ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ NEET-UG 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಪ್ರಕರಣದ ತನಿಖೆ ನಡೆಸುತ್ತಿರುವ CBI ಅಧಿಕಾರಿಗಳು, ಮಹಾರಾಷ್ಟ್ರದ ಪುಣೆಯಲ್ಲಿ ಹಗರಣದ ಮಾಸ್ಟರ್ ಮೈಂಡ್‌ಗಳನ್ನು ಸೆರೆಹಿಡಿದಿದ್ದಾರೆ. ಪುಣೆಯ ಸುಖ್‌ಸಾಗರ್ ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ 46 ವರ್ಷದ ಮಹಿಳೆಯೊಬ್ಬರು, ಈ ಇಡೀ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಅತ್ಯಂತ ಮುಖ್ಯ ಕೊಂಡಿಯಾಗಿ ಕೆಲಸ ಮಾಡಿರುವುದು ಬಹಿರಂಗಗೊಂಡಿದೆ.
ಮನಿಷಾ ವಾಗ್ಮರೆ ಎಂಬ ಈ ಬ್ಯೂಟಿಷಿಯನ್, ಟ್ಯೂಷನ್ ಶಿಕ್ಷಕರನ್ನು ಹುಡುಕುತ್ತಿದ್ದ ವಿದ್ಯಾರ್ಥಿಗಳನ್ನು ಮತ್ತು ಪ್ರತಿಷ್ಠಿತ ಶಾಲೆಗಳ ಶಿಕ್ಷಕರನ್ನು ಕಮಿಷನ್ ಆಧಾರದ ಮೇಲೆ ಸಂಪರ್ಕಿಸುವ ದಂಧೆ ನಡೆಸುತ್ತಿದ್ದರು. ಇದೇ ಪರಿಚಯ ಮತ್ತು ಸಂಪರ್ಕ ಜಾಲವನ್ನು ಬಳಸಿಕೊಂಡು ಆಕೆ ಲೀಕ್ ಆದ NEET ಪ್ರಶ್ನೆ ಪತ್ರಿಕೆಯನ್ನು ದೇಶಾದ್ಯಂತ ಹಂಚಿದ್ದಾರೆ ಎಂದು CBI ಮೂಲಗಳು ತಿಳಿಸಿವೆ. ಮೇ.14ರಂದೇ ಈಕೆಯನ್ನು ಬಂಧಿಸಲಾಗಿದ್ದು, ನಿವೃತ್ತ ಶಿಕ್ಷಕ ಪಿ ವಿ ಕುಲಕರ್ಣಿ ಎಂಬಾತನ ಜೊತೆಗೆ CBI ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಇಡೀ ಹಗರಣದ ದೊಡ್ಡ ಟರ್ನಿಂಗ್ ಪಾಯಿಂಟ್ ಇರುವುದು ಇಲ್ಲಿ… ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಮಿತಿಯಲ್ಲಿದ್ದ ತಜ್ಞೆ ಮನಿಷಾ ಗುರುನಾಥ್ ಮಾಂಧರೆ ಅವರೇ ಈ ಜಾಲದ ಅಸಲಿ ಸೂತ್ರಧಾರಿಯಾಗಿದ್ದಾರೆ. ಎನ್‌ಟಿಎ ನಿಯೋಜಿತ ತಜ್ಞೆಯಾಗಿದ್ದ 57 ವರ್ಷದ ಮನಿಷಾ ಮಾಂಧರೆ ಅವರಿಗೆ ಬಾಟನಿ ಮತ್ತು ಜುವಾಲಜಿ ಪ್ರಶ್ನೆಪತ್ರಿಕೆಗಳ ಸಂಪೂರ್ಣ ಪ್ರವೇಶವಿತ್ತು. ಹಣದ ತೀವ್ರ ದುರಾಸೆಗೆ ಬಿದ್ದ ಈಕೆ ಅಂತಿಮ ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿ, ಬ್ಯೂಟಿಷಿಯನ್ ಮನಿಷಾ ವಾಗ್ಮರೆ ಮತ್ತು ನಿವೃತ್ತ ಶಿಕ್ಷಕ ಕುಲಕರ್ಣಿ ಜೊತೆ ಕೈಜೋಡಿಸಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ್ದಾರೆ ಎಂದು CBI ದೆಹಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ನ್ಯಾಯಾಲಯವು ಭಾನುವಾರ ಈಕೆಯನ್ನು 14 ದಿನಗಳ CBI ಕಸ್ಟಡಿಗೆ ಒಪ್ಪಿಸಿದೆ.
NTA ತಜ್ಞೆ ಮಾಂಧರೆ ಪ್ರಶ್ನೆಪತ್ರಿಕೆ ಸೆಟ್ ಮಾಡುತ್ತಿರುವ ರಹಸ್ಯ ವಿಷಯ ಬ್ಯೂಟಿಷಿಯನ್ ವಾಗ್ಮರೆಗೆ ತಿಳಿದ ತಕ್ಷಣ ಇಬ್ಬರೂ ಸೇರಿ ಬೃಹತ್ ಸ್ಕೆಚ್ ಹಾಕಿದ್ದರು. ವಾಗ್ಮರೆ ತನ್ನ ಬಳಿ ಟ್ಯೂಷನ್‌ಗಾಗಿ ಸಹಾಯ ಕೇಳಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ತಲಾ 10 ಲಕ್ಷ ರೂಪಾಯಿಗೆ ನೀಟ್ ಪೇಪರ್ ಒದಗಿಸುವ ಡೀಲ್ ಕುದುರಿಸಿದ್ದರು. ಈ ದಂಧೆಯಿಂದ ಬರುವ ಬೃಹತ್ ಮೊತ್ತದಲ್ಲಿ ತಲಾ 2.5 ಲಕ್ಷದಿಂದ 3 ಲಕ್ಷ ರೂಪಾಯಿಯನ್ನು ವಾಗ್ಮರೆ, ಮಾಂಧರೆ ಮತ್ತು ಕುಲಕರ್ಣಿ ಹಂಚಿಕೊಳ್ಳಲು ಪ್ಲ್ಯಾನ್ ಮಾಡಿದ್ದರು ಎಂದಿದೆ ತನಿಖಾ ವರದಿ.
ಇದನ್ನೂ ಓದಿ: ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌ನಂತೆ ಭಾರತದಲ್ಲಿ ಈಗ BJP ಏಕಚಕ್ರಾಧಿಪತ್ಯ: ಅಮಿತ್ ಶಾ
ಹಣದ ವ್ಯವಹಾರ ಮುಗಿದ ನಂತರ ವಾಗ್ಮರೆ ತಾನು ಪ್ರಶ್ನೆಪತ್ರಿಕೆ ನೀಡಿದ್ದ ವಿದ್ಯಾರ್ಥಿಗಳ ವಿವರ ಹಾಗೂ ಪ್ರಶ್ನೆಪತ್ರಿಕೆಯನ್ನು ತನ್ನ ಹಳೆಯ ಸ್ನೇಹಿತ ಧನಂಜಯ್ ಲೋಖಂಡೆ ಎಂಬಾತನಿಗೆ ನೀಡಿದ್ದಾರೆ. ಲೋಖಂಡೆ ಇದನ್ನು ನಾಸಿಕ್‌ನಲ್ಲಿ ಕೌನ್ಸೆಲಿಂಗ್ ಬಿಸಿನೆಸ್ ನಡೆಸುತ್ತಿದ್ದ ಶುಭಂ ಖೈರ್ನಾರ್‌ಗೆ ತಲುಪಿಸಿದ್ದಾನೆ. ಕಳೆದ ಮಂಗಳವಾರ ನೀಟ್ ಪರೀಕ್ಷೆ ರದ್ದಾದ ಕೆಲವೇ ಗಂಟೆಗಳಲ್ಲಿ ಈ ಶುಭಂ ಖೈರ್ನಾರ್‌ನನ್ನು ಮೊದಲು ಬಂಧಿಸಲಾಗಿತ್ತು. ಈ ಖೈರ್ನಾರ್ ಪ್ರಶ್ನೆಪತ್ರಿಕೆಯ ಪಿಡಿಎಫ್ (PDF) ಫೈಲ್‌ಗಳನ್ನು ಗುರುಗ್ರಾಮದ ಯಶ್ ಯಾದವ್ ಮತ್ತು ಜೈಪುರದ ದಲ್ಲಾಳಿಗಳಿಗೆ ಫಾರ್ವರ್ಡ್ ಮಾಡಿದ್ದ. ಆ ಜಾಲದಲ್ಲಿದ್ದ ಯಶ್ ಯಾದವ್‌ನನ್ನೂ ಈಗಾಗಲೇ ಅರೆಸ್ಟ್ ಮಾಡಲಾಗಿದೆ.
ಕೋರ್ಟ್‌ನಲ್ಲಿ ಆರೋಪಿಗಳ ಕಸ್ಟಡಿ ಕೋರಿದ CBI, ಇದು ದೇಶಾದ್ಯಂತ ಹರಡಿರುವ ಬೃಹತ್ ಸಂಘಟಿತ ಅಪರಾಧ ಜಾಲವಾಗಿದ್ದು, ತನಿಖೆ ಇನ್ನು ಆರಂಭಿಕ ಹಂತದಲ್ಲಿದೆ. ಇನ್ನೂ ಹಲವು ಸಕ್ರಿಯ ಸದಸ್ಯರನ್ನು ಬಂಧಿಸಬೇಕಾಗಿದೆ ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ವಾದಿಸಿದೆ. ಆರೋಪಿಗಳ ಪರ ವಕೀಲರು ಮಾಂಧರೆ ಅವರಿಗೆ 57 ವರ್ಷ ವಯಸ್ಸಾಗಿದ್ದು, ಅವರು ಉಪನ್ಯಾಸಕರಾಗಿ ತನಿಖೆಗೆ ಸಹಕರಿಸುತ್ತಿರುವುದರಿಂದ ಕಸ್ಟಡಿಯ ಅಗತ್ಯವಿಲ್ಲ ಎಂದು ವಾದಿಸಿದರಾದರೂ, ಕೋರ್ಟ್ ಸಿಬಿಐ ವಾದವನ್ನು ಪುರಸ್ಕರಿಸಿದೆ. ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಈ ಜಾಲದ ಬೇರುಗಳನ್ನು ಕಿತ್ತೆಸೆಯಲು ಸಿಬಿಐ ಈಗ ಪುಣೆ, ನಾಸಿಕ್, ಜೈಪುರ ಮತ್ತು ಗುರುಗ್ರಾಮಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.




