ರೋಗಿಗಳನ್ನು ಗ್ರಾಹಕರಂತೆ ಕಾಣದೆ ಮನೆಯ ಸದಸ್ಯರಂತೆ ಅಕ್ಕರೆಯಿಂದ ಉಪಚರಿಸುವ ಅಪರೂಪದ ವಾತಾವರಣ ಚಿತ್ರಕೂಟ ಆಯುರ್ವೇದ ಸಂಸ್ಥೆಯಲ್ಲಿದೆ ಎಂದು ಪ್ರಾಧ್ಯಾಪಕ ಡಾ. ಪ್ರದೀಪ್ ಕೆಂಚನೂರು ಹೇಳಿದರು.
ತಾಲ್ಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ‘ಚಿತ್ರಕೂಟ ಆಯುರ್ವೇದ ಹಬ್ಬ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ವರ್ಗ, ಜಾತಿ-ಧರ್ಮದ ಜನರನ್ನು ಪ್ರೀತಿಯಿಂದ ಒಳಗೊಂಡು ಮುನ್ನಡೆಯುತ್ತಿರುವುದು ಚಿತ್ರಕೂಟದ ವಿಶೇಷತೆ. ದೇಶ-ವಿದೇಶಗಳಿಂದ ಅತಿಥಿಗಳು ಇಲ್ಲಿಗೆ ಆಗಮಿಸಿ ಸ್ವಾಸ್ಥ್ಯ ಕಂಡುಕೊಳ್ಳುತ್ತಿರುವುದು ಸಂಸ್ಥೆಯ ಪ್ರಾಮಾಣಿಕ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್ ಮಾತನಾಡಿ, ಪ್ರಾಚೀನ ಆಯುರ್ವೇದ ಜ್ಞಾನವನ್ನು ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯಂತ ಬದ್ಧತೆಯಿಂದ ಜನರಿಗೆ ತಲುಪಿಸುತ್ತಿರುವ ಡಾ. ರಾಜೇಶ್ ಬಾಯರಿ ಅವರ ಕಾರ್ಯ ಶ್ಲಾಘನೀಯ ಎಂದರು.
ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಜಂಟಿ ಆಡಳಿತ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಇದಕ್ಕೆ ನೈಸರ್ಗಿಕ ಜೀವನಕ್ರಮ ಮತ್ತು ಪ್ರಾಚೀನ ಆಯುರ್ವೇದ ಪದ್ಧತಿ ಪರಿಣಾಮಕಾರಿ ಪರಿಹಾರವಾಗಿದೆ. ಮಕ್ಕಳಲ್ಲಿ ಹಾಗೂ ಸಮುದಾಯದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಇಂತಹ ಆಯುರ್ವೇದ ಹಬ್ಬಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ತಾಲ್ಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಎಸ್. ಕೃಷ್ಣಾನಂದ ಚಾತ್ರ ಮಾತನಾಡಿ, ಹೆಚ್ಚಿನ ವೈದ್ಯರು ವಿದೇಶ ಹಾಗೂ ಮಹಾನಗರಗಳತ್ತ ಮುಖ ಮಾಡುತ್ತಿರುವ ಇಂದಿನ ಸಂದರ್ಭದಲ್ಲಿ, ಗ್ರಾಮದಲ್ಲೇ ಉಳಿದು ಇಡೀ ಸಮುದಾಯವನ್ನು ಒಗ್ಗೂಡಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಬಾಯರಿ ದಂಪತಿಯ ಊರಿನ ಮೇಲಿನ ಪ್ರೀತಿ ಹಾಗೂ ಸಮಾಜಮುಖಿ ಕಳಕಳಿ ಅನುಕರಣೀಯ ಎಂದರು.
ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಮಾತನಾಡಿ, ಆಯುರ್ವೇದದ ಜ್ಞಾನ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಅತ್ಯಗತ್ಯ. ಈ ಉದ್ದೇಶದಿಂದ ಆಯುರ್ವೇದ ಹಬ್ಬದ ಪರಿಕಲ್ಪನೆ ರೂಪಿಸಲಾಗಿದೆ. ಇದಕ್ಕೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ರಮೇಶ್ ವೈದ್ಯ, ಮಹಾಬಲ ಬಾಯರಿ, ಕಲಾವತಿ ಬಾಯರಿ ಹಾಗೂ ಡಾ. ಅನುಲೇಖಾ ಬಾಯರಿ ಉಪಸ್ಥಿತರಿದ್ದರು.





