ನಿಮ್ಮ ರಾಜಿ, ಶರಣಾಗತಿ, ಮೂರ್ಖತನದಿಂದಾಗಿ ದೇಶದಲ್ಲಿ ಎದುರಾಗುತ್ತಿರುವ ಪರಿಣಾಮವನ್ನು ನಾವೇಕೆ ಅನುಭವಿಸಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕಿಡಿಕಾರಿದ್ದಾರೆ. ಮೋದಿ ಅವರ ವಿದೇಶಾಂಗ ನೀತಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಕುರಿತು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, “ಈ ಯುದ್ಧದಿಂದಾಗುವ ಸವಾಲುಗಳು ದೀರ್ಘಕಾಲೀನವಾಗಬಹುದು. ಆದ್ದರಿಂದ ದೇಶವು ಕೋವಿಡ್ ಸಮಯದಂತೆ ಒಂದಾಗಿ, ಒಗ್ಗಟ್ಟಿನಿಂದ ಎದುರಿಸಬೇಕು. ನಾವು ಕೋವಿಡ್ ಅನ್ನು ಒಗ್ಗಟ್ಟಿನಿಂದ ಎದುರಿಸಿದ್ದೇವೆ, ಈಗಲೂ ಅದೇ ರೀತಿ ಸಿದ್ಧರಾಗಬೇಕು” ಎಂದು ಕರೆಕೊಟ್ಟಿದ್ದಾರೆ.
ಯುದ್ಧವನ್ನು ಖಂಡಿಸಿದ, ಟ್ರಂಪ್ ಅವರನ್ನು ಟೀಕಿಸದ ಮೋದಿ ಅವರು ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನಿಂದ ಇರುವಂತೆ ಕರೆಕೊಟ್ಟಿರುವುದನ್ನು ನಟ ಕಿಶೋರ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಿಶೋರ್, “ಒಟ್ಟಿಗೆ, ಒಂದು ರಾಷ್ಟ್ರದಂತೆ? ನಮ್ಮನ್ನು ದ್ವೇಷದ ವಿಷ ಕಾರಿ ಹಿಂದು-ಮುಸ್ಲಿಂ-ಕ್ರಿಶ್ಚಿಯನ್ನರೆಂದು ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದಂತೆ ಒಡೆದ ನಂತರ ಒಗ್ಗಟ್ಟು ಸಾಧ್ಯವೇ? ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ” ಎಂದು ಪ್ರಶ್ನಿಸಿದ್ದಾರೆ.
“ನಿಮ್ಮ ರಾಜಿ, ಶರಣಾಗತಿಯಿಂದಾಗಿ ನಾವು ಇನ್ನೂ ಎಷ್ಟು ಸವಾಲುಗಳನ್ನು ಎದುರಿಸಬೇಕು? ನಿಮ್ಮ ತಪ್ಪುಗಳು, ರಹಸ್ಯಗಳನ್ನು ಮುಚ್ಚಿಡಲು ನಾವಿನ್ನೆಷ್ಟು ಬೆಲೆ ತೆರಬೇಕು? ಇಲ್ಲ! ನಾವು ಭಾರತದ ಜನ ತಯಾರಿಲ್ಲ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಅಮೆರಿಕ-ಇರಾನ್ ಬಿಕ್ಕಟ್ಟು ಶಮನಕ್ಕೆ ಪಾಕ್ ಸಂಧಾನಕಾರ! ಏನಿದು ಅಚ್ಚರಿಯ ಲೆಕ್ಕಾಚಾರ?
“ಸಾಮೂಹಿಕ ಕೊಲೆಗಾರರು ಮತ್ತು ಶಿಶುಕಾಮಿಗಳನ್ನು ಅಪ್ಪಿಕೊಂಡು ‘ನಾವು ಯುದ್ಧ ಅಪರಾಧಿಗಳ ಜೊತೆ ನಿಲ್ಲುತ್ತೇವೆ’ ಎಂದು ಘೋಷಿಸುವ ಮೊದಲು ನೀವು ನಮ್ಮನ್ನು ಕೇಳಿದ್ದಿರಾ? ರಫೇಲ್‌ನಿಂದ ಎಪ್ಸ್ಟೀನ್‌ವರೆಗೆ, ನೋಟು ರದ್ದತಿಯಿಂದ ಕೊರೊನಾ ಲಾಕ್‌ಡೌನ್‌ವರೆಗೆ, ಕೃಷಿ ಕಾನೂನುಗಳಿಂದ ಅಗ್ನಿವೀರ್‌ವರೆಗೆ, ಮಣಿಪುರದಿಂದ ಕಾಶ್ಮೀರ, ಲಡಾಖ್ ನವರೆಗೆ ನಿಮ್ಮ ಯಾವುದೇ ಉನ್ಮಾದ ಭರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಮ್ಮನ್ನೋ ಅಥವಾ ವಿರೋಧ ಪಕ್ಷದ ನಮ್ಮ ಪ್ರತಿನಿಧಿಗಳನ್ನೋ ಅಥವಾ ನಮ್ಮ ತೆರಿಗೆಯಿಂದ ನಾವು ಸಂಬಳ ಕೊಟ್ಟಿಟ್ಟಿರುವ ನಿಮ್ಮ ಸ್ವಂತ ಅಧಿಕಾರಿಗಳನ್ನೋ ಕೇಳಿದ್ದಿರಾ” ಎಂದು ಪ್ರಶ್ನಿಸಿದ್ದಾರೆ.
“ನಿಮ್ಮ ರಾಜಿ, ಸರೆಂಡರ್ ಮತ್ತು ಮೂರ್ಖತನದ ಪರಿಣಾಮವಾಗಿ ಬಂದ ಸವಾಲುಗಳನ್ನು ಎದುರಿಸಲು ಈಗ ನಮ್ಮನ್ನು ಕೇಳಲು ನಿಮಗೆ ಯಾವ ಹಕ್ಕಿದೆ? ಇನ್ನು ಸಾಕು.. ಕೊರೊನಾ ಸಮಯದಲ್ಲಿ ಮಾಡಿದ ರೀತಿ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ. ಸತ್ತ 50 ಲಕ್ಷ ಜನರನ್ನು ನಿಮ್ಮ ಕಡತಗಳಲ್ಲಿ ಸತ್ತವರೆಂದು ಪರಿಗಣಿಸಲೂ ಯೋಗ್ಯರಲ್ಲದಂತೆ ಮಾಡಿದಿರಲ್ಲ. ದೇಶದ ಅತ್ಯುನ್ನತ ಸ್ಥಾನವನ್ನು ನಗೆಪಾಟಲಾಗಿಸಿದ, ಸರ್ವಾಧಿಕಾರದ ಮತ್ತಿನ ನಿಮ್ಮ ನಾನ್ಬಯಲಾಜಿಕಲ್ ಹುಚ್ಚುತನಕ್ಕೆ ಪದವಿ ಬಿಟ್ಟು ಹೊರಡುವ ಸಮಯ ಬಂದಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.



