ಪೊಲೀಸ್ ಅಧಿಕಾರಿಯ ಪತ್ನಿಯೊಬ್ಬರು (26) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಲಕ್ಷ್ಮಿ ಪ್ರಿಯಾ ಎಂದು ಹೆಸರಿಸಲಾಗಿದೆ. ಲಕ್ಷ್ಮಿ ಅವರು ತಮ್ಮ ಸಾವಿಗೂ ಮುನ್ನ ತನ್ನ ಮೊಬೈಲ್ ಫೋನಿನ ಪಾಸ್‌ವರ್ಡ್ ಅನ್ನು ತಂಗಿಗೆ ಕಳುಹಿಸಿದ್ದಾರೆ. ಪತಿ ಮತ್ತು ಆತನ ಪೋಷಕರು ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. ಅವರು ನೀಡಿದ ಮಾನಸಿಕ ಮತ್ತು ದೈಹಿಕ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗಷ್ಟೇ ದೇಶಾದ್ಯಂತ ಸದ್ದು ಮಾಡಿದ್ದ, ನಿವೃತ್ತ ನ್ಯಾಯಾಧೀಶರ ಕುಟುಂಬಸ್ಥರು ಭಾಗಿಯಾಗಿದ್ದಾರೆನ್ನಲಾದ ತ್ವಿಶಾ ಶರ್ಮಾ ಸಾವಿನ ಪ್ರಕರಣದ ತನಿಖೆ ನಡೆಯುತ್ತಿರುವ ಸಮಯದಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.
ಲಕ್ಷ್ಮಿ ಪ್ರಿಯಾ ಅವರು 2023ರ ಮೇ 11ರಂದು ಮೈಸೂರಿನಲ್ಲಿ ಪೊಲೀಸ್ ಅಧಿಕಾರಿ ರಾಜೇಶ್ ಆರಾಧ್ಯ ಎಂಬಾತನನ್ನು ವಿವಾಹವಾಗಿದ್ದರು. ರಾಜೇಶ್ ಬೆಂಗಳೂರಿನ ಮರತಹಳ್ಳಿಯ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮಿ ಅವರು ಸಾವಿಗೂ ಮುನ್ನ ತಮ್ಮ ಮೊಬೈಲ್ ಫೋನಿನ ಪಾಸ್‌ವರ್ಡ್ ಅನ್ನು ವಾಟ್ಸಾಪ್ ಮೂಲಕ ಕಿರಿಯ ಸಹೋದರಿ ಜಯಶ್ರೀ ಅವರಿಗೆ ಕಳುಹಿಸಿದ್ದರು. ಇದನ್ನು ನೋಡಿ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಲಕ್ಷ್ಮಿ ಪ್ರಿಯಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದಾದ ಕೆಲವೇ ಸಮಯದ ನಂತರ ಪತಿ ರಾಜೇಶ್ ಆರಾಧ್ಯ ಕರೆ ಮಾಡಿ, ಲಕ್ಷ್ಮಿ ಪ್ರಿಯಾ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಮದುವೆಯಾದ ದಿನದಿಂದಲೇ ಲಕ್ಷ್ಮಿ ಪ್ರಿಯಾ ಅವರಿಗೆ ರಾಜೇಶ್, ಆತನ ತಂದೆ ಪಾಲಾಕ್ಷಾರಾಧ್ಯ ಹಾಗೂ ತಾಯಿ ಭಾಗ್ಯಮ್ಮ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಲಕ್ಷ್ಮಿ ಅವರ ಪೋಷಕರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?
ಮೃತರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರಾಜೇಶ್ ಮತ್ತು ಆತನ ತಂದೆ-ತಾಯಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬಳ್ಳಾರಿಯಲ್ಲೂ ನಡೆದಿದೆ ಇಂತಹುದೇ ಘಟನೆ
ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಕಾರಣಕ್ಕಾಗಿ ಬಳ್ಳಾರಿಯಲ್ಲೂ ಇತ್ತೀಚೆಗೆ 24 ವರ್ಷದ ವಿವಾಹಿತ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಐಶ್ವರ್ಯಾ ಎಂಬವರು ಮೇ 17 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯರಾಗಿರುವ ಆಕೆಯ ಪತಿ ಪ್ರದೀಪ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಶ್ವರ್ಯಾ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ, ತನ್ನ ಪತಿ ಮತ್ತು ಆತನ ಕುಟುಂಬಸ್ಥರು ತಮಗೆ ನೀಡಿದ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.



