ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ಸಂಘರ್ಷದ ನಡುವೆ, ಪ್ರಧಾನಿ ಮೋದಿ ಅವರು, “ಈ ಯುದ್ಧದಿಂದಾಗುವ ಸವಾಲುಗಳು ದೀರ್ಘಕಾಲೀನವಾಗಬಹುದು. ಆದ್ದರಿಂದ ದೇಶವು ಕೋವಿಡ್ ಸಮಯದಂತೆ ಒಂದಾಗಿ, ಒಗ್ಗಟ್ಟಿನಿಂದ ಎದುರಿಸಬೇಕು. ನಾವು ಕೋವಿಡ್ ಅನ್ನು ಒಗ್ಗಟ್ಟಿನಿಂದ ಎದುರಿಸಿದ್ದೇವೆ, ಈಗಲೂ ಅದೇ ರೀತಿ ಸಿದ್ಧರಾಗಬೇಕು” ಎಂದು ಕರೆಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಂತೆ, ಮತ್ತೆ ಭಾರತವು ‘ಲಾಕ್‌ಡೌನ್’ ಆಗುತ್ತದೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ನೆಟ್ಟಿಗರು ಲಾಕ್‌ಡೌನ್ ಸಂಬಂಧಿತ ಸುದ್ದಿಗಳನ್ನು ಹುಡುಕಲಾರಂಭಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, “ಹಿಂದೆಯೂ ಕೂಡ ನಮ್ಮ ಸರ್ಕಾರವು ಜಾಗತಿಕ ಬಿಕ್ಕಟ್ಟುಗಳ ಹೊರೆ ರೈತರ ಮೇಲೆ ಬೀಳದಂತೆ ನೋಡಿಕೊಂಡಿತ್ತು. ಈಗ, ಈ ಯುದ್ಧದಿಂದ ಉಂಟಾಗಿರುವ ಕಠಿಣ ಜಾಗತಿಕ ಪರಿಸ್ಥಿತಿಗಳು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಮಾತ್ರ ಏಕೈಕ ಮಾರ್ಗ. ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತವು ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಎಲ್ಲ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆದಾಗ್ಯು, ಎದುರಾಗುವ ಬಿಕ್ಕಟ್ಟನ್ನು ಎದುರಿಸಲು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ರಾಷ್ಟ್ರವು ಹೇಗೆ ಒಗ್ಗಟ್ಟಿನಿಂದ ನಿಂತಿತ್ತೋ, ಹಾಗೆಯೇ ಈಗಲೂ ಸಿದ್ಧವಾಗಿ ಮತ್ತು ಒಗ್ಗಟ್ಟಾಗಿ ಇರಬೇಕು” ಎಂದು ಹೇಳಿದ್ದಾರೆ.
“ಕೋವಿಡ್-19 ಸಂದರ್ಭದಲ್ಲಿ ತಜ್ಞರ ಸಮಿತಿಗಳು ಹೇಗೆ ಸವಾಲುಗಳನ್ನು ಎದುರಿಸಲು ಸಹಾಯ ಮಾಡಿದ್ದವೋ, ಅದೇ ಮಾದರಿಯಲ್ಲಿ ಈಗ ಏಳು ಸಶಕ್ತ ಗುಂಪುಗಳು ಇಂಧನ, ರಸಗೊಬ್ಬರ, ಅನಿಲ, ಪೂರೈಕೆ ಸರಪಳಿ ಮತ್ತು ಹಣದುಬ್ಬರದ ಮೇಲೆ ಈ ಯುದ್ಧದ ಪರಿಣಾಮಗಳನ್ನು ಎದುರಿಸಲು ಕಾರ್ಯತಂತ್ರಗಳನ್ನು ರೂಪಿಸಲಿವೆ” ಎಂದು ಮೋದಿ ಹೇಳಿದ್ದಾರೆ.
ಸದ್ಯಕ್ಕೆ, ಕೇಂದ್ರ ಸರ್ಕಾರವು ಯಾವುದೇ ಲಾಕ್‌ಡೌನ್ ಘೋಷಿಸಿಲ್ಲ. ಆದರೆ, ಮೋದಿ ಅವರ ಮಾತುಗಳಿಂದ ಶೀಘ್ರವೇ ಲಾಕ್‌ಡೌನ್ ಜಾರಿಯಾಗಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ನಿಮ್ಮ ರಾಜಿ, ಶರಣಾಗತಿ, ಮೂರ್ಖತನದ ಪರಿಣಾಮವನ್ನು ನಾವೇಕೆ ಅನುಭವಿಸಬೇಕು: ಮೋದಿ ವಿರುದ್ಧ ನಟ ಕಿಶೋರ್ ಕಿಡಿ
ಈ ಹಿಂದೆ, ಜಗತ್ತಿನಾದ್ಯಂತ ಕೋವಿಡ್-19 ಆಕ್ರಮಣ ಹೆಚ್ಚಿದ್ದಾಗ, 2020ರ ಮಾರ್ಚ್ 24ರಂದು ಪ್ರಧಾನಿ ಮೋದಿ ಅವರು 21 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದರು. ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಮುನ್ನೆಚ್ಚರಿಕೆಯಾಗಿ ದೇಶದ 138 ಕೋಟಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಕ್ರಮಕ್ಕೂ ಮುನ್ನ ಮಾರ್ಚ್ 22 ರಂದು 14 ಗಂಟೆಗಳ ಸ್ವಯಂಪ್ರೇರಿತ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮೂರಿಗೆ ನಡೆದುಕೊಂಡೇ ಹೊರಟಿದ್ದರು. ಹಲವರು ನಡೆಯುವಾಗ ದಣಿವು-ಹಸಿವಿನಿಂದ ಸಾವನ್ನಪ್ಪಿದರೆ, ಇನ್ನೂ ಹಲವರು ರಸ್ತೆ-ರೈಲು ಅಪಘಾತಗಳನ್ನು ಮೃತಪಟ್ಟಿದ್ದರು. ಕೊರೋನಾ ಸೋಂಕಿನಿಂದ ಮೃತಪಟ್ಟವರು ಅಂತ್ಯಕ್ರಿಯೆಯನ್ನೂ ಸರಿಯಾಗಿ ನಡೆಸದೆ, ಮೃತದೇಹಗಳು ಗಂಗಾ ನದಿಯಲ್ಲಿ ತೆಲಿದ್ದವು. ಸರ್ಕಾರವು ಕೋವಿಟ್-19ಅನ್ನು ಎದುರಿಸಲು ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿಯೂ ವಿಫಲವಾಯಿತು ಎಂಬ ಆರೋಪಗಳು ಕೇಳಿಬಂದವು. ಕೊರೋನಾ ಸೋಂಕಿನಿಂದ ದೇಶಾದ್ಯಂತ ಸುಮಾರು 45 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ವರದಿಗಳು ಹೇಳುತ್ತವೆ.



