ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಹೆಚ್ಚುತ್ತಿರುವ ಸಾರಾಯಿ ಕುಡಿತದ ಚಟದಿಂದ ಕಂಗೆಟ್ಟ ಮಹಿಳೆಯರು ಎಂಎಸ್‌ಐಎಲ್ ಮದ್ಯದ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ಅನೇಕ ಮಹಿಳೆಯರು ಒಂದಾಗಿ ಸೇರಿ ಧರಣಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಂತವಾಗಿ, ನೆಮ್ಮದಿಯಿಂದ ಬದುಕುತ್ತಿದ್ದ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವುದರಿಂದ ಸಾಮಾಜಿಕ ವಾತಾವರಣ ಹಾಳಾಗಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮಹಿಂದ್ರಾ ಥಾರ್‌ಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಮಹಿಳೆಯರ ಪ್ರಕಾರ, ಕೆಲವು ವರ್ಷಗಳ ಹಿಂದೆ ಗ್ರಾಮದ ಕ್ರಾಸ್ ಬಳಿ ಆರಂಭವಾದ ಮದ್ಯದ ಅಂಗಡಿ ಬಳಿಕ ಗ್ರಾಮದಲ್ಲಿ ದಿನನಿತ್ಯ ಜಗಳ, ತಕರಾರುಗಳು ಹೆಚ್ಚಾಗಿವೆ. ಹಲವಾರು ಪುರುಷರು ಕೆಲಸ ಬಿಟ್ಟು ಮದ್ಯಪಾನಕ್ಕೆ ಒಳಗಾಗಿದ್ದು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ತಿಳಿಸಿದ್ದಾರೆ.



