ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಮೆರಿಕ, ಇಸ್ರೇಲ್, ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕೆಲವು ಉದ್ಯಮ ಕ್ಷೇತ್ರಗಳ ಮೇಲೆ ಭಾರಿ ಹೊಡೆತ ನೀಡಿದರೆ, ಇನ್ನೂ ಕೆಲವು ಉದ್ಯಮ ಕ್ಷೇತ್ರಗಳಿಗೆ ಅನುಕೂಲವಾಗಿ ಪರಿಣಮಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನ (EV) ಕ್ಷೇತ್ರದಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ. ದಾಖಲೆ ಪ್ರಮಾಣದಲ್ಲಿ ಇವಿ ವಾಹನಗಳ ಮಾರಾಟವಾಗಿದ್ದು, ಮಾರುಕಟ್ಟೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಯುದ್ಧದ ಪರಿಣಾಮವಾಗಿ ಭಾರತಕ್ಕೆ ಪೂರೈಕೆಯಾಗುವ ಇಂಧನದಲ್ಲಿ ವ್ಯತ್ಯಯ ಉಂಟಾಗಿದೆ. LPG ಕೊರತೆ ಸೃಷ್ಟಿಯಾಗಿದ್ದು, ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಮತ್ತಷ್ಟು ಏರಿಕೆಯಾಗುವ ಆತಂಕ ಜನರಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಬಹುತೇಕ ಜನರು ಇವಿ ವಾಹನಗಳನ್ನು ಖರೀದಿ ಮಾಡುವತ್ತ ಮುಖ ಮಾಡುತ್ತಿದ್ದಾರೆ.
ಇದನ್ನೂ ಓದಿ : ಐಶಾರಾಮಿ ಬದುಕಿಗಾಗಿ ಸಾಲದ ಮೊರೆ; ಇಎಂಐ ಕಟ್ಟಲಾಗದೇ ಯುವಜನರ ಪರದಾಟ: ಸಮೀಕ್ಷೆ
ಜನವರಿ ಮತ್ತು ಫೆಬ್ರವರಿ ತಿಂಗಳೊಂದಿಗೆ ಹೋಲಿಸಿದರೆ, ಮಾರ್ಚ್ ತಿಂಗಳ ಅಂತ್ಯಕ್ಕೆ ಇವಿ ಬೈಕ್, ಆಟೋ ಹಾಗೂ ಕಾರುಗಳ ಮಾರಾಟದಲ್ಲಿ ಶೇ. 30ರಷ್ಟು ಏರಿಕೆ ಕಂಡುಬಂದಿದೆ. ಇದಲ್ಲದೆ, ಏಪ್ರಿಲ್‌ನಿಂದ ಜಾರಿಗೆ ಬಂದಿರುವ ಹೊಸ ರಸ್ತೆ ತೆರಿಗೆ ನೀತಿಯ ಪರಿಣಾಮವೂ ಮಾರ್ಚ್ ತಿಂಗಳಲ್ಲಿ ಇವಿ ಖರೀದಿಗೆ ಉತ್ತೇಜನ ನೀಡಿದೆ. ತೆರಿಗೆ ಏರಿಕೆಗೆ ಮುನ್ನವೇ ಹೆಚ್ಚಿನ ಜನರು ವಾಹನ ಖರೀದಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ, ಒಂದೇ ದಿನದಲ್ಲಿ ಸುಮಾರು 13 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಆಗಿದ್ದು, ಇದರಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚಿನ ಪ್ರಮಾಣದಲ್ಲಿವೆ.
ಯುದ್ಧದ ಪರಿಣಾಮ ಹಾಗೂ ಹೊಸ ರಸ್ತೆ ತೆರಿಗೆ ನೀತಿಯ ಪ್ರಭಾವದಿಂದ ಮಾರ್ಚ್ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ದಾಖಲೆ ಮಟ್ಟ ತಲುಪಿದೆ ಎಂದು ವರದಿಯಾಗಿದೆ.




