ಅಮೆರಿಕ ಸೇನೆಯ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕದ ಸೇನಾ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟ ಬಗ್ಗೆ ವಾಷಿಂಗ್ಟನ್ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ, ಆದರೂ ನವದೆಹಲಿಯ ಪ್ರತಿಕ್ರಿಯೆ ಅತ್ಯಂತ ದುರ್ಬಲವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ (X) ಜಾಲತಾಣದಲ್ಲಿ ಕಟುವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮೂವರು ಭಾರತೀಯ ನಾವಿಕರನ್ನು ಅಮೆರಿಕದ ದಾಳಿಯಲ್ಲಿ ಹತ್ಯೆಗೈದ ಕೆಲವೇ ದಿನಗಳಲ್ಲಿ, ಅಮೆರಿಕದಿಂದ ಯಾವುದೇ ಪಶ್ಚಾತ್ತಾಪವಾಗಲಿ ಅಥವಾ ಕ್ಷಮೆಯಾಗಲಿ ಬಂದಿಲ್ಲ. ಬದಲಾಗಿ, ಅಮೆರಿಕ ತನ್ನ ಆದೇಶಗಳನ್ನು ಮುಂದುವರಿಸಿದೆ. ‘ಅಮೆರಿಕ ಸೇನೆಯ ಆದೇಶಗಳನ್ನು ತಕ್ಷಣವೇ ಪಾಲಿಸಬೇಕು ಮತ್ತು ಯಾವುದೇ ಉಲ್ಲಂಘನೆಯನ್ನು ಸಹಿಸುವುದಿಲ್ಲ’ ಎಂದು ಅದು ಎಚ್ಚರಿಸಿದೆ” ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
“ಯಾವುದೇ ಸ್ವತಂತ್ರ ದೇಶವು ಇಂತಹ ಭಾಷೆಯನ್ನು ಸಹಿಸುವುದಿಲ್ಲ. ಆದರೆ, ರಾಜಿ ಮಾಡಿಕೊಂಡಿರುವ ನಮ್ಮ ಪ್ರಧಾನಿ ಮೌನವಾಗಿದ್ದಾರೆ. ಅವರು ವಿಧೇಯ ಸೇವಕನಂತೆ ಎಲ್ಲವನ್ನೂ ಆಲಿಸಿ ಆದೇಶಗಳನ್ನು ಪಾಲಿಸುತ್ತಿದ್ದಾರೆ. ದೇಶವನ್ನು ಅವಮಾನಿಸುವವರ ನಿಯಂತ್ರಣದಲ್ಲಿರುವ ಇವರು ದೇಶದ ಗೌರವವನ್ನು ಕಾಪಾಡಲಾರರು” ಎಂದು ರಾಹುಲ್ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಪ್ರತಿಕ್ರಿಯಿಸಿ, “ಭಾರತವು ಅಮೆರಿಕದಿಂದ ಬೇಷರತ್ ಕ್ಷಮೆಯಾಚನೆಗೆ ಒತ್ತಾಯಿಸಬೇಕಿತ್ತು. ರುಬಿಯೊ ಅವರ ಹೇಳಿಕೆಯು ಆದೇಶದ ಧಾಟಿಯಲ್ಲಿದೆಯೇ ಹೊರತು ಪಶ್ಚಾತ್ತಾಪದ ರೀತಿಯಲ್ಲಿಲ್ಲ” ಎಂದರು. ಅಲ್ಲದೆ, ಘಟನೆಯ ಬಗ್ಗೆ ಸಚಿವ ಜೈಶಂಕರ್ ಅವರು, “ಇಂತಹ ಕ್ರಮಗಳು ಸಮರ್ಥನೀಯವಲ್ಲ” ಎಂದು ಅತ್ಯಂತ ಮೃದುವಾದ ಪದಗಳನ್ನು ಬಳಸಿದ್ದನ್ನು ಖೇರಾ ಕಟುವಾಗಿ ಟೀಕಿಸಿದರು. “ಸಮರ್ಥನೀಯವಲ್ಲ ಎಂಬ ಪದಗಳನ್ನು ವಿಮಾನ ನಿಲ್ದಾಣದಲ್ಲಿ ದುಬಾರಿ ಬೆಲೆಯ ಸ್ಯಾಂಡ್‌ವಿಚ್‌ಗೆ ಬಳಸಬಹುದು. ಮುಗ್ಧರ ಜೀವ ತೆಗೆದ ಮಿಲಿಟರಿ ದಾಳಿಯನ್ನು ‘ಕಾನೂನುಬಾಹಿರ, ಅಜಾಗರೂಕ ಮತ್ತು ಸ್ವೀಕಾರಾರ್ಹವಲ್ಲ’ ಎಂದು ಕರೆಯಬೇಕಿತ್ತು” ಎಂದು ಅವರು ಅಭಿಪ್ರಾಯಪಟ್ಟರು.
ಹಾರ್ಮುಜ್ ಜಲಸಂಧಿಯಲ್ಲಿ ಕಾರ್ಯಾಚರಿಸುವ ವಾಣಿಜ್ಯ ಹಡಗುಗಳು ಅಮೆರಿಕದ ಪಡೆಗಳ ಸೂಚನೆಗಳನ್ನು ಪಾಲಿಸಲೇಬೇಕು. ಉಲ್ಲಂಘನೆ ಮತ್ತು ಇರಾನ್ ತೈಲದ ಅಕ್ರಮ ಸಾಗಾಣಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಮಾರ್ಕೊ ರುಬಿಯೊ ಅವರು ಜೈಶಂಕರ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಎಚ್ಚರಿಕೆ ನೀಡಿದ್ದರು.




