ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಜನವರಿಯಲ್ಲಿ ಅಧಿಸೂಚಿಸಿದ ನೂತನ ‘ಸಮಾನತೆ ಮತ್ತು ತಾರತಮ್ಯ ತಡೆ ನಿಯಮಾವಳಿ-2026’ ವಿರುದ್ಧ ಮತ್ತೆ ದೇಶಾದ್ಯಂತ ಭಾರೀ ಚರ್ಚೆ ಮತ್ತು ಜಾತಿ ಆಧಾರಿತ ಸಂಘಟನೆಗಳ ತೀವ್ರ ಪ್ರತಿಭಟನೆ ನಡೆಯುತ್ತಿವೆ. ರಾಜಸ್ಥಾನದ ಜೈಪುರದಲ್ಲಿ ರಜಪೂತ ಸಮುದಾಯದ ಪ್ರಭಾವಿ ಸಂಘಟನೆಯಾದ ‘ಕರ್ಣಿ ಸೇನೆ’ ಆಯೋಜಿಸಿದ್ದ ಬೃಹತ್ ರ್‍ಯಾಲಿಯಲ್ಲಿ ಹಿಂಸಾಚಾರ ಮತ್ತು ಪೊಲೀಸ್ ಲಾಠಿಚಾರ್ಜ್ ನಡೆದಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನಿಂದಾಗಿ ಈ ವಿವಾದವು ಮತ್ತಷ್ಟು ತೀವ್ರ ಹಂತಕ್ಕೆ ತಲುಪಿದೆ. ಮೃತನ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸರ್ಕಾರ ಸಮ್ಮತಿಸಿದರೂ, ಯುಜಿಸಿ ನಿಯಮಾವಳಿಗಳ ಸುತ್ತಲಿನ ಪ್ರತಿಭಟನೆಗಳು ಮುಂದುವರೆದಿವೆ.
ಯುಜಿಸಿ ನೂತನ ನಿಯಮಗಳಲ್ಲೇನಿದೆ?
ಯುಜಿಸಿ 2026ರ ಜನವರಿ 13ರಂದು ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ ನಿಯಮಾವಳಿ-2026’ಅನ್ನು ಅಧಿಸೂಚಿಸಿತು. ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ, ಜನಾಂಗ, ಲಿಂಗ, ಜನ್ಮಸ್ಥಳ, ಜಾತಿ ಅಥವಾ ಅಂಗವಿಕಲತೆಯ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ನಿಯಮಗಳ ಪ್ರಮುಖ ಉದ್ದೇಶವಾಗಿದೆ.
ವಿಶೇಷವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗಗಳು (OBC), ಆರ್ಥಿಕವಾಗಿ ಹಿಂದುಳಿದ ವಿಭಾಗಗಳು (EWS) ಹಾಗೂ ವಿಕಲಚೇತನ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ‘ಸಮಾನ ಅವಕಾಶ ಕೋಶ’ (Equal Opportunity Cells) ಮತ್ತು ‘ಸಮಾನತೆ ದಳ’ (Equity Squads) ಸ್ಥಾಪನೆಯನ್ನು ಈ ಕಾಯಿದೆ ಕಡ್ಡಾಯಗೊಳಿಸಿದೆ. 2012ರಲ್ಲಿ ಜಾರಿಯಲ್ಲಿದ್ದ ಹಳೆಯ ನಿಯಮಗಳಿಗೆ ಹೋಲಿಸಿದರೆ, 2026ರ ನಿಯಮಗಳು ತಾರತಮ್ಯ ಎಸಗುವ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಮತ್ತು ಅನುದಾನ ತಡೆಯುವಂತಹ ಕಠಿಣ ಶಿಕ್ಷಾತ್ಮಕ ಅಧಿಕಾರವನ್ನು ಯುಜಿಸಿಗೆ ನೀಡಿವೆ.
ಈ ನಿಯಮಗಳನ್ನು ಜಾರಿಗೆ ತರಲು ಕಾರಣವೇನು?
ಉನ್ನತ ಶಿಕ್ಷಣ ಸಂಸ್ಥೆಗಳು, ಐಐಟಿ, ವೈದ್ಯಕೀಯ ಕಾಲೇಜುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಇಂದಿಗೂ ತಾಂಡವವಾಡುತ್ತಿದೆ. ಅನೇಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಜಾತಿ ಆಧಾರಿತ ಕಿರುಕುಳದ ಕಾರಣದಿಂದಾಗಿ 2016ರಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲ ಮತ್ತು 2019ರಲ್ಲಿ ಮುಂಬೈನಲ್ಲಿ ನಡೆದ ಡಾ. ಪಾಯಲ್ ತಡವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದವು.
ಈ ಇಬ್ಬರು ವಿದ್ಯಾರ್ಥಿಗಳ ತಾಯಂದಿರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಮತ್ತು 2012ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಈ ಪಿಐಎಲ್ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಮತ್ತು ತಾರತಮ್ಯ ಮುಕ್ತ ವಾತಾವರಣ ನಿರ್ಮಿಸಲು ಕಟ್ಟುನಿಟ್ಟಿನ ಮತ್ತು ಕಡ್ಡಾಯ ನಿಯಮಾವಳಿಗಳನ್ನು ರೂಪಿಸುವಂತೆ ಯುಜಿಸಿಗೆ ನಿರ್ದೇಶನ ನೀಡಿತ್ತು. ಇದರ ಫಲವಾಗಿಯೇ 2026ರ ನೂತನ ನಿಯಮಗಳು ಜನ್ಮತಾಳಿವೆ.
ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!
ಸುಪ್ರೀಂ ಕೋರ್ಟ್ ಈ ನಿಯಮಗಳಿಗೆ ತಡೆಯಾಜ್ಞೆ ನೀಡಿದ್ದೇಕೆ?
ನೂತನ ನಿಯಮಾವಳಿಗಳು ಜಾರಿಯಾದ ತಕ್ಷಣವೇ ಅವುಗಳ ಸಂವಿಧಾನಾತ್ಮಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾದವು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಜನವರಿ ಕೊನೆಯಲ್ಲಿ ಈ ನಿಯಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿತು.
ತಡೆಯಾಜ್ಞೆ ನೀಡುವಾಗ ಮೂರು ಅಂಶಗಳನ್ನು ಕೋರ್ಟ್ ಉಲ್ಲೇಖಿಸಿತು;
- ಅಸ್ಪಷ್ಟತೆ ಮತ್ತು ದುರ್ಬಳಕೆಯ ಭೀತಿ: ನೂತನ ನಿಯಮಗಳಲ್ಲಿ ‘ತಾರತಮ್ಯ’ದ ವ್ಯಾಖ್ಯಾನವು ಅತ್ಯಂತ ಅಸ್ಪಷ್ಟವಾಗಿದೆ. ಇದು ಕೇವಲ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ರಕ್ಷಣೆ ನೀಡಿ, ಸಾಮಾನ್ಯ ವರ್ಗದ (General Category) ವಿದ್ಯಾರ್ಥಿಗಳನ್ನು ತಾರತಮ್ಯದ ದೂರುಗಳಿಂದ ಹೊರಗಿಡುವಂತಿದೆ. ಇದರಿಂದಾಗಿ ನಿಯಮ ದುರ್ಬಳಕೆಯಾಗಿ ಸುಳ್ಳು ದೂರುಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿತು.
- ಸಾಮಾಜಿಕ ವಿಭಜನೆಯ ಆತಂಕ: ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ನಿಲಯಗಳು, ತರಗತಿಗಳು ಅಥವಾ ಮಾರ್ಗದರ್ಶನ ಗುಂಪುಗಳ ಹಂಚಿಕೆಯಲ್ಲಿ ‘ಪ್ರತ್ಯೇಕತೆ’ ಉಂಟಾಗಿ, ವಿದ್ಯಾರ್ಥಿಗಳ ನಡುವೆ ಸೌಹಾರ್ದತೆಯ ಬದಲು ಜಾತಿ ಆಧಾರಿತ ವಿಭಜನೆ ಹೆಚ್ಚಾಗಬಹುದು ಎಂಬ ಕಳವಳ ವ್ಯಕ್ತಪಡಿಸಿತು.
- ಹಳೆಯ ನಿಯಮಗಳ ಮರುಜಾರಿ: ನೂತನ ನಿಯಮಗಳನ್ನು ತಡೆಹಿಡಿದ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 142ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರ ಬಳಸಿ, ಮುಂದಿನ ಆದೇಶದವರೆಗೆ 2012ರ ಹಳೆಯ ನಿಯಮಗಳೇ ಜಾರಿಯಲ್ಲಿರಲಿ ಎಂದು ಆದೇಶಿಸಿತು.
ಬಲಿಷ್ಠ ಜಾತಿಗಳ ಪ್ರತಿಭಟನೆ
ರಜಪೂತ ಕರಣಿ ಸೇನೆ, ಪ್ರಬಲ ಜಾತಿಗಳ ವಿದ್ಯಾರ್ಥಿ ಸಂಘಟನೆಗಳು ಹಾಗೂ ‘ಸಮಾನ ಅವಕಾಶ’ ವಿರೋಧಿ ಗುಂಪುಗಳು ಈ ನಿಯಮಾವಳಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿವೆ. #UGCRollBack ನಂತಹ ಸಾಮಾಜಿಕ ಜಾಲತಾಣ ಅಭಿಯಾನಗಳನ್ನೂ ನಡೆಸುತ್ತಿವೆ.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಸಂಪೂರ್ಣ ರಕ್ಷಣೆ ನೀಡುವಾಗ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ದೂರು ಸಲ್ಲಿಕೆಯಾದರೆ ಅವರ ರಕ್ಷಣೆಗೆ ಅಥವಾ ಸುಳ್ಳು ದೂರುದಾರರ ವಿರುದ್ಧ ಶಿಕ್ಷೆಗೆ ಯಾವುದೇ ಸ್ಪಷ್ಟ ನಿಬಂಧನೆ ಇಲ್ಲದಿರುವುದು ತಮ್ಮಲ್ಲಿ ಆತಂಕ ಹುಟ್ಟುಹಾಕಿದೆ ಎಂದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಆದರೆ, ಭಾರತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಶತಮಾನಗಳಿಂದಲೂ ಮೇಲ್ವರ್ಗಗಳ ಪ್ರಾಬಲ್ಯವಿದ್ದು, ದಲಿತ, ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಇಂದಿಗೂ ಜಾತಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಪ್ರವೇಶ ದೊರೆತರೂ, ಸಮಾನತೆ ಮತ್ತು ಮುಕ್ತ ಅವಕಾಶಗಳು ದೊರೆಯುತ್ತಿಲ್ಲ; ಆದ್ದರಿಂದ, ಕ್ಯಾಂಪಸ್ ಒಳಗೆ ಅವರಿಗೆ ಸುರಕ್ಷತೆ ಮತ್ತು ಆತ್ಮಗೌರವ ಸಿಗಬೇಕಾದರೆ ಕಾನೂನಾತ್ಮಕ ಕಾವಲು ವ್ಯವಸ್ಥೆ ಅಗತ್ಯ ಎಂಬುದು ಬಹುಜನ ಸಮುದಾಯಗಳ ವಾದವೂ ಆಗಿದೆ.



