ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನ ಲ್ಯಾಂಡ್ ಆಗುವ ಮುನ್ನ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಘಟನೆ ಶನಿವಾರ ನಡೆದಿದೆ. ಪ್ರಯಾಣಿಕ “ನನ್ನ ಮೈಯಲ್ಲಿ ದೆವ್ವ ಬಂದಿತ್ತು” ಎಂದು ಹೇಳಿಕೊಂಡಿದ್ದಾನೆ.
ಬೆಂಗಳೂರಿನಿಂದ ವಾರಣಾಸಿಗೆ ಹಾರುತ್ತಿದ್ದ ಇಂಡಿಗೋ ವಿಮಾನ 6E-185 ರಾತ್ರಿ 8:15 ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿತ್ತು. ಪ್ರಯಾಣಿಕರಲ್ಲಿ ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ಎಂಬ ವ್ಯಕ್ತಿ ಕೂಡಾ ಇದ್ದನು. ಪ್ರಯಾಣದ ಕೇವಲ 15 ನಿಮಿಷಗಳ ನಂತರ, ಅದ್ನಾನ್ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? 10 ಗಂಟೆ ಇಂಡಿಗೋ ವಿಮಾನ ವಿಳಂಬ: ಪೈಲಟ್ ಮೇಲೆ ಹಲ್ಲೆಗೈದ ಪ್ರಯಾಣಿಕ; ವಿಡಿಯೋ ವೈರಲ್
ಈ ವೇಳೆ ನೋಡಿದ ಸಿಬ್ಬಂದಿ ಆ ರೀತಿ ಬಾಗಿಲು ತೆರೆಯದಂತೆ ಪ್ರಯಾಣಿಕನಿಗೆ ಎಚ್ಚರಿಸಿದ್ದಾರೆ. ಆದರೆ ವಿಮಾನವು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ಕ್ಷಣಗಳ ಮುನ್ನ ರಾತ್ರಿ 10:20ರ ಸುಮಾರಿಗೆ ಅದ್ನಾನ್ ಸಾಮಾನ್ಯವಾಗಿಯೇ ಇದ್ದನು. ಆದರೆ ವಿಮಾನ ಲ್ಯಾಂಡ್ ಆಗಲು 500 ಅಡಿ ದೂರವಷ್ಟೇ ಇದ್ದಾಗ ಮತ್ತೊಮ್ಮೆ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ.
ಸಿಬ್ಬಂದಿಯಿಂದ ಮಾಹಿತಿ ಪಡೆದ ಪೈಲಟ್ ಕೂಡಲೇ ಲ್ಯಾಂಡಿಂಗ್ ಮಾಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದ್ನಾನ್‌ನನ್ನು ತಡೆಯುವ ಸಮಯದಲ್ಲಿ ಪೈಲಟ್ ವಿಮಾನವನ್ನು ಒಂದು ಸುತ್ತು ಸುತ್ತಿಸಿದ್ದಾರೆ. ರಾತ್ರಿ 10:30ಕ್ಕೆ ವಿಮಾನ ಲ್ಯಾಂಡ್ ಮಾಡಲಾಗಿದೆ. ಇನ್ನು ಅದ್ನಾನ್ ವರ್ತನೆಯಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ನಿಯಮದಂತೆ ಲ್ಯಾಂಡ್ ಆದ ಕೂಡಲೇ ಅದ್ನಾನ್‌ನನ್ನು ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣವನ್ನೂ ದಾಖಲಿಸಿದರು. ಸಿಬ್ಬಂದಿ ವಿಚಾರಣೆ ನಡೆಸಿದಾಗ ಅದ್ನಾನ್ “ನಾನು ಯಾಕೆ ಆ ರೀತಿ ವರ್ತಿಸಿದೆ ಎಂದು ನನಗೆ ತಿಳಿದಿಲ್ಲ. ನನಗೆ ಆ ಸಮಯದಲ್ಲಿ ಮೈಯಲ್ಲಿ ದೆವ್ವ ಬಂದಿತ್ತು. ನಾನು ಗೋವಾಕ್ಕೆ ಹೋಗಿ ಬರುತ್ತಿದ್ದೇನೆ. ನನಗೆ ಈ ಹ್ಯಾಂಡಲ್ ತುರ್ತು ನಿರ್ಗಮನದ್ದು ಎಂದು ತಿಳಿದಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, “ನಾವು ತನಿಖೆ ನಡೆಸುತ್ತಿದ್ದೇವೆ. ಆರೋಪಿಯನ್ನು ಪ್ರಶ್ನಿಸಲಾಗುತ್ತಿದೆ. ಮೌನಲ್ಲಿ ವಾಸಿಸುವ ಆರೋಪಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಅವರು ವಾರಣಾಸಿಗೆ ಬರುತ್ತಿದ್ದಾರೆ” ಎಂದು ತಿಳಿಸಿದ್ದಾರೆ.




