ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು, ಕೋಮು ಸೂಕ್ಷ್ಮ ವಿಷಯಗಳ ಕುರಿತು ಪರಿಶೀಲಿಸದ, ದಾರಿತಪ್ಪಿಸುವ ಹಾಗೂ ಪ್ರಚೋದನಾಕಾರಿ ಮಾಹಿತಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ‘ಝೀ ನ್ಯೂಸ್’ ವಾಹಿನಿಗೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (NBDSA) ತೀವ್ರ ಛೀಮಾರಿ ಹಾಕಿದೆ.
ಮುಸ್ಲಿಮರ ವಿರುದ್ಧ ಕೋಮುದ್ವೇಷ ಪ್ರಚೋದಿತ ವರದಿಗಳನ್ನು ಪ್ರಸಾರ ಮಾಡಿದ್ದ ‘ಝೀ ನ್ಯೂಸ್’ ವಿರುದ್ಧ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿರುವ NBDSA ಅಧ್ಯಕ್ಷ ಎ.ಕೆ. ಸಿಕ್ರಿ, “ಝೀ ನ್ಯೂಸ್ ವಾಹಿನಿಯು ನಿಖರತೆ, ಸತ್ಯಾಸತ್ಯತೆಯ ಪರಿಶೀಲನೆ ಹಾಗೂ ಕೋಮು ಸೌಹಾರ್ದತೆಯಂತಹ ಪತ್ರಿಕೋದ್ಯಮದ ಮೂಲಭೂತ ತತ್ವಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿ ತುಣುಕನ್ನು ಅಂತರ್ಜಾಲದಿಂದ ತಕ್ಷಣವೇ ತೆಗೆದುಹಾಕುವಂತೆ ವಾಹಿನಿಗೆ ಸೂಚಿಸಿರುವ ಪ್ರಾಧಿಕಾರ, ಮತ್ತೊಂದು ಪ್ರಕರಣದಲ್ಲಿ ಎಚ್ಚರಿಕೆ ನೀಡಿ ದೂರನ್ನು ಇತ್ಯರ್ಥಪಡಿಸಿದೆ.
ಕನ್ವರ್ ಯಾತ್ರೆ ಕುರಿತ ಪ್ರಚೋದನಾಕಾರಿ ಚರ್ಚೆ
2025ರ ಜುಲೈ 13ರಂದು ಝೀ ನ್ಯೂಸ್‌ನಲ್ಲಿ ಪ್ರಸಾರವಾದ ಚರ್ಚಾ ಕಾರ್ಯಕ್ರಮದಲ್ಲಿ, ದೆಹಲಿಯ ರಸ್ತೆಯೊಂದರಲ್ಲಿ ಗಾಜಿನ ಚೂರುಗಳು ಬಿದ್ದಿದ್ದ ಘಟನೆಯನ್ನು ದೊಡ್ಡದಾಗಿ ಬಿಂಬಿಸಲಾಗಿತ್ತು. ಇದು ಶಿವಭಕ್ತರ ‘ಕನ್ವರ್ ಯಾತ್ರೆ’ಯನ್ನು ಗುರಿಯಾಗಿಸಿಕೊಂಡು ನಡೆಸಿರುವ ಸಂಚು ಇರಬಹುದು ಎಂದು ದ್ವೇಷಪೂರಿತ ಚರ್ಚೆ ನಡೆಸಿ, ಪ್ರಸಾರ ಮಾಡಿತ್ತು.
ಆದರೆ, ಅಧಿಕೃತ ದಾಖಲೆಗಳ ಪ್ರಕಾರ, ಗಾಜಿನ ಫಲಕಗಳನ್ನು ಸಾಗಿಸುತ್ತಿದ್ದ ಇ-ರಿಕ್ಷಾಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಕಾರಣ ಗಾಜುಗಳು ರಸ್ತೆಯ ಮೇಲೆ ಬಿದ್ದಿದ್ದವು. ಇದರಲ್ಲಿ ಯಾವುದೇ ಕೋಮು ಸಂಚು ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಈ ಲೇಖನ ಓದಿದ್ದೀರಾ?: ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!
ಸತ್ಯಾಸತ್ಯತೆಯನ್ನು ಪರಿಶೀಲಿಸದೆ ವರದಿ ಪ್ರಸಾರ ಮಾಡಿದ ಝೀ ನ್ಯೂಸ್‌ಅನ್ನು ತರಾಟೆಗೆ ತೆಗೆದುಕೊಂಡಿರುವ ಎನ್‌ಬಿಡಿಎಸ್‌ಎ, “ಯಾವುದೇ ಸ್ವತಂತ್ರ ಪರಿಶೀಲನೆ ನಡೆಸದೆ, ಕೇವಲ ಊಹಾಪೋಹಗಳ ಆಧಾರದ ಮೇಲೆ ವಾಹಿನಿಯು ತನ್ನದೇ ಆದ ನಿರೂಪಣೆಯನ್ನು ಸೃಷ್ಟಿಸಿದೆ. ಚರ್ಚೆಯ ವೇಳೆ ನಿರೂಪಕರು ಕೇಳಿದ ಪ್ರಶ್ನೆಗಳು ಸಮಾಜದಲ್ಲಿ ದ್ವೇಷ ಉಂಟುಮಾಡುವಂತಿದ್ದವು. ಒಂದು ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಹಚ್ಚಿ, ಕೋಮು ಸೌಹಾರ್ದತೆ ಕೆಡಿಸುವ ಇಂತಹ ಧೋರಣೆ ಸುದ್ದಿ ವಾಹಿನಿಗೆ ಶೋಭಿಸುವುದಿಲ್ಲ” ಎಂದು ಕಿಡಿಕಾರಿದೆ.
ಬಾಂಗ್ಲಾದೇಶದ ಹೆಸರಿನಲ್ಲಿ ಪಶ್ಚಿಮ ಬಂಗಾಳದ ವಿಡಿಯೋ ಪ್ರಸಾರ
2024ರ ಡಿಸೆಂಬರ್ 1ರಂದು ಇದೇ ಝೀ ನ್ಯೂಸ್ ಪ್ರಸಾರ ಮಾಡಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ, ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಿ ದೇವತಾ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸುದ್ದಿ ಭಿತ್ತರಿಸಿತ್ತು.
ಈ ಕುರಿತು ವಕೀಲ ಇಂದ್ರಜೀತ್ ಘೋರ್ಪಡೆ ಎಂಬುವವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. “ವಾಹಿನಿಯು ಪ್ರಸಾರ ಮಾಡಿದ ದೃಶ್ಯಗಳು ಬಾಂಗ್ಲಾದೇಶದ್ದಲ್ಲ, ಬದಲಿಗೆ ಪಶ್ಚಿಮ ಬಂಗಾಳದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಆಚರಣೆಯದ್ದಾಗಿದೆ” ಎಂದು ಅವರು ಸಾಕ್ಷ್ಯ ಒದಗಿಸಿದ್ದರು. ಬಂಗಾಳದಲ್ಲಿ ಹಳೆಯ ವಿಗ್ರಹವನ್ನು ವಿಧಿವತ್ತಾಗಿ ಭಿನ್ನಗೊಳಿಸಿ, ಹೊಸ ವಿಗ್ರಹ ಪ್ರತಿಷ್ಠಾಪಿಸುವವರೆಗೆ ನೀರಿನಲ್ಲಿ ಮುಳುಗಿಸುವ ಪದ್ಧತಿ ಇದೆ ಎಂಬುದನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದರು.
ಪ್ರಾಧಿಕಾರದ ಎದುರು ತಾನು ಪ್ರಸಾರ ಮಾಡಿದ ದೃಶ್ಯಗಳು ಬಾಂಗ್ಲಾದೇಶದ್ದೇ ಎಂದು ಸಾಬೀತುಪಡಿಸಲು ಝೀ ನ್ಯೂಸ್ ವಿಫಲವಾಯಿತು. ಈ ವರದಿಯು ದಾರಿತಪ್ಪಿಸುವ ಮತ್ತು ಸುಳ್ಳು ಆರೋಪದಿಂದ ಕೂಡಿದೆ ಎಂದು ಪ್ರಾಧಿಕಾರ ಗಮನಿಸಿ, ವಾಹಿನಿಯು ಈಗಾಗಲೇ ಆ ವಿಡಿಯೋವನ್ನು ತನ್ನ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಿರುವ ಕಾರಣ, ದಂಡ ವಿಧಿಸದೆ ಕೇವಲ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದೆ.



