ಆಮ್ ಆದ್ಮಿ ಪಕ್ಷವು (ಎಎಪಿ) ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಉಪನಾಯಕ ಸ್ಥಾನದಿಂದ ತೆಗೆದುಹಾಕಿದೆ. 2023ರಿಂದ ಈ ಸ್ಥಾನದಲ್ಲಿದ್ದ ಚಡ್ಡಾ ಅವರನ್ನು ಈಗ ಕೆಳಗಿಳಿಸಿ ಈ ಸ್ಥಾನಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ಎಎಪಿ ನೇಮಿಸಿದೆ. ಹಾಗೆಯೇ ಸಂಸತ್ತಿನಲ್ಲಿ ಮಾತನಾಡದಂತೆಯೂ ನಿರ್ಬಂಧ ಹೇರಲಾಗಿದೆ.
ಈ ಬದಲಾವಣೆಯ ಕುರಿತು ರಾಜ್ಯಸಭಾ ಕಾರ್ಯದರ್ಶಿಗೆ ಎಎಪಿ ಪತ್ರ ಬರೆದಿದೆ. ಸಂಸತ್ತಿನಲ್ಲಿ ಮಾತನಾಡಲು ಚಡ್ಡಾ ಅವರಿಗೆ ಸಮಯ ನೀಡಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗಿದೆ. ಚಡ್ಡಾ ಎಎಪಿಯಿಂದ ದೂರವಾಗುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಇದನ್ನು ಓದಿದ್ದೀರಾ? ಬೇರೆ ಪಕ್ಷಗಳು ಹಣ ನೀಡಿದರೂ ಎಎಪಿಗೆ ಮತ ನೀಡಿ: ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ
ಫೆಬ್ರವರಿಯಲ್ಲಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರರನ್ನು ನ್ಯಾಯಾಲಯವು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತ್ತು. ಈ ಬಗ್ಗೆ ಚಡ್ಡಾ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡಾ ಮಾಡಿರಲಿಲ್ಲ. ಇವೆಲ್ಲವೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಅಷ್ಟು ಮಾತ್ರವಲ್ಲದೆ 37 ವರ್ಷದ ಸಂಸದ ಚಡ್ಡಾ ಎಎಪಿಯ ಪ್ರಮುಖ ಕಾರ್ಯಕ್ರಮಗಳಿಗೂ ಗೈರು ಹಾಜರಾಗಿದ್ದರು. ಕೇಜ್ರಿವಾಲ್ ಅವರು ಪಕ್ಷದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಜಂತರ್ ಮಂತರ್‌ನಲ್ಲಿ ನಡೆದ ‘ಜನಸಭೆ’ಗೂ ಚಡ್ಡಾ ಹಾಜರಾಗಿರಲಿಲ್ಲ.
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಚಡ್ಡಾ, 2012ರಲ್ಲಿ ಎಎಪಿ ಸ್ಥಾಪನೆಯಾದಾಗಿನಿಂದ ಎಎಪಿಯಲ್ಲಿದ್ದಾರೆ. ಕೇಜ್ರಿವಾಲ್ ಅವರಿಗೆ ಆಪ್ತರು ಎಂದು ಪರಿಗಣಿಸಲಾಗಿದೆ. ಎಎಪಿ ರಾಷ್ಟ್ರೀಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಎಎಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಘಟಕವಾದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದಾರೆ. ವಿಪಕ್ಷಗಳನ್ನು ಸಂಘಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ | ಇ.ಡಿ ಆರೋಪ ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಉಲ್ಲೇಖ
ಮೇಲ್ಮನೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಚಡ್ಡಾ ಒಬ್ಬರಾಗಿದ್ದು ರಾಜ್ಯಸಭೆಯಲ್ಲಿ ಹಲವು ಜನಪರ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಾ ಬಂದಿದ್ದಾರೆ. ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚಡ್ಡಾ ಪ್ರಸ್ತುತ ಎಎಪಿಯ ಪಂಜಾಬ್ ಸಹ-ಉಸ್ತುವಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಡ್ಡಾ ಎಎಪಿಯ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಬಗ್ಗೆ ಚರ್ಚೆಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2024ರ ಲೋಕಸಭೆ ಚುನಾವಣೆಗೂ ಮುನ್ನ ಅಬಕಾರಿ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿದಾಗಲೂ ಚಡ್ಡಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಯುಕೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದ ಕಾರಣ ಈವರೆಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.




