತದೆ. ಶಾಂತಿಯುತ ಬದುಕು ಅಭಿವೃದ್ಧಿಗೆ ದಾರಿಯಾಗುತ್ತದೆ.

ಜಾತಿ, ಮತ, ಧರ್ಮಗಳ ಜಗಳ ದೀಪ ಹಚ್ಚುವುದಿಲ್ಲ. ಮನೆಯ ದೀಪಗಳನ್ನೇ ಆರಿಸುತ್ತದೆ. ಯುದ್ಧ ಉಳ್ಳವರ ಆಟ. ರಕ್ತ ಹರಿಯುವ ಭೂಮಿಯಲ್ಲಿ ಫಸಲು ಬರುವುದಿಲ್ಲ. ಶಾಂತವಾದ, ಪ್ರೀತಿಯ ಗಂಗೆ-ಯಮನೆ, ತುಂಗ-ಭದ್ರೆ ಹರಿದಾಗ ಅಲ್ಲಿ ಜೀವ ಅರಳುತ್ತದೆ. ಘನತೆಯ ಬದುಕು, ಸಮತೆ ಮತ್ತು ಸಮಾನತೆಯ ಬಾಳ್ವೆ ಸರ್ವರಿಗೂ ಸಿಗಬೇಕು. ಶಿಕ್ಷಣ, ಆರೋಗ್ಯ, ಕೌಶಲ್ಯ, ಉದ್ಯೋಗ ಸಿಕ್ಕಾಗ ಸ್ವಸ್ಥ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ ಈದಿನ.ಕಾಮ್ ಗೆ ತಿಳಿಸಿದರು.

ಭಾರತ ದೇಶ ಎಂದರೆ ಹಲವಾರು ಧರ್ಮಗಳು ,ಸಾವಿರಾರು ಭಾಷೆಗಳು ,ಸಾವಿರಾರರು ಜಾತಿಗಳು , ವಿಭಿನ್ನವಾದ ಆಹಾರ ಕ್ರಮಗಳು , ಎಣಿಸಲಾರದಷ್ಟು ಆಚರಣೆಗಳು , ಅನಂತಾನಂತ ದೈವಗಳು ಅಪಾರಮಿತಾ ತತ್ವಗಳು ಒಂದಾಗಿ ಸಾಗುತ್ತಿರುವ ಏಕೈಕ ದೇಶ ನಮ್ಮ ಭಾರತ ಈ ಭವ್ಯತೆಯ ಭಾಗ ನಾವೆಲ್ಲರೂ ಎಂಬುವುದೇ ನಮ್ಮ ಹೆಮ್ಮೆ, ಭಾರತದ ಸೌಂದರ್ಯ ಇರುವುದೇ ವೈವಿದ್ಯತೇ ಯಲ್ಲೇ ಕೊಡಿ ಬಾಳುವುದು ಈ ನೆಲದ ಗುಣ ಇಂತಹ ರಾಷ್ತ್ರದಲ್ಲಿ ಒಡೆದು ಆಳುವ ಕೆಲಸವನ್ನು ಕೆಲವೊಂದು ದುಷ್ಟ ಶಕ್ತಿಗಳು ಮಾಡುತ್ತಿವೆ ಹಾಗಾಗಿ ನಾವು ನೀವೆಲ್ಲ ಸೇರಿ ಈ ಸರ್ವ ಸಮಾಜೋತ್ಸವ ಮಾಡುವದರ ಮುಖಾಂತರ ಕೂಡಿ ಬಾಳುವ ಕೆಲಸವನ್ನು ಮಾಡಬೇಕಿದೆ ಎಂದು ಪ್ರಚಾರ ಪತ್ರ ಬಿಡುಗಡೆಗೊಳಿಸುವ ಮೂಲಕ ಅನಿಲ್ ಹೊಸಕೊಪ್ಪ ಈದಿನ. ಕಾಮ್ ಜೊತೆ ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಾರ್ವಜನಿಕರು ಹೆಚ್ಚಿನದಾಗಿ ಕಾನೂನು ಅರಿವು ಪಡೆಯಬೇಕು; ಜಿ. ಎನ್.ಎಂ ನಾಗರಾಜು
ಈ ಸರ್ವ ಸಮಾಜೋತ್ಸವದಲ್ಲಿ ಮಲೆನಾಡಿಗೆ ಅತ್ಯವಶ್ಯಕ ವಾಗಿರುವ ಹಕ್ಕೊತ್ತಾಯಗಳನ್ನ ಮಾಡುತ್ತೇವೆ, ನಮ್ಮೂರಿಗೆ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಜೊತೆಗೆ ಹೈನುಗಾರಿಕೆ ಬೆಳೆಸಲು ನಮ್ಮೂರಿಗೆ ಹಾಲಿನ ಘಟಕ, ನಮ್ಮೂರಿನ ಜನರಿಗೆ ಹಕ್ಕುಪತ್ರಗಳನ್ನ ಕೊಡಬೇಕು ಎಂಬ ಹಕ್ಕೊತ್ತಾಯಗಳನ್ನ ಮಾಡುತ್ತಿದ್ದೇವೆಂದು ತಿಳಿಸಿದರು.




