ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ವಿಧಿಸಲಾಗಿದ್ದ ಇಂಧನ ಖರೀದಿ ಮೇಲಿನ ಎಲ್ಲ ತಾತ್ಕಾಲಿಕ ನಿರ್ಬಂಧಗಳನ್ನು ತೆರವುಗೊಳಿಸಿದೆ. ಈ ಹಿಂದೆ ಇದ್ದ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾರಾಟದ ಮಿತಿಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಜುಲೈ 1ರಿಂದ ಜಾರಿಗೆ ಬರುವಂತೆ ದೇಶದ ಎಲ್ಲ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಿಸಿದೆ.
ಕೇಂದ್ರ ಇಂಧನ ಸಚಿವಾಲಯ ಹೊರಡಿಸಿರುವ ನೂತನ ಆದೇಶದ ಪ್ರಕಾರ, “ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್ 12ರಂದು ಜಾರಿಗೆ ತರಲಾಗಿದ್ದ ತುರ್ತು ನಿಯಮಗಳು ತಮ್ಮ ಉದ್ದೇಶವನ್ನು ಯಶಸ್ವಿಯಾಗಿ ಪೂರೈಸಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ತುರ್ತು ನಿಮಯಗಳ ಅಗತ್ಯವಿಲ್ಲದ ಕಾರಣ ಅವುಗಳನ್ನು ಹಿಂಪಡೆಯಲಾಗುತ್ತಿದೆ. ಈ ಹೊಸ ನಿರ್ಧಾರದಿಂದಾಗಿ ದೊಡ್ಡ ಕೈಗಾರಿಕೆಗಳು, ಖಾಸಗಿ ಸಾರಿಗೆ ಸಂಸ್ಥೆಗಳು ಹಾಗೂ ಸಾಂಸ್ಥಿಕ ಬಳಕೆದಾರರು ಮತ್ತೆ ಎಂದಿನಂತೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದಲೇ ಮುಕ್ತವಾಗಿ ಇಂಧನ ಖರೀದಿಸಬಹುದಾಗಿದೆ” ಎಂದು ಹೇಳಿದೆ.
ಇತ್ತೀಚೆಗೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿದ್ದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಸೃಷ್ಟಿಯಾಗಿತ್ತು. ಇದರ ನೇರ ಪರಿಣಾಮ ಭಾರತದ ಮೇಲೂ ಬೀರಿತ್ತು. ಸಾಮಾನ್ಯ ಗ್ರಾಹಕರಿಗೆ ಮತ್ತು ವಾಹನ ಸವಾರರಿಗೆ ತೈಲ ಕೊರತೆಯಾಗದಂತೆ ತಡೆಯಲು ಕೇಂದ್ರ ಸರ್ಕಾರವು, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು ಚಿಲ್ಲರೆ ಬಂಕ್‌ಗಳಿಂದ ನೇರವಾಗಿ ತೈಲ ಪಡೆಯುವುದನ್ನು ನಿರ್ಬಂಧಿಸಿತ್ತು.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಎದುರಾಗಿದ್ದ ಇಂಧನ ಪೂರೈಕೆ ಬಿಕ್ಕಟ್ಟು ತಿಳಿಯಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಸಾಗಣೆ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ. ಗಲ್ಫ್ ರಾಷ್ಟ್ರಗಳಿಂದ ತೈಲ ಆಮದು ಸುಗಮವಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಹೆಚ್ಚುತ್ತಿದೆ. ಹೀಗಾಗಿ, ಜುಲೈ 1ರಿಂದ ಇಂಧನ ವಿತರಣಾ ವ್ಯವಸ್ಥೆಯು ಹಳೆಯ ನಿಯಮಗಳ ಅಡಿಯಲ್ಲಿ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲಿದ್ದು, ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ವ್ಯಾಪಾರ ವಲಯ ನಿರೀಕ್ಷಿಸುತ್ತಿದೆ.



