ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ಕೈಗಾರಿಕೆ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಯನ್ನು ಬೇರೊಂದು ಕಂಪನಿಗೆ ನೀಡಿರುವುದನ್ನು ವಿರೋಧಿಸಿ ಹೋರಾಟ ನಡೆಯತ್ತಿದ್ದು, ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ.
“ಕಳೆದ ನಾಲ್ಕು ವರ್ಷಗಳಿಂದ ಭೂ ಸಂತ್ರಸ್ತರ ಹೋರಾಟ ನಡೆಯುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಜಾಣಮೌನ ವಹಿಸಿದ್ದರಿಂದ ರೈತರು ಆಕ್ರೋಶಗೊಂಡಿದ್ದು, ಕಳೆದ 12 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇನ್ನು, 2012ರಲ್ಲಿ ಪ್ರತಿ ಎಕರೆಗೆ 8 ಲಕ್ಷ ರೂಪಾಯಿ ನೀಡಿ ಕೆಐಎಡಿಬಿ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಅರ್ಸೆಲರ್ ಮಿತ್ತಲ್ ಕಂಪನಿಗಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಇದುವರೆಗೂ ಉಪಯೋಗಿಸಿರಲಿಲ್ಲ. ಈಗ ಅಕ್ರಮವಾಗಿ ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುತ್ತಿದೆ” ಎಂದು ಧರಣಿ ನಿರತರು ಆರೋಪಿಸಿದ್ದಾರೆ.

“ಭೂಸ್ವಾಧೀನ ಸಂದರ್ಭದಲ್ಲಿ ಈಗಿನ ಸಂಸದರಾದ ಈ. ತುಕಾರಾಮ್ ಅವರು ಆಗ ಸಂಡೂರು ಎಂಎಲ್ಎ ಆಗಿದ್ದರು. ರೈತರಿಗೆ ಅನ್ಯಾಯವಾಗುವ ಸುಳಿವಿದ್ದಾಗಿಯೂ ಭೂಸ್ವಾಧೀನ ಪ್ರಕ್ರಿಯೆಗೆ ಸಹಿ ಮಾಡಬಾರದಿತ್ತು. 2024ರ ಸಂಡೂರು ಉಪ ಚುನಾವಣೆಯ ಸಂದರ್ಭದಲ್ಲಿ ಈ. ತುಕಾರಾಂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭೂ ಸಂತ್ರಸ್ತರ ಭೇಟಿ ಏರ್ಪಡಿಸಿದರು. ಅಂದು ಸಮಸ್ಯೆ ಇತ್ಯರ್ಥ ಮಾಡಲು 6 ತಿಂಗಳ ಸಮಯ ಕೇಳಲಾಗಿತ್ತು, ಮೂರು ವರ್ಷ ಕಳೆದರೂ ಸಮಸ್ಯೆಗೆ ಯಾವುದೇ ಪರಿಹಾರ ದೊರೆತಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ಈ ಕುರಿತು ಮೌನ ವಹಿಸಿದ್ದಾರೆ” ಎಂದು ಭೂ ಸಂತ್ರಸ್ತರಾದ ರಮೇಶ್ ಅವರು ಆರೋಪಿಸಿದ್ದಾರೆ.
“ಕುಡಿತಿನಿ, ಹರಗಿನದೋಣಿ, ವೇಣಿವೀರಾಪುರ, ಕೊಳಗಲ್ಲು ಜಾನೆಕುಂಟೆ, ಸಿದ್ದಮನಹಳ್ಳಿ, ಏರಂಗಳ್ಳಿ ಗ್ರಾಮಗಳ ರೈತರು ಹೋರಾಟದಲ್ಲಿ ಭಾಗವಹಿಸಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೈತರ ಜೀವಕ್ಕೆ ಹಾನಿಯುಂಟಾದರೆ ಸರ್ಕಾರ ಮತ್ತು ಬಳ್ಳಾರಿ ಜಿಲ್ಲಾಡಳಿತವೇ ನೇರ ಹೊಣೆ” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.




