ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ, ಪರಾಜಿತ ಸಿಪಿಐ-ಎಂ ನಾಯಕತ್ವದ ಆಯ್ಕೆ ಕುರಿತು ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಸರನ್ನು ಆಯ್ಕೆ ಮಾಡಲು ಕೇರಳ ಸಿಪಿಎಂ ಪ್ರಸ್ತಾಪಿಸಿದೆ. ಈ ಪ್ರಸ್ತಾಪ ಕುರಿತು ಪಕ್ಷದ ಉನ್ನತ ಸಮಿತಿ ಪಾಲಿಟ್ ಬ್ಯೂರೊದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ ಎಂದು ವರದಿಯಾಗಿದೆ.
ಪಕ್ಷದ ಭವಿಷ್ಯ ಮತ್ತು ದೀರ್ಘಾವಧಿಯ ಹಿತದೃಷ್ಟಿಯಿಂದ ಈಗಲೇ 81 ವರ್ಷ ವಯಸ್ಸಿನ ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರಿಗೆ ಈ ಜವಾಬ್ದಾರಿ ನೀಡುವ ಬದಲು, ಸಮರ್ಥ ಯುವ ನಾಯಕರಿಗೆ ಮಣೆ ಹಾಕಬೇಕು ಎಂದು ಪಾಲಿಟ್ ಬ್ಯೂರೊದ ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ಗುರುವಾರ ನಡೆದ ಕೇರಳ ಸಿಪಿಎಂ ರಾಜ್ಯ ಸಮಿತಿ ಸಭೆ ನಡೆದಿತ್ತು. ಸಭೆಯಲ್ಲಿ ಆ ಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಪಿಣರಾಯಿ ವಿಜಯನ್ ಹೆಸರಿನ ಜೊತೆಗೆ ಸಿಪಿಎಂ ಕೇಂದ್ರ ಸಮಿತಿ ಸದಸ್ಯ, ರಾಜ್ಯದ ಮಾಜಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರ ಹೆಸರನ್ನೂ ಸಹ ಪ್ರಸ್ತಾಪಿಸಲಾಗಿತ್ತು. ಜೊತೆಗೆ, ಪಿಣರಾಯಿ ವಿಜಯನ್ ನೇತೃತ್ವದ ಹಿಂದಿನ ಸರ್ಕಾರದ ಕಾರ್ಯವೈಖರಿ ಕುರಿತು ಕೆಲವು ಕಟು ಟೀಕೆಗಳು ಮತ್ತು ಅಸಮಾಧಾನಗಳು ಕೇಳಿಬಂದಿದ್ದವು. ಆದಾಗ್ಯೂ, ರಾಜ್ಯ ಮಟ್ಟದಲ್ಲಿ ವಿಜಯನ್ ಅವರ ಪ್ರಭಾವ ಹೆಚ್ಚಿರುವುದರಿಂದ ಅಂತಿಮವಾಗಿ ರಾಜ್ಯ ಸಮಿತಿಯು ಅವರ ಹೆಸರನ್ನೇ ಅಂತಿಮಗೊಳಿಸಿ, ಒಮ್ಮತದಿಂದ ಶಿಫಾರಸು ಮಾಡಲಾಗಿತ್ತು.
ರಾಜ್ಯ ಸಮಿತಿಯ ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಲು ಮತ್ತು ಈ ಸೂಕ್ಷ್ಮ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಲು ಪಾಲಿಟ್ ಬ್ಯೂರೊದ ತುರ್ತು ಆನ್‌ಲೈನ್ ಸಭೆಯನ್ನು ಕರೆಯಲಾಗಿತ್ತು.
ರಾಜ್ಯ ಸಮಿತಿಯು ಕಳುಹಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಲು ಸಿಪಿಎಂ ಹಿರಿಯ ನಾಯಕ ಎಂ.ಎ. ಬೇಬಿ ನೇತೃತ್ವದಲ್ಲಿ ಪಾಯಿಟ್ ಬ್ಯೂರೊ ಸಭೆ ನಡೆದಿದೆ. ಸಭೆಯಲ್ಲಿ ಮೊಹಮ್ಮದ್ ಸಲೀಮ್, ತಪನ್ ಸೇನ್ ಹಾಗೂ ಕೇರಳ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹತ್ತು ಮಂದಿ ಸದಸ್ಯರು ಪಿಣರಾಯಿ ವಿಜಯನ್ ಅವರ ಹೆಸರನ್ನು ಸಮ್ಮತಿಸಿದ್ದಾರೆ. ಸದ್ಯದ ಕಠಿಣ ಪರಿಸ್ಥಿತಿಯಲ್ಲಿ ವಿಜಯನ್ ಅವರ ಅನುಭವ ಪಕ್ಷಕ್ಕೆ ಅಗತ್ಯವಿದೆ ಎಂದು ಅವರು ವಾದಿಸಿದ್ದಾರೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿ.ವಿ. ರಾಘವುಲು, ಅಶೋಕ್ ಧವ್ಲೆ ಹಾಗೂ ವಿಜೂ ಕೃಷ್ಣನ್ ಸೇರಿದಂತೆ ಇತರ ಏಳು ಮಂದಿ ಪ್ರಮುಖ ನಾಯಕರು ತಕ್ಷಣವೇ ನಾಯಕತ್ವ ಬದಲಾವಣೆಯಾಗಬೇಕು ಎಂದು ಪಟ್ಟುಹಿಡಿದಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಗಮನಾರ್ಹವೆಂದರೆ, ಪಿಣರಾಯಿ ವಿಜಯನ್ ಅವರ ಮೇಲಿನ ಅಸಮಾಧಾನವು ಪಕ್ಷದಲ್ಲಿ ಇಂದಿನದೇನಲ್ಲ. ಇದಕ್ಕೂ ಮುನ್ನ ನಡೆದಿದ್ದ ಪಾಲಿಟ್ ಬ್ಯೂರೊ ಸಭೆಗಳಲ್ಲೂ ಸಹ ಕೆಲವು ನಾಯಕರು ವಿಜಯನ್ ಅವರು ಹಠಮಾರಿ ಧೋರಣೆ ಹೊಂದಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಿಂದ ದೂರ ಉಳಿದು ಹೊಸ ಮುಖಗಳಿಗೆ ಅವಕಾಶ ನೀಡಿದ್ದರೆ, ರಾಜ್ಯದಲ್ಲಿ ಎದ್ದಿದ್ದ ಆಡಳಿತ ವಿರೋಧಿ ಅಲೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಿತ್ತು ಎಂದು ಹಲವರು ವಾದಿಸಿದ್ದರು.
ಸದ್ಯ ಪಾಲಿಟ್ ಬ್ಯೂರೊದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿದ್ದು, ವಿಪಕ್ಷ ನಾಯಕ ಯಾರಾಗಲಿದ್ದಾರೆ ಎಂಬುದು ಇನ್ನೂ ಅಂತಿಮವಾಗದೇ ಉಳಿದಿದೆ.



