ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಬರುವ 8 ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಕಾಲೇಜು ಸಮವಸ್ತ್ರ ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎಂಬ ವಿಚಿತ್ರ ನಿಯಮವನ್ನೂ ಹೇರಲಾಗಿತ್ತು.
ಮಾರ್ಚ್ 31ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಸಾನಂದ್‌ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕಲೆಹಾಕಲು ನೀಡಿರುವ ಸರ್ಕಾರಿ ಆದೇಶವು ತೀವ್ರ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. “ಬಲವಂತವಾಗಿ ಜನಸಂದಣಿ ನಿರ್ಮಿಸಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.
ತಾಂತ್ರಿಕ ಶಿಕ್ಷಣ ಆಯುಕ್ತರು ಈ ಆದೇಶವನ್ನು ಹೊರಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಪ್ರಧಾನ ಮಂತ್ರಿಯವರ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಕಳುಹಿಸುವಂತೆ ಸೂಚಿಸಿದ್ದಾರೆ. ಇನ್ನು ಕಾಲೇಜುಗಳಿಗೆ ಬೋಧನಾ ಸಿಬ್ಬಂದಿಯೊಂದಿಗೆ ತಲಾ 100 ರಿಂದ 250 ವಿದ್ಯಾರ್ಥಿಗಳನ್ನು ಕಳುಹಿಸಲು ಸೂಚಿಸಲಾಗಿದೆ.
ಇದನ್ನು ಓದಿದ್ದೀರಾ? ಕೇರಳ ರಾಜಕೀಯದಲ್ಲಿ ಮಿಂಚಿದ ಪ್ರಭಾವಿ ದಂಪತಿಗಳಿವರು
ಈ ವಿಚಾರದಲ್ಲಿ ಸದ್ಯ ರಾಜಕೀಯ ವಿವಾದ ಸೃಷ್ಟಿಯಾಗಿದೆ. ಈ ಆದೇಶದ ಉದ್ದೇಶವನ್ನು ವಿಪಕ್ಷಗಳು ಪ್ರಶ್ನಿಸಿದೆ. “ಸರ್, ಜನಪ್ರಿಯತೆಯನ್ನು ಪ್ರದರ್ಶಿಸುವ ಉದ್ದೇಶ ಇದ್ದಾಗ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕು ಎಂದು ಆದೇಶಿಸಲಾಗುತ್ತದೆ” ಎಂದು ಕಾಂಗ್ರೆಸ್ ಟೀಕಿಸಿದೆ. “ಆದರೆ ಈ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಗಳಿಂದ ಖಾಲಿ ಉಳಿದಿರುವ ಸೀಟುಗಳ ಭರ್ತಿಗೆ ಇದೇ ರೀತಿಯ ತುರ್ತು ಏಕೆ ತೋರಲಿಲ್ಲ” ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
“ಪ್ರಧಾನಿ ಗುಜರಾತ್‌ಗೆ ಭೇಟಿ ನೀಡಿದಾಗಲೆಲ್ಲಾ ಅಥವಾ ಬಿಜೆಪಿಯ ಪ್ರಮುಖ ಕಾರ್ಯಕ್ರಮ ನಡೆದಾಗಲೆಲ್ಲಾ, ಜನಸಮೂಹವನ್ನು ಒಟ್ಟುಗೂಡಿಸಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಧ್ಯಾಪಕರನ್ನು ಒಟ್ಟುಗೂಡಿಸಲಾಗುತ್ತದೆ. ಈ ಬಾರಿ, 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು 26 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸೂಚನೆಗಳು ಹೋಗಿವೆ” ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಆರೋಪಿಸಿದ್ದಾರೆ.
ಇನ್ನು ಈ ರೀತಿಯಾಗಿ ಜನ ಸೇರಿಸುವುದೆಂದರೆ ಬಿಜೆಪಿಯಲ್ಲಿರುವ ಆಳವಾದ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತದೆ ಎಂದೂ ದೋಷಿ ಹೇಳಿದ್ದಾರೆ. “ಒಂದೆಡೆ, ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ 54% ರಿಂದ 64% ಸೀಟುಗಳು ವರ್ಷಗಳಿಂದ ಖಾಲಿಯಾಗಿವೆ. ಮತ್ತೊಂದೆಡೆ, 3 ಮತ್ತು 4 ನೇ ತರಗತಿಯ ಸಿಬ್ಬಂದಿ ಹುದ್ದೆಗಳಲ್ಲಿ 64% ರಿಂದ 74% ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ಪ್ರಯೋಗಾಲಯ ಸಹಾಯಕರು, ಗ್ರಂಥಪಾಲಕರು ಅಥವಾ ಅಗತ್ಯ ಸಹಾಯಕ ಸಿಬ್ಬಂದಿ ಇಲ್ಲದೆ, ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನವನ್ನು ಪಡೆಯುತ್ತಾರೆ ಎಂದು ಹೇಗೆ ನಿರೀಕ್ಷಿಸುವುದು” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಮೋದಿಯ ವಿವಿಧ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಅಧಿಕಾರಿಗಳು ಅಥವಾ ಶಿಕ್ಷಣ ಸಂಸ್ಥೆಗಳು ಆದೇಶ ಹೊರಡಿಸಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. 2022ರ ನವೆಂಬರ್‌ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮತ್ತು ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಿಯು ಕಾಲೇಜುಗಳ ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಣ ಇಲಾಖೆ ಆದೇಶಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದಾದ ಬಳಿಕ ಆದೇಶವನ್ನು ಹಿಂಪಡೆಯಲಾಗಿತ್ತು.
ಇದನ್ನು ಓದಿದ್ದೀರಾ? ಎಐ ಶೃಂಗಸಭೆ: ಮೋದಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಅರೆಬೆತ್ತಲೆ ಪ್ರತಿಭಟನೆ
ಹಾಗೆಯೇ 2023ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಗೆ ಪ್ರತಿಯೊಂದು ಪಿಯು ಕಾಲೇಜಿನಿಂದ ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆತರಬೇಕು ಎಂದು ಧಾರವಾಡ ಜಿಲ್ಲೆಯ ಪಿಯು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಟೀಕೆಗಳು ವ್ಯಕ್ತವಾದ ಬಳಿಕ ತಪ್ಪಾಗಿ ಆದೇಶ ಹೊರಡಿಸಲಾಗಿದೆ ಎಂದು ಆದೇಶ ಹಿಂಪಡೆಯಲಾಗಿತ್ತು.
ಅದೇ ವರ್ಷದ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಬರುವ 8 ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಕಾಲೇಜು ಸಮವಸ್ತ್ರ ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎಂಬ ವಿಚಿತ್ರ ನಿಯಮವನ್ನೂ ಹೇರಲಾಗಿತ್ತು. 2016ರಲ್ಲಿ ಮಧ್ಯಪ್ರದೇಶದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಮೋದಿ ಕಾರ್ಯಕ್ರಮಕ್ಕೆ ಇಂದೋರ್‌ನ ಕಾಲೇಜುಗಳಿಂದ ತಲಾ 100 ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹಾಜರಾಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಈ ಎಲ್ಲ ಸಂದರ್ಭಗಳಲ್ಲಿಯೂ ರಾಜಕೀಯಕ್ಕೆ ವಿದ್ಯಾರ್ಥಿಗಳನ್ನು ಬಲವಂತವಾಗಿ ಬಳಸಿಕೊಳ್ಳುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.




