ಶಾಸಕಾಂಗವನ್ನು ಟೀಕಿಸಿದ ಮಾತ್ರಕ್ಕೆ ಸಂಸತ್ ಸದಸ್ಯರಲ್ಲದ ನಾಗರಿಕರು ಅಥವಾ ಪತ್ರಕರ್ತರ ವಿರುದ್ಧ ಶಾಸಕಾಂಗದ ವಿಶೇಷಾಧಿಕಾರವನ್ನು ಬಳಸುವಂತಿಲ್ಲ ಎಂದು ಮಾಜಿ ಲೋಕಸಭಾ ಸದಸ್ಯೆ ಹಾಗೂ CPI(M)ನ ಮಾಜಿ ಪೊಲಿಟ್‌ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸಂವಿಧಾನದ 105 ಮತ್ತು 194ನೇ ವಿಧಿಗಳ ಅಡಿಯಲ್ಲಿ ಸಂಸದರು ಹಾಗೂ ಶಾಸಕರಿಗೆ ನೀಡಿರುವ ವಿಶೇಷಾಧಿಕಾರಗಳ ವ್ಯಾಪ್ತಿ ಮತ್ತು ಮಿತಿಗಳ ಕುರಿತ ಸಾಂವಿಧಾನಿಕ ಉಲ್ಲೇಖದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಅನುಮತಿ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.
1989ರಲ್ಲಿ ಕಾನ್ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುಭಾಷಿಣಿ, 2014ರಿಂದ 2024ರವರೆಗೆ ಸಿಪಿಐ(ಎಂ)ನ ಪೊಲಿಟ್‌ಬ್ಯುರೊ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಶಾಸಕರಾಗಿ ವಿಶೇಷಾಧಿಕಾರಗಳ ಅಡಿಯಲ್ಲಿ ದೊರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಾವು ಬಳಸಿಕೊಂಡಿರುವ ಅನುಭವದ ಆಧಾರದಲ್ಲಿ ಈ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಶಾಸಕಾಂಗದ ಸ್ವತಂತ್ರ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಚಿತಪಡಿಸುವುದು, ಜನಪ್ರತಿನಿಧಿಗಳು ಸದನದಲ್ಲಿ ಮುಕ್ತವಾಗಿ ಚರ್ಚೆ ನಡೆಸಲು ಅವಕಾಶ ಕಲ್ಪಿಸುವುದು ವಿಶೇಷಾಧಿಕಾರಗಳ ಉದ್ದೇಶವಾಗಿದೆ. ಆದರೆ, ಸಂಸತ್ತು ಅಥವಾ ಅದರ ಸದಸ್ಯರನ್ನು ಸಾರ್ವಜನಿಕರ ಟೀಕೆ ಹಾಗೂ ಪರಿಶೀಲನೆಯಿಂದ ರಕ್ಷಿಸುವ ಸಾಮಾನ್ಯ ಅಧಿಕಾರವಾಗಿ ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಭಾಷಿಣಿ ಅಲಿ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಶಾಸಕಾಂಗದ ಕಾರ್ಯವೈಖರಿಯ ಕುರಿತು ಕಠಿಣ, ತೀಕ್ಷ್ಣ, ವಿವಾದಾತ್ಮಕ ಅಥವಾ ಅಸಮಾಧಾನಕರ ಟೀಕೆಗಳನ್ನು ಮಾಡುವ ಮಾತ್ರಕ್ಕೆ ಸದನದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದಂತಾಗುವುದಿಲ್ಲ . ಸದನದ ಸದಸ್ಯರಲ್ಲದ ನಾಗರಿಕರು ಅಥವಾ ಪತ್ರಕರ್ತರು ಸದನದ ಹೊರಗೆ ಮಾಡಿದ ಭಾಷಣ, ವರದಿ ಅಥವಾ ಟೀಕೆಗಳ ವಿರುದ್ಧ ವಿಶೇಷಾಧಿಕಾರವನ್ನು ಬಳಸಬೇಕಾದರೆ, ಅದಕ್ಕೂ ಶಾಸಕಾಂಗದ ಕಾರ್ಯನಿರ್ವಹಣೆಗೆ ಅಡ್ಡಿಯಾಗಿರುವುದಕ್ಕೂ ನೇರ ಹಾಗೂ ನಿಕಟ ಸಂಬಂಧವಿರಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸದನದ ಹೊರಗೆ ಮಾಡಿದ ಅಭಿವ್ಯಕ್ತಿಗಾಗಿ ಸದಸ್ಯರಲ್ಲದವರನ್ನು ವಿಶೇಷಾಧಿಕಾರದ ಹೆಸರಿನಲ್ಲಿ ವಿಚಾರಣೆಗೆ ಕರೆಯುವುದು, ಬಂಧಿಸುವುದು, ವಶಕ್ಕೆ ಪಡೆಯುವುದು ಅಥವಾ ಶಿಕ್ಷಿಸುವುದು ಸಂವಿಧಾನದ 19(1)(ಎ) ವಿಧಿಯಡಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯವೂ ಸೇರಿದೆ ಎಂದು ಅವರು ಹೇಳಿದ್ದಾರೆ. ವಿಶೇಷಾಧಿಕಾರಗಳ ಹೆಸರಿನಲ್ಲಿ ಮೂಲಭೂತ ಹಕ್ಕುಗಳು ಅಥವಾ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯಿಂದ ಹೊರತಾದ ಅಧಿಕಾರ ವಲಯವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿದೆ.
ಸುಭಾಷಿಣಿ ಅಲಿ ಅವರು ಎಂ.ಎಸ್.ಎಂ. ಶರ್ಮಾ ಮತ್ತು ಶ್ರೀಕೃಷ್ಣ ಸಿನ್ಹಾ (ಸರ್ಚ್‌ಲೈಟ್ ಪ್ರಕರಣ) ಹಾಗೂ 1964ರ ವಿಶೇಷ ಉಲ್ಲೇಖ ಸಂಖ್ಯೆ 1 (ಕೇಶವ್ ಸಿಂಗ್ ಪ್ರಕರಣ) ಸೇರಿದಂತೆ ಹಿಂದಿನ ತೀರ್ಪುಗಳಲ್ಲಿ ಪ್ರತಿಪಾದಿಸಲಾದ ತತ್ವಗಳ ಪ್ರಸ್ತುತತೆಯನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. 44ನೇ ಸಂವಿಧಾನ ತಿದ್ದುಪಡಿ ಹಾಗೂ ವಿಶೇಷಾಧಿಕಾರ, ಮೂಲಭೂತ ಹಕ್ಕುಗಳು ಮತ್ತು ನ್ಯಾಯಾಂಗ ಪರಿಶೀಲನೆಗೆ ಸಂಬಂಧಿಸಿದ ನಂತರದ ತೀರ್ಪುಗಳ ಹಿನ್ನೆಲೆಯಲ್ಲಿ ಈ ತತ್ವಗಳನ್ನು ಪರಿಶೀಲಿಸಬೇಕೆಂದು ಕೋರಿದ್ದಾರೆ.
ರಾಜಾ ರಾಮ್ ಪಾಲ್ ಮತ್ತು ಲೋಕಸಭಾ ಸ್ಪೀಕರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಕಾನೂನುಬಾಹಿರತೆ ಮತ್ತು ಅಸಾಂವಿಧಾನಿಕತೆಯ ಆಧಾರದ ಮೇಲೆ ಸಂಸದೀಯ ವಿಶೇಷಾಧಿಕಾರಗಳ ಬಳಕೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು ಎಂದು ಹೇಳಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ, ಅಮರಿಂದರ್ ಸಿಂಗ್ ಮತ್ತು ಪಂಜಾಬ್ ವಿಧಾನಸಭೆಯ ವಿಶೇಷ ಸಮಿತಿ ಪ್ರಕರಣದ ತೀರ್ಪನ್ನೂ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಬೊಫೋರ್ಸ್ ಹಗರಣ | 40 ವರ್ಷಗಳ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ರದ್ದು
2024ರಲ್ಲಿ ಏಳು ನ್ಯಾಯಮೂರ್ತಿಗಳ ಪೀಠವು ಸೀತಾ ಸೋರೆನ್ ಮತ್ತು ಭಾರತ ಒಕ್ಕೂಟ ಪ್ರಕರಣದಲ್ಲಿ ನೀಡಿದ ತೀರ್ಪನ್ನೂ ಅರ್ಜಿ ಆಧರಿಸಿದೆ. ಶಾಸಕಾಂಗದ ವಿಶೇಷಾಧಿಕಾರವು ಸದನದ ಸಾಮೂಹಿಕ ಕಾರ್ಯನಿರ್ವಹಣೆಯೊಂದಿಗೆ ಅಗತ್ಯ ಸಂಬಂಧ ಹೊಂದಿರುವ ನಡವಳಿಕೆಗಳಿಗೆ ಸೀಮಿತವಾಗಿರಬೇಕು ಎಂಬ ತತ್ವವನ್ನು ಈ ತೀರ್ಪು ಪ್ರತಿಪಾದಿಸಿದೆ ಎಂದು ಸುಭಾಷಿಣಿ ಅಲಿ ಉಲ್ಲೇಖಿಸಿದ್ದಾರೆ.
ಪತ್ರಕರ್ತರನ್ನು ವಿಶೇಷಾಧಿಕಾರ ಉಲ್ಲಂಘನೆಯ ಆರೋಪದಡಿ ಬಂಧಿಸುವಂತೆ ಸ್ಪೀಕರ್ ನಿರ್ದೇಶನ ನೀಡಬಹುದೇ ಎಂಬ ಪ್ರಶ್ನೆಯೂ ಪ್ರಸ್ತುತ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಉಲ್ಲೇಖದ ವಿಚಾರಣೆಯ ಭಾಗವಾಗಿದೆ. ಸಂವಿಧಾನದಿಂದ ದೊರೆತ ಅಧಿಕಾರವು ಸಂವಿಧಾನದ ಚೌಕಟ್ಟು ಮತ್ತು ಮಿತಿಗಳ ಒಳಗೇ ಕಾರ್ಯನಿರ್ವಹಿಸಬೇಕು ಎಂಬುದು ಸುಭಾಷಿಣಿ ಅಲಿ ಅವರ ಪ್ರಮುಖ ಪ್ರತಿಪಾದನೆಯಾಗಿದೆ.
ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಈ ಹಿಂದೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಹಾಗೂ ಪತ್ರಕರ್ತರಾದ ಅಂಜುಮ್, ಸೀಮಾ ಚಿಷ್ತಿ ಸೇರಿದಂತೆ ಇತರರೂ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 6ರಿಂದ ಏಳು ನ್ಯಾಯಮೂರ್ತಿಗಳ ಪೀಠವು ಈ ಸಾಂವಿಧಾನಿಕ ಉಲ್ಲೇಖದ ವಿಚಾರಣೆ ಆರಂಭಿಸಲಿದೆ. ಸುಭಾಷಿಣಿ ಅಲಿ ಪರವಾಗಿ ವಕೀಲೆ ಆರ್ತಿ ರಾಜನ್ ವಾದಿಸಲಿದ್ದಾರೆ.




