ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಚುನಾವಣಾ ಆಯುಕ್ತರ ಸಹಮತವಿಲ್ಲದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನೋಟಿಸ್ ಜಾರಿ ಮಾಡಿದೆ.
ದೇಶದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ ಮೋಹನಾ ಅವರಿದ್ದ ತ್ರಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ಇದನ್ನೂ ಓದಿ: SIR ಅಕ್ರಮ | ಕೂಡಲೇ ಗ್ಯಾನೇಶ್ ಕುಮಾರ್, ಮೋದಿ ರಾಜೀನಾಮೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಉಳಿದ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಣೆ, ಭಿನ್ನಾಭಿಪ್ರಾಯಗಳ ಹೊರತಾಗಿಯೂ ಕನಿಷ್ಠ 14 ಪ್ರಮುಖ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ತನಿಖಾ ವರದಿಯನ್ನು ಆಧರಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಸಂಬಂಧ ನಮೂನೆ-6ರಲ್ಲಿ ಕಾನೂನುಬಾಹಿರವಾಗಿ ನಿಯಮಗಳನ್ನು ಬದಲಾಯಿಸಿ, ಯುವ ಮತದಾರರನ್ನು ಹಕ್ಕಿನಿಂದ ವಂಚಿತಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಈ ಅಕ್ರಮಗಳ ಕುರಿತು ಎಸ್‌ಐಟಿ ತನಿಖೆ ಮತ್ತು ಸ್ವತಂತ್ರ ತನಿಖೆಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.
ಆದಾಗ್ಯೂ, ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ದೈನಂದಿನ ನಿರ್ಧಾರ ತಯಾರಿಕೆ ಅಥವಾ ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ.
ಇನ್ನು ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಗಾಗಿ ನಮೂನೆ-6ರಲ್ಲಿ (Form 6) ಮಾಡಿದ ಯಾವುದೇ ಮಾರ್ಪಾಡು ಅಥವಾ ಹೊಸ ಘೋಷಣಾ ಪತ್ರಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಸ್ಪಷ್ಟಪಡಿಸಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಳಸುವ Form 6 ಗೆ ಆನ್‌ಲೈನ್‌ನಲ್ಲಿ ಹೊಸ ನಿಯಮ/ಘೋಷಣೆಯನ್ನು ಸೇರಿಸಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿತ್ತು.
ಹಾಗೆಯೇ ಕೋರ್ಟ್ ದಾಖಲೆಗಳನ್ನು ತರಿಸಿಕೊಂಡು, “ಯಾರು ಈ ನಮೂನೆ-6 ಅನ್ನು ಬದಲಾಯಿಸಿದ್ದಾರೆ ಮತ್ತು ಪರಿಷ್ಕರಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ” ಎಂದು ಪೀಠವು ಹೇಳಿದೆ.




