ಭಾರತದಲ್ಲಿ ಹೆಣ್ಣು ಮಗು ಜನಿಸಿದರೆ ಮುಖ ಸಪ್ಪಗಾಗುವ ಕುಟುಂಬಗಳೂ ಇನ್ನೂ ಸಾಕಷ್ಟಿವೆ. ಆದರೆ ಮಧ್ಯಪ್ರದೇಶದ ಬಂಛಾಡ ಸಮುದಾಯದ ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. ಗಂಡು ಮಕ್ಕಳಿಗಿಂತ ಹೆಚ್ಚು ಆರೈಕೆ, ಒಳ್ಳೆ ಆಹಾರ, ಒಳ್ಳೆಯ ಬಟ್ಟೆ- ಎಲ್ಲವೂ ಆಕೆಗೆ. ಆದರೆ, ಕೆಲವೇ ವರ್ಷಗಳಲ್ಲಿ ಆ ಸಂಭ್ರಮ ಪಡುವುದರ ಅರ್ಥವೇ ಬದಲಾಗಿಹೋಗುತ್ತದೆ. ಆಕೆಯನ್ನು ದಷ್ಟಪುಷ್ಟವಾಗಿ ಬೆಳೆಸುವುದು ಮುಂದಿನ ಆಕೆಯ ಭದ್ರ ಭವಿಷ್ಯಕ್ಕಾಗಿ, ಆರೋಗ್ಯಕ್ಕಾಗಿ ಅಲ್ಲ; ಸಂಪಾದನೆಗಾಗಿ! ಆ ಹೆಣ್ಣು ಮಗು ಹರೆಯಕ್ಕೆ ಕಾಲಿಟ್ಟ ಕೂಡಲೇ, ಕುಟುಂಬದ ಆರ್ಥಿಕ ಹೊರೆ ಹೊರಲು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಒಂದೆಡೆ ಮಗಳ ಜನನವನ್ನು ಸಂಭ್ರಮಿಸುವ ಕುಟುಂಬ, ಮತ್ತೊಂದೆಡೆ ಅದೇ ಮಗಳ ಬಾಲ್ಯ ಮತ್ತು ಭವಿಷ್ಯವನ್ನು ಕಸಿದುಕೊಳ್ಳುವ ವ್ಯವಸ್ಥೆ ಜೀವಂತವಾಗಿದೆ. ಬಂಛಾಡ ಸಮುದಾಯದ ಈ ವಿರೋಧಾಭಾಸದ ಬದುಕಿನ ಹಿಂದೆ ವಸಾಹತುಶಾಹಿ ಇತಿಹಾಸ, ಬಡತನ ಮತ್ತು ಸಾಮಾಜಿಕ ಬಹಿಷ್ಕಾರದ ಸುದೀರ್ಘ ಕಥೆಯೇ ಇದೆ.
ಬಂಛಾಡ ಸಮುದಾಯದ ಕೆಲವು ಭಾಗಗಳಲ್ಲಿ ಇಂದಿಗೂ ಮುಂದುವರಿದಿರುವ ಈ ಪದ್ಧತಿಯನ್ನು ಅರ್ಥಮಾಡಿಕೊಳ್ಳಲು “ವೇಶ್ಯಾವಾಟಿಕೆ” ಎಂಬ ಪದ ಸಾಕಾಗುವುದಿಲ್ಲ. ಅದರ ಹಿಂದೆ ತಲೆಮಾರುಗಳಿಂದ ಹೆಪ್ಪುಗಟ್ಟಿರುವ ಸಾಮಾಜಿಕ ಮತ್ತು ಅದಕ್ಕೆ ಬೆಸೆದುಕೊಂಡಿರುವ ಆರ್ಥಿಕ ವ್ಯವಸ್ಥೆಯಿದೆ. ಈ ವ್ಯವಸ್ಥೆಯೊಂದಿದೆ. ಮನೆಯ ಹಿರಿಯ ಮಗಳನ್ನು ಕುಟುಂಬದ ಸಂಪತ್ತಿನಂತೆ ಪರಿಗಣಿಸಲಾಗುತ್ತದೆ. ಬಾಲ್ಯದಲ್ಲೇ ಆಕೆಗೆ ಉತ್ತಮ ಆಹಾರ, ಒಳ್ಳೆ ಬಟ್ಟೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಆಕೆಯ ಮೇಲಿನ ಪ್ರೀತಿಯಿಂದಲ್ಲ; ಮುಂದೊಂದು ದಿನ ಕುಟುಂಬದ ಜೀವನೋಪಾಯದ ಹೊಣೆಯನ್ನು ಹೊರುವ ವ್ಯಕ್ತಿಯಾಗಿ ಆಕೆಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಯ ಭಾಗವಾಗಿರುತ್ತದೆ.
ಸಮಾಜಶಾಸ್ತ್ರಜ್ಞರ ಪ್ರಕಾರ, ಬಂಛಾಡ ಸಮುದಾಯದ ಕೆಲವು ಕುಟುಂಬಗಳಲ್ಲಿ ಹಿರಿಯ ಮಗಳನ್ನು ಮದುವೆ ಮಾಡುವುದು ಅಪರೂಪದಲ್ಲೇ ಅಪರೂಪ. ಮದುವೆಯಾದರೆ ಆಕೆ ಬೇರೆ ಮನೆಗೆ ಹೋಗುತ್ತಾಳೆ. ಆಗ ಕುಟುಂಬದ ಆದಾಯದ ಮೂಲವೇ ಇರುವುದಿಲ್ಲ ಎಂಬ ಮನೋಭಾವ ಕಾಲಗಳಿಂದ ಬೆಳೆದು ಬಂದಿದೆ. ಹೀಗಾಗಿ ಮದುವೆಯ ಬದಲಿಗೆ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಆಕೆಯ ಗಳಿಕೆಯಿಂದ ತಮ್ಮಂದಿರ ಶಿಕ್ಷಣ, ಅವರ ಮದುವೆ, ಮನೆ ನಿರ್ಮಾಣ, ಕುಟುಂಬದ ಸಾಲ, ದೈನಂದಿನ ಖರ್ಚು.. ಎಲ್ಲವನ್ನೂ ನಿರ್ವಹಿಸಲಾಗುತ್ತದೆ. ವಿಚಿತ್ರವೆಂದರೆ, ಕುಟುಂಬದ ಗಂಡು ಮಕ್ಕಳು ಮದುವೆಯಾಗಿ ಪ್ರತ್ಯೇಕ ಜೀವನ ಆರಂಭಿಸಿದರೂ, ಮನೆಯ ಆರ್ಥಿಕ ಹೊರೆ ಹೊರುವ ಜವಾಬ್ದಾರಿ ಮಾತ್ರ ಹೆಣ್ಣುಮಗಳ ಹೆಗಲ ಮೇಲೆಯೇ ಬಿದ್ದುಕೊಂಡಿರುತ್ತದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದ ಗಡಿಭಾಗಗಳಲ್ಲಿ ಹೆಚ್ಚಾಗಿ ವಾಸಿಸುವ ಬಂಛಾಡ ಸಮುದಾಯವು ಹಿಂದೆ ಅರೆ ಅಲೆಮಾರಿ ಜೀವನ ನಡೆಸುತ್ತಿದ್ದ ಸಮುದಾಯಗಳಲ್ಲಿ ಒಂದಾಗಿತ್ತು. ಕೆಲವು ಐತಿಹಾಸಿಕ ಉಲ್ಲೇಖಗಳ ಪ್ರಕಾರ, ಬ್ರಿಟಿಷರ ಆಳ್ವಿಕೆಗೂ ಮುನ್ನ ಈ ಸಮುದಾಯದ ಜನರು ಜಾನುವಾರು ವ್ಯಾಪಾರ, ಸಣ್ಣಪುಟ್ಟ ವ್ಯಾಪಾರ ಮತ್ತು ವಿವಿಧ ರೀತಿಯ ಸಂಚಾರ ಆಧಾರಿತ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದರು. ಬ್ರಿಟಿಷ್ ಆಡಳಿತ 1871ರಲ್ಲಿ ಜಾರಿಗೆ ತಂದ ಕ್ರಿಮಿನಲ್ ಟ್ರೈಬ್ಸ್ ಆ್ಯಕ್ಟ್ ತಿಳಿದಿರಬಹುದು. ಅಲ್ಲಿಂದ ಇವರ ಜೀವನ ದಿಕ್ಕಾಪಾಲಾಯಿತು. ಅಪರಾಧದ ಯಾವುದೇ ಸಾಕ್ಷ್ಯವಿಲ್ಲದಿದ್ದರೂ, ಸಮುದಾಯದ ಗುರುತಿನ ಆಧಾರದ ಮೇಲೆ ಅವರನ್ನು “ಜನ್ಮತಃ ಅಪರಾಧಿಗಳು” ಎಂದು ಪರಿಗಣಿಸಲಾಯಿತು. ವ್ಯಕ್ತಿಯೊಬ್ಬ ಅಪರಾಧ ಮಾಡಿದ್ದಾನೆಯೇ ಎಂಬುದಕ್ಕಿಂತ, ಆತ ಯಾವ ಸಮುದಾಯದಲ್ಲಿ ಹುಟ್ಟಿದ್ದಾನೆ ಎಂಬುದೇ ಅವನ ಗುರುತಾಯಿತು. 1952ರಲ್ಲಿ ಸ್ವತಂತ್ರ ಭಾರತ ಈ ಕಾನೂನನ್ನು ರದ್ದುಪಡಿಸಿ, ಈ ಸಮುದಾಯಗಳನ್ನು ‘ಡಿ-ನೋಟಿಫೈಡ್ ಟ್ರೈಬ್ಸ್’ ಎಂದು ಘೋಷಿಸಿತು. ಆದರೆ ಕಾನೂನು ಬದಲಾದರೂ ವರ್ಷಗಳಿಂದ ಬಂದಿದ್ದ ಸಾಮಾಜಿಕ ಕಳಂಕ ಸುಲಭವಾಗಿ ಕಳೆಯಲಿಲ್ಲ. ನಿರುದ್ಯೋಗ, ಮನೆ ಬಾಡಿಗೆಗೆ ಬೇಕೆಂದರೆ ನಿರಾಕರಣೆ, ಮಕ್ಕಳನ್ನು ಶಾಲೆಗೆ ಸೇರಿಸಲು ಹೋದರೂ ತಾರತಮ್ಯ.. ಇಂತಹ ಅನುಭವಗಳನ್ನು ಅನೇಕ ಕುಟುಂಬಗಳು ಎದುರಿಸಬೇಕಾಯಿತು. ತಲೆಮಾರುಗಳಿಂದ ಅವಕಾಶಗಳಿಂದ ವಂಚಿತವಾದ ಸಮುದಾಯವೊಂದು ನಿಧಾನವಾಗಿ ಬಡತನದ ದುಷ್ಟಚಕ್ರದಲ್ಲಿ ಸಿಲುಕಿತು. ಈ ಸಮುದಾಯದ ಮೇಲೆ ಅಂಟಿಸಿದ “ಕ್ರಿಮಿನಲ್ ಟ್ರೈಬ್” ಎಂಬ ಹಣೆಪಟ್ಟಿಯ ಪರಿಣಾಮ, ಕಾನೂನು ರದ್ದಾದ ದಶಕಗಳ ನಂತರವೂ ಅವರ ಬದುಕಿನ ಮೇಲೆ ಹೇಗೆ ಮುಂದುವರಿಯಬಹುದು ಎಂಬುದಕ್ಕೆ ಇತಿಹಾಸವೇ ಸಾಕ್ಷಿ.
ಈ ಅಮಾನವೀಯ ವ್ಯವಸ್ಥೆಗೆ ಸಮುದಾಯದೊಳಗಿನ ಕೆಲವು ಆಚರಣೆಗಳೂ ಕಾರಣವಾಗಿವೆ. ಅವುಗಳಲ್ಲಿ ಮುಖ್ಯವಾದುದು ‘ನಥ್ ಉತರ್ನಾ’ ಎಂಬ ಪದ್ಧತಿ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮೂಗಿನ ಓಲೆ (ನಥ್) ತೆಗೆಯುವ ಸಂಪ್ರದಾಯವನ್ನು ಮದುವೆಯ ಸಂಕೇತವಾಗಿ ಪರಿಗಣಿಸಿದರೆ, ಬಂಛಾಡ ಸಮುದಾಯದ ಕೆಲವು ಪ್ರದೇಶಗಳಲ್ಲಿ ಇದೇ ಪದಕ್ಕೆ ಬೇರೆಯದೇ ಅರ್ಥ ಸಿಕ್ಕಿದೆ. ಯುವತಿಯೊಬ್ಬಳನ್ನು ಮೊದಲ ಬಾರಿಗೆ ಲೈಂಗಿಕ ಶೋಷಣೆಯ ವಲಯಕ್ಕೆ ಪ್ರವೇಶಿಸುವ ಸಂದರ್ಭವನ್ನು ‘ನಥ್ ಉತರ್ನಾ’ ಎಂದು ಕರೆಯಲಾಗುತ್ತದೆ ಎಂದು ಹಲವು ಅಧ್ಯಯನಗಳು ಉಲ್ಲೇಖಿಸಿವೆ. ಆ ದಿನದಿಂದ ಆಕೆಯ ಬಾಲ್ಯ ಕೊನೆಗೊಳ್ಳುತ್ತದೆ; ಕುಟುಂಬದ ಆದಾಯದ ಹೊಣೆಗಾರಿಕೆ ಆರಂಭವಾಗುತ್ತದೆ.
ಈ ಪದ್ಧತಿಯಲ್ಲಿ ಅತ್ಯಂತ ನೋವಿನ ಸಂಗತಿ ಏನೆಂದರೆ, ಅನೇಕ ಸಂದರ್ಭಗಳಲ್ಲಿ ಈ ನಿರ್ಧಾರವನ್ನು ಯುವತಿಯೇ ತೆಗೆದುಕೊಳ್ಳುವುದಿಲ್ಲ. ಕುಟುಂಬ, ಸಂಬಂಧಿಕರು ಮತ್ತು ಸಮುದಾಯದ ಒತ್ತಡವೇ ಆಕೆಯ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಬಾಲ್ಯದಿಂದಲೇ ʼನೀನೇ ಮನೆಯ ಆಧಾರʼ, ʼನೀನು ಸಂಪಾದಿಸಿದರೆ ಮಾತ್ರವೇ ಮನೆ ನಡೆಯುತ್ತದೆʼ ಎಂಬ ಮನೋಭಾವವನ್ನು ಆಕೆಯಲ್ಲಿ ಬೆಳೆಸಲಾಗುತ್ತದೆ. ಪರಿಣಾಮ, ಅನೇಕ ಯುವತಿಯರು ಇದನ್ನು ತಮ್ಮ ಕರ್ತವ್ಯವೆಂದು ಒಪ್ಪಿಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಇದರಿಂದ ಮತ್ತೊಂದು ದುಷ್ಟಚಕ್ರವೂ ನಿರ್ಮಾಣವಾಗುತ್ತದೆ. ಶಿಕ್ಷಣ ಅರ್ಧಕ್ಕೆ ನಿಲ್ಲುತ್ತದೆ. ಸ್ವಂತ ವೃತ್ತಿ ಕಟ್ಟಿಕೊಳ್ಳುವ ಅವಕಾಶ ಕಳೆದುಹೋಗುತ್ತದೆ. ಸ್ವತಂತ್ರ ಜೀವನದ ಕನಸುಗಳು ಮುರಿದು ಬೀಳುತ್ತವೆ. ಸಂಪಾದನೆ ಇದ್ದರೂ ಅದರ ಮೇಲೆ ಮಹಿಳೆಗೆ ಸಂಪೂರ್ಣ ಹಕ್ಕು ಇರುವುದಿಲ್ಲ. ಹಣದ ಬಳಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೆಚ್ಚಾಗಿ ಕುಟುಂಬದ ಹಿರಿಯರೇ. ದುಡಿಮೆಯೂ ಅವಳದು, ತ್ಯಾಗವೂ ಅವಳದು; ಆದರೆ ಬದುಕಿನ ಮೇಲಿನ ಹಕ್ಕು ಮಾತ್ರ ಅವಳದ್ದಲ್ಲ.
ಕೆಲವು ವರದಿಗಳ ಪ್ರಕಾರ, ಸಮುದಾಯದ ಕೆಲವು ಭಾಗಗಳಲ್ಲಿ ಮದುವೆಗೆ ಸಂಬಂಧಿಸಿದ ಕೆಲವು ಸಂಪ್ರದಾಯಗಳೂ ಮಹಿಳೆಯರ ಮೇಲೆಯೇ ಹೆಚ್ಚುವರಿ ಒತ್ತಡವನ್ನು ಹೇರುತ್ತವೆ. ವರನ ಕುಟುಂಬವು ವಧುವಿನ ಕುಟುಂಬಕ್ಕೆ ₹2 ಲಕ್ಷದಿಂದ ₹2.5 ಲಕ್ಷದವರೆಗೆ ಹಣ ನೀಡುವ ಪದ್ಧತಿ ಕೆಲವು ಪ್ರದೇಶಗಳಲ್ಲಿ ಇದೆ ಎಂದು ಅಧ್ಯಯನಗಳು ಉಲ್ಲೇಖಿಸಿವೆ. ಈ ಹಣವನ್ನು ಸಾಮಾನ್ಯವಾಗಿ ವರನ ಸಹೋದರಿ ತನ್ನ ಗಳಿಕೆಯಿಂದ ಒದಗಿಸುತ್ತಾಳೆ. ಇಂತಹ ನಿಯಮಗಳನ್ನು ಸಮುದಾಯದ ಜಾತಿ ಪಂಚಾಯಿತಿಯೇ ನಿರ್ಧರಿಸುತ್ತದೆ. ಒಂದು ವೇಳೆ ವಿವಾಹ ವಿಚ್ಛೇದನ ಬಯಸಿದರೆ, ವಧುವಿನ ಕುಟುಂಬವು ಪಡೆದಿದ್ದ ಮೊತ್ತದ ಎರಡು ಪಟ್ಟು ಹಣವನ್ನು ಹಿಂದಿರುಗಿಸಬೇಕಾಗುತ್ತದೆ ಎನ್ನುವ ಪದ್ಧತಿಯೂ ಕೆಲವು ಕಡೆ ಇದೆ. ಹೀಗಾಗಿ ಮದುವೆಯಾಗಲಿ, ಮದುವೆ ಮುರಿಯುವುದಾಗಲಿ ಎರಡೂ ಸಂದರ್ಭಗಳಲ್ಲಿ ಮಹಿಳೆಯರೇ ಹೆಚ್ಚಿನ ಹೊರೆ ಮತ್ತು ನಷ್ಟವನ್ನು ಅನುಭವಿಸುತ್ತಾರೆ.
ಈ ಪದ್ಧತಿಗಳನ್ನು ಕಾನೂನಿನ ಮೂಲಕ ಪ್ರಶ್ನಿಸುವುದೂ ಸುಲಭವಲ್ಲ. ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶ ಇದ್ದರೂ, ಸಮುದಾಯದೊಳಗಿನ ಜಾತಿ ಪಂಚಾಯಿತಿಯ ಪ್ರಭಾವ ಇನ್ನೂ ಬಲವಾಗಿರುವುದರಿಂದ ಅನೇಕ ಕುಟುಂಬಗಳು ಅದರ ವಿರುದ್ಧ ಧ್ವನಿ ಎತ್ತಲು ಹಿಂಜರಿಯುತ್ತವೆ. “ಕೊನೆಗೆ ನಾವು ಇದೇ ಸಮುದಾಯದಲ್ಲಿ ಬದುಕಬೇಕಾಗುತ್ತದೆ. ಜಾತಿ ಪಂಚಾಯಿತಿ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತದೆ” ಎಂದು ಸಮುದಾಯದ ಮಹಿಳೆಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಈ ಪದ್ಧತಿಗಳನ್ನು ಕಾನೂನಿನ ಮೂಲಕ ಪ್ರಶ್ನಿಸುವುದೂ ಸುಲಭವಲ್ಲ. ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶ ಇದ್ದರೂ, ಸಮುದಾಯದೊಳಗಿನ ಜಾತಿ ಪಂಚಾಯಿತಿಯ ಪ್ರಭಾವ ಇನ್ನೂ ಬಲವಾಗಿರುವುದರಿಂದ ಅನೇಕ ಕುಟುಂಬಗಳು ಅದರ ವಿರುದ್ಧ ಧ್ವನಿ ಎತ್ತಲು ಹಿಂಜರಿಯುತ್ತವೆ. “ಕೊನೆಗೆ ನಾವು ಇದೇ ಸಮುದಾಯದಲ್ಲಿ ಬದುಕಬೇಕಾಗುತ್ತದೆ. ಜಾತಿ ಪಂಚಾಯಿತಿ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತದೆ” ಎಂದು ಸಮುದಾಯದ ಮಹಿಳೆಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಈ ವೃತ್ತಿಯಲ್ಲಿ ಮಹಿಳೆಯರ ಆದಾಯದ ಅವಧಿಯೂ ಬಹಳ ಸೀಮಿತ. ಸಾಮಾನ್ಯವಾಗಿ 26–27 ವರ್ಷಗಳ ನಂತರ ಅವರ ಗಳಿಕೆಯ ಅವಕಾಶಗಳು ಕುಂಠಿತವಾಗುತ್ತವೆ ಎಂದು ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತರೇ ಹೇಳಿರುವ ವರದಿಗಳು ಸಿಗುತ್ತವೆ. ಆ ವಯಸ್ಸಿನ ಬಳಿಕ ಅವರಿಗೆ ಪರ್ಯಾಯ ಉದ್ಯೋಗ ಸಿಗುವುದು ಸುಲಭವಲ್ಲ. ಔಪಚಾರಿಕ ಉದ್ಯೋಗಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಕೌಶಲ್ಯದ ಕೊರತೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ವೇಶ್ಯಾವಾಟಿಕೆಯ ಕಳಂಕ ಮತ್ತು ಜಾತಿ ಆಧಾರಿತ ತಾರತಮ್ಯ ಅವರನ್ನು ಬೇರೆ ಉದ್ಯೋಗಗಳಿಂದಲೂ ದೂರವಿಡುತ್ತದೆ. ಕೆಲವರು ಮನೆಗೆಲಸದಂತಹ ಅನೌಪಚಾರಿಕ ಕೆಲಸ ಪಡೆದರೂ, “ವೇಶ್ಯಾವಾಟಿಕೆ ನಡೆಸುವ ಸಮುದಾಯದವರು” ಎಂಬ ಹಣೆಪಟ್ಟಿಯಿಂದ ಅವಮಾನ, ತಾರತಮ್ಯ ಮತ್ತು ಮಾನಸಿಕ ಕಿರುಕುಳ ಅನುಭವಿಸಲೇಬೇಕಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಬಂಛಾಡ ಸಮುದಾಯದ ಅನೇಕ ಮಹಿಳೆಯರು ಶಿಕ್ಷಣವನ್ನೇ ತಮ್ಮ ಬದುಕು ಬದಲಿಸುವ ಏಕೈಕ ಮಾರ್ಗವೆಂದು ನೋಡುತ್ತಿದ್ದಾರೆ. ಓದಿದರೆ ಮಾತ್ರ ಸಮಾಜ ಗೌರವಿಸುವ ಉದ್ಯೋಗ ಸಿಗುತ್ತದೆ, ತಮ್ಮ ಮಕ್ಕಳಿಗೆ ವಿಭಿನ್ನ ಭವಿಷ್ಯ ಕಟ್ಟಿಕೊಡಬಹುದು ಎಂಬ ನಂಬಿಕೆ ಅವರಲ್ಲಿದೆ. ಆದರೆ ಈ ಕನಸನ್ನು ನನಸಾಗಿಸುವುದು ಅಷ್ಟು ಸುಲಭವಲ್ಲ. ಶತಮಾನಗಳಿಂದ ಕುಟುಂಬದ ಪ್ರಮುಖ ಆದಾಯದ ಮೂಲವೇ ಯುವತಿಯರಾಗಿರುವುದರಿಂದ, ಅವರನ್ನು ಶಾಲೆ-ಕಾಲೇಜಿಗೆ ಕಳುಹಿಸುವುದಕ್ಕೆ ಕುಟುಂಬ ಮತ್ತು ಸಮುದಾಯದೊಳಗೇ ವಿರೋಧ ಎದುರಾಗುತ್ತದೆ.

ಶಿಕ್ಷಣ ಪಡೆಯಲು ಬಯಸುವ ಮಕ್ಕಳಿಗೆ ಆಡಳಿತಾತ್ಮಕ ಅಡೆತಡೆಗಳೂ ಎದುರಾಗುತ್ತವೆ. ಸರ್ಕಾರ ಹಲವು ಬಾರಿ ಶಾಲಾ ಪ್ರವೇಶದ ವೇಳೆ ತಂದೆಯ ಹೆಸರನ್ನು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದ್ದರೂ, ಕೆಲವು ಶಾಲೆಗಳು ಇನ್ನೂ ತಂದೆಯ ಹೆಸರು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಕೇಳುತ್ತಿವೆ ಎಂಬ ಆರೋಪಗಳಿವೆ. ಬಂಛಾಡ ಸಮುದಾಯದ ಅನೇಕ ಮಕ್ಕಳಿಗೆ ತಮ್ಮ ತಂದೆಯ ಗುರುತು ತಿಳಿದಿರುವುದಿಲ್ಲ ಅಥವಾ ಅಗತ್ಯ ದಾಖಲೆಗಳಿರುವುದಿಲ್ಲ. ಪರಿಣಾಮ, ಶಾಲಾ ಪ್ರವೇಶವೇ ಕಷ್ಟವಾಗುತ್ತದೆ. ಶಿಕ್ಷಣವಿಲ್ಲದ ಕಾರಣ ಪರ್ಯಾಯ ಉದ್ಯೋಗ ಸಿಗುವುದಿಲ್ಲ; ಉದ್ಯೋಗವಿಲ್ಲದ ಕಾರಣ ಮತ್ತೆ ಹಳೆ ಅಮಾನವೀಯ ಬದುಕು. ಈ ಪರಿಸ್ಥಿತಿಯೇ ಬಂಛಾಡ ಸಮುದಾಯದ ಅನೇಕ ಕುಟುಂಬಗಳನ್ನು ಇಂದಿಗೂ ಶೋಷಣೆಯ ವಲಯದಿಂದ ಹೊರಬರಲು ಬಿಡುತ್ತಿಲ್ಲ.
ಇದನ್ನೂ ಓದಿ: ಅತಿ ಹೆಚ್ಚು ‘ಭುವನ ಸುಂದರಿ’ಯರನ್ನು ಕೊಟ್ಟ ವೆನೆಜುವೆಲಾ ʼಬ್ಯೂಟಿ ಫ್ಯಾಕ್ಟರಿʼಯ ಕಹಿ ಸತ್ಯ ಬಲ್ಲಿರಾ?
ಆದರೆ ಈ ವೈಫಲ್ಯವನ್ನ ಇಡೀ ಬಂಛಾಡ ಸಮುದಾಯಕ್ಕೆ ಅನ್ವಯಿಸುವುದು ನ್ಯಾಯಸಮ್ಮತವಲ್ಲ. ಕಳೆದ ಎರಡು ದಶಕಗಳಲ್ಲಿ ಈ ಸಮುದಾಯದೊಳಗೇ ಬದಲಾವಣೆಯ ಗಾಳಿ ಬೀಸತೊಡಗಿದೆ. ಶಿಕ್ಷಣದ ಮಹತ್ವ ಅರಿತ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಶಾಲೆ-ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಅನೇಕ ಯುವತಿಯರು ನರ್ಸಿಂಗ್, ಶಿಕ್ಷಣ, ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತಮ್ಮ ಹೆಣ್ಣುಮಕ್ಕಳನ್ನು ಈ ದುಷ್ಟಚಕ್ರದಿಂದ ಹೊರಗೆ ತರಲು ಹೋರಾಡುತ್ತಿರುವ ತಾಯಂದಿರ ಸಂಖ್ಯೆಯೂ ಹೆಚ್ಚುತ್ತಿದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಬಡತನ, ಪರ್ಯಾಯ ಉದ್ಯೋಗದ ಕೊರತೆ ಮತ್ತು ವರ್ಷಗಳಿಂದ ಬೇರೂರಿರುವ ಸಾಮಾಜಿಕ ಮನೋಭಾವ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಡ್ಡಿಯಾಗುತ್ತಿದೆ.
ಶತಮಾನಗಳ ಕಾಲ ಒಂದು ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಮತ್ತು ಗೌರವಯುತ ಬದುಕಿನ ಅವಕಾಶಗಳನ್ನು ನಿರಾಕರಿಸಿದ ಸಮಾಜ, ನಂತರ ಅವರ ಹಿಂದುಳಿದ ಸ್ಥಿತಿಯನ್ನು ಹೇಗೆ ಅಳೆಯಬೇಕು ಎಂಬ ಪ್ರಶ್ನೆಯನ್ನ ಕೇಳಿಕೊಳ್ಳುವ ಸಮಯವಿದು. ಒಂದು ಹೆಣ್ಣು ಮಗು ಹುಟ್ಟಿದಾಗ ಆಕೆಯ ಭವಿಷ್ಯದ ಬಗ್ಗೆ ಕನಸು ಕಾಣಬೇಕಾದ ಜಾಗದಲ್ಲಿ, ಆಕೆಯಿಂದ ಕುಟುಂಬ ಎಷ್ಟು ಸಂಪಾದಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ ಎಂದರೆ, ಅದು ಆ ಸಮುದಾಯದ ದುರಂತವಲ್ಲದೆ ಮತ್ತೇನಲ್ಲ. ಬಂಛಾಡ ಸಮುದಾಯದ ನಿಜವಾದ ಬದಲಾವಣೆ ಸಹಾನುಭೂತಿಯಿಂದ ಸಾಧ್ಯವಾಗುವುದಿಲ್ಲ. ಶಿಕ್ಷಣ, ಸಮಾನ ಅವಕಾಶ ಮತ್ತು ಗೌರವಯುತ ಬದುಕಿನ ಹಕ್ಕು ದೊರೆತಾಗ ಮಾತ್ರ ತಲೆಮಾರುಗಳಿಂದ ಮುಂದುವರಿದಿರುವ ಈ ದುಷ್ಟಚಕ್ರ ಮುರಿಯಲು ಸಾಧ್ಯ.
.




