ಮೊಳಕಾಲ್ಮೂರು ತಾಲ್ಲೂಕಿನಲ್ಲಿ ವಾಸದ ಮನೆಗಳ ಸಮೀಪ ಅಳವಡಿಸಲಾಗಿರುವ ವಿಂಡ್ ಫ್ಯಾನ್‌ಗಳ (ಗಾಳಿ ವಿದ್ಯುತ್ ಯಂತ್ರಗಳು) ಕಾರ್ಯಾಚರಣೆಯಿಂದ ಉಂಟಾಗುತ್ತಿರುವ ಕರ್ಕಶ ಶಬ್ದ ಸಾರ್ವಜನಿಕರು, ಜಾನುವಾರುಗಳು ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘವು, ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಜುಲೈ 1ರಂದು ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿದೆ.
ಈ ಸಂಬಂಧ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತ ಸಂಘದ ಮುಖಂಡರು, ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬುಡಕಟ್ಟು ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕೃಷಿ ಮತ್ತು ಜಾನುವಾರು ಸಾಕಣೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಪ್ರದೇಶಗಳಲ್ಲಿ ವಾಸದ ಮನೆಗಳ ಸಮೀಪವೇ ವಿಂಡ್ ಫ್ಯಾನ್‌ಗಳನ್ನು ಅಳವಡಿಸಿರುವುದರಿಂದ ನಿರಂತರ ಕರ್ಕಶ ಶಬ್ದ ಉಂಟಾಗಿ ಜನರ ನೆಮ್ಮದಿ ಹಾಳಾಗುತ್ತಿದೆ. ಜಾನುವಾರುಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯವರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಸೋಲಾರ್ ಹಾಗೂ ವಿಂಡ್ ಫ್ಯಾನ್ ಯೋಜನೆಗಳ ಕಾಮಗಾರಿ ನಡೆಸುತ್ತಿದ್ದಾರೆ. ಅಲ್ಲದೆ, ಹೊರರಾಜ್ಯದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಮೂಲಕ ರೈತರ ಮೇಲೆ ಒತ್ತಡ ಹೇರಿ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಾಸದ ಮನೆಗಳ ಸಮೀಪ ಅಳವಡಿಸಿರುವ ವಿಂಡ್ ಫ್ಯಾನ್‌ಗಳನ್ನು ಜನವಸತಿ ಪ್ರದೇಶದಿಂದ ಕನಿಷ್ಠ 1 ರಿಂದ 2 ಕಿಲೋಮೀಟರ್ ದೂರಕ್ಕೆ ಸ್ಥಳಾಂತರಿಸಬೇಕು. ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಮಧ್ಯಪ್ರವೇಶಿಸಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 1ರಂದು ಮಧ್ಯಾಹ್ನ 12 ಗಂಟೆಗೆ ಮೊಳಕಾಲ್ಮೂರು ತಾಲೂಕು ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಸಂಘದ ಮುಖಂಡರು ಮನವಿ ಮಾಡಿದ್ದಾರೆ.




