ದೇಶದಲ್ಲೇ ಮೊದಲ ಬಾರಿಗೆ, ಮಧ್ಯಪ್ರದೇಶ ಸರ್ಕಾರವು ತನ್ನ ರಾಜ್ಯ ವಕ್ಫ್ ಮಂಡಳಿಯನ್ನು ಪುನಾರಚನೆ ಮಾಡಿದ್ದು, ಈ ಮಂಡಳಿಗೆ ಇಬ್ಬರು ಹಿಂದೂ ಸದಸ್ಯರನ್ನು ನೇಮಕ ಮಾಡುವ ಮೂಲಕ ಸಂಚಲನ ಮೂಡಿಸಿದೆ.
ವಕ್ಫ್ ತಿದ್ದುಪಡಿ ಕಾಯಿದೆ, 2025ರ ಅನ್ವಯ ರಾಜ್ಯ ವಕ್ಫ್ ಮಂಡಳಿಯನ್ನು ಪುನಾರಚನೆ ಮಾಡಿದ ದೇಶದ ಮೊದಲ ರಾಜ್ಯ ಎನಿಸಿದೆ ಮಧ್ಯಪ್ರದೇಶ. ಈ ಹಿಂದೆ ವಕ್ಫ್ ಮಂಡಳಿಯಲ್ಲಿ ಕೇವಲ ಮುಸ್ಲಿಂ ಸಮುದಾಯದವರೇ ಇರುತ್ತಿದ್ದರು. ಆದರೆ ಹೊಸ ಕಾಯಿದೆಯು ಕನಿಷ್ಠ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಮಂಡಳಿಯಲ್ಲಿ ಸೇರಿಸುವುದನ್ನು ಕಡ್ಡಾಯಗೊಳಿಸಿದೆ.
ಮೋಹನ್ ಯಾದವ್ ನೇತೃತ್ವದ ಸರ್ಕಾರವು ಇಂದೋರ್‌ನ ಮನೋಜ್ ಮಾಲ್ಪಾನಿ ಮತ್ತು ಗುಣಾದ ರಘೋಗಢದ ಅನಿಮೇಶ್ ಭಾರ್ಗವ ಅವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸಿದೆ. ಸಂವರ್ ಪಟೇಲ್ ಅವರು ಮಂಡಳಿಯ ಅಧ್ಯಕ್ಷರಾಗಿ ಮರುನೇಮಕಗೊಂಡಿದ್ದಾರೆ. ಈ 10 ಸದಸ್ಯರ ಮಂಡಳಿಯಲ್ಲಿ ನಜ್ಮಾ ಹೆಪ್ಟುಲ್ಲಾ, ಆತಿಫ್ ಅಖೀಲ್, ಫೈಜಾನ್ ಖಾನ್, ಫಾತಿಮಾ ಚೌಧರಿ, ಶೈಸ್ತಾ ಸುಲ್ತಾನ್ ಮತ್ತು ಶಬಾನಾ ಖಾನ್ ಕೂಡ ಇದ್ದಾರೆ.
ಈ ನಿರ್ಧಾರ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಈ ಕ್ರಮವನ್ನು ಬಲವಾಗಿ ವಿರೋಧಿಸಿದ್ದು, “ಈ ವಿಷಯ ನ್ಯಾಯಾಲಯದಲ್ಲಿರುವಾಗ ಈ ಅವಸರದ ಅಗತ್ಯವೇನಿತ್ತು? ನಾನು ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದಸ್ಯರಾಗಿ ನೇಮಕಗೊಂಡಿರುವ ಅನಿಮೇಶ್ ಭಾರ್ಗವ ಅವರು ಇದನ್ನು ಧಾರ್ಮಿಕ ಕೋನದಿಂದ ನೋಡುವ ಬದಲು, ಆಡಳಿತಾತ್ಮಕ ಸುಧಾರಣೆ ಮತ್ತು ಪಾರದರ್ಶಕತೆಯ ದೃಷ್ಟಿಯಿಂದ ನೋಡಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಪ್ರತಿಕ್ರಿಯಿಸಿ, “ವಕ್ಫ್ ಆಸ್ತಿಗಳು ಸಾರ್ವಜನಿಕ ಕಲ್ಯಾಣಕ್ಕಾಗಿ ಇರಬೇಕು, ಅವುಗಳ ದುರುಪಯೋಗವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ಮುಸ್ಲಿಂ ವಿದ್ವಾಂಸ ಇಮ್ರಾನ್ ಖೋಖರ್, ಇಸ್ಲಾಂ ಮತ್ತು ವಕ್ಫ್ ವ್ಯವಸ್ಥೆಯ ಬಗ್ಗೆ ಅರಿವಿಲ್ಲದವರನ್ನು ಮಂಡಳಿಗೆ ನೇಮಿಸುವುದರ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿದ್ದಾರೆ.
ಇತ್ತ ಹಿಂದೂ ಧಾರ್ಮಿಕ ಮುಖಂಡ ಅನಿಲಾನಂದ ಮಹಾರಾಜ್, ಈ ಕ್ರಮವನ್ನು ಬೆಂಬಲಿಸಿದ್ದು, ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿಕೊಂಡಿದ್ದವರಿಗೆ ಮಾತ್ರ ಈ ನೇಮಕದಿಂದ ಆತಂಕ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಹಕಾರ ವಲಯ | ಶೀಘ್ರವೇ ಬರಲಿದೆ ‘ಸಹಕಾರಿ ಜೀವ ವಿಮೆ’ ಮತ್ತು ‘ಯುಟಿಲಿಟಿ ಅಗ್ರಿಗೇಟರ್’
ಈ ಕಾಯಿದೆಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾಯಿದೆಯ ಕೆಲವು ವಿವಾದಾತ್ಮಕ ಅಂಶಗಳ ಕುರಿತು ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಅಸ್ಸಾಂ ರಾಜ್ಯಗಳು ಈ ಕಾಯಿದೆಯ ಪರವಾಗಿ ನಿಲುವು ವ್ಯಕ್ತಪಡಿಸಿದ್ದವು. ಹೀಗಾಗಿ, ಈ ರಾಜ್ಯಗಳು ಸಹ ತಮ್ಮ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರವು ಈ ಬದಲಾವಣೆಯು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.




